ಬಿಬಿಎಂಪಿಯ ಮಾರುಕಟ್ಟೆಗಳಲ್ಲಿನ ಮಳಿಗೆಗಳಿಂದ ಸರಿಯಾದ ಬಾಡಿಗೆ ಬರುತ್ತಿಲ್ಲ. ₹170 ಕೋಟಿಗಿಂತ ಹೆಚ್ಚು ಮೊತ್ತ ಬಾಕಿ ಇದ್ದರೂ ವಸೂಲಿಗೆ ಅಧಿಕಾರಿಗಳು ಯಾಕೆ ಮುಂದಾಗುತ್ತಿಲ್ಲ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಸ್ಥಳೀಯ ಪ್ರಭಾವಿಗಳು, ಸಂಘಟನೆಗಳ ಹಸ್ತಕ್ಷೇಪ, ವ್ಯಾಜ್ಯ ಸೇರಿದಂತೆ ಹಲವಾರು ಕಾರಣಗಳಿಂದ ನಿತ್ಯ ಕೋಟ್ಯಂತರ ರು. ವಹಿವಾಟು ನಡೆಯುವ ಬಿಬಿಎಂಪಿಯ ಮಾರುಕಟ್ಟೆಗಳಲ್ಲಿನ ಮಳಿಗೆಗಳಿಂದ ಸರಿಯಾದ ಬಾಡಿಗೆ ಬರುತ್ತಿಲ್ಲ. ₹170 ಕೋಟಿಗಿಂತ ಹೆಚ್ಚು ಮೊತ್ತ ಬಾಕಿ ಇದ್ದರೂ ವಸೂಲಿಗೆ ಅಧಿಕಾರಿಗಳು ಯಾಕೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಬಿಬಿಎಂಪಿ ಪ್ರಮುಖವಾಗಿ ಕೆ.ಆರ್.ಮಾರುಕಟ್ಟೆ, ರಸೆಲ್ ಮಾರುಕಟ್ಟೆ, ಜಯನಗರ ಮಾರುಕಟ್ಟೆ, ಗರುಡಾ, ಪಿಯುಬಿ, ಮಡಿವಾಳ ಸೇರಿದಂತೆ 123 ಮಾರುಕಟ್ಟೆಗಳನ್ನು ಹೊಂದಿದೆ. ಈ ಮಾರುಕಟ್ಟೆಗಳಲ್ಲಿ 6 ಸಾವಿರಕ್ಕೂ ಅಧಿಕ ಮಳಿಗಳಿವೆ. ಆದರೆ, ಮಳಿಗೆ ಪಡೆದವರು ಸರಿಯಾಗಿ ಬಾಡಿಗೆ ಪಾವತಿಸುತ್ತಿಲ್ಲ. ಬಾಡಿಗೆ ನೀಡಿದರೂ ಅದು ಅತ್ಯಂತ ಕನಿಷ್ಟ ಬಾಡಿಗೆಯಾಗಿದೆ. ಬಾಡಿಗೆ ವಸೂಲಿ ಅಥವಾ ಹೆಚ್ಚಿಸುವ ಕೆಲಸವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡದೇ ಸುಮ್ಮನಿದ್ದಾರೆ.
ಬಹುತೇಕ ಮಾರುಕಟ್ಟೆಗಳು ಸ್ಥಳೀಯ ರಾಜಕಾರಣಿಗಳು, ವಿವಿಧ ಸಂಘಟನೆಯ ಪದಾಧಿಕಾರಿಗಳ ನಿಯಂತ್ರಣದಲ್ಲಿದ್ದು, ಅಧಿಕಾರಿಗಳು ನೇರವಾಗಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಪ್ರಭಾವಿಗಳು ಯಾರಿಗೆ ಸೂಚಿಸುತ್ತಾರೋ ಅವರಿಗೆ ಮಳಿಗೆ ದೊರೆಯುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬಾಡಿಗೆ ವಸೂಲಿಗೆ ಹೋದರೆ ಮುಖಂಡರಿಂದ ಪೋನ್ ಮಾಡಿ ಒತ್ತಡ ಹಾಕುತ್ತಾರೆ. ಇದನ್ನೇ ನೆಪ ಮಾಡಿಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದೇ ಕೈಕಟ್ಟಿ ಕುಳಿತುಕೊಂಡಿದ್ದಾರೆ.
ಹತ್ತಾರು ವರ್ಷದಿಂದ ಬಾಡಿಗೆ ಪಾವತಿ ಇಲ್ಲ:
ಈ ಮಾರುಕಟ್ಟೆಗಳಿಂದ ಪ್ರತಿ ವರ್ಷ ₹28 ಕೋಟಿ ಆದಾಯ ನಿರೀಕ್ಷೆ ಮಾಡಲಾಗುತ್ತಿದೆ. ಆದರೆ, ಕನಿಷ್ಠ ಪ್ರಮಾಣದ ಆದಾಯವೂ ಬಿಬಿಎಂಪಿಗೆ ಬರುತ್ತಿಲ್ಲ. ಕೆಲವು ಮಳಿಗೆಯಲ್ಲಿ ಇರುವ ವ್ಯಾಪಾರಿಗಳು ಸರಿಯಾಗಿ ಬಾಡಿಗೆ ಪಾವತಿ ಮಾಡುತ್ತಿದ್ದಾರೆ. ಇನ್ನುಳಿದವರು ಹತ್ತಾರು ವರ್ಷದಿಂದ ಕನಿಷ್ಠ ನಿಗದಿ ಪಡಿಸಿದ ಬಾಡಿಗೆ ಪಾವತಿ ಮಾಡದೇ ವ್ಯಾಪಾರ ಮಾಡುತ್ತಿದ್ದಾರೆ. ಬಾಕಿ ಇರುವ ಬಾಡಿಗೆ ಮೊತ್ತಕ್ಕೆ ದಂಡ, ಬಡ್ಡಿ ಸೇರಿಸಿ ವಸೂಲಿಗೆ ನೋಟಿಸ್ ನೀಡುವುದು ಬಿಟ್ಟರೆ ಇನ್ಯಾವುದೇ ಪರಿಣಾಮಕಾರಿ ಕ್ರಮ ಜರುಗಿಸುವುದಕ್ಕೆ ಅಧಿಕಾರಿಗಳೇ ಸಿದ್ಧವಿಲ್ಲ.
ದರ ತಿಕ್ಕಾಟ:
2015-16ನೇ ಸಾಲಿನಲ್ಲಿ ಮಾರುಕಟ್ಟೆಗಳ ದರ ಪರಿಷ್ಕರಣೆ ಮಾಡಲಾಯಿತು. ಈ ಪರಿಷ್ಕರಣೆ ಒಪ್ಪದ ವ್ಯಾಪಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಅಂತಿಮವಾಗಿ 2022ರಲ್ಲಿ ಪಾಲಿಕೆ ಪರವಾಗಿ ನ್ಯಾಯಾಲಯ ಆದೇಶಿಸಿದೆ. ಬಳಿಕ ಬಿಬಿಎಂಪಿಯು 2015 ರಿಂದ ಹೆಚ್ಚುವರಿ ಬಾಡಿಗೆ ಮೊತ್ತ ಪಾವತಿಸುವಂತೆ ವ್ಯಾಪಾರಿಗಳಿಗೆ ಸೂಚಿಸಿದ್ದು, ಪ್ರತಿ ವ್ಯಾಪಾರಿಗೆ ಐದಾರು ಲಕ್ಷ ರು. ಪಾವತಿ ಮಾಡಬೇಕಾಗಿದೆ. ಈ ಗೊಂದಲ ಇನ್ನೂ ಪರಿಹಾರವಾಗಿಲ್ಲ. ಹಾಗಾಗಿ, ಹೆಚ್ಚಿನ ಮೊತ್ತ ಬಾಕಿ ಕಾಣಿಸುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಮಳಿಗೆ ಮರು ಹಂಚಿಕೆಗೆ ನಿರಾಸಕ್ತಿ:
ಪಾಲಿಕೆ ಆಸ್ತಿಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ರಚನೆ ಮಾಡಿ ಅನುಷ್ಠಾನ ಮಾಡಲು ವಲಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ, ವಲಯ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ವಹಿಸುತ್ತಿಲ್ಲ. ಕಂದಾಯ ಇಲಾಖೆಯ ಮಾರ್ಗಸೂಚಿ ದರ ಆಧರಿಸಿ ಬಾಡಿಗೆ ಮರು ನಿಗದಿಪಡಿಸಿ ಟೆಂಡರ್ ಆಹ್ವಾನಿಸಲು ಅವಕಾಶವಿದೆ. ಇದರಿಂದ ಬಾಡಿಗೆಯೂ ಹೆಚ್ಚಾಗಲಿದೆ. ಆದರೆ, ವಲಯ ಮಟ್ಟದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೊಳ್ಳುತ್ತಿಲ್ಲ.
ಈವರೆಗೆ ಕಾಕ್ಸ್‌ಟೌನ್ ಮಾರುಕಟ್ಟೆಗೆ ಮಾತ್ರ ಟೆಂಡರ್ ಆಹ್ವಾನಿಸಲಾಗಿದೆ. ಹೆಚ್ಚಿನ ದರ ನೀಡುವ ವ್ಯಾಪಾರಿಗಳಿಗೆ ಮಳಿಗೆ ನೀಡಲಾಗುವುದು. ಹವಾನಿಯಂತ್ರಿತ ಹಾಗೂ ಹವಾನಿಯಂತ್ರಿತವಲ್ಲ ಮಳಿಗೆಗಳ ಮೇಲೆ ದರದಲ್ಲಿ ವ್ಯತ್ಯಾಸ ಇರಲಿದೆ ಎಂದು ಎಂದು ಕೇಂದ್ರ ಕಚೇರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಲಿಕೆಯಿಂದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇಲ್ಲ. ಗ್ರಾಹಕರಿಗೆ ವಾಹನ ಪಾರ್ಕಿಂಗ್ ಸೌಲಭ್ಯ ಇಲ್ಲ. ಹೀಗಾಗಿ, ಗ್ರಾಹಕರು ಪಾಲಿಕೆ ಮಾರುಕಟ್ಟೆಗಳ ಕಡೆ ಬರುತ್ತಿಲ್ಲ. ಏಕಾಏಕಿ ಬಾಡಿಗೆ ಏರಿಕೆ ಮಾಡಿದ ವಿಷಯದಲ್ಲಿ ಗೊಂದಲ ಸೃಷ್ಟಿಯಾಗಿದೆ. ಹಾಗಾಗಿ, ಬಾಡಿಗೆ ಬಾಕಿ ಉಳಿಸಿಕೊಳ್ಳಲಾಗಿದೆ.
- ದಿವಾಕರ್, ಅಧ್ಯಕ್ಷ, ಕೆ.ಆರ್.ಮಾರುಕಟ್ಟೆ ವರ್ತಕರ ಸಂಘ.
ವಲಯವಾರು ಮಾರುಕಟ್ಟೆಗಳ ಬಾಕಿ ವಿವರ
ವಲಯಮಾರುಕಟ್ಟೆಸಂಖ್ಯೆಮಳಿಗೆ ಸಂಖ್ಯೆಬಾಕಿ ಮೊತ್ತ2025-26ನೇ ಸಾಲಿನ ಬಾಡಿಗೆ ನಿರೀಕ್ಷೆ
ಪೂರ್ವ47174252,38,34,6782,22,92,276
ಪಶ್ಚಿಮ43285039,23,86,11610,42,17,111
ದಕ್ಷಿಣ26135179,73,79,36615,50,08,388
ಬೊಮ್ಮನಹಳ್ಳಿ131-5,12,947
ಯಲಹಂಕ228-1,24,200
ಆರ್‌ಆರ್‌ನಗರ16-2,19,000
ದಾಸರಹಳ್ಳಿ29-2,21,400
ಮಹದೇವಪುರ1ನೆಲಬಾಡಿಗೆ-72,60,000
ಒಟ್ಟು1236017171,36,00,21028,98,55,322