;Resize=(412,232))
ಬೆಂಗಳೂರು : ಕಾಂಗ್ರೆಸ್‌ನ ರೆಬೆಲ್ ಶಾಸಕರೊಂದಿಗೆ ಸೇರಿ ನಾವು ಸರ್ಕಾರ ಮಾಡಲ್ಲ. ನಾವು ಮತದಾರರ ಬಳಿ ಹೋಗಿ ಗೆದ್ದು ಸರ್ಕಾರ ಮಾಡುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಭಾನುವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಬೇಕು. ಬಿಹಾರ ಮಾದರಿಯಲ್ಲಿ ಈ ದರಿದ್ರ ಕಾಂಗ್ರೆಸ್ ತೊಲಗಿಸಲು ರಾಜ್ಯದ ಜನ ಚುನಾವಣೆಗಾಗಿ ಕಾಯುತ್ತಿದ್ದಾರೆ. ಕಾಂಗ್ರೆಸ್ ಸಾಯುವ ಪಕ್ಷ. ದೇಶದಲ್ಲಿ ಈಗಾಗಲೇ ಅದು ಸತ್ತು ನೆಲಕಚ್ಚಿದೆ. ಬಿಜೆಪಿ ಶಾಸಕರು ಆ ಪಕ್ಷದ ಕಡೆ ಮುಖ ಕೂಡ ತಿರುಗಿಸಿ ನೋಡಲ್ಲ ಎಂದು ಸ್ಪಷ್ಟಪಡಿಸಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಹೇಳಿರುವ ಕುದುರೆ ವ್ಯಾಪಾರದ ಮಾತುಗಳಲ್ಲಿ ಸತ್ಯವಿದೆ. ಈ ಮೊದಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕೇವಲ 10-12 ಮಂದಿ ಶಾಸಕರ ಬೆಂಬಲವಿದೆ ಎಂದು ಮಾಧ್ಯಮಗಳಲ್ಲೇ ಬರುತ್ತಿತ್ತು. ಈಗ ಏಕಾಏಕಿ 70 ಶಾಸಕರ ಬೆಂಬಲವಿದೆ ಎನ್ನಲಾಗುತ್ತಿದೆ. ಈ ದಿಢೀರ್ ಬದಲಾವಣೆಗೆ ಮ್ಯಾಜಿಕ್ ಆಯಿತಾ? ಕೈ ಕರಾಮತ್ತು ಇಲ್ಲದೆ ಇದು ಸಾಧ್ಯವಿಲ್ಲ. ಕರಾಮತ್ತು ಎಂದರೇ, ಕೋಟಿ ಕೋಟಿ ರು. ಹಣ ಕೊಟ್ಟು ಶಾಸಕರ ಸಹಿ ಪಡೆದಿದ್ದಾರೆ. ಸಹಿ ಪಡೆಯಲೆಂದೇ ಪರಪ್ಪನ ಅಗ್ರಹಾರದ ಜೈಲಿಗೂ ಸಹ ಹೋಗಿದ್ದಾರೆ. ಕಾಂಗ್ರೆಸ್ ಪಕ್ಷದೊಳಗೆ ಕುದುರೆ ವ್ಯಾಪಾರ ಬಲು ಜೋರಾಗಿದೆ ಎಂದು ಆಪಾದಿಸಿದರು.
ಕಳೆದ ಎರಡು ದಿನಗಳಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಡಲ್ ಆಗಿದ್ದಾರೆ. ಕುದುರೆ ವ್ಯಾಪಾರ ಡೀಲ್ ಆದ ಬಳಿಕ ಅವರು ಡಲ್ ಆಗಿದ್ದಾರೆ. ಇಷ್ಟು ದಿನ ನಾನೇ ಐದು ವರ್ಷ ಮುಖ್ಯಮಂತ್ರಿ. ಮುಂದಿನ ಎರಡು ಬಜೆಟ್ ನಾನೇ ಮಂಡಿಸುತ್ತೇನೆ. ನನಗೆ ಹೆಚ್ಚಿನ ಸಂಖ್ಯೆಯ ಶಾಸಕರ ಬೆಂಬಲವಿದೆ. ಡಿ.ಕೆ.ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ ಎನ್ನುತ್ತಿದ್ದರು. ಈಗ ನೋಡಿದರೆ, ಹೈಕಮಾಂಡ್ ಹೇಳಿದಂತೆ ನಾನೂ ಅಥವಾ ಡಿ.ಕೆ.ಶಿವಕುಮಾರ್ ಕೇಳಬೇಕು ಎಂದಿದ್ದಾರೆ. ಇದು ಅರ್ಥವೇನು ಎಂದು ಅಶೋಕ್ ಪ್ರಶ್ನಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಶೋಕ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಹೆಸರಿಗಷ್ಟೇ ಅಧ್ಯಕ್ಷರು. ಅವರು ಕುಳಿತಿರುವ ಚೇರಿಗೆ ಪವರ್ ಇಲ್ಲ. ಹೆಸರಿಗಷ್ಟೇ ಅವರು ದೇಶದ ಕಾಂಗ್ರೆಸ್‌ಗೆ ಹೈಕಮಾಂಡ್. ವಾಸ್ತವದಲ್ಲಿ ಅದು ಅಲ್ಲ. ಅವರು ಪರಾವಲಂಬಿ ಎಂದು ಲೇವಡಿ ಮಾಡಿದರು.