ಬಾಂಗ್ಲಾ ಸರ್ಕಾರ ಕೆಡವಿದ ಜೆನ್‌-ಝೀಗಳೇನಾದರು?

Published : Feb 17, 2026, 10:14 AM IST
 Bangladesh

ಸಾರಾಂಶ

ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯ ಫಲಿತಾಂಶವನ್ನು ಒಂದು ಸಾಲಿನಲ್ಲಿ ಈ ರೀತಿ ವಿಶ್ಲೇಷಿಸಬಹುದು. ಅಲ್ಲಿ ಕಳೆದ ವಾರ ನಡೆದ ಚುನಾವಣೆಗೆ ಪ್ರಮುಖ ಕಾರಣವೇ- 2024ರ ಆಗಸ್ಟ್‌ನ ಜೆನ್‌-ಝೀ ಹೋರಾಟ.

 ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯ ಫಲಿತಾಂಶವನ್ನು ಒಂದು ಸಾಲಿನಲ್ಲಿ ಈ ರೀತಿ ವಿಶ್ಲೇಷಿಸಬಹುದು. ಅಲ್ಲಿ ಕಳೆದ ವಾರ ನಡೆದ ಚುನಾವಣೆಗೆ ಪ್ರಮುಖ ಕಾರಣವೇ- 2024ರ ಆಗಸ್ಟ್‌ನ ಜೆನ್‌-ಝೀ ಹೋರಾಟ. ಶೇಖ್‌ ಹಸೀನಾ ಪಕ್ಷದವರಿಗೆ ಮಣೆ ಹಾಕುವ ಸರ್ಕಾರಿ ಹುದ್ದೆಗಳ ಮೀಸಲು ವ್ಯವಸ್ಥೆ ವಿರೋಧಿಸಿ, ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಜೆನ್‌-ಝೀ ಸಮುದಾಯ ಸಂಘಟಿಸಿದ ಹೋರಾಟಕ್ಕೆ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿತ್ತು. ಫಲವಾಗಿ, 15 ವರ್ಷಗಳ ಕಾಲ ಬಾಂಗ್ಲಾದೇಶ ರಾಜಕಾರಣದ ಮೇಲೆ ಅತ್ಯಂತ ಬಿಗಿ ಹಿಡಿತ ಹೊಂದಿದ್ದ ಶೇಖ್‌ ಹಸೀನಾ ದೇಶ ಬಿಟ್ಟು ಭಾರತಕ್ಕೆ ಓಡಿ ಬರಬೇಕಾಯಿತು. ಈಗ ಚುನಾವಣೆ ನಡೆದಿದೆ. ಶೇಖ್‌ ಹಸೀನಾ ವಿರುದ್ಧ ಬೀದಿಗಿಳಿದು ಹೋರಾಡಿದವರು ನಾಪತ್ತೆಯಾಗಿದ್ದಾರೆ. ಶೇಖ್‌ ಹಸೀನಾಗೆ ಹೆದರಿ ಇಂಗ್ಲೆಂಡ್‌ನಲ್ಲಿ ಇದ್ದ, ಜೆನ್‌ಝೀ ಹೋರಾಟ ನಡೆಯುವಾಗ ದೂರದಿಂದಲೇ ನೋಡುತ್ತಿದ್ದ ತಾರೀಖ್‌ ರಹಮಾನ್‌ ಇಂದು ಪ್ರಧಾನಿಯಾಗುತ್ತಿದ್ದಾರೆ. ಸರ್ಕಾರವನ್ನು ಬಹಳ ಸುಲಭವಾಗಿ ಪತನಗೊಳಿಸುವಲ್ಲಿ ಸಫಲರಾದ ಜೆನ್‌-ಝೀಗಳಿಗೆ, ಒಂದು ಹೊಸ ಸರ್ಕಾರ ಹುಟ್ಟು ಹಾಕಲು ಆಗಿಲ್ಲ.

2024ರಲ್ಲಿ ತಮ್ಮ ಹೋರಾಟಕ್ಕೆ ಸಿಕ್ಕ ಯಶಸ್ಸಿನಿಂದ ಹಿಗ್ಗಿ ಹೋಗಿದ್ದ ಬಾಂಗ್ಲಾದ ಜೆನ್‌-ಝೀ ನಾಯಕರು ಮಧ್ಯಂತರ ಸರ್ಕಾರ ಸೇರಿ ಹಲವು ಹುದ್ದೆಗೇರಿದ್ದರು. ವಿಶ್ವವೇ ಕೊಂಡಾಡಿದ ಹೋರಾಟದ ಲಾಭವನ್ನು ಮತವಾಗಿ ಪರಿವರ್ತಿಸಲು ಮಧ್ಯಂತರ ಸರ್ಕಾರವನ್ನು ಮಧ್ಯದಲ್ಲೇ ಬಿಟ್ಟು ‘ನ್ಯಾಷನಲ್‌ ಸಿಟಿಜನ್‌ ಪಾರ್ಟಿ’ (ಎನ್‌ಸಿಪಿ) ಸ್ಥಾಪಿಸಿದರು. ಅಧಿಕಾರಕ್ಕೇರುವ ಧಾವಂತದಲ್ಲಿ, ಅನುಭವದ ಕೊರತೆಯಿಂದ, ಕಟ್ಟರ್‌ ಮೂಲಭೂತವಾದಿ ಜಮಾತ್ ಎ ಇಸ್ಲಾಮಿ ಜತೆ ಮೈತ್ರಿ ಮಾಡಿಕೊಂಡರು. ಈ ಜಮಾತೆ ಇಸ್ಲಾಮಿ 1971ರಲ್ಲಿ ಬಾಂಗ್ಲಾ ವಿಮೋಚನೆಗಾಗಿ ನಡೆದ ಹೋರಾಟವನ್ನೇ ವಿರೋಧಿಸಿತ್ತು. ವಿಮೋಚನೆಗಾಗಿ ಹೋರಾಡುವವರನ್ನು ನಿರ್ದಯವಾಗಿ ಕೊಂದು ಹಾಕಿತ್ತು. ಅದರ ಕೈಗೆ ಅಂಟಿರುವ ರಕ್ತದ ಕಲೆಗಳನ್ನು ಜನರಿನ್ನೂ ಮರೆತಿಲ್ಲ. ಜೆನ್‌-ಝೀಗಳಿಗೆ ದೂರದಲ್ಲಿನ ಅಧಿಕಾರದ ಗದ್ದುಗೆ ಮಾತ್ರವೇ ಕಾಣುತ್ತಿತ್ತು. ಆದರೆ ಜಮಾತ್‌ಗಳ ಹಿಂದಿರುವ ಇತಿಹಾಸ ಕಾಣಿಸುತ್ತಿರಲಿಲ್ಲ. ಪಕ್ಷದ ನಾಯಕರ ಅನಾಹುತಕಾರಿ ನಿರ್ಧಾರ ಅರಿತ ಪಕ್ಷದ ಸಂಸ್ಥಾಪಕರಲ್ಲೇ ಹಲವು ನಾಯಕರು ಎನ್‌ಸಿಪಿ ಬಿಟ್ಟು, ತಾರೀಖ್‌ ರಹಮಾನ್‌ರ ಬಿಎನ್‌ಪಿಗೆ ಜಿಗಿದರು. ಕೊನೆಗೆ ಜಮಾತ್‌ ಜತೆಗೂಡಿ 30 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಜೆನ್‌-ಝೀ 6 ಪಕ್ಷ ಸೀಟು ಗೆದ್ದಿದೆ. ಜೆನ್‌-ಝೀಗಳ ಹೋರಾಟದಿಂದಾಗಿ 60 ವರ್ಷದ ವ್ಯಕ್ತಿ ಪ್ರಧಾನಿಯಾಗುತ್ತಿದ್ದಾರೆ.

ಜೆನ್‌-ಝೀ ಹೋರಾಟವನ್ನು ಬೆಂಬಲಿಸಿದ ಬಾಂಗ್ಲಾದೇಶದ ಜನ, ಚುನಾವಣೆ ವೇಳೆ ಈ ಎಳೆ ನಿಂಬೆಕಾಯಿಗಳ ಮೇಲೆ ವಿಶ್ವಾಸ ಇರಿಸಿಲ್ಲ. ಹೋರಾಟ ನಡೆಸುವುದು ಸುಲಭ, ಸರ್ಕಾರ ನಡೆಸುವುದು ಬಹಳ ಕಷ್ಟ ಎಂಬ ತಿಳಿವಳಿಕೆ ಇದಕ್ಕೆ ಕಾರಣವಿದ್ದಿರಬಹುದು. ಹೀಗಾಗಿ ಬಾಂಗ್ಲಾದೇಶದಲ್ಲಿ ಆಡಳಿತ ನಡೆಸಿದ ಅನುಭವ ಹೊಂದಿರುವ ಖಲೀದಾ ಜಿಯಾ ಅವರ ಬಾಂಗ್ಲಾದೇಶ ನ್ಯಾಷನಲಿಷ್ಟ್‌ ಪಾರ್ಟಿ (ಬಿಎನ್‌ಪಿ)ಗೆ ಮಣೆ ಹಾಕಿದ್ದಾರೆ. ಶ್ರೀಲಂಕಾದಲ್ಲೂ ಇದೇ ರೀತಿ ಆಗಿತ್ತು. ಹೋರಾಟ ಮಾಡಿದ್ದು ಯುವಕರು, ಅಧಿಕಾರಕ್ಕೇರಿದ್ದು ನುರಿತ ರಾಜಕಾರಣಿ!

ಅಸ್ಸಾಂನಲ್ಲಿ ಇದು ಉಲ್ಟಾ ಆಗಿತ್ತು

ಬಾಂಗ್ಲಾದೇಶದ ಜೆನ್-ಝೀಗಳ ರೀತಿಯಲ್ಲೇ ಸ್ವಲ್ಪ ಭಿನ್ನವಾದ ಹೋರಾಟವನ್ನು ಅಸ್ಸಾಂ 1979ರಿಂದ ಆರು ವರ್ಷಗಳ ಕಾಲ ಕಂಡಿತ್ತು. ‘1971ರಲ್ಲಿ ಬಾಂಗ್ಲಾದೇಶ ಉದಯವಾದ ಬಳಿಕ ಸಾಲು ಸಾಲಾಗಿ ಅಕ್ರಮ ವಲಸಿಗರು ಅಸ್ಸಾಂಗೆ ಬರುತ್ತಿದ್ದಾರೆ, ನಮ್ಮ ಸಂಸ್ಕೃತಿಯನ್ನೇ ಅಳಿಸುತ್ತಿದ್ದಾರೆ’ ಎಂದು ಅಸ್ಸಾಂನ ‘ಅಖಿಲ ಅಸ್ಸಾಂ ವಿದ್ಯಾರ್ಥಿ ಒಕ್ಕೂಟ’ (ಎಎಎಸ್‌ಯು) ದೊಡ್ಡ ಹೋರಾಟ ಸಂಘಟಿಸಿತ್ತು. 27 ವರ್ಷದ ಪ್ರಫುಲ್ಲ ಕುಮಾರ್ ಮಹಾಂತ ಎಂಬ ಯುವಕ ಅದರ ನೇತೃತ್ವ ಹೊತ್ತುಕೊಂಡಿದ್ದ. ಹೋರಾಟದ ಬಿಸಿ ತಟ್ಟಿ, 1971ರ ನಂತರ ಅಸ್ಸಾಂಗೆ ಬಂದ ಬಾಂಗ್ಲಾದೇಶೀಯರನ್ನು ಹೊರದಬ್ಬುವುದಾಗಿ 1985ರಲ್ಲಿ ಕೇಂದ್ರ ಸರ್ಕಾರ ಎಎಎಸ್‌ಯು ಜತೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಅದಾದ ಕೂಡಲೇ ಮಹಾಂತ ಮಾಡಿದ ಕೆಲಸವೆಂದರೆ, ವಿದ್ಯಾರ್ಥಿ ಹೋರಾಟಗಾರರನ್ನು ಸೇರಿಸಿ ಅಸೋಂ ಗಣ ಪರಿಷತ್‌ (ಎಜಿಪಿ) ಎಂಬ ಹೊಸ ಪಕ್ಷವನ್ನೇ ಹುಟ್ಟುಹಾಕಿದ್ದು. ಅದೇ ವರ್ಷದ ಚುನಾವಣೆಯಲ್ಲಿ ಎಜಿಪಿ ಬಹುಮತ ಗಳಿಸಿತು. 33ನೇ ವಯಸ್ಸಿಗೇ ಮಹಾಂತ ಮುಖ್ಯಮಂತ್ರಿ ಹುದ್ದೆಗೇರಿದರು!

ಕೆಲವೇ ಕೆಲವು ಮಂದಿ ಯಶಸ್ಸು ಗಳಿಸುತ್ತಾರೆ.

2011ರಲ್ಲಿ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರದ ವಿರೋಧಿ ಹೋರಾಟದಲ್ಲಿದ್ದವರನ್ನು ಒಗ್ಗೂಡಿಸಿ ಆಮ್‌ ಆದ್ಮಿ ಪಕ್ಷ (ಆಪ್‌) ಕಟ್ಟಿ ಅರವಿಂದ ಕೇಜ್ರಿವಾಲ್‌ ಮುಖ್ಯಮಂತ್ರಿ ಹುದ್ದೆಗೇರಿದ್ದು, ಜನಾಂದೋಲನವನ್ನು ರಾಜಕೀಯ ಲಾಭವಾಗಿ ಮಾಡಿಕೊಳ್ಳುವ ಕಲೆಗಾರಿಕೆಗೆ ಮತ್ತೊಂದು ನಿದರ್ಶನ. ಇಂತಹ ಕಾರ್ಯದಲ್ಲಿ ಬಹುತೇಕ ಮಂದಿ ವಿಫಲರಾಗುತ್ತಾರೆ. ಕೆಲವೇ ಕೆಲವು ಮಂದಿ ಯಶಸ್ಸು ಗಳಿಸುತ್ತಾರೆ. ಬಾಂಗ್ಲಾದೇಶ ಜೆನ್‌-ಝೀಗಳು ಮೊದಲನೇ ವರ್ಗಕ್ಕೆ ಸೇರುತ್ತಾರೆ.

ಬಾಂಗ್ಲಾದೇಶ ಹೋರಾಟದಿಂದ ಪ್ರೇರಣೆ ಪಡೆದು ನೇಪಾಳದಲ್ಲೂ ಜೆನ್‌-ಝೀ ದಂಗೆಯಾಯಿತು. ಸರ್ಕಾರ ಪತನವಾಯಿತು. ಅಲ್ಲಿನ ಮತದಾರರಾದರೂ ಜೆನ್‌-ಝೀಗೆ ಆಶೀರ್ವದಿಸುತ್ತಾರಾ? ಬರುವ ಮಾರ್ಚ್‌ ಐದಕ್ಕೆ ಚುನಾವಣೆ ಇದೆ. ನೋಡಬೇಕು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನಟ ವಿಜಯ್‌- ತ್ರಿಶಾ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕೀಳು ಹೇಳಿಕೆ ವಿವಾದ, ವಿಷಾಧ
ಕಾಂಗ್ರೆಸ್‌ಗೆ ದೊಡ್ಡ ಆಘಾತ : 36 ವರ್ಷಗಳಿಂದ ಪಕ್ಷಕ್ಕಾಗಿ ಶ್ರಮಿಸಿದ ನಾಯಕ ರಾಜೀನಾಮೆ