ಹಾವನ್ನು ತುಳಿದು ಅದು ಸೇರಿರುವ ಹುತ್ತಕ್ಕೇ ಯೋಗೇಶ್ವರ್ ಸೇರಿದ್ದು, ಎಚ್ಚರ : ಸಿ.ಎಸ್.ಪುಟ್ಟರಾಜು

KannadaprabhaNewsNetwork |  
Published : Nov 28, 2024, 12:34 AM ISTUpdated : Nov 28, 2024, 05:02 AM IST
೨೭ಕೆಎಂಎನ್‌ಡಿ-೧ಮಂಡ್ಯದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿದರು. | Kannada Prabha

ಸಾರಾಂಶ

ಹಾವನ್ನು ತುಳಿದು ಅದು ಸೇರಿರುವ ಹುತ್ತಕ್ಕೇ ಯೋಗೇಶ್ವರ್ ಸೇರಿದ್ದು, ಎಚ್ಚರದಿಂದ ಇರುವಂತೆ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಎಚ್ಚರಿಕೆ ನೀಡಿದರು.

 ಮಂಡ್ಯ : ಹಾವನ್ನು ತುಳಿದು ಅದು ಸೇರಿರುವ ಹುತ್ತಕ್ಕೇ ಯೋಗೇಶ್ವರ್ ಸೇರಿದ್ದು, ಎಚ್ಚರದಿಂದ ಇರುವಂತೆ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಹುತ್ತ ಎಂತಹದ್ದು, ಅದರೊಳೊಗೆ ಎಂತೆಂಥಾ ಘಟ ಸರ್ಪಗಳಿವೆ ಎನ್ನುವುದು ನಿಮಗೆ ಗೊತ್ತಿಲ್ಲ. ನೀವಿರುವ ಕ್ಷೇತ್ರದಲ್ಲೇ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಇದ್ದಾರೆ. ಇಬ್ಬರನ್ನೂ ಎದುರಿಸಿ ರಾಜಕೀಯ ಬದುಕನ್ನು ಕಟ್ಟಿಕೊಂಡು ತೋರಿಸುವಂತೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮತದಾರರ ತೀರ್ಪನ್ನು ಒಪ್ಪಿದ್ದೇವೆ. ಯೋಗೇಶ್ವರ್ ಗೆಲುವನ್ನು ಗೌರವಿಸಿದ್ದಾರೆ. ಆದರೆ, ಗೆಲುವಿನ ಮದದಲ್ಲಿ ದೇವೇಗೌಡರನ್ನು ಮನೆಯಲ್ಲಿರಿ, ಕುಮಾರಸ್ವಾಮಿ ಅವರನ್ನು ರಣಹೇಡಿ ಎಂದು ಕರೆದಿರುವುದು ನಿಮಗೆ ಗೌರವ ತಂದುಕೊಡುವುದಿಲ್ಲ ಎಂದು ದೂಷಿಸಿದರು.

ಸಣ್ಣತನದ ರಾಜಕಾರಣ:

ದೇವೇಗೌಡರು ಸ್ವಾರ್ಥಕ್ಕಾಗಿ ಎಂದಿಗೂ ರಾಜಕಾರಣ ಮಾಡಿದವರಲ್ಲ. ನೀರಾವರಿ ಯೋಜನೆಗಳ ಜಾರಿಗೆ, ರೈತರು ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ದೇವೇಗೌಡರು ರೈತಪರ ಕಾಳಜಿ ಇರುವ ರೈತನಾಯಕ. ಪ್ರಧಾನ ಮಂತ್ರಿ ಹುದ್ದೆಗೇರಿ ಇತಿಹಾಸ ಸೃಷ್ಟಿಸಿದವರು. ಅಂತಹವರನ್ನು ಮನೆಯಲ್ಲಿರಿ ಎನ್ನುವುದು ನಿಮ್ಮ ಸಣ್ಣತನದ ರಾಜಕಾರಣವನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಭಗೀರಥ ಆಗಿದ್ದೇ ದೇವೇಗೌಡರಿಂದ..!

ದೇವೇಗೌಡರ ಬಗ್ಗೆ ಮಾತನಾಡುವುದಕ್ಕೆ ಯೋಗೇಶ್ವರ್‌ಗೆ ನೈತಿಕತೆಯೇ ಇಲ್ಲ. ಅವರು ಇಗ್ಗಲೂರು ಡ್ಯಾಂ ಕಟ್ಟಿಸದಿದ್ದರೆ ಕೆರೆಗಳಿಗೆ ಎಲ್ಲಿಂದ ನೀರು ತಂದು ತುಂಬಿಸುತ್ತಿದ್ದೀರಿ. ಅವರು ಕಟ್ಟಿದ ಡ್ಯಾಂನಿಂದಾಗಿ ನೀವು ಭಗೀರಥ ಎಂದೆಲ್ಲಾ ಕರೆಸಿಕೊಂಡಿದ್ದೀರಿ. ದೇವೇಗೌಡರ ಕುಟುಂಬವನ್ನು ಟೀಕಿಸಿದರೆ ದೊಡ್ಡ ನಾಯಕನಾಗಿ ಬಿಡಬಹುದೆಂದು ಭ್ರಮಿಸಿದ್ದರೆ ಅದು ಕೇವಲ ಭ್ರಮೆಯಷ್ಟೇ ಎಂದರು.

ಬೀದಿ ಬೀದಿಗಳಲ್ಲಿ ಪ್ರಚಾರ:

ನಿಜವಾದ ರಣಹೇಡಿ ಎಂದರೆ ಯೋಗೇಶ್ವರ್. ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಲಾರದೆ ಓಡಿಹೋಗಿ ವಿರೋಧಿಗಳ ಜೊತೆ ಸೇರಿಕೊಂಡು ಕೊನೇ ಘಳಿಗೆಯಲ್ಲಿ ನಾಮಪತ್ರ ಸಲ್ಲಿಸಿದಿರಿ. ಮೊದಲು ನಿಮ್ಮ ನಡವಳಿಕೆ ಸರಿಪಡಿಸಿಕೊಳ್ಳಿ. ಡಿ.ಕೆ. ಶಿವಕುಮಾರ್ ನಿಮ್ಮ ಬಗ್ಗೆ ಮಾತನಾಡಿರುವ ರೆಕಾರ್ಡ್‌ಗಳು ನಮ್ಮ ಬಳಿ ಇದೆ. ಗೆಲುವಿನ ಮದದಲ್ಲಿ ಉದ್ಧಟತನ ಪ್ರದರ್ಶಿಸಿದರೆ ಮಂಡ್ಯದಿಂದ ರೈತರನ್ನು ಕರೆತಂದು ಚನ್ನಪಟ್ಟಣದ ಬೀದಿ ಬೀದಿಗಳಲ್ಲಿ ಪ್ರಚಾರ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದೊಳಗೆ ಚುನಾವಣಾ ಮುಖ್ಯಸ್ಥರು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ. ಚುನಾವಣೆಗೆ ಮೂರು ದಿನಗಳಿರುವಾಗ ಮಹಿಳೆಯರ ಖಾತೆಗೆ ಹಣ ಜಮೆ ಮಾಡಲಾಗಿದೆ. ಇದರ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ಈ ವಿಷಯವಾಗಿ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಸಲ್ಮಾನರೊಬ್ಬರೇ ಕಾರಣರಲ್ಲ:

ಜೆಡಿಎಸ್ ಎಂದಿಗೂ ಮುಸ್ಲಿಮರನ್ನು ಕೈಬಿಟಿಲ್ಲ. ಅವರ ಅಭಿವೃದ್ಧಿಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ನಿರಂತರವಾಗಿ ಶ್ರಮಿಸಿದ್ದಾರೆ. ನಾವು ಎನ್‌ಡಿಎ ಕೂಟದಲ್ಲಿದ್ದೇವೆ ಎಂಬ ಕಾರಣಕ್ಕೆ ಕೈಬಿಟ್ಟಿದ್ದಾರೋ ಏನೋ ಗೊತ್ತಿಲ್ಲ. ಆದರೆ, ಮುಸ್ಲಿಂ ಸಮುದಾಯದವರ ಮತಗಳು ಕೈತಪ್ಪಿದ್ದರಿಂದ ಸೋಲಾಗಿಲ್ಲ. ಇತರೆ ಸಮುದಾಯದವರ ಮತಗಳೂ ಕೂಡ ಜೆಡಿಎಸ್‌ಗೆ ದೊರಕದಿರುವ ಹಿನ್ನೆಲೆಯಲ್ಲಿ ಸೋಲುಂಟಾಗಿದೆ ಎಂದರು.

ಅಸಮಾಧಾನ ದೂರವಾಗಲಿದೆ:

ಅಸಮಾಧಾನ ಎನ್ನುವುದು ಜೆಡಿಎಸ್‌ನೊಳಗೆ ಮಾತ್ರವಲ್ಲ. ಎಲ್ಲಾ ಪಕ್ಷದಲ್ಲೂ ಇದೆ. ಕಾಂಗ್ರೆಸ್‌ನೊಳಗೇ ಪಿ.ಎಂ. ನರೇಂದ್ರಸ್ವಾಮಿ ನಾನು ಪಕ್ಷದ ಹಿರಿಯ ನಾಯಕನಾಗಿದ್ದರೂ ನನಗೆ ಮಂತ್ರಿಗಿರಿ ಸಿಕ್ಕಿಲ್ಲವೆಂದು ಅಸಮಾಧಾನ ಹೊರಹಾಕಿಲ್ಲವೇ. ಅದೇ ರೀತಿ ಜಿ.ಟಿ.ದೇವೇಗೌಡರು ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ. ನಮ್ಮ ನಾಯಕರು ಅದೆಲ್ಲವನ್ನೂ ಬಗೆಹರಿಸಲಿದ್ದಾರೆ. ಎಲ್ಲರನ್ನೂ ಮುಂದಿನ ದಿನಗಳಲ್ಲಿ ಒಟ್ಟಿಗೆ ಕರೆದುಕೊಂಡು ಹೋಗಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಪರವಾಗಿ ಶ್ರಮಿಸಿದ ಜಿಲ್ಲೆಯ ಎಲ್ಲಾ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಗೋಷ್ಠಿಯಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಇದ್ದರು.

ಜೆಡಿಎಸ್‌ನಿಂದ ಒಬ್ಬರನ್ನು ಎಳೆಯಲಿ ನೋಡೋಣ: ಸಿ.ಎಸ್.ಪುಟ್ಟರಾಜು

ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್‌ಗೆ ತಾಕತ್ತಿದ್ದರೆ ಜೆಡಿಎಸ್‌ನಿಂದ ಒಬ್ಬನೇ ಒಬ್ಬ ಮುಖಂಡ ಅಥವಾ ಶಾಸಕರನ್ನು ತಮ್ಮ ಕಡೆಗೆ ಎಳೆಯಲಿ ನೋಡೋಣ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸವಾಲು ಹಾಕಿದರು.

ಜೆಡಿಎಸ್‌ನ ಶಾಸಕರು, ಮುಖಂಡರನ್ನು ಎಳೆಯುವುದು ಅಷ್ಟು ಸುಲಭದ ಮಾತಲ್ಲ. ಹಣದಿಂದ ಎಲ್ಲರನ್ನೂ ಖರೀದಿಸಲಾಗುವುದಿಲ್ಲ. ಎಲ್ಲರಿಗೂ ಅವರದ್ದೇ ಆದ ಸ್ವಾಭಿಮಾನವಿದೆ. ನಿಮ್ಮ ಹಣದ ಗಾಳಕ್ಕೆ ಎಲ್ಲರೂ ಬೀಳುತ್ತಾರೆ ಎಂದು ಭ್ರಮಿಸಿದ್ದರೆ ಅದು ನಿಮ್ಮ ಮೂರ್ಖತನ. ಈಗಷ್ಟೇ ಗೆದ್ದೀದ್ದೀರಿ. ಅಭಿವೃದ್ಧಿ ಕೆಲಸಗಳತ್ತ ಗಮನಹರಿಸಿ. ಅದನ್ನು ಬಿಟ್ಟು ಜೆಡಿಎಸ್‌ನ್ನೇ ಆಪರೇಷನ್ ಹಸ್ತದ ಮೂಲಕ ಮುಗಿಸಿಬಿಡುವೆನೆಂಬ ಮಾತುಗಳು ನಿಮ್ಮ ದುರಹಂಕಾರದ ಪರಮಾವಧಿಯನ್ನು ಸಾಕ್ಷೀಕರಿಸುತ್ತದೆ ಎಂದು ಕುಟುಕಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು