ಮಂಡ್ಯ : ಮುಸಲ್ಮಾನರೆಲ್ಲರೂ ಕಾಂಗ್ರೆಸ್ ಪರವಾಗಿದ್ದಾರೆ. ಅವರು ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗುವುದಿಲ್ಲವೆಂಬ ಭಾವನೆ ಕಾಂಗ್ರೆಸ್ ನಾಯಕರಲ್ಲಿದೆ. ಹಾಗೇನಾದರೂ ನಂಬಿದ್ದರೆ ಅದು ಬರೀ ಭ್ರಾಂತಿ. ನಮಗೂ ಬೇರೆ ಪಕ್ಷದ ಆಪ್ಷನ್ಸ್ ಇದೆ ಎಂದು ಜಿಲ್ಲೆಯ ಎಲ್ಲಾ ಮುಸ್ಲಿಂ ಧರ್ಮಗುರುಗಳು ಕೈ ವರಿಷ್ಠರು ಹಾಗೂ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದ ಜಾಮೀಯಾ ಮಸೀದಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಬ್ದುಲ್ ಖದೀರ್ ಅಹಮದ್, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೆ ಮುಸಲ್ಮಾನರು ಕಾರಣರಾಗಿದ್ದಾರೆ. ಹಗಲಿರುಳು ಮುಸಲ್ಮಾನರು ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ. ಇದನ್ನು ಮರೆತು ಕಾಂಗ್ರೆಸ್ ನಾಯಕರು ದಾವಣಗೆರೆಯಲ್ಲಿ ಮುಸಲ್ಮಾನರನ್ನು ಗುರಿಯಾಗಿಸಿಕೊಂಡಿರುವುದನ್ನು ನಾವೆಂದಿಗೂ ಸಹಿಸುವುದಿಲ್ಲ ಎಂದು ನೇರವಾಗಿ ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ತರುವುದಕ್ಕೆ ಮುಸಲ್ಮಾನರೇ ಕಾರಣರಾಗಿದ್ದರೂ ನಾವು ಅದನ್ನು ಬಹಿರಂಗವಾಗಿ ಹೇಳಲು ಹೋಗಲ್ಲ. ಎಲ್ಲಾ ಜಾತಿ, ಧರ್ಮದವರೂ ಮತ ಹಾಕಿದ್ದಾರೆ. ನಮ್ಮ ಧರ್ಮದವರು ಶೇ.೯೧ರಷ್ಟು ಮತವನ್ನು ಕಾಂಗ್ರೆಸ್‌ಗೆ ಹಾಕಿದ್ದಾರೆ. ನೀವು ಅಧಿಕಾರಕ್ಕೆ ಬರಲು ನಾವು ಕಾರಣಕರ್ತರಾಗಿದ್ದೇವೆ. ಆದರೂ ನಮಗೆ ಒಂದು ಗ್ಲಾಸ್ ನೀರು ಕೊಡಲು ಹಿಂದೇಟು ಯಾಕೆ ಹಾಕುತ್ತಿರುವಿರಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮ್ಮದ್ ವಜಾ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಸ್ಲಿಂ ಧರ್ಮ ಗುರುಗಳ ಪ್ರಶ್ನಿಸಿದರು.
ನಿಮ್ಮ ಅಭಿಪ್ರಾಯ ಸಂಗ್ರಹಿಸದೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತಾ. ನಾವು ಬ್ಲಾಕ್‌ಮೇಲ್ ಮಾಡುತ್ತಿಲ್ಲ. ಮುರುಗೇಶ್ ನಿರಾಣಿ ಪರ ಬಿ.ಎಸ್.ಯಡಿಯೂರಪ್ಪ ಬ್ಯಾಟಿಂಗ್ ಮಾಡುತ್ತಾರೆ. ನಾವು ಯಾವತ್ತೂ ಸಚಿವ ಸ್ಥಾನ ಕೊಡಿ ಅಂತ ಕೇಳಿಲ್ಲ. ದಾವಣಗೆರೆಯಲ್ಲಿ ಹಿಂದಿನಿಂದ ಶಾಮನೂರು ಶಿವಶಂಕರಪ್ಪ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದೇವೆ. ಈ ಬಾರಿ ನಮಗೊಂದು ಅವಕಾಶ ಕೊಡಿ ಅಂತಾ ಕೇಳಿದ್ದು ತಪ್ಪಾ?, ಎಸ್.ಎಸ್.ಮಲ್ಲಿಕಾರ್ಜುನ್ ಶಾಸಕರಾಗಿ ಸಚಿವರಾಗಿದ್ದಾರೆ, ಪ್ರಭಾ ಸಂಸದರಾಗಿದ್ದಾರೆ.
ಸಮರ್ಥ್‌ಗೆ ಇನ್ನೂ ವಯಸ್ಸು ಇತ್ತು. ಮುಂದಿನ ಬಾರಿ ಅವಕಾಶ ಕೊಡುವುದಾಗಿ ಹೇಳಬಹುದಿತ್ತು. ಪ್ರಣಾಳಿಕೆಯಲ್ಲಿ ಮುಸಲ್ಮಾನರಿಗೆ ಸಾಕಷ್ಟು ಭರವಸೆ ಕೊಟ್ಟಿದ್ದೀರಿ. ನೀವು ನಮ್ಮನ್ನ ಬೇಕಾದಂಗೆ, ಬೇಕಾದಾಗ ಬಳಸಿಕೊಂಡಿದ್ದೀರಿ. ಈಗ ನಡು ನೀರಿನಲ್ಲಿ ಕೈಬಿಟ್ಟಿದ್ದೀರಿ. ಒಂದು ನೋಟಿಸ್ ಕೂಡ ಕೊಡದೆ ಈ ರೀತಿಯ ಕ್ರಮ ಎಷ್ಟು ಸರಿ ಎಂದು ತರಾಟೆ ತೆಗೆದುಕೊಂಡರು.
ನಜೀರ್ ಅಹಮದ್, ಅಬ್ದುಲ್ ಜಬ್ಬಾರ್ ಅವರನ್ನ ಪುನರ್ ನೇಮಕ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ತಕ್ಕ ಪಾಠ ಕಲಿಸಬೇಕಾಗುತ್ತದೆ. ನಮ್ಮನ್ನು ನೀವು ಎಷ್ಟು ನಿರ್ಲಕ್ಷ್ಯ ಮಾಡುತ್ತಿದ್ದೀರಿ ಎನ್ನುವುದಕ್ಕೆ ಆತುರಾತುರವಾಗಿ ಕೈಗೊಂಡಿರುವ ಕ್ರಮವೇ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.
ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಚುನಾವಣೆ ಹತ್ತಿರ ಬಂದಾಗ ನೋಡೋಣ ಎಂಬ ಭಾವನೆ ನಿಮ್ಮದು. ಮತದಾರರು ಇವತ್ತು ಪ್ರಬುದ್ಧರಾಗಿದ್ದಾರೆ. ನಿಮ್ಮ ನಿರ್ಧಾರ ಬದಲಾಗದಿದ್ದರೆ ೨೦೨೮ರ ಚುನಾವಣೆಗೆ ತಕ್ಕ ಪಾಠ ಕಲಿಸಬೇಕಾಗುತ್ತೆ. ಸದ್ಯದಲ್ಲೇ ಕಾಂಗ್ರೆಸ್ ಪಕ್ಷ ತಮ್ಮ ನಿರ್ಧಾರವನ್ನು ಬದಲಿಸಬೇಕು. ಇಬ್ಬರನ್ನೂ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರು ಎನ್ನುತ್ತಾರೆ. ಹಾಗಾದರೆ ೨೦೨೪ರಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿ.ವೈ.ರಾಘವೇಂದ್ರ ಅವರನ್ನ ಗೆಲ್ಲಿಸಿ ಅಂದಿದ್ದು ಏನು?. ಅವರ ವಿರುದ್ಧ ಕೈಗೊಂಡ ಕ್ರಮ ಏನು?. ಈಗ ಈ ರೀತಿಯ ಏಕಾಏಕಿ ನಿರ್ಧಾರ ಯಾಕೆ?. ಮುಂದಿನ ದಿನಗಳಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಮಾಡುವುದಾಗಿ ಎಚ್ಚರಿಸಿದರು.
ಧರ್ಮಗುರುಗಳಾದ ಮೌಲಾನ ಹಾಮಿದುಲ್ ಹಸನ್ ರಶಾದಿ, ಮುಫ್ತಿ ರಿಜ್ವಾನ್ ಅಹಮ್ಮದ್ ಖಸ್ಮಿ, ಮೌಲಾನ ಅಮ್ಜದ್ ಅಲಿ ಖಾನ್, ಮುಫ್ತಿ ಒವೈಸ್ ಖರ್ನಿ ಖಾಸ್ಮಿ, ಮೌಲಾನ ಝಬೀವುಲ್ಲಾ ಇಮಾಮ್, ಹಾಫೀಜ್ ಸೈಯ್ಯದ್ ಅಹ್ಮದ್ ಪಾಷ, ಹಾಫೀಜ್ ಇಮ್ರಾನ್ ಪಾಷ, ಮುಫ್ತಿ ಇಮ್ದಾದ್ ಇದ್ದರು.