ಪ್ರಜಾಪ್ರಭುತ್ವ ಯಶಸ್ವಿ ಚಹರೆಯನ್ನು ವಿಶ್ವಕ್ಕೆ ತೋರಿಸಿದ್ದೇವೆ: ಜೈಶಂಕರ್‌

KannadaprabhaNewsNetwork |  
Published : Apr 16, 2024, 02:01 AM ISTUpdated : Apr 16, 2024, 04:43 AM IST
Jai Shankar 2 | Kannada Prabha

ಸಾರಾಂಶ

ಇತರೆ ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸಂಕಷ್ಟ ಎದುರಿಸುತ್ತಿರುವ ವೇಳೆ ನಾವು ಭಾರತದಲ್ಲಿ ಪ್ರಜಾಪ್ರಭುತ್ವದ ಯಶಸ್ಸಿನ ಚಹರೆಯನ್ನು ಜಗತ್ತಿಗೆ ತೋರಿಸಿದ್ದೇವೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.

 ಬೆಂಗಳೂರು : ಇತರೆ ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸಂಕಷ್ಟ ಎದುರಿಸುತ್ತಿರುವ ವೇಳೆ ನಾವು ಭಾರತದಲ್ಲಿ ಪ್ರಜಾಪ್ರಭುತ್ವದ ಯಶಸ್ಸಿನ ಚಹರೆಯನ್ನು ಜಗತ್ತಿಗೆ ತೋರಿಸಿದ್ದೇವೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.

ಗುರುವಾರ ಖಾಸಗಿ ಹೊಟೆಲ್‌ನಲ್ಲಿ ಬಿಜೆಪಿಯ ಮಾಧ್ಯಮ ಹಾಗೂ ಆರ್ಥಿಕ ಕೋಶ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದ ಮೂಲಕ ದೇಶದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸಬಹುದು ಹಾಗೂ ಕೋವಿಡ್‌ನಂತಹ ಸಂಕಷ್ಟದ ಸಮಯದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸಬಹುದು ಎಂಬುದನ್ನು ಜಗತ್ತಿಗೆ ತೋರ್ಪಡಿಸಿದ್ದೇವೆ. ಹಲವು ದೇಶಗಳು ಪ್ರಜಾಪ್ರಭುತ್ವದ ತತ್ವಗಳನ್ನು ಉಳಿಸಿಕೊಳ್ಳಲು ಸಂಘರ್ಷ ಎದುರಿಸುತ್ತಿರುವ ವೇಳೆ ನಾವು ಏಕಮೇವ ಶ್ರೇಷ್ಠ ಸಂವಿಧಾನದಡಿ ಯಶಸ್ವಿಯಾಗುತ್ತಿದ್ದೇವೆ. ನಮ್ಮಲ್ಲಿ ಚುನಾವಣೆಯನ್ನು ಯಾರು ಗೆದ್ದರು ಎಂದು ತೀರ್ಪು ಕೇಳಲು ಸುಪ್ರೀಂಕೋರ್ಟ್‌ಗೆ ಹೋಗುವ ಪರಿಸ್ಥಿತಿಯಿಲ್ಲ ಎಂದು ಹೇಳಿದರು.

ವರ್ಕ್‌ ಇನ್‌ ಇಂಡಿಯಾ:

ಕಳೆದೊಂದು ದಶಕದಲ್ಲಿ ‘ಮೇಕ್‌ ಇನ್‌ ಇಂಡಿಯಾ, ಮೇಕ್‌ ಫಾರ್‌ ದ ವರ್ಲ್ಡ್’ ನೀತಿಯಡಿ ನಾವು ಕೆಲಸ ಮಾಡಿದ್ದೇವೆ. ಇದೀಗ ಮುಂದುವರಿದು ‘ ವರ್ಕ್‌ ಇನ್‌ ಇಂಡಿಯಾ, ವರ್ಕ್‌ ಫಾರ್‌ ದ ವರ್ಲ್ಡ್’ ಎಂಬ ಚಿಂತನೆಯಡಿ ಕೆಲಸ ಮಾಡಲು ಒತ್ತು ಕೊಡಬೇಕಿದೆ. ನಮ್ಮ ಯುವಕರು ನಮ್ಮಲ್ಲಿ ಕೆಲಸ ಮಾಡುವಂತಾಗಬೇಕು. ಸೆಮಿಕಂಡಕ್ಟರ್‌ ವಲಯದಲ್ಲಿ ಭಾರತ ದಾಪುಗಾಲು ಇಡುತ್ತಿದೆ. ಜಾಗತಿಕ ಸಂಸ್ಥೆಗಳು ನಮ್ಮಲ್ಲಿಗೆ ಬರಲು ಉತ್ಸುಕವಾಗಿವೆ ಎಂದು ಹೇಳಿದರು.

ಜಾಗತಿಕ ಆರ್ಥಿಕತೆ ಇಂದು ‘ಇಂಡಿಯಾ ಮಿಡಲ್‌ ಈಸ್ಟ್‌ ಯುರೋಪ್‌ ಎಕನಾಮಿಕ್‌ ಕಾರಿಡಾರ್‌ (ಐಮೆಕ್‌) ಕುರಿತು ಹೆಚ್ಚಿನ ಆಸಕ್ತಿ ಹೊಂದಿದೆ. ಇದು ಐನೂರು ವರ್ಷಗಳ ಹಿಂದಿನ ಐತಿಹಾಸಿಕ ಹಾದಿಯೂ ಹೌದು. ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆದಿದೆ. ಹೀಗೆ ಭಾರತ ಜಾಗತಿಕ ಸಹಭಾಗಿತ್ವದೊಂದಿಗೆ ಆರ್ಥಿಕತೆಯ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದೆ ಎಂದು ಹೇಳಿದರು.ಬಳಿಕ ಸಚಿವ ಜಯಶಂಕರ್‌ ಅವರು ಸಭಿಕರ ಜೊತೆ ಸಂವಾದ ನಡೆಸಿದರು. ಮಾಜಿ ಸಚಿವ ಡಾ। ಸಿ.ಎನ್‌.ಅಶ್ವತ್ಥ ನಾರಾಯಣ, ಬಿಜೆಪಿ ವಕ್ತಾರರಾದ ಅಶ್ವತ್ಥನಾರಾಯಣ, ಮಾಳವಿಕಾ ಅವಿನಾಶ್‌ ಇದ್ದರು.

ಭಾರತ್‌ ಬ್ರ್ಯಾಂಡ್‌ ಬೆಳೆಸಲು ಶ್ರಮ:

ಪ್ರಧಾನಿ ಮೋದಿ ದೇಶದ ಅಭಿವೃದ್ಧಿ, ಭದ್ರತೆಯ ವಿಚಾರದಲ್ಲಿ ಪರಿಣಾಮಕಾರಿ ವಿದೇಶಾಂಗ ನೀತಿ ಹೊಂದಿದ್ದಾರೆ. ಭಾರತ ವಿಶಾಲ ಚಿಂತನೆಯ ಹಾಗೂ ದೊಡ್ಡದಾಗಿ ಆಲೋಚಿಸುವ ಗುರಿ ಇಟ್ಟುಕೊಳ್ಳುವ ಸಮಯ. ಕಳೆದ ಹತ್ತು ವರ್ಷದಲ್ಲಿ ನಾವು ಭಾರತದ ಅಭಿವೃದ್ಧಿಗೆ ಹಾಕಿರುವ ಅಡಿಪಾಯ ಭದ್ರವಾಗಿದೆ. ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ವಿಶಾಲ ಗುರಿಯತ್ತ ನಾವು ಮುಂದಿನ 20-25 ವರ್ಷದಲ್ಲಿ ‘ಭಾರತ್ ಬ್ರ್ಯಾಂಡ್’ ಬೆಳೆಸಲು ಶ್ರಮಿಸಬೇಕಿದೆ ಎಂದು ಜಯಶಂಕರ್‌ ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಎಂಎಸ್‌ಎಂಇ ಅಭಿವೃದ್ಧಿಗೆ ಸಂಪೂರ್ಣ ಸಹಕಾರ : ಸಚಿವೆ ಶೋಭಾ ಕರಂದ್ಲಾಜೆ
ಬಿಜೆಪಿ ವಿರುದ್ಧ ‘ಚಿಲುಮೆ’ ಅಸ್ತ್ರಕ್ಕೆ ಸರ್ಕಾರ ಸಜ್ಜು