ಮಂಡ್ಯ : ನಮಗೆ ಭಾವನಾತ್ಮಕವಾಗಿ ಸರ್ಕಾರ ಮುನ್ನಡೆಸುವುದಕ್ಕೆ ಬರುವುದಿಲ್ಲ. ಜನರ ಮನಸ್ಸನ್ನು ಕದಡುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ಬಡವರ ಕಲ್ಯಾಣಕ್ಕಾಗಿ ಕೆಲಸ ಮಾಡುವುದೇ ಸರ್ಕಾರದ ಧ್ಯೇಯ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಕೆಲವರು ಭಾವನಾತ್ಮಕವಾಗಿ ಜನರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆಸುತ್ತಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೆಸರೇಳದೆ ಕಾಲೆಳೆದ ಚಲುವರಾಯಸ್ವಾಮಿ ಅವರು, ಅವಕಾಶ ಸಿಕ್ಕಾಗ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಜಾತಿ ವ್ಯಾಮೋಹದಿಂದಲೂ ಹಲವರು ರಾಜಕೀಯ ಮಾಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯನವರು ರೈತರು ಸೇರಿದಂತೆ ಎಲ್ಲರಿಗೂ ಅನುಕೂಲವಾಗುವಂತಹ ಕೆಲಸ ಮಾಡಿದ್ದಾರೆ ಎಂದರು.
ಮಂಡ್ಯ ಜಿಲ್ಲೆಗೆ ೫ ರಿಂದ ೬ ಸಾವಿರ ಕೋಟಿ ರು. ಹಣವನ್ನು ಬಿಡುಗಡೆ ಮಾಡಿದ್ದಾರೆ. ಮೈಷುಗರ್ ಕಾರ್ಖಾನೆಗೆ ಹೊಸ ಮಿಲ್ ಅಳವಡಿಸುವ ಪ್ರಕ್ರಿಯೆ ಕ್ಯಾಬಿನೇಟ್‌ನ ಮುಂದೆ ಬಂದಿದೆ. ಅದಕ್ಕೆ ಶೀಘ್ರ ಅನುಮೋದನೆ ದೊರಕಿಸಿಕೊಡಲಾಗುವುದು. ಮಿಮ್ಸ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕಿದೆ. ಆಸ್ಪತ್ರೆ ಜಾಗದ ವಿಷಯವಾಗಿ ಸ್ವಲ್ಪ ಸಮಸ್ಯೆ ಇದೆ. ಅದನ್ನು ಬಗೆಹರಿಸಿ ಆಸ್ಪತ್ರೆಗೆ ಕಾಯಕಲ್ಪ ನೀಡಲಾಗುವುದು ಎಂದರು.
2028 ರವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ: ಭೈರತಿ ಸುರೇಶ್
ಮಂಡ್ಯ : 2028 ರ ವರೆಗೂ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ, ಅಧ್ಯಕ್ಷ ಸ್ಥಾನದಲ್ಲಿ ಡಿ.ಕೆ.ಶಿವಕುಮಾರ್ ಇದ್ದು ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸಲಿದೆ ಎಂದು ಸಿದ್ದು ಪೂರ್ಣಾವಧಿ ಸಿಎಂ ಎಂಬ ಕೂಗನ್ನು ಸಚಿವ ಭೈರತಿ ಸುರೇಶ್ ಮತ್ತೆ ಮುಖ್ಯವಾಹಿನಿಗೆ ತಂದರು.
ಗುರುವಾರ ನಗರದ ಜಿಲ್ಲಾ ಕುರುಬರ ಸಂಘದ ಆವರಣದಲ್ಲಿ ಬಾಲಕರ ವಿದ್ಯಾರ್ಥಿನಿಲಯದ ಕಟ್ಟಡಕ್ಕೆ ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾಂಗ್ರೆಸ್ ಅಂದ್ರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಅಂದ್ರೆ ಕಾಂಗ್ರೆಸ್ ಎಂಬ ಪರಿಸ್ಥಿತಿ ಇದೆ. ಅವರಿಲ್ಲದಿದ್ದರೆ ಕಾಂಗ್ರೆಸ್ ಇಷ್ಟೊಂದು ಶಾಸಕ ಸ್ಥಾನಗಳನ್ನು ಗೆಲ್ಲಲಾಗುತ್ತಿರಲಿಲ್ಲ. ಸಿದ್ದರಾಮಯ್ಯನವರ ವರ್ಚಸ್ಸು ಉಪ ಚುನಾವಣೆಗಳಲ್ಲೂ ಪಕ್ಷಕ್ಕೆ ಗೆಲುವನ್ನು ತಂದುಕೊಟ್ಟಿತು. ಹೈಕಮಾಂಡ್ ಕೂಡ ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಪ್ರೀತಿ ತೋರಿಸಿದೆ. ಸಿಎಂ ಆಗುವುದಕ್ಕೆ ಅವರು ಒಂದು ರುಪಾಯಿ ಖರ್ಚು ಮಾಡಲಿಲ್ಲ. ಪಕ್ಷದ ಆಂತರಿಕ ಪ್ರಜಾಪ್ರಭುತ್ವದಡಿ ಲಕೋಟೆಯಲ್ಲಿ ಸಿದ್ದರಾಮಯ್ಯ ಹೆಸರು ಬಂದಿತು ಹಾಗಾಗಿ ಸಿದ್ದರಾಮಯ್ಯ ಇರುವವರೆಗೂ ಕಾಂಗ್ರೆಸ್‌ನೊಳಗೆ ಎಲ್ಲವೂ ಚೆನ್ನಾಗಿರಲಿದೆ ಎಂದರು.