ಖರ್ಗೆ- ಸಿದ್ದು 50 ನಿಮಿಷ ಕಾಲ ಚರ್ಚೆ
---- ಬಳಿಕ ನಿಮಗೆ ತಿಳಿಸ್ತೀನಿ ಎಂದ ಕಾಂಗ್ರೆಸ್ ಅಧ್ಯಕ್ಷ- ಸಂಪುಟ ಸರ್ಕಸ್ ಮತ್ತೊಂದು ಸುತ್ತಿನ ಪ್ರಕ್ರಿಯೆಗೆ
---ಕನ್ನಡಪ್ರಭ ವಾರ್ತೆ ಬೆಂಗಳೂರು
ನಿರೀಕ್ಷೆಯಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಂಜೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸಂಪುಟ ಪುನಾರಚನೆ ವಿಚಾರ ಮಂಡಿಸಿದ್ದಾರೆ. ಪ್ರತಿಯಾಗಿ ಖರ್ಗೆ ಅವರು ಈ ವಿಚಾರದ ಬಗ್ಗೆ ತಾವು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ತನ್ಮೂಲಕ ಸಂಪುಟ ಪುನಾರಚನೆ ಚೆಂಡು ರಾಹುಲ್ ಅಂಕಣಕ್ಕೆ ಮತ್ತೆ ರವಾನೆಯಾದಂತಾಗಿದೆ.ಕುತೂಹಲಕಾರಿ ಸಂಗತಿಯೆಂದರೆ, ಎರಡು ದಿನದ ಹಿಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಂಪುಟ ಪುನಾರಚನೆ ವಿಚಾರವನ್ನು ಪ್ರಸ್ತಾಪಿಸಿದ್ದರು. ಆಗ ತಾತ್ವಿಕ ಒಪ್ಪಿಗೆ ನೀಡಿದ್ದ ರಾಹುಲ್ ಗಾಂಧಿ ಅವರು ಈ ಬಗ್ಗೆ ಖರ್ಗೆ ಅವರೊಂದಿಗೆ ಚರ್ಚಿಸಿ ಎಂದು ಸೂಚಿಸಿದ್ದರು. ಅದರಂತೆ ಖರ್ಗೆ ಅವರನ್ನು ಸೋಮವಾರ ಸಿಎಂ ಭೇಟಿ ಮಾಡಿದ್ದರ ಫಲವಾಗಿ ಚೆಂಡು ಮತ್ತೆ ರಾಹುಲ್ ಅಂಕಣಕ್ಕೆ ತಳ್ಳಲ್ಪಟ್ಟಿದೆ.
ಮೂಲಗಳ ಪ್ರಕಾರ, ಖರ್ಗೆ ಅವರು ರಾಹುಲ್ ಗಾಂಧಿ ಮಾತ್ರವಲ್ಲದೆ, ಕೆ.ಸಿ. ವೇಣುಗೋಪಾಲ್ ಜತೆ ಚರ್ಚಿಸಿ ಬಳಿಕ ತಮಗೆ (ಸಿದ್ದರಾಮಯ್ಯ ಅವರಿಗೆ) ಮುಂದಿನ ವಿಚಾರ ತಿಳಿಸುವುದಾಗಿ ಹೇಳುವ ಮೂಲಕ ಸಂಪುಟ ಪುನಾರಚನೆಯ ಭವಿಷ್ಯವನ್ನು ಮತ್ತೊಂದು ಸುತ್ತಿನ ಪ್ರಕ್ರಿಯೆಗೆ ಮುಂದೂಡಿದ್ದಾರೆ.50 ನಿಮಿಷ ಮಾತುಕತೆ:
ಸೋಮವಾರ ಖರ್ಗೆ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಅವರು ಸುಮಾರು 50 ನಿಮಿಷ ನೇರಾನೇರ ಮಾತುಕತೆ ನಡೆಸಿದರು. ಸಿದ್ದರಾಮಯ್ಯ ಹಾಗೂ ಖರ್ಗೆ ಅವರ ನಡುವೆ ಈ ಮುಖಾಮುಖಿ ಮಾತುಕತೆಯ ಸಂಪೂರ್ಣ ವಿವರ ಹೊರಬಂದಿಲ್ಲ. ಆದರೆ, ಸಿಎಂ ಅವರು ಸರ್ಕಾರ ರಚನೆಯಾಗಿ ಎರಡೂವರೆ ವರ್ಷ ಪೂರ್ಣಗೊಂಡಿದೆ. ಹಲವು ಹಿರಿಯರು ಹಾಗೂ ಪಕ್ಷಕ್ಕೆ ದುಡಿದವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಅವರಿಗೆ ಅವಕಾಶ ಒದಗಿಸಿಕೊಡಲು ಸಂಪುಟ ಪುನಾರಚನೆ ಮಾಡಬೇಕು ಎಂದು ನಿಲುವು ಮಂಡಿಸಿದರು ಎನ್ನಲಾಗಿದೆ.ಆದರೆ, ಸಿದ್ದರಾಮಯ್ಯ ಅವರ ಈ ಮಂಡನೆಗೆ ಖರ್ಗೆ ಅವರ ನಿಲುವು ಏನು ಎಂಬುದು ಸ್ಪಷ್ಟಗೊಂಡಿಲ್ಲ. ಹೈಕಮಾಂಡ್‌ನ ಇತರ ವರಿಷ್ಠರೊಂದಿಗೆ ಚರ್ಚಿಸುವುದಾಗಿ ಅವರು ತಿಳಿಸಿದರು ಎನ್ನುತ್ತವೆ ಸಿಎಂ ಆಪ್ತಮೂಲಗಳು.
ಸಂಪುಟ ಪುನಾರಚನೆ ವಿಚಾರವನ್ನು ಖರ್ಗೆ ಅವರ ಸಮ್ಮುಖ ಸಿದ್ದರಾಮಯ್ಯ ಮಂಡಿಸಲಿದ್ದಾರೆ ಎಂಬ ವಿಚಾರ ಬಹಿರಂಗಗೊಂಡಿದ್ದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ತೀವ್ರ ಬೆಳವಣಿಗೆಗಳು ನಡೆದವು. ಡಿ.ಕೆ. ಶಿವಕುಮಾರ್ ಅವರು ಕಳೆದ ಮೂರು ದಿನಗಳಲ್ಲಿ ಎರಡನೇ ಬಾರಿಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಡಿ.ಕೆ. ಸುರೇಶ್ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ಸುದೀರ್ಘ ಸಮಯ ಖರ್ಗೆ ಅವರೊಂದಿಗೆ ಚರ್ಚಿಸಿ ಸಂಪುಟ ಪುನಾರಚನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತಮ್ಮ ನಿಲುವು ಮಂಡಿಸಿದ್ದಾರೆ ಎನ್ನಲಾಗಿದೆ.ಸೋಮವಾರ ಮತ್ತೆ ದೆಹಲಿಗೆ ಸಿದ್ದರಾಮಯ್ಯ ಪ್ರಯಾಣ ಬೆಳೆಸುವ ಮೊದಲು ಸಚಿವರಾದ ಎಚ್.ಸಿ. ಮಹದೇವಪ್ಪ, ಶಾಸಕರಾದ ಕೆ.ಎನ್. ರಾಜಣ್ಣ, ವಿಜಯಾನಂದ ಕಾಶಪ್ಪನವರ್, ಅಶೋಕ್ ಪಟ್ಟಣ್, ಎ.ಎಸ್. ಪೊನ್ನಣ್ಣ, ಪ್ರದೀಪ್ ಈಶ್ವರ್ ಸೇರಿ ಹಲವರು ಭೇಟಿ ಮಾಡಿದ್ದರು. ಕೆ.ಎನ್. ರಾಜಣ್ಣ, ವಿಜಯಾನಂದ ಕಾಶಪ್ಪನವರ್ ಅವರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.