ಬೆಂಗಳೂರು : ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲೆ ಮರಾಠಿಗರ ಹಲ್ಲೆ ಖಂಡಿಸಿ ಸೋಮವಾರ ರಾಜಭವನ ಮುತ್ತಿಗೆಗೆ ಮುಂದಾದ ವಾಟಾಳ್ ನಾಗರಾಜ್ ಹಾಗೂ ಕನ್ನಡ ಒಕ್ಕೂಟ-ಕರ್ನಾಟಕ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.
ನಗರದ ಪ್ರೆಸ್‌ಕ್ಲಬ್ ಬಳಿಯಿಂದ ರಾಜಭವನಕ್ಕೆ ತೆರಳಲು ಕನ್ನಡಪರ ಹೋರಾಟಗಾರರು ಮುಂದಾಗುತ್ತಿದ್ದಂತೆ ಪೊಲೀಸರು ತಡೆದರು. ಈ ವೇಳೆ ಕನ್ನಡ ಪರ ಹೋರಾಟಗಾರರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು. ಕಂಡಕ್ಟರ್ ಮೇಲಿನ ಹಲ್ಲೆ ಖಂಡಿಸಿ ಮನವಿ ಕೊಡಲು ಬಂದಿದ್ದೇವೆ ಹೊರತು ಪ್ರತಿಭಟಿಸಲು ಅಲ್ಲವೆಂದು ವಿರೋಧ ವ್ಯಕ್ತಪಡಿಸಿದರು. ಎಲ್ಲರನ್ನೂ ವಶಕ್ಕೆ ಪಡೆದ ಪೊಲೀಸರು ಹಲಸೂರು ಪೊಲೀಸ್ ಠಾಣೆಗೆ ಕರೆದೊಯ್ದರು.
ವಾಟಾಳ್ ನಾಗರಾಜ್ ಮಾತನಾಡಿ, ಯಾರೇನೆ ಹೇಳಿದರೂ ಮಾ.22ರಂದು ಅಖಿಲ ಕರ್ನಾಟಕ ಬಂದ್ ಮಾಡೇ ಮಾಡುತ್ತೇವೆ. ರಾಜ್ಯದ ಸುಮಾರು 3000 ಕನ್ನಡ ಸಂಘಟನೆಗಳು ನಮಗೆ ಈಗಾಗಲೇ ಬೆಂಬಲ ನೀಡಿವೆ. ಅವತ್ತು ರಾಜ್ಯಾದ್ಯಂತ ಬಸ್ಗಳ ಓಡಾಟ ಸ್ಥಗಿತಗೊಳಿಸುವಂತೆ ಸಾರಿಗೆ ಸಚಿವರಿಗೆ ಕೋರಲಾಗುವುದು. ಬೆಂಗಳೂರಲ್ಲಿ ಮೆಟ್ರೋ ಪ್ರಯಾಣದ ದರ ಹೆಚ್ಚಿಸಿರುವುದರಿಂದ ಮೆಟ್ರೋ ರೈಲುಗಳಲ್ಲಿ ಅಂದು ಓಡಾಡದಂತೆ ಜನತೆಗೆ ಕರೆ ಕೊಡಲಿದ್ದೇವೆ ಎಂದು ತಿಳಿಸಿದರು.
ಪದೇ ಪದೇ ಕನ್ನಡಿಗರನ್ನು ಕೆಣಕುತ್ತಿರುವ ಶಿವಸೇನೆ, ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು. ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಇನ್ನಾದರೂ ವಿಶೇಷ ಒತ್ತು ನೀಡಬೇಕು. ಜೊತೆಗೆ ರಾಜ್ಯದ ಗಡಿನಾಡು ಪ್ರದೇಶಗಳ ಜನತೆಗೆ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡದೆ ಮೇಕೆದಾಟು, ಮಹಾದಾಯಿ ಕಳಸಾ ಬಂಡೂರಿ ಯೋಜನೆ ಜಾರಿಗೊಳಿಸಲು ಅನುವು ಮಾಡಿಕೊಡಬೇಕು. ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಮೂಲಕ ರಾಜಧಾನಿಯನ್ನು ನಾಲ್ಕು ಭಾಗವಾಗಿಸಿ ತಮಿಳು, ತೆಲುಗು, ಮಲೆಯಾಳಿ ಹಾಗೂ ಹಿಂದಿವಾಲಾಗಳ ಆಡಳಿತಕ್ಕೆ ನೀಡಲು ಮುಂದಾಗಿದ್ದು, ಇದು ಕೆಂಪೇಗೌಡರಿಗೆ ಮಾಡಹೊರಟ ಅವಮಾನ. ಇದನ್ನು ಕೂಡ ಬಂದ್ ವೇಳೆ ಖಂಡಿಸಲಾಗುವುದು ಎಂದು ತಿಳಿಸಿದರು.
ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡಸೇನೆಯ ಕೆ.ಆರ್.ಕುಮಾರ್, ಕರವೇ ಅಧ್ಯಕ್ಷ ಶಿವರಾಮೇಗೌಡ, ಎಚ್.ವಿ.ಗಿರೀಶ್, ಪಾರ್ಥಸಾರಥಿ ಇದ್ದರು.