ತಿಪಟೂರು: ಗ್ಯಾರಂಟಿ ಯೋಜನೆಗಳಿಂದಲೇ ಸರ್ಕಾರ ಬೀಳುವ ಸಂಭವವಿದೆ. ಗೃಹಲಕ್ಷ್ಮೀ ಯೋಜನೆಯ ಹಣ ಎಲ್ಲರಿಗೂ ತಲುಪುತ್ತಿಲ್ಲ. ರೈತರ ಬೆಳೆ ವಿಮೆ ಹಣ ಕೂಡ ರೈತರ ಖಾತೆಗಳಿಗೆ ಬಂದಿಲ್ಲ. ವಿದ್ಯುತ್ ಉಚಿತ ಎಂದು ಹೇಳಿ ವಿದ್ಯುತ್ ದರ ಹೆಚ್ಚಿಸಲಾಗಿದ್ದು, ಗ್ಯಾರಂಟಿ ಯೋಜನೆ ಮೂಲಕ ಸರ್ಕಾರದಲ್ಲಿ ಹಣವಿಲ್ಲದೇ ಅಭಿವೃದ್ಧಿ ಕಾರ್ಯಗಳು ನಿಂತಿದ್ದು ಲೋಕಸಭಾ ಚುನಾವಣೆ ಮುಗಿದ ನಂತರ ಏನು ಬೇಕಾದರೂ ಬದಲಾವಣೆ ಆಗಬಹುದು ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ತಿಳಿಸಿದರು. ತಮ್ಮ ಗೃಹಕಚೇರಿಯಲ್ಲಿ ವಿಜಯದಶಮಿ ಆಚರಿಸಿ ಮಾತನಾಡಿದ ಅವರು ಅಭಿವೃದ್ಧಿ ಕಾರ್ಯ ಆಗದ ಕಾರಣ ಕಾಂಗ್ರೆಸ್ ಶಾಸಕರಲ್ಲಿಯೇ ಅಸಮಾಧಾನ ಇದೆ. ಗ್ಯಾರಂಟಿಯಿಂದಾಗಿಯೇ ಸರ್ಕಾರ ಬೀಳುವ ಸಂಭವವಿದೆ. ಕೊಬ್ಬರಿಗೆ ಉತ್ತಮ ಬೆಲೆ ನಿಗದಿಗೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಜೊತೆಗೂಡಿ ೧೮೦ ಕಿ.ಮೀ ಪಾದಯಾತ್ರೆ ಮಾಡಿ, ಬೆಂಗಳೂರಿಗೆ ತಲುಪಿದಾಗ ಮುಖ್ಯಮಂತ್ರಿಗಳು ನಮ್ಮನ್ನು ಕರೆಸಿಕೊಂಡು ಮನವಿ ಸ್ವೀಕರಿಸಿ ತೋಟಗಾರಿಕೆ ಇಲಾಖೆ ಜೊತೆ ಸಮಾಲೋಚಿಸಿ ಇನ್ನು 15 ದಿನದಲ್ಲಿ ಕೊಬ್ಬರಿಗೆ ಬೆಲೆ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ವಾಗ್ದಾನ ಮಾಡಿದ್ದರು. ಆದರೆ, 20 ದಿನ ಕಳೆದರೂ ಕೊಬ್ಬರಿ ಬೆಲೆ ಬಗ್ಗೆ ಯಾವುದೇ ತೀರ್ಮಾನವನ್ನು ಪ್ರಕಟಿಸಿಲ್ಲ ಎಂದು ಆಪಾದಿಸಿದರು. ಕಳೆದ ಬಾರಿ ರಾಜ್ಯ ಸರ್ಕಾರ ಒಂದು ಸಾವಿರ ರು. ಪ್ರೋತ್ಸಾಹಧನ ಘೋಷಿಸಿದ ಮೇಲೆ ನಫೆಡ್ ಖರೀದಿ ನಿಲ್ಲಿಸಿದ ಕಾರಣ ಯಾವುದೇ ರೈತರಿಗೂ ಅದರ ಲಾಭ ಸಿಗಲಿಲ್ಲ. ಈಗಲಾದರೂ ನಫೆಡ್ ಪ್ರಾರಂಭಿಸಲು ಕ್ರಮ ಕೈಗೊಂಡರೆ ರೈತರ ಕೊಬ್ಬರಿಗೆ ಕ್ವಿಂಟಲ್‌ಗೆ 14ರಿಂದ 15 ಸಾವಿರ ಬೆಲೆಯಾದರೂ ಸಿಗುತ್ತದೆ. ಸರ್ಕಾರ ಅದನ್ನೂ ಕೂಡ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತುಮಕೂರು ಜಿಲ್ಲೆಯ ಯಾವ ಕೆರೆಗಳಿಗೂ ಮಳೆಗಾಲದಲ್ಲಿ ನೀರು ತುಂಬಿಸದ ಕಾರಣ ಜನ-ಜಾನುವಾರುಗಳಿಗೆ ನೀರಿಗೆ ತೊಂದರೆಯಾಗಲಿದೆ. ಮಳೆ ಇಲ್ಲದೆ ರಾಗಿ ಬೆಳೆಯೂ ಈಗ ನೆಲಕಚ್ಚಿರುವುದರಿಂದ ದನಗಳಿಗೆ ಮೇವು ಕೂಡ ಕೊರತೆಯಾಗಲಿದ್ದು, ಹೈನುಗಾರಿಕೆಯನ್ನೇ ನೆಚ್ಚಿಕೊಂಡಿರುವ ಗ್ರಾಮೀಣ ರೈತ ಕುಟುಂಬಗಳಿಗೆ ತೊಂದರೆಯಾಗಲಿದೆ. ಸರಕಾರ ಈ ಕೂಡಲೇ ಗೋಶಾಲೆ ತೆರೆದು ರಾಸುಗಳಿಗೆ ಮೇವು ನೀರು ಒದಗಿಸುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು. ಕೋಟ್.......... ಸರ್ಕಾರ ರೈತರನ್ನು ಅತಂತ್ರ ಸ್ಥಿತಿಗೆ ದೂಡಿದ್ದು, ರೈತರಿಗೆ ಉಪಯೋಗವಾಗುವ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದರಲ್ಲಿಯೇ ಸರ್ಕಾರ ಮುಳುಗಿದೆ. ಮಳೆ ಇಲ್ಲದೇ ರಾಜ್ಯದ ಬಹಳಷ್ಟು ತಾಲೂಕುಗಳಲ್ಲಿ ಬರಗಾಲ ತಾಂಡವವಾಡುತ್ತಿದ್ದು, ಬರಗಾಲ ಮುಗಿಯುವವರೆಗೂ ರೈತರ ಸಾಲದ ಬಡ್ಡಿಯನ್ನಾದರೂ ಮನ್ನಾ ಮಾಡಿ. ಅಸಲು ವಸೂಲಾತಿ ಮುಂದೂಡಬೇಕು. - ಕೆ.ಟಿ. ಶಾಂತಕುಮಾರ್, ಜೆಡಿಎಸ್ ಮುಖಂಡ, ತಿಪಟೂರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಗುರುಮೂರ್ತಿ, ಮುಖಂಡರಾದ ನೇತ್ರಾನಂದ, ಚನ್ನೇಗೌಡರು, ಕುಮಾರ್, ನಾಗೇಂದ್ರ, ಹೇಮಂತ್, ಅನೂಪ್, ಸಂತೋಷ್, ಶೆಟ್ಟಿಹಳ್ಳಿ ಲಾವಣ್ಯ ಮತ್ತಿತರರಿದ್ದರು. ಫೋಟೋ 25-ಟಿಪಿಟಿ2ರಲ್ಲಿ ತಿಪಟೂರಿನ ಗೃಹಕಚೇರಿಯಲ್ಲಿ ವಿಜಯದಶಮಿ ಆಚರಿಸಿದ ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್.