ರಾಜಕಾರಣಿಗಳು ತಮ್ಮನ್ನು ತಾವು ಸವಲತ್ತು ಪಡೆದ ವರ್ಗ ಎಂದು ಭಾವಿಸಿಕೊಳ್ಳುತ್ತಿರುವುದು ದೇಶದ ದೊಡ್ಡ ಸಮಸ್ಯೆ. ಕಾನೂನು ಎಂಬುದು ಗುಡಿಸಲಲ್ಲಿ ವಾಸಿಸುವವರಿಗೂ ಅರಮನೆಯಲ್ಲಿರುವವರಿಗೂ ಒಂದೇ. ಹೊಸ ಕಾಯ್ದೆ ಜಾರಿಯಾದರೆ ಸುಳ್ಳು ಪ್ರಕರಣಗಳಲ್ಲಿ ತಮಗಾಗದವರನ್ನು ಜೈಲು ಸೇರಿಸುವ ಷಡ್ಯಂತ್ರ ನಡೆಯಬಹುದು ಎನ್ನುವುದು ಕೆಲವರ ವಾದ. ಆದರೆ ಸುಪ್ರೀಂ ಕೋರ್ಟ್ ಸುಳ್ಳು, ಸತ್ಯ ಪ್ರಕರಣಗಳ ನೈಜತೆ ಭೇದಿಸುವಷ್ಟು ಸಮರ್ಥವಾಗಿದೆ.
ಹರೀಶ್ ಸಾಳ್ವೆ
ಹಿರಿಯ ವಕೀಲರು, ಮಾಜಿ ಸಾಲಿಸಿಟರ್ ಜನರಲ್ ಪ್ರಧಾನಿ, ಮುಖ್ಯಮಂತ್ರಿಗಳು, ಸಚಿವರು 30 ದಿನಗಳ ಕಾಲ ಜೈಲಿನಲ್ಲಿದ್ದರೆ ಅವರನ್ನು ವಜಾಗೊಳಿಸುವಂತಹ ಮಸೂದೆ ನಮಗೆ ಬೇಕಾಗಿರುವುದು ತುಂಬಾ ನಾಚಿಕೆಗೇಡಿನ ಸಂಗತಿ. ದೇಶದ ಅತ್ಯುನ್ನತ ನ್ಯಾಯಾಲಯವು ಜೈಲಿನಲ್ಲಿ, ಕಸ್ಟಡಿಯಲ್ಲಿ, ನ್ಯಾಯಾಂಗ ಬಂಧನದಲ್ಲಿರಲು ಅರ್ಹರು ಎಂದು ಹೇಳಿದ್ದರೂ, ಜನಪ್ರತಿನಿಧಿಗಳು ಕಾರಾಗೃಹದಿಂದಲೇ ಅವರ ಮಹತ್ವದ ಕರ್ತವ್ಯ, ಸಚಿವಗಿರಿಯ ಜವಾಬ್ದಾರಿಯನ್ನು ನಿರ್ವಹಿಸುವ ಹಕ್ಕನ್ನು ಹೊಂದಿರಬೇಕು ಎಂದು ಕೆಲವರು ಪ್ರತಿಪಾದಿಸುತ್ತಿರುವುದು ನನಗೆ ಆಶ್ವರ್ಯವನ್ನುಂಟು ಮಾಡುತ್ತಿದೆ. ಇದನ್ನೆಲ್ಲ ನೋಡಿದರೆ ನಾವು ನಮ್ಮ ಪ್ರಜಾಪ್ರಭುತ್ವದೊಂದಿಗೆ ಸಂಪರ್ಕ ಕಳೆದುಕೊಂಡಿದ್ದೇವೆಯೇ ಎಂದೆನಿಸುತ್ತದೆ. 1991ರಲ್ಲಿ ಸುಪ್ರೀಂಕೋರ್ಟ್ ಹವಾಲಾ ಡೈರಿ ಬಗ್ಗೆ ತನಿಖೆ ಆರಂಭಿಸಿದಾಗ ಆ ಪ್ರಕರಣದಲ್ಲಿ ಯಾರನ್ನೂ ಬಂಧಿಸಿರಲಿಲ್ಲ. ಆದರೆ ಯಾರ ಮೇಲೆ ಆರೋಪ ಬಂದಿತ್ತೋ ಅವರೆಲ್ಲರೂ ರಾಜೀನಾಮೆ ನೀಡಿದರು. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಎಲ್.ಕೆ. ಅಡ್ವಾಣಿ ಅವರು ‘ಅಪವಾದ ಮುಕ್ತರಾಗುವ ತನಕ ನಾನು ಸಾರ್ವಜನಿಕ ಜೀವನಕ್ಕೆ ಮರಳಲ್ಲ’ ಎಂದಿದ್ದರು.
ಆರೋಪ ಬಗ್ಗೆ ನಿರ್ಧಾರ ಯಾರದ್ದು? ಆದರೆ ಈಗಂತೂ ಆ ಕಾಲ ಇಲ್ಲ. ನಾವು ತೀರಾ ಕೆಳಮಟ್ಟಕ್ಕೆ ಇಳಿದಿದ್ದೇವೆ. ಇದನ್ನು ಬದಲಿಸಲು ಏನಾದರೂ ಮಾಡಬೇಕಿದೆ. ಈಗ ಕೇಂದ್ರ ಸರ್ಕಾರ ಮಂಡಿಸಿರುವ ಮಸೂದೆ ಬಗ್ಗೆ ಎಲ್ಲಾ ರೀತಿಯ ಮಾತುಗಳನ್ನಾಡಲಾಗುತ್ತಿದೆ. ಹೊಸ ರೀತಿಯ ಒಂದು ಸಾಲಿನ ಚರ್ಚೆಗಳನ್ನು ಮಾಡಲಾಗುತ್ತಿದೆ. ಒಂದು ವೇಳೆ ಯಾರಾದರೂ ಬಂಧನಕ್ಕೆ ಒಳಪಟ್ಟರೆ ಅವರು ಕಚೇರಿಯಲ್ಲಿ ಇರಬಾರದು. ಆದರೆ ಸುಳ್ಳು ಆರೋಪಗಳನ್ನು ಹೊರಿಸಿ ಬಂಧಿಸಿ ಅವರನ್ನು ಕಚೇರಿಯಿಂದ ಹೊರ ಹಾಕುವುದು ತಪ್ಪು. ನಿಜವಾದ ಕಾರಣವೋ ಅಥವಾ ಸುಳ್ಳೋ ಎಂದು ನಿರ್ಧರಿಸುವವರು ಯಾರು? ನೀವು ಅದನ್ನು ಸ್ವಯಂ ಪ್ರಮಾಣೀಕರಿಸಲು ಸಾಧ್ಯವಿಲ್ಲ. ಆದ್ದರಿಂದ ಅದನ್ನು ನಮ್ಮ ಸಂವಿಧಾನವು ನ್ಯಾಯಾಂಗದ ಅಧಿಕಾರದ ವ್ಯಾಪ್ತಿಗೆ ಬಿಡುತ್ತದೆ.
ಒಂದು ವಿಚಾರ ನಾವು ಅರ್ಥ ಮಾಡಿಕೊಳ್ಳಬೇಕು. ರಾಜಕಾರಣಿಗಳು ಜೈಲು ಸೇರಿದಾಗ ಅವರು ಬಂಧಿಖಾನೆಯಿಂದ ಕಚೇರಿ ಕೆಲಸವನ್ನು ಮಾಡುವುದಕ್ಕೆ ಕಾನೂನು ಅನುಮತಿಸುವುದಿಲ್ಲ. ಹಾಗಂತ ಅವರನ್ನು ಹುದ್ದೆಯಿಂದ ಅನರ್ಹಗೊಳಿಸುವುದಿಲ್ಲ. ನೀವು ಯಾವುದಕ್ಕೂ ಅನರ್ಹರಲ್ಲ. ಆದರೆ ಕಾರಾಗೃಹದಲ್ಲಿ ಕುಳಿತು ಸಚಿವಾಲಯ ನಡೆಸಬಾರದು ಎಂದಷ್ಟೇ ಹೇಳುತ್ತದೆ. ಯಾಕೆಂದರೆ ಅದು ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತದೆ. ಜೈಲಿಂದಲೇ ಕೆಲಸ ಮಾಡಿದ್ದ ಕೇಜ್ರಿ
ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿಯ ಹಿಂದಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಹಾರ್ ಜೈಲು ಸೇರಿದ್ದರು. ಅವರು ಅಲ್ಲಿಂದಲೇ ಕಚೇರಿ ಕೆಲಸ ಮಾಡುತ್ತಿದ್ದರು. ಒಂದು ವೇಳೆ ನೀವು ಸಚಿವಾಲಯದ ಕೆಲಸವನ್ನು ಪವಿತ್ರ ಕೆಲಸವೆಂದು ಭಾವಿಸುತ್ತೀರಿ, ಅತ್ಯಂತ ಮಹತ್ವದ ಜವಾಬ್ದಾರಿ ಅಂದುಕೊಂಡಿದ್ದರೆ, ನೀವು ಜೈಲಿನಲ್ಲಿ ಕಚೇರಿಯ ಮಹತ್ವದ ಕೆಲಸವನ್ನು ನಿರ್ವಹಿಸುತ್ತಿದ್ದೀರಿ ಎಂದಾದರೆ ಹೊರಗಡೆ ಮಾಡಿದ್ದಷ್ಟು ದಕ್ಷತೆಯಿಂದ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ಈ ದೇಶದ ಬಹುದೊಡ್ಡ ಸಮಸ್ಯೆ ಎಂದರೆ ರಾಜಕಾರಣಿಗಳು ತಮ್ಮನ್ನು ತಾವು ಸವಲತ್ತು ಪಡೆದ ವರ್ಗ ಎಂದು ಭಾವಿಸುವುದು. ಹೇಗೆ ರಾಜಕಾರಣಿಗಳನ್ನು ಬಂಧಿಸಿ 30 ದಿನದ ಬಳಿಕ ವಜಾಗೊಳಿಸಲಾಗುತ್ತದೆ ಎನ್ನುವ ವಾದ ಮಾಡಲಾಗುತ್ತದೆಯೋ ಹಾಗೆಂದರೆ ಒಬ್ಬ ಉದ್ಯಮಿಯನ್ನೂ ಬಂಧಿಸಿ ಆ ಕಾನೂನಿಗೆ ಒಳಪಡಿಸುವುದು ತಪ್ಪು. ರಾಜಕಾರಣಿಗಳು ಸವಲತ್ತು ಪಡೆದ ವಿಶೇಷ ವರ್ಗವಲ್ಲ. ಹಾಗೆಂದು ಅವರು ಭಾವಿಸುವುದೇ ದೊಡ್ಡ ಸಮಸ್ಯೆ.
ಶ್ರೀಸಾಮಾನ್ಯ ಜೈಲಿಗೆ ಹೋಗೋಲ್ವಾ? ಒಬ್ಬ ಜನಸಾಮಾನ್ಯ, ಬಂಧನವಾದ ಬಳಿಕ ಆತ ತನ್ನೆಲ್ಲ ಸ್ವಾತಂತ್ರ್ಯ ಕಳೆದುಕೊಳ್ಳುತ್ತಾನೆ. ಆದರೆ ಗಣ್ಯರ ವಿಚಾರದಲ್ಲಿ ತದ್ವಿರುದ್ಧ. ಅವರ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆಯೂ ಆಗಲ್ಲ. ಶ್ರೀಸಾಮಾನ್ಯರು ಶಿಕ್ಷೆಯ ಮುಂಚೆಯೋ ಅಥವಾ ನಂತರವೇ ಆಗಿರಲಿ ಜೈಲು ಸೇರಿದರೆ ಅದು ಅಮೂಲ್ಯವಾದ ಹಕ್ಕಾದ ಸ್ವಾತಂತ್ರ್ಯ ಕಸಿದುಕೊಳ್ಳುತ್ತದೆ. ಆದರೆ ಸಾರ್ವಜನಿಕ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿರುವವರಿಗೆ ಅದ್ಯಾವುದೂ ಅನ್ವಯಿಸಲ್ಲ. ನೀವು ಎಲ್ಲೋ ಮಣ್ಣಿನ ಗುಡಿಸಲಿನಲ್ಲಿ ವಾಸಿಸುತ್ತಿರಿ ಅಥವಾ ನೀವು ಅರಮನೆಯಲ್ಲಿ ವಾಸಿಸುತ್ತಿರಿ ಎಲ್ಲರಿಗೂ ಒಂದೇ ರೀತಿಯಲ್ಲಿ ಸ್ವಾತಂತ್ರ್ಯದ ಹಕ್ಕಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಈ ಕಾನೂನು ಜಾರಿಯಾದರೆ ತಮಗೆ ಆಗದವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವ ಅಪಾಯವಿದೆ ಎನ್ನುವುದು ಒಂದಷ್ಟು ಮಂದಿ ವಾದ. ಆದರೆ ನ್ಯಾಯಾಂಗ ವ್ಯವಸ್ಥೆ ಸುಳ್ಳು, ಸತ್ಯ ಪ್ರಕರಣಗಳನ್ನು ಪತ್ತೆ ಹಚ್ಚುವಷ್ಟು ಸಮರ್ಥವಾಗಿದೆ. ನಮ್ಮ ಸುಪ್ರೀಂಕೋರ್ಟ್ ಸುಳ್ಳು ಪ್ರಕರಣ, ನೈಜ ಪ್ರಕರಣ ಭೇದಿಸದಷ್ಟು ಮುಗ್ಧವಾಗಿದೆ ಎಂದು ನೀವು ಭಾವಿಸುತ್ತೀರಾ? ಹಾಗಾಗಿದ್ದರೆ ಇದು ಸುಪ್ರೀಂ ಕೋರ್ಟ್ ವಿರುದ್ಧದ ಅವಿಶ್ವಾಸವೇ? ಇದು ಎಂತಹ ವಾದ?
ಸಾಮಾನ್ಯ ಜನರು, ಉದ್ಯಮಿಗಳು ನ್ಯಾಯಾಂಗವನ್ನು ನಂಬಬೇಕು. ಉಳಿದ ಎಲ್ಲರೂ ನಂಬಬೇಕು. ಆದರೆ ಇದು ಉನ್ನತ ಸ್ಥಾನದಲ್ಲಿರುವವರು, ರಾಜಕಾರಣಿಗಳ ವಿಚಾರಕ್ಕೆ ಬಂದಾಗ ನ್ಯಾಯಾಂಗ ನಂಬಬಾರದು ಎನ್ನುವಂತಿದೆ. ಇದು ಕೂಡ ಒಂದು ವಾದವೇ? ಇನ್ನು ಮತದಾನದ ವಿಚಾರಕ್ಕೆ ಬಂದರೆ ನಮ್ಮ ದೇಶದ ಮತದಾರರು ಗಂಭೀರ ಆರೋಪಕ್ಕೆ ಗುರಿಯಾದ ನಾನಾ ಆರೋಪಗಳನ್ನು ಹೊತ್ತಿರುವ ವ್ಯವಸ್ಥೆಗೆ ಎಂದಿಗೂ ಮತ ಹಾಕಿಲ್ಲ. ಗಂಭೀರ ಆರೋಪಗಳನ್ನು ಹೊತ್ತಿರುವ ವ್ಯಕ್ತಿಯನ್ನು ಸಚಿವರನ್ನಾಗಿ ಮಾಡುವ ಪರ ಎಂದಿಗೂ ಭಾರತೀಯ ಮತದಾರರಿಲ್ಲ. ಅಂತಹ ಯಾವುದೇ ವ್ಯವಸ್ಥೆ ಎಂದಿಗೂ ಒಪ್ಪುವುದಿಲ್ಲ.
ಕಾಲ ಬದಲಾಗಿದೆ, ಮನಸ್ಥಿತಿ ಕೂಡ ನೀವು ಅದೆಷ್ಟೇ ಹುಡುಕಿದರೂ ಜೈಲಿನಿಂದಲೇ ಪ್ರಧಾನಿ, ಮುಖ್ಯಮಂತ್ರಿ ಅಥವಾ ಹಿರಿಯ ರಾಜಕಾರಣಿಗಳು ಜೈಲಿನಿಂದಲೇ ಅಧಿಕಾರ ನಡೆಸಿದ ಒಂದೇ ಒಂದು ಉದಾಹರಣೆ ಕಾಣಸಿಗುತ್ತಿರಲಿಲ್ಲ. ಆದರೆ ಇದೀಗ ಎಲ್ಲವೂ ಬದಲಾಗಿದೆ. ಏನೋ ತಪ್ಪಾಗಿದೆ. ಪ್ರಸ್ತುತ ಘಟನೆಗಳು, ಮನಸ್ಥಿತಿಗಳು ಬದಲಾಗಿರುವುದರಿಂದ ನಮಗೆ ಈ ಕಾನೂನು ಬೇಕಾಗಬಹುದು. ಇಲ್ಲದಿದ್ದರೆ ಇಂತಹ ಇಂತಹ ಕಾಯ್ದೆಯ ಅಗತ್ಯವೇ ಇರಲಿಲ್ಲ.
ಆಡಳಿತ ಮತ್ತು ವಿಪಕ್ಷಗಳು ತಮ್ಮ ಒಡಕನ್ನು ಬಗೆಹರಿಸಲು ಸಾಧ್ಯವಾಗದೆ , ಪರಸ್ಪರರಿಗಿರುವ ಅಪನಂಬಿಕೆ, ಹದೆಗೆಟ್ಟ ವಾತಾವರಣದ ಪ್ರತಿಬಿಂಬ ಈ ಮಸೂದೆ ಇರಬಹುದೇ ಎನ್ನುವ ಪ್ರಶ್ನೆಗಳಿರಬಹುದು. ಆದರೆ ಈ ರೀತಿಯ ಮಾತುಕತೆಯೇ ದುರಾದೃಷ್ಟಕರ. ಹೌದು ನಾವು ಇಷ್ಟೊಂದು ಉನ್ನತ ಮಟ್ಟದ ವಿಭಜನೆಯನ್ನು ತಲುಪಿದ್ದೇವೆ. ಇದು ದುಃಖಕರ. ಆದರೆ ಅದು ಕಾಲದ ಸಂಕೇತ ಎಂದು ಭಾವಿಸಬೇಕಷ್ಟೇ.