ದೇವೇಗೌಡರ ಕುಟುಂಬದ ಭೂ ಕಬಳಿಕೆಯ ಬಗ್ಗೆ ನೀವೇ ಜಾಹೀರಾತು ಕೊಟ್ಟಿದ್ರೀ: ಡಾ.ಜಿ. ಪರಮೇಶ್ವರ್

KannadaprabhaNewsNetwork | Updated : Aug 10 2024, 04:24 AM IST

ಸಾರಾಂಶ

ದೇವೇಗೌಡರ ಕುಟುಂಬದ ಭೂ ಕಬಳಿಕೆಯ ಬಗ್ಗೆ ನೀವೇ (ಬಿಜೆಪಿ) ಜಾಹೀರಾತು ಕೊಟ್ಟಿದ್ರೀ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕುಟುಕಿದರು.

  ಮೈಸೂರು :  ದೇವೇಗೌಡರ ಕುಟುಂಬದ ಭೂ ಕಬಳಿಕೆಯ ಬಗ್ಗೆ ನೀವೇ (ಬಿಜೆಪಿ) ಜಾಹೀರಾತು ಕೊಟ್ಟಿದ್ರೀ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕುಟುಕಿದರು.

ಮೈಸೂರಿನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ದೇವೇಗೌಡರ ಕುಟುಂಬದ ಭೂ ಕಬಳಿಕೆ ಜಾಹಿರಾತು ವಿಚಾರ ಪ್ರಸ್ತಾಪಿಸಿದ ಅವರು, ನೀವೇ ನೀಡಿದ ಪ್ರಕಟಣೆಯಲ್ಲಿ ದೇವೇಗೌಡರ ಕುಟುಂಬದ ಭೂಕಬಳಿಕೆ ಎಂದು ಹೇಳಿದ್ದೀರಿ. ಕುಮಾರಸ್ವಾಮಿಗೆ ಮತ್ತೊಬ್ಬರ ಬಗ್ಗೆ ಮಾತನಾಡುವ ನೈತಿಕತೆ ಬಗ್ಗೆ ಬಿಜೆಪಿಯವರೇ ಪ್ರಶ್ನಿಸಿದ್ದಾರೆ ಎಂದು ತಿಳಿಸಿದರು.

ಪ್ರತಿಭಟನೆ, ಪಾದಯಾತ್ರೆ ಮಾಡೋದು ನಿಮ್ಮ ಹಕ್ಕು. ನಿಮ್ಮ ಹೋರಾಟಕ್ಕೆ ನಮ್ಮ ಅಭ್ಯಂತರ ಏನಿಲ್ಲ. ಆದರೆ, ಯಾವ ಕಾರಣಕ್ಕೆ ನಿಮ್ಮ ಹೋರಾಟ ಎಂಬುದನ್ನು ತಿಳಿಸಿ. ನಾವು ಅನೇಕ ಪಾದಯಾತ್ರೆ, ಹೋರಾಟಗಳನ್ನು ಮಾಡಿದ್ದೇವೆ. ನಾವು ಜನರ ಅಭಿವೃದ್ಧಿ, ನಾಡಿನ ಒಳಿತಿಗಾಗಿ ಮಾಡಿದ್ದೇವೆ. ಸಿಎಂ ವಿರುದ್ಧ ಆರೋಪ ಮಾಡಲಿಕ್ಕೆ ನಿಮ್ಮಲ್ಲಿ ದಾಖಲಾತಿ ಇದ್ದರೆ ತೋರಿಸಿ ಎಂದು ಅವರು ಸವಾಲು ಹಾಕಿದರು.

ಬಿಜೆಪಿ- ಜೆಡಿಎಸ್ ಪಕ್ಷದವರು ಸರ್ಕಾರ ಉರುಳಿಸುವ ಮಾತನಾಡಿದ್ದಾರೆ. ಪಾದಯಾತ್ರೆ ಮಾಡುತ್ತಿರುವ ಅವರಿಗೆ ಕೆಲ ಪ್ರಶ್ನೆಗಳನ್ನು ಕೇಳಬೇಕಿದೆ. ಜನರಿಗಾಗಿ, ರಾಜ್ಯದ ಸಂಪತ್ತು ಉಳಿಸಲು ನಾವು ಪಾದಯಾತ್ರೆ ಮಾಡಿದ್ದೇವೆ. ಆದರೆ, ವಿಪಕ್ಷಗಳ ಪಾದಯಾತ್ರೆ ಕ್ಷುಲ್ಲಕ ಕಾರಣಗಳಿಗಾಗಿ ನಡೆದಿದೆ. ನಿಮ್ಮ ಮೇಲೆ ಅನೇಕ ಹಗರಣಗಳಿವೆ. 25 ಹೆಚ್ಚು ಹಗರಣ ವಿಪಕ್ಷಗಳ ಮೇಲಿವೆ ಎಂದು ಅವರು ವಾಗ್ದಾಳಿ ನಡೆಸಿದರು.

ವಾಲ್ಮೀಕಿ ನಿಗಮದ ಹಗರಣ ಹೊರಬಂದ ನಂತರ ನಾವೇ ಕ್ರಮ ತೆಗೆದುಕೊಂಡಿದ್ದೇವೆ. ಆದರೂ ಸಿಬಿಐ, ಇಡಿ ದುರುಪಯೋಗ ಮಾಡಿಕೊಂಡು ಸವಾರಿ ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.

ಜಿಎಸ್ಟಿ, ತೆರಿಗೆ ಹಣ, ಅತಿವೃಷ್ಟಿ ಪರಿಹಾರ ಕೇಂದ್ರ ಸರ್ಕಾರ ಕೊಡಲಿಲ್ಲ. ಸುಪ್ರೀಂಕೋರ್ಟ್ ಚಾಟಿ ಬೀಸಿದ ಬಳಿಕ ಕೊಟ್ಟಿದ್ದಾರೆ. 5100 ಕೋಟಿ ರು. ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಕೊಡುವುದಿಲ್ಲ ಎಂದು ಹೇಳಿದೆ. ಇದು ಕರ್ನಾಟಕದ ಮಟ್ಟಿಗೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಎಂದರು.

Share this article