ಸಾಲಕ್ಕಾಗಿ ಕಾಯುತ್ತಿರುವ ಮಹಿಳಾ ಸಂಘಗಳು : ಹೈಕೋರ್ಟ್ ಮೆಟ್ಟಿಲೇರಿ ಚುನಾವಣೆಗೆ ಒತ್ತಾಯ

KannadaprabhaNewsNetwork |  
Published : Dec 13, 2024, 12:46 AM ISTUpdated : Dec 13, 2024, 03:59 AM IST
11ಕೆಬಿಪಿಟಿ.1.ಬಂಗಾರಪೇಟೆ ಪಟ್ಟಣದಲ್ಲಿರುವ ಡಿಸಿಸಿ ಬ್ಯಾಂಕ್ ಕಚೇರಿ. | Kannada Prabha

ಸಾರಾಂಶ

ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯ ಅಧಿಕಾರಾವಧಿ ಪೂರ್ಣಗೊಂಡಿದೆ. ನೂತನ ಆಡಳಿತ ಮಂಡಳಿಯ ಆಯ್ಕೆಗೆ ಚುನಾವಣೆ 1 ವರ್ಷದ ಹಿಂದೆಯೇ ನಡೆಯಬೇಕಿತ್ತು. ಆದರೆ ಒಂದು ಬಣ ಚುನಾವಣೆ ನಡೆಸಲು ಅವಕಾಶ ನೀಡದೇ ಕಾಲ ಹರಣ ಮಾಡುತ್ತಿದ್ದರಿಂದ ಮತ್ತೊಂದು ಬಣದವರು ಹೈಕೋರ್ಟ್ ಮೆಟ್ಟಿಲೇರಿ ಚುನಾವಣೆಗೆ ಒತ್ತಾಯಿಸಿದೆ.

 ಬಂಗಾರಪೇಟೆ : ಡಿಸಿಸಿ ಬ್ಯಾಂಕಿನ ಚುನಾವಣೆ ಹಾಗೂ ಕಾಂಗ್ರೆಸ್ ನಾಯಕರ ನಡುವಿನ ಮುಸುಕಿನ ಗುದ್ದಾಟದಿಂದ ರೈತರು ಮತ್ತು ಮಹಿಳಾ ಸಂಘಗಳ ಸದಸ್ಯರಿಗೆ ೧ ವರ್ಷದಿಂದ ಸಾಲ ವಿತರಣೆ ಮಾಡಿಲ್ಲ. ತಾಲೂಕಿನ ಡಿಸಿಸಿ ಬ್ಯಾಂಕಿನ ವ್ಯಾಪ್ತಿಯಲ್ಲಿ 14 ವ್ಯವಸಾಯ ಸೇವಾ ಸಹಕಾರ ಸಂಘಗಳು ಇದ್ದು, ಇವುಗಳ ಮೂಲಕ ರೈತರಿಗೆ ಮತ್ತು ಮಹಿಳಾ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಡಿಸಿಸಿ ಬ್ಯಾಂಕಿನಿಂದ ಸಾಲ ವಿತರಣೆ ಮಾಡಲಾಗುತ್ತಿತ್ತು. 

ಕಳೆದ 5 ವರ್ಷಗಳಲ್ಲಿ ಸಾಲವನ್ನು ಪಡೆದ ಫಲಾನುಭವಿಗಳು ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದ್ದು, ಮತ್ತೆ ಸಾಲಕ್ಕೆ ಅರ್ಜಿ ಸಲ್ಲಿಸಿದವರಿಗೆ ಕಳೆದ ೧ ವರ್ಷದಿಂದ ಡಿಸಿಸಿ ಬ್ಯಾಂಕಿನಿಂದ ಸಾಲ ವಿತರಣೆ ಮಾಡದ ಪರಿಣಾಮ ಸಂಘದ ಸದಸ್ಯರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಅವಧಿ ಮುಗಿದರೂ ಚುನಾವಣೆ ಇಲ್ಲಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯ ಅಧಿಕಾರಾವಧಿ ಪೂರ್ಣಗೊಂಡಿದೆ. ನೂತನ ಆಡಳಿತ ಮಂಡಳಿಯ ಆಯ್ಕೆಗೆ ಚುನಾವಣೆ 1 ವರ್ಷದ ಹಿಂದೆಯೇ ನಡೆಯಬೇಕಿತ್ತು. ಆದರೆ ಒಂದು ಬಣದ ಸದಸ್ಯರು ಚುನಾವಣೆ ನಡೆಸಲು ಅವಕಾಶ ನೀಡದೇ ಕಾಲ ಹರಣ ಮಾಡುತ್ತಿದ್ದರಿಂದ ಮತ್ತೊಂದು ಬಣದವರು ಹೈಕೋರ್ಟ್ ಮೆಟ್ಟಿಲೇರಿ ಶೀಘ್ರವಾಗಿ ಚುನಾವಣೆಯನ್ನು ನಡೆಸಬೇಕೆಂದು ಒತ್ತಡ ಹೇರುತ್ತಿದ್ದಾರೆ.

ಇದರ ನಡುವೆ ಲೆಕ್ಕ ಪರಿಶೋಧನೆಯಲ್ಲಿ ಅವ್ಯವಹಾರ ನಡೆದಿದ್ದು, ಅದರ ಮರು ಲೆಕ್ಕಪರಿಶೋಧನೆ ನಡೆಸಬೇಕೆಂದು ವಿರೋಧಿ ಗುಂಪು ಒತ್ತಾಯ ಮಾಡುತ್ತಿದೆ. ಆಡಳಿತ ಮಂಡಳಿಯಲ್ಲಿ ಇಷ್ಟೆಲ್ಲಾ ಮುಸುಕಿನ ಗುದ್ದಾಟ ನಡೆಯುತ್ತಿರುವುದರಿಂದ ಹಾಗೂ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುವವರೆಗೂ ರೈತರಿಗೆ ಮತ್ತು ಮಹಿಳೆಯರಿಗೆ ಸಾಲ ಸೌಲಭ್ಯ ಸಿಗುವುದು ಅನುಮಾನ ಎನ್ನಲಾಗಿದೆ.ಖಾಸಗಿ ಸಾಲಕ್ಕೆ ರೈತರ ಮೊರೆ

ಡಿಸಿಸಿ ಬ್ಯಾಂಕಿನಿಂದ ಈ ಹಿಂದೆ ಸಾಲ ಪಡೆದವರು ಕೃಷಿ ಸೇರಿದಂತೆ ಇತರೆ ಹಲವು ಚಟುವಟಿಕೆಗಳಿಗೆ ಬಳಕೆ ಮಾಡಿಕೊಂಡು ಸ್ವಾವಲಂಭಿ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಆರ್ಥಿಕ ಪ್ರಗತಿ ಸಾಧಿಸಿದ್ದರು. ಆದರೆ ಈಗ ಬ್ಯಾಂಕಿನವರು ಸಾಲ ವಿತರಿಸುತ್ತಿಲ್ಲ. ಇದರಿಂದಾಗಿ ರೈತರು ಖಾಸಗಿಯವರ ಬಳಿ ಸಾಲಕ್ಕೆ ಮೊರೆ ಹೋಗಬೇಕಾದ ಅನಿವಾರ್ಯ ಎದುರಾಗಿದೆ.ಕಳೆದ 1 ವರ್ಷದಿಂದ ಮಹಿಳಾ ಸಂಘಗಳಿಗೆ ಮತ್ತು ರೈತರಿಗೆ ಸಾಲ ವಿತರಣೆ ಮಾಡದ ಕಾರಣ ೧೪ ವ್ಯವಸಾಯ ಸೇವಾ ಸಹಕಾರ ಸಂಘಗಳಿಗೂ ಆದಾಯದ ಮೂಲ ಕಡಿಮೆಯಾಗಿದೆ. ಸಾಲ ವಿತರಣೆಯಾಗುತ್ತಿದ್ದರೆ ಸರ್ಕಾರದಿಂದ ಬರುವಂತಹ ಬಡ್ಡಿ ಹಣ ಸಂಘಕ್ಕೆ ಕ್ರೋಡೀಕರಣವಾಗುತ್ತಿತ್ತು. ಈಗ ಕೇವಲ ಪಡಿತರವನ್ನು ವಿತರಣೆ ಮಾಡುತ್ತಾ ಅದರಿಂದ ಬರುವಂತಹ ಕಮಿಷನ್ ಹಣದಿಂದ ಸಂಘವನ್ನು ನಡೆಸುವಂತಹ ಪರಿಸ್ಥಿತಿ ಸಹ ನಿರ್ಮಾಣವಾಗಿದೆ.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ