ನಮ್ಮಲ್ಲಿ ಯಾವುದೇ ಬಿಕ್ಕಟ್ಟಿಲ್ಲ : ಬೇರೆ ಬೇರೆ ಹೇಳಿಕೆಗೆ ಬೆಲೆ ಇಲ್ಲ - ಉಪಮುಖ್ಯಮಂತ್ರಿ ಡಿಕೆಶಿ ಸ್ಪಷ್ಟನೆ

Published : Jan 09, 2025, 11:06 AM IST
dk shivakumar

ಸಾರಾಂಶ

ಅಧಿಕಾರ ಹಂಚಿಕೆ ವಿಚಾರದಲ್ಲಿ ಬೇರೆ ಬೇರೆ ಹೇಳಿಕೆಗಳಿಗೆ ಯಾವ ಬೆಲೆಯೂ ಇಲ್ಲ. ಕಾಂಗ್ರೆಸ್‌ ಕಚೇರಿಯಲ್ಲಿ ನನ್ನ ಮತ್ತು ಸರ್ಕಾರದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯೇ ಅಂತಿಮ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರು : ಅಧಿಕಾರ ಹಂಚಿಕೆ ವಿಚಾರದಲ್ಲಿ ಬೇರೆ ಬೇರೆ ಹೇಳಿಕೆಗಳಿಗೆ ಯಾವ ಬೆಲೆಯೂ ಇಲ್ಲ. ಕಾಂಗ್ರೆಸ್‌ ಕಚೇರಿಯಲ್ಲಿ ನನ್ನ ಮತ್ತು ಸರ್ಕಾರದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯೇ ಅಂತಿಮ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಗಾಂಧಿ ಭಾರತ ಕಾರ್ಯಕ್ರಮದ ಕುರಿತು ಆಯೋಜಿಸಿದ್ದ ಸುದ್ದಿಗೋಷ್ಠಿ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.

ಗಾಂಧಿ ಭಾರತ ಕಾರ್ಯಕ್ರಮದ ದಿನ ಜ.21ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆಯೋಜಿಸಿರುವ ಕಾರಣ ಏನು? ಪಕ್ಷದಲ್ಲಿನ ಬಿಕ್ಕಟ್ಟು ಶಮನಕ್ಕಾಗಿ ಈ ಸಭೆಯೇ ಎಂಬ ಪ್ರಶ್ನೆಗೆ, ನಮ್ಮಲ್ಲಿ ಬಿಕ್ಕಟ್ಟಿದೆ ಎಂದು ಹೇಳಿದವರು ಯಾರು? ನಮ್ಮಲ್ಲಿ ಯಾರಿಗೂ ಬಿಕ್ಕಟ್ಟಿಲ್ಲ. ಬಿಕ್ಕಟ್ಟಿದ್ದರೆ ನಿಮ್ಮಲ್ಲೇ (ಮಾಧ್ಯಮದವರಿಗೆ) ಇರಬೇಕು. ಸದ್ಯಕ್ಕೆ ಈ ಬಗ್ಗೆ ಹೆಚ್ಚೇನೂ ಮಾತನಾಡುವುದಿಲ್ಲ ಎಂದರು.

ಅಧಿಕಾರ ಹಂಚಿಕೆ ಬಗ್ಗೆ ಬೇರೆ ಬೇರೆ ಹೇಳಿಕೆ ಕೇಳಿಬರುತ್ತಿವೆಯಲ್ಲ ಎಂದು ಕೇಳಿದಾಗ, ಯಾವ ಹೇಳಿಕೆಯೂ ಇಲ್ಲ. ಕಾಂಗ್ರೆಸ್ ಕಚೇರಿಯಲ್ಲಿ ನಾನು, ಸರ್ಕಾರದ ವಿಚಾರದಲ್ಲಿ ಮುಖ್ಯಮಂತ್ರಿ ಅವರ ಹೇಳಿಕೆಯೇ ಅಂತಿಮ. ಬೇರೆ ಹೇಳಿಕೆಗಳಿಗೆ ಬೆಲೆ ಇರುವುದಿಲ್ಲ ಎಂದು ಹೇಳಿದರು.

ರಾಜಣ್ಣ ಹೇಳಿಕೆ ಗೊತ್ತಿಲ್ಲ: ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಕರೆದಿದ್ದ ಎಸ್ಸಿ, ಎಸ್ಟಿ ಸಚಿವರು, ಶಾಸಕರ ಔತಣ ಕೂಟ ರದ್ದು ಮಾಡಲು ದಲಿತ ವಿರೋಧಿಗಳೇ ಕಾರಣ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಆರೋಪಿಸಿದ್ದಾರಲ್ವಾ ಎಂದಾಗ, ನನಗೆ ಆ ವಿಚಾರವಾಗಿ ಗೊತ್ತಿಲ್ಲ. ಅದನ್ನು ತಿಳಿದುಕೊಂಡು ನಿಧಾನವಾಗಿ ಉತ್ತರಿಸುತ್ತೇನೆ ಎಂದಷ್ಟೇ ಹೇಳಿದರು.

ಸದ್ಯದಲ್ಲೇ ಡಿ.ಕೆ.ಶಿವಕುಮಾರ್ ಅವರ ಸಹನೆಯ ಕಟ್ಟೆ ಒಡೆಯಲಿದೆ ಎಂಬ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಕುರಿತು ಪ್ರಶ್ನಿಸಿದಾಗ, ಈ ವಿಚಾರವಾಗಿ ಮಾತನಾಡಲು ಪ್ರತ್ಯೇಕವಾಗಿ ಮತ್ತೊಂದು ಮಾಧ್ಯಮಗೋಷ್ಠಿ ಕರೆಯುತ್ತೇನೆ. ಯಾರೆಲ್ಲ ಏನೇನು ಹೇಳಿದ್ದಾರೆ ಎಂದು ಪಟ್ಟಿ ಮಾಡಿಕೊಂಡಿರಿ. ಎಲ್ಲರಿಗೂ ಉತ್ತರ ನೀಡುತ್ತೇನೆ. ಅವರಿಗೆ ಸೂಜಿದಾರ ಕಳುಹಿಸಿಕೊಡುತ್ತೇನೆ. ಮೊದಲು ಅವರು ತಮ್ಮ ಒಡೆದ ಮನೆಯನ್ನು ಹೊಲಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.

ವಿಧಾನ ಪರಿಷತ್ ಸದಸ್ಯತ್ವಕ್ಕೆ ನಾಮನಿರ್ದೇಶನದ ಬಗ್ಗೆ ಕೇಳಿದಾಗ, ಅದಕ್ಕೆ ಇನ್ನು ಸಮಯವಿದೆ. ಈ ವಿಚಾರವನ್ನು ಮುಖ್ಯಮಂತ್ರಿಗಳಿಗೆ ವಹಿಸಿದ್ದೇವೆ. ಖಾಲಿಯಾಗುವ ಎಲ್ಲಾ ಸ್ಥಾನಗಳಿಗೂ ಒಟ್ಟಿಗೆ ನಾಮನಿರ್ದೇಶನ ಮಾಡಲಾಗುವುದು. ಹೈಕಮಾಂಡ್ ನಾಯಕರ ಜತೆ ಚರ್ಚಿಸಿ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು