ದಶಕಗಳ ಸಾಹಿತ್ಯದ ಮೊಗಸಾಲೆಯಲ್ಲಿ ಮತ್ತು ತೇಜೋನಿಧಿಸಂ ಪುಸ್ತಕ ಪರಿಚಯ

KannadaprabhaNewsNetwork | Updated : Mar 10 2024, 09:20 AM IST

ಸಾರಾಂಶ

ಜಯಪ್ರಕಾಶ್‌ ಪುತ್ತೂರು ಬರೆದಿರುವ ದಶಕಗಳ ಸಾಹಿತ್ಯದ ಮೊಗಸಾಲೆಯಲ್ಲಿ ಹಾಗೂ ಶಿಕ್ಷಣ ತಜ್ಞರ ವಿಚಾರ-ಚಿಂತನೆಗಳನ್ನು ದಾಖಲೀಕರಣ ಮಾಡಿರುವ ವಸಂತ್‌ ಭಟ್‌ ಅವರ ಸಂಪಾದನೆಯಲ್ಲಿ ಮೂಡಿಬಂದಿರುವ ತೇಜೋನಿಧಿ ಪುಸ್ತಕಗಳ ಕುರಿತು ಈ ಅಂಕಣದಲ್ಲಿ ವಿಶ್ಲೇಷಣೆ ಮಾಡಲಾಗಿದೆ.

ಹಲವು ಸಂಗತಿಗಳನ್ನು ವಿಸ್ತಾರವಾಗಿ ಓದುವಂತೆ ಮಾಡುವ ಜಯಪ್ರಕಾಶ್‌ ಪುತ್ತೂರು ಬರೆದಿರುವ ದಶಕಗಳ ಸಾಹಿತ್ಯದ ಮೊಗಸಾಲೆಯಲ್ಲಿ ಹಾಗೂ ಶಿಕ್ಷಣ ತಜ್ಞರ ವಿಚಾರ-ಚಿಂತನೆಗಳನ್ನು ದಾಖಲೀಕರಣ ಮಾಡಿರುವ ವಸಂತ್‌ ಭಟ್‌ ಅವರ ಸಂಪಾದನೆಯಲ್ಲಿ ಮೂಡಿಬಂದಿರುವ ತೇಜೋನಿಧಿ ಪುಸ್ತಕಗಳ ಕುರಿತು ಈ ಅಂಕಣದಲ್ಲಿ ವಿಶ್ಲೇಷಣೆ ಮಾಡಲಾಗಿದೆ.

ದಶಕಗಳ ಸಾಹಿತ್ಯದ ಮೊಗಸಾಲೆಯಲ್ಲಿ
ಲೇಖಕ: ಜಯಪ್ರಕಾಶ್‌ ಪುತ್ತೂರು
ಪುಟ: 231, 
ಬೆಲೆ: 200 ರು.
ಪ್ರಕಾಶನ: ಸಪ್ನಾ ಬುಕ್‌ ಹೌಸ್‌, ಬೆಂಗಳೂರು
ದೂ: 080-40114455

ಈ ಕೃತಿ ಲೇಖನಗಳ ಸಂಗ್ರಹ. ವಿಷಯಗಳಿಗೆ ಅನುಸಾರವಾಗಿ ಲೇಖನಗಳನ್ನು ವಿಭಾಗಿಸಲಾಗಿದೆ. ವ್ಯಕ್ತಿ - ಸಂದರ್ಶನ, ಸಂಸ್ಕೃತಿ ಕಲೆ, ಸಾಧಕರ ಬಗೆಗಿನ ಬರಹ, ವಿಚಾರ ವಿಶೇಷ, ವಿಮರ್ಶೆ ಮೊದಲಾದ ವಿಭಾಗಗಳಲ್ಲಿ ಈ ಲೇಖನಗಳಿವೆ. ಹೆಚ್ಚಿನ ಬರಹಗಳು ಈಗಾಗಲೇ ಪತ್ರಿಕೆಗಳಲ್ಲಿ ಅಂಕಣ ಬರಹಗಳಾಗಿ, ಲೇಖನ ರೂಪದಲ್ಲಿ ಪ್ರಕಟಗೊಂಡವು. 

ಇಲ್ಲಿರುವ ವ್ಯಕ್ತಿ ಚಿತ್ರಗಳಲ್ಲಿ ಕಾರಂತ, ಬಾಲು ಮಹೇಂದ್ರ, ಜಿ ವಿ ಅಯ್ಯರ್‌ ಮೊದಲಾದವರ ವ್ಯಕ್ತಿತ್ವದ ವಿಭಿನ್ನ ಮುಖಗಳು ಕಾಣಸಿಗುತ್ತವೆ. ಈ ಕೃತಿಯಲ್ಲಿ ಪ್ರವಾಸ ಕಥನಗಳೂ ಸೇರಿಕೊಂಡಿವೆ. 

ರಾಮೇಶ್ವರ, ತಾಂಜಾವೂರು ಮೊದಲಾದ ಜಾಗಗಳ ವಿಶೇಷತೆಗಳನ್ನು ಇಲ್ಲಿ ನೋಡಬಹುದು. ಪತ್ರಿಕಾ ಬರಹಗಳ ಹರವು ವಿಸ್ತಾರವಾದದ್ದು. ವೈವಿಧ್ಯಮಯ ವಿಷಯ ವಿಚಾರಗಳು ಇಲ್ಲಿ ಅಡಕಗೊಂಡಿರುತ್ತವೆ. 

ವಿವಿಧ ಕ್ಷೇತ್ರಗಳ ಬಗೆಗಿನ ಪಕ್ಷಿನೋಟಗಳು ಇಲ್ಲಿ ಕಾಣ ಸಿಗುತ್ತವೆ. ಓದಿನ ಖುಷಿಯ ಜೊತೆಗೆ ಅನೇಕ ಸಂಗತಿಗಳ ಬಗ್ಗೆ ಜ್ಞಾನ ಹೆಚ್ಚಿಸುವ ಕೆಲಸವನ್ನೂ ಈ ಕೃತಿಯ ಲೇಖನಗಳು ಮಾಡುತ್ತವೆ.

ತೇಜೋನಿಧಿಸಂ
ಲೇಖಕ: ವಸಂತ ಭಟ್ಪು 
ಬೆಲೆ: 350
ಪುಟ: 360
ಪ್ರಕಾಶನ: ಹರಿವು ಬುಕ್ಸ್‌, ಬೆಂಗಳೂರು
ದೂ: 808822171

ಪತ್ರಕರ್ತರು, ಪರಿಸರ ಪ್ರೇಮಿಗಳು, ಸಾಮಾಜಿಕ ಚಿಂತಕರು, ಸಾಹಿತಿಗಳು ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಣ ತಜ್ಞರು ಸೇರಿದಂತೆ ಹತ್ತಾರು ಮಂದಿಯ ಚಿಂತನೆ, ವಿಚಾರ ಹಾಗೂ ಸಾಧನೆಗಳನ್ನು ಒಳಗೊಂಡ ‘ತೇಜೋನಿಧಿ’ ಪುಸ್ತಕ ಶಿಕ್ಷಣ ಕ್ಷೇತ್ರದ ಅಪರೂಪದ ಮಾರ್ಗದರ್ಶಿಯೂ ಹೌದು. 

ರಾಷ್ಟ್ರಪಿತ ಮಹಾತ್ಮಗಾಂಧಿ ಅವರಿಂದ ಹಿಡಿದು ಪ್ರಸ್ತುತ ನಮ್ಮ ನಡುವೆ ಶಿಕ್ಷಣ ಕ್ಷೇತ್ರಕ್ಕಾಗಿ ದುಡಿಯುತ್ತಿರುವವರ ಅನುಭವ ಕಥನಗಳು ಇಲ್ಲಿವೆ. ಇಲ್ಲಿ ಅನುಭವಗಳು ಮಾತ್ರವಲ್ಲದೆ ಚಿಂತನೆ, ವಿಚಾರ ಮತ್ತು ಅಭಿಪ್ರಾಯಗಳ ಕ್ರೂಡೀಕರಣವೂ ಆಗಿರುವುದು ಈ ಕೃತಿಯ ವಿಶೇಷತೆ.

ಪುಸ್ತಕಗಳಲ್ಲಿ ಮಾತ್ರ ವಿದ್ಯಾರ್ಥಿಗಳು ರ್‍ಯಾಂಕ್‌ ಬಂದರೆ ಸಾಲದು, ಮಕ್ಕಳನ್ನು ಪರಿಸರದ ಜತೆಗೆ ಬೆಳೆಸಿ, ಸಾಮಾಜಮುಖಿ ಶಿಕ್ಷಣ ನೀಡಿ, ಶಿಕ್ಷಣ ಎಂಬುದು ಅರಿವಿನ ಜ್ಞಾನವಾಗಲಿ, ಶಿಕ್ಷಣ ಎಂಬುದು ಕಲಿಕೆಯ ವಸ್ತು ಮಾತ್ರವಲ್ಲ, ಅದು ಬದುಕಿನ ಅಡಿಪಾಯ ಕಟ್ಟುವ ಕಲೆ... 

ಹೀಗೆ ಶಿಕ್ಷಣದ ಸುತ್ತಾ ಹತ್ತಾರು ಅಭಿಪ್ರಾಯ, ವಿಚಾರಗಳನ್ನು ಮಂಡಿಸಿದ್ದಾರೆ. ಇಲ್ಲಿನ ಪ್ರತಿಯೊಂದು ಲೇಖನವೂ ಶಿಕ್ಷಣ ಕುರಿತ ಮಹತ್ತರವಾದ ನೋಟವನ್ನು ಓದುಗನ ಮುಂದೆ ತೆರೆದಿಡುತ್ತದೆ.

ತಿಳಿಯುವ ತೇಜ ನಡೆ, ಅರಿವು ಮೂಡಿದ ದಾರಿ, ಜ್ಞಾನಲೋಕ ಹೀಗೆ ಮೂರು ಹೆಸರುಗಳಲ್ಲಿ ಒಟ್ಟು ಮೂರು ಭಾಗಗಳಾಗಿ ಮೂಡಿ ಬಂದಿರುವ ಈ ಕೃತಿಯಲ್ಲಿ ಪ್ರೊ ಯು ಆರ್‌ ಅನಂತಮೂರ್ತಿ, ಪ್ರೊ ಪುರುಷೋತ್ತಮ ಬಿಳಿಮಲೆ, ನಟ ರಮೇಶ್‌ ಅರವಿಂದ್‌, ಪ್ರೊ ನಿರಂಜನ ವಾನಳ್ಳಿ, ಪ್ರೊ ಬರಗೂರು ರಾಮಚಂದ್ರಪ್ಪ, ನಾಗೇಶ್‌ ಹೆಗಡೆ ಹೀಗೆ ಹತ್ತಾರು ಮಂದಿಯ ಬರಹಗಳನ್ನು ಈ ಕೃತಿ ಒಳಗೊಂಡಿದೆ. 

ವಿಶೇಷ ಎಂದರೆ ಸಿದ್ದಿ ಜನಾಗಂದ ಗಿರೀಶ್‌ ಸಿದ್ದಿ, ಗಿರಿಜಾ ಸಿದ್ದಿ ಮತ್ತು ಡಾ ಗೀತಾ ಸಿದ್ದಿ ಅವರು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸಮುದಾಯದ ಹಾದಿಯನ್ನು ದಾಖಲಿಸಿದ್ದಾರೆ.

Share this article