ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ‘ದೊಡ್ಡ ತಿಮಿಂಗಿಲ ಯಾವುದು ಎಂದು ನನಗಿಂತ ಚೆನ್ನಾಗಿ ಗೃಹ ಸಚಿವ ಪರಮೇಶ್ವರ ಅವರಿಗೇ ಗೊತ್ತಿದೆ. ಅವರು ತಿಮಿಂಗಿಲವನ್ನು ಪಕ್ಕದಲ್ಲೇ ಕೂರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಮೈಸೂರು : ‘ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿನ ತಿಮಿಂಗಿಲ ಯಾರೆಂದು ಗೊತ್ತಿದ್ದರೆ ಬಹಿರಂಗಪಡಿಸಲಿ. ಮಾಹಿತಿ ಇದ್ದರೂ ಹೇಳದಿರುವುದು ದೊಡ್ಡ ತಪ್ಪು’ ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ‘ದೊಡ್ಡ ತಿಮಿಂಗಿಲ ಯಾವುದು ಎಂದು ನನಗಿಂತ ಚೆನ್ನಾಗಿ ಗೃಹ ಸಚಿವ ಪರಮೇಶ್ವರ ಅವರಿಗೇ ಗೊತ್ತಿದೆ. ಅವರು ತಿಮಿಂಗಿಲವನ್ನು ಪಕ್ಕದಲ್ಲೇ ಕೂರಿಸಿಕೊಂಡಿದ್ದಾರೆ. ಎಸ್‌ಐಟಿ ಸರಿಯಾಗಿ ತನಿಖೆ ನಡೆಸಿದ್ದರೆ ದೊಡ್ಡ ತಿಮಿಂಗಿಲ ಹತ್ತೇ ನಿಮಿಷದಲ್ಲಿ ಸಿಗುತ್ತಿತ್ತು’ ಎಂದು ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಡನೆ ಮಾತನಾಡಿ, ದೊಡ್ಡ ತಿಮಿಂಗಿಲವನ್ನು ಅವರು ಪಕ್ಕದಲ್ಲಿಯೇ ಕೂರಿಸಿಕೊಂಡಿದ್ದಾರೆ. ತಿಮಿಂಗಿಲ ಹಿಡಿಯೋದು ಬಿಟ್ಟು ನನ್ನನ್ನು ಕೇಳಿದರೆ ಹೇಗೆ? ಆ ತನಿಖೆ ಸರಿಯಾಗಿ ನಡೆದಿದ್ದರೆ ಹತ್ತೇ ನಿಮಿಷದಲ್ಲಿ ಆ ತಿಮಿಂಗಿಲ ಸಿಕ್ಕಿಹಾಕಿಕೊಳ್ಳುತ್ತಿತ್ತು. ಸರಿಯಾಗಿ ತನಿಖೆ ನಡೆಯುತ್ತಿದೆಯೇ ಎಂದು ಗೃಹ ಸಚಿವರೇ ಹೇಳಬೇಕು ಎಂದು ವ್ಯಂಗ್ಯವಾಡಿದರು.
ನಿಮ್ಮ ತಂಗಿ, ತಾಯಂದಿರನ್ನಾದರೂ ನೆನಪು ಮಾಡಿಕೊಂಡು ಹೆಣ್ಣು ಮಕ್ಕಳ ಮರ್ಯಾದೆ ತೆಗೆಯದೆ ಈ ತನಿಖೆಯನ್ನು ಸರಿಯಾಗಿ ಮಾಡಿ ಎಂದು ನಮ್ಮ ಹಿರಿಯ ಮತ್ತು ಕಿರಿಯ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಇದೇ ವೇಳೆ ತಿಳಿಸಿದರು.
ವಿಡಿಯೋ ಜಗಜ್ಜಾಹೀರು ಮಾಡಿ ಬೀದಿಗೆ ತಂದವರ ಬಗ್ಗೆ ತನಿಖೆ ನಡೆದಿದೆಯೇ? ಜಗಜ್ಜಾಹೀರು ಮಾಡಿದವನು ಆರಾಮವಾಗಿ ಖಾಸಗಿ ಚಾನೆಲ್ ಮುಂದೆ ಸಂದರ್ಶನ ಕೊಡುತ್ತಿದ್ದಾನೆ. ಒಂದು ವಾರದಲ್ಲಿ ಸೂತ್ರದಾರ ಸಿಗುತ್ತಾನೆ ಎಂದು ಮಂಡ್ಯ ಶಾಸಕ ಹೇಳಿದ್ದಾರೆ. ಬಹುಶಃ ತನಿಖಾ ವರದಿ ಮಂಡ್ಯ ಶಾಸಕರಿಗೆ ಹೋಗುತ್ತಿದೆಯೇ ಹೊರತು ಪರಮೇಶ್ವರ್‌ಗೆ ಅಲ್ಲ. ಗೃಹ ಸಚಿವರ ಕೆಲಸವನ್ನು ಪರಮೇಶ್ವರ್ ಅವರ ಪಕ್ಕದಲ್ಲಿ ಕೂತಿರುವವರು ನೋಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಪ್ರಜ್ವಲ್ ಪಾಸ್‌ಪೋರ್ಟ್ ರದ್ದುಪಡಿಸಿ: ಪ್ರಜ್ವಲ್ ಪಾಸ್‌ಪೋರ್ಟ್ ಯಾಕೆ ರದ್ದುಪಡಿಸುವುದಿಲ್ಲ? ಈ ಕೆಲಸವನ್ನು ತನಿಖೆ ನಡೆಸುತ್ತಿರುವ ಎಸ್‌ಐಟಿ ಮಾಡಬೇಕು. ಕೂಡಲೇ ತನಿಖಾ ವರದಿಯನ್ನು ಕೇಂದ್ರಕ್ಕೆ ಕಳುಹಿಸಿಕೊಡಬೇಕು. ಆಗ ಪಾಸ್‌ಪೋರ್ಟ್ ರದ್ದಾಗುತ್ತದೆ ಎಂದರು.
ಈಗ ಬಂಧನ ಯಾಕೆ?: ಬಿಜೆಪಿಯ ದೇವರಾಜೇಗೌಡರನ್ನು ಬಂಧಿಸಿ ಅವರಿಂದ ಏನು ಉತ್ತರ ಬಯಸುತ್ತಿದ್ದೀರಾ? ಅವರನ್ನು ಬಂಧಿಸಿರುವುದು ಸುಳ್ಳು ಆರೋಪದ ಮೇಲೆ. ಅತ್ಯಾಚಾರ ಮಾಡಿದ್ದಾರೆಂದು ದೂರಲಾಗಿದೆ. ಎಫ್‌ಐಆರ್ ದಾಖಲಿಸಿ ಒಂದು ತಿಂಗಳಾಗಿದೆ. ಒಂದು ತಿಂಗಳ ಹಿಂದೆ ಕೇಸ್ ದಾಖಲಾಗಿದ್ದರೂ ಈಗ ಬಂಧಿಸಿರುವುದು ಏಕೆ? ದೇವರಾಜೇಗೌಡರಿಂದ ಅತ್ಯಾಚಾರಕ್ಕೆ ಸಂಬಂಧಿಸಿದ ಮಾಹಿತಿ ಬೇಕೋ? ಪ್ರಕರಣದ ಕುರಿತು ಆಡಿಯೋ ತುಣುಕು ಬಿಡುಗಡೆ ಮಾಡಿದ್ದರಲ್ವ, ಅದರ ಕುರಿತು ಮಾಹಿತಿ ಬೇಕೋ? ಎಂದು ಹಾಸನ ಎಸ್ಪಿಯವರನ್ನು ಕೇಳಬಯಸುತ್ತೇನೆ ಎಂದರು.