ಕನ್ನಡಪ್ರಭ ವಾರ್ತೆ ಮಂಡ್ಯ
ದೆಹಲಿಯಲ್ಲಿ ಸೋಮವಾರ ಸಂಜೆ ಸಂಭವಿಸಿರುವ ಬಾಂಬ್ ಸ್ಫೋಟ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ೧೦ ವರ್ಷದಲ್ಲಿ ೨೫ ಬಾಂಬ್ ಸ್ಫೋಟಗಳಾಗಿವೆ. ಪುಲ್ವಾಮ, ಪೆಹಲ್ಗಾಮ್ ಸೇರಿದಂತೆ ಹಲವು ದೊಡ್ಡ ಸ್ಫೋಟಗಳಾಗಿದ್ದು, ಆ ಸಂದರ್ಭದಲ್ಲೂ ಕೇಂದ್ರ ಸರ್ಕಾರದ ಜತೆಗಿದ್ದೆವು. ಈ ವಿಚಾರದಲ್ಲಿ ರಾಜಕೀಯ ಮಾಡಲ್ಲ ಎಂದರು.
ಭ್ರಷ್ಟರ ವಿರುದ್ಧ ಕ್ರಮ ಆಗಬೇಕು:ಜೈಲಲ್ಲಿ ಕೈದಿಗಳಿಗೆ ರಾಜಾಥಿತ್ಯ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವ್ಯವಸ್ಥೆಯೇ ಹಾಗಿದೆ. ದಕ್ಷ ಅಧಿಕಾರಿಗಳನ್ನ ನೇಮಕ ಮಾಡಿ ಭ್ರಷ್ಟರ ವಿರುದ್ಧ ಕ್ರಮ ಆಗಬೇಕು. ಎಲ್ಲೋ ಒಂದು ಕಡೆ ಆದರೆ ಸರ್ಕಾರವನ್ನು ದೂಷಿಸಲಾಗುವುದಿಲ್ಲ. ಹಾಗಾದರೆ ದೆಹಲಿಯಲ್ಲಿ ನಡೆದ ಸ್ಫೋಟದ ಹೊಣೆಯನ್ನು ಕೇಂದ್ರ ಸರ್ಕಾರ ಹೊರುತ್ತಾ?, ಸಿದ್ದರಾಮಯ್ಯ ರಾಜೀನಾಮೆ ಕೇಳುವವರು, ಮೋದಿ ಅವರ ರಾಜೀನಾಮೆ ಕೇಳುತ್ತಾರೆಯೇ ಎಂದು ಮರು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೇಳೋರು ಈವಾಗ ಪ್ರಧಾನಮಂತ್ರಿ ರಾಜೀನಾಮೆ ಕೇಳುತ್ತಾರಾ?, ಪೆಹಲ್ಗಾಮ್ ದುರಂತಕ್ಕೂ ಪ್ರಧಾನಿ ಉಸಿರುಬಿಡಲಿಲ್ಲ. ಇವಾಗ ಅವರ ರಾಜೀನಾಮೆ ಬೇಡವೇ?, ಸಿಎಂ ಮಾತ್ರ ಏಕೆ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದರು.
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸಾಮೂಹಿಕ ನಮಾಜ್ ವಿಚಾರಕ್ಕೆ ಉತ್ತರ ನೀಡಿದ ಸಚಿವರು, ವಿಮಾನ ನಿಲ್ದಾಣಗಳನ್ನು ನಿರ್ವಹಣೆ ಮಾಡುವುದು ಕೇಂದ್ರ ಸರ್ಕಾರ. ಇದನ್ನೆಲ್ಲಾ ಕೇಂದ್ರ ಸರ್ಕಾರ ಕಂಟ್ರೋಲ್ ಮಾಡಬೇಕು. ಅವರು ಏರ್‌ಪೋರ್ಟ್‌ನಲ್ಲಿ ನಮಾಜ್ ಮಾಡಲು ಅನುಮತಿ ಕೊಟ್ಟವರು ಯಾರು ಎಂದರು.
ಹತ್ತು ವರ್ಷದಲ್ಲಿ ಯಾವ ಹಿಂದೂಗಳನ್ನು ಉದ್ಧಾರ ಮಾಡಿದ್ದಾರೆ? ಸಗಣಿ, ಉಚ್ಚೆ ಎನ್ನುವುದನ್ನು ಬಿಟ್ಟು ಇನ್ನೇನು ಮಾತನಾಡಿದ್ದೀರಾ? ಕಾಫಿ, ಟೀ ಯಾಕೆ ಕುಡಿಸುತ್ತೀರಾ ಉಚ್ಚೆ ಕುಡಿಸಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಮುಂದೆ ನಿತಿನ್ ಗಡ್ಕರಿ ಅವರು ಪ್ರಧಾನಿ ಆಗ್ತಾರೆ ಎಂದು ಬಿಜೆಪಿಯವರಿಗೆ ಭಯ ಇದೆ. ಇಷ್ಟು ವರ್ಷ ಬರೀ ಮೋದಿ ಫೋಟೊನೇ ಹಾಕಿಕೊಂಡಿದ್ದಾರೆ. ಮೋದಿ ಪಿಚ್ಚರ್ ಮುಗಿಯುತ್ತಾ ಬಂದಿದೆ. ಅದಕ್ಕೆ ಭಯ ಶುರುವಾಗಿದೆ. ಪಕ್ಷ ಕಟ್ಟಿದವರು ಎಲ್ಲ ಹೋದರು. ಬಿಜೆಪಿಯವರು ಮೋದಿಯನ್ನೇ ದೇವರು ಎಂದುಕೊಂಡಿದ್ದಾರೆ. ರಾಮ ಮೂರು ಅಡಿ, ಮೋದಿ ಆರು ಅಡಿ. ರಾಮನಿಗಿಂತ ಮೋದಿ ದೊಡ್ಡವರು ಎಂದು ಬಿಜೆಪಿಯವರು ತೋರಿಸಿ ಬಿಟ್ಟಿದ್ದಾರೆ. ರಾಮನ ಕೈ ಹಿಡಿದು ಮೋದಿ ಕರೆದುಕೊಂಡು ಹೋಗುತ್ತಾರೆ. ಪಾಪ.. ರಾಮನಿಗೆ ದಾರಿ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.