ಕದನ ವಿರಾಮ ದಿಢೀರ್‌ ನಿರ್ಧಾರ ಆಗಿರಲಿಕ್ಕಿಲ್ಲ! ಆಪರೇಷನ್‌ ಸಿಂದೂರ ಅತ್ಯಂತ ವಿನೂತನ ಕಾರ್‍ಯಾಚರಣೆ

Follow Us

ಸಾರಾಂಶ

ಪಾಕಿಸ್ತಾನದ ಮೇಲೆ ನಡೆಸಿದ್ದ ಸರ್ಜಿಕಲ್‌ ಸ್ಟ್ರೈಕ್‌ನ ವೇಳೆ ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸಿದ್ದ ಕನ್ನಡಿಗರೇ ಆದ ಬ್ರಿಗೇಡಿಯರ್‌ ಡಿ.ಎಂ. ಪೂರ್ವಿಮಠ ಅವರು ಈ ಚರ್ಚಾ ಸಮರದ ಅಸಲಿಯತ್ತನ್ನು ತಿಳಿಸಲು ''ಕನ್ನಡಪ್ರಭ''ದೊಂದಿಗೆ ಮುಖಾಮುಖಿಯಾಗಿದ್ದಾರೆ.

 - ಬ್ರಿಗೇಡಿಯರ್‌ ಡಿ.ಎಂ. ಪೂರ್ವಿಮಠ

ಮಂಜುನಾಥ ನಾಗಲೀಕರ್

ಪಾಕಿಸ್ತಾನ ವಿರುದ್ಧ ಭಾರತ ನಡೆಸಿದ ಆಪರೇಷನ್‌ ಸಿಂದೂರ ಹಾಗೂ ನಂತರದ ಕದನ ವಿರಾಮ ದೇಶಾದ್ಯಂತ ಮಾತ್ರವಲ್ಲದೆ ಜಾಗತಿಕವಾಗಿಯೂ ಚರ್ಚೆ ಹುಟ್ಟುಹಾಕಿದೆ. ವಿಶೇಷವಾಗಿ ಭಾರತದ ದಾಳಿಗೆ ನಲುಗಿ ಇಕ್ಕಟ್ಟಿನ ಸ್ಥಿತಿಯಲ್ಲಿದ್ದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಕಲಿಸುವ ಸುವರ್ಣಾವಕಾಶವಿದ್ದಾಗಲೂ ಹಠಾತ್ತನೆ ಕದನ ವಿರಾಮಕ್ಕೆ ಮುಂದಾದ ಕುರಿತ ಪರ-ವಿರೋಧ ಚರ್ಚೆಗಳು ಅಂತರ್ಜಾಲದಲ್ಲಿ ಸುನಾಮಿ ಎಬ್ಬಿಸಿವೆ.

ಪಹಲ್ಗಾಂ ದಾಳಿಗೆ ತಕ್ಕ ಪ್ರತಿಕಾರ ತೆಗೆದುಕೊಳ್ಳುವ ಅವಕಾಶವಿದ್ದಾಗ ಅದನ್ನು ಕೈ ಚೆಲ್ಲಿದ್ದು ಎಷ್ಟು ಸರಿ? ಅಮೆರಿಕದ ಒತ್ತಡಕ್ಕೆ ಭಾರತ ಸರ್ಕಾರ ಸಿಲುಕಿತೆ? ಇಷ್ಟಕ್ಕೂ ಆಪರೇಷನ್ ಸಿಂದೂರ ತನ್ನ ಉದ್ದೇಶ ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆಯೇ? ಇಂತಹದೊಂದು ದೊಡ್ಡ ಆಪರೇಷನ್‌ ನಡೆಸಿದ ಹೊರತಾಗಿಯೂ ಪಾಕಿಸ್ತಾನಕ್ಕೆ ಬುದ್ಧಿಕಲಿಸದೇ ಬಿಟ್ಟಿದ್ದರ ಒಳ ಸುಳಿಯೇನು? ಎಂಬ ಬಗ್ಗೆ ಚರ್ಚಾ ಸಮರವೇ ನಡೆದಿದೆ. ಈ ಹಿನ್ನೆಲೆಯಲ್ಲಿ ಭಾರತ ಈ ಹಿಂದೆ ಪಾಕಿಸ್ತಾನದ ಮೇಲೆ ನಡೆಸಿದ್ದ ಸರ್ಜಿಕಲ್‌ ಸ್ಟ್ರೈಕ್‌ನ ವೇಳೆ ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸಿದ್ದ ಕನ್ನಡಿಗರೇ ಆದ ಬ್ರಿಗೇಡಿಯರ್‌ ಡಿ.ಎಂ. ಪೂರ್ವಿಮಠ ಅವರು ಈ ಚರ್ಚಾ ಸಮರದ ಅಸಲಿಯತ್ತನ್ನು ತಿಳಿಸಲು ''ಕನ್ನಡಪ್ರಭ''ದೊಂದಿಗೆ ಮುಖಾಮುಖಿಯಾಗಿದ್ದಾರೆ.

-ಭಾರತ ‘ಕದನ ವಿರಾಮ’ ಒಪ್ಪಬಾರದಿತ್ತು ಎಂಬ ಅಭಿಪ್ರಾಯ ಕೇಳಿಬರುತ್ತಿವೆ, ಅದರಲ್ಲಿ ತಿರುಳೇನಾದರೂ ಇದೆಯೇ?

ಕದನ ವಿರಾಮ ಮಾಡುವುದು ತಪ್ಪಲ್ಲ. ಅದು ಹಗುರವಾಗಿ ಅಥವಾ ದಿಢೀರ್ ಆಗಿ ತೆಗೆದುಕೊಂಡಿರುವ ನಿರ್ಧಾರವಲ್ಲ. ಈ ಬಗ್ಗೆ ಕೂಲಂಕುಶ ಚರ್ಚೆ ನಡೆದಿರುತ್ತದೆ. ಆರ್ಥಿಕವಾಗಿ ಮತ್ತು ಬೇರೆ ಬೇರೆ ರೀತಿಯಲ್ಲಿ ಆಗುವ ಅನುಕೂಲ, ಅನನುಕೂಲದ ಬಗ್ಗೆ ವಿಚಾರ ಮಾಡಿ ಸಮಯೋಚಿತ ನಿರ್ಧಾರ ತೆಗೆದುಕೊಳ್ಳಲಾಗಿದೆ.

-ಹಾಗಿದ್ದರೆ ಪಾಕಿಸ್ತಾನದ ವಿರುದ್ಧದ ಆಪರೇಷನ್ ಸಿಂದೂರ ಕಾರ್ಯಾಚರಣೆ ಅಪೂರ್ಣವಾದಂತಾಗುವುದಿಲ್ಲವೇ?

ಇದು ಪಾಕಿಸ್ತಾನದ ಸೇನೆಯ ವಿರುದ್ಧದ ಕಾರ್ಯಾಚರಣೆ ಅಲ್ಲ. ಭಯೋತ್ಪಾದನೆ ನಿಂತರೆ ಸಾಕು. ಅದಕ್ಕೆ ಪಾಕಿಸ್ತಾನದ ಜನ ಏಕೆ ಪರಿತಪಿಸಬೇಕು? ನಮ್ಮ ನೆರೆ-ಹೊರೆ ಶಾಂತಿಯುತವಾಗಿದ್ದರೆ, ಅಭಿವೃದ್ಧಿ ಹಾಗೂ ಬೆಳವಣಿಗೆಯಾದರೆ ಮಾತ್ರ ನಾವು ಶಾಂತಿಯುತವಾಗಿರಲು ಸಾಧ್ಯ. ನಮ್ಮ ಉದ್ದೇಶ ಭಯೋತ್ಪಾದನೆ ನಿಯಂತ್ರಣ ಮಾತ್ರ.

-ಆಪರೇಷನ್‌ ಸಿಂದೂರ ಕಾರ್ಯಾಚರಣೆ ಯಶಸ್ಸಾಗಿದೆ ಅನಿಸುತ್ತಾ?

ನಮ್ಮ ಸೇನೆಯ ಟಾರ್ಗೆಟ್ ಪಾಕಿಸ್ತಾನದ ನಾಗರಿಕರು, ಸೇನಾ ನೆಲೆಗಳು ಅಥವಾ ಸೈನಿಕರು ಅಲ್ಲ. ಭಯೋತ್ಪಾದಕರು ಮಾತ್ರ. ಸಿಂಧೂರ ಕಾರ್ಯಾಚರಣೆ ವೇಳೆ ಅಡ್ಡ ಬಂದ ಪಾಕಿಸ್ತಾನ ಸೇನೆಗೂ ಸರಿಯಾದ ಪೆಟ್ಟು ಬಿದ್ದಿದೆ. ಇನ್ನು ಮುಂದೆ ಪಾಕಿಸ್ತಾನದ ಯಾವುದೇ ಭಾಗದಲ್ಲಿ ಬೇಕಾದರೂ ನುಗ್ಗಿ ಹೊಡೆಯುತ್ತೇವೆ ಎನ್ನುವ ಎಚ್ಚರಿಕೆ ಸಂದೇಶ ಈ ಕಾರ್ಯಾಚರಣೆ ಮೂಲಕ ನೀಡಲಾಗಿದೆ. ನಮ್ಮ ತಂಟೆಗೆ ಬಂದರೆ ಉಳಿಗಾಲವಿಲ್ಲ ಎಂಬ ಸ್ಪಷ್ಟ ಸಂದೇಶ ಭಾರತೀಯ ಸೇನೆ ನೀಡಿದೆ. ಹೀಗಾಗಿ, ಪಾಕಿಸ್ತಾನ ಸೇನೆ ಭಯೋತ್ಪಾದನೆಗೆ ಬೆಂಬಲಿಸುವುದನ್ನು ಕಡಿಮೆ ಮಾಡಬಹುದು. ಇದರಿಂದ ಕಾಶ್ಮೀರದಲ್ಲಿ ಶಾಂತಿ ನೆಲೆಸಬಹುದು.

-ಆದರೆ, ಈ ಕಾರ್ಯಾಚರಣೆಯ ನಿಜ ಉದ್ದೇಶ ಸಾಧನೆಯಾಗಿಲ್ಲ ಎಂಬ ಟೀಕೆಯಿದೆಯಲ್ಲ?

21 ಉಗ್ರ ನೆಲೆಗಳ ಪೈಕಿ ಒಂಬತ್ತನ್ನು ಸಂಪೂರ್ಣವಾಗಿ ನಾಶ ಮಾಡಿದ್ದೇವೆ. 100-125 ಉಗ್ರರು ಸತ್ತಿದ್ದಾರೆ. ಅವರಿಗೆ ಬೆಂಬಲಿಸುವ ಮೂಲಸೌಕರ್ಯಗಳು ಕೂಡ ನಾಶವಾಗಿವೆ. ಈ ಕಾರ್ಯಾಚರಣೆಗೆ ಮಧ್ಯ ಪ್ರವೇಶಿಸಿದ ಕಾರಣ ಪಾಕಿಸ್ತಾನದ ಎಫ್-16, ಜೆ-10 ಸೇರಿ ವಿವಿಧ ಯುದ್ಧವಿಮಾನಗಳಿದ್ದ ವಾಯುಪಡೆ ಕೇಂದ್ರಗಳ ಮೇಲೆ ದಾಳಿ ಮಾಡಿ ವಿಮಾನಗಳು ಮತ್ತು ಮೂಲಸೌಕರ್ಯ ನಾಶಪಡಿಸಲಾಗಿದೆ. ಇದರರ್ಥ ಉದ್ದೇಶ ಈಡೇರಿದಂತಲ್ಲವೇ?

-ಸೇನಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದ ಅನುಭವಿಗಳಾಗಿ ಹೇಳಿ ಆಪರೇಷನ್ ಸಿಂದೂರ ಕಾರ್ಯಾಚರಣೆಗೆ ಸಿದ್ಧತೆ ಸರಿಯಾಗಿತ್ತಾ?

ಈ ಹಿಂದೆ ಬಾಲಾಕೋಟ್, ಉರಿ ಸೇರಿ ಅನೇಕ ಕಡೆಗಳಲ್ಲಿ ಭಾರತೀಯ ಸೇನೆಯಿಂದ ಕಾರ್ಯಾಚರಣೆ ಮಾಡಲಾಗಿದೆ. ಆದರೆ, ಸಿಂದೂರ ಭಿನ್ನವಾದ ಕಾರ್ಯಾಚರಣೆ. ಮೊದಲನೇ ಭಾಗವಾಗಿ ಭಯೋತ್ಪಾದಕ ತರಬೇತಿ ಕೇಂದ್ರಗಳು ಮತ್ತು ಅವುಗಳಿಗೆ ಉತ್ತೇಜನ ನೀಡುವ ನೆಲೆಗಳನ್ನು ಗುರುತಿಸಲಾಯಿತು. ಅಲ್ಲಿನ ಚಟುವಟಿಕೆ, ಮಹತ್ವ, ಹಿಂದಿನ ಉಗ್ರರ ದಾಳಿಯಲ್ಲಿ ಆ ತರಬೇತಿ ಕೇಂದ್ರದ ಪಾತ್ರದ ಬಗ್ಗೆ ಗುಪ್ತಚರ ವರದಿ ಮತ್ತು ಸಮಗ್ರ ಮೌಲ್ಯಮಾಪನ ಮಾಡಲಾಗಿದೆ. ಭೂಸೇನೆ, ನೌಕಾಸೇನೆ, ವಾಯುಸೇನೆ ಸೇರಿ ಇನ್ನಿತರ ಎಲ್ಲಾ ಭದ್ರತಾ ಸಂಸ್ಥೆಗಳು, ಏಜೆನ್ಸಿಗಳ ಸಂಯೋಜನೆಯಲ್ಲಿ ಮ್ಯಾಪಿಂಗ್ ಮಾಡಿ ಕಾರ್ಯಾಚರಣೆ ನಡೆಸಲಾಗಿದೆ. ಇದೊಂದು ಅತ್ಯಂತ ವಿನೂತನ ಮತ್ತು ಪ್ರಬಲವಾದ ಕಾರ್ಯಾಚರಣೆ.

-ಈ ದಾಳಿ ಬಳಿಕ ಪಾಕಿಸ್ತಾನದ ಸೇನೆಯ ಸ್ಥಿತಿ ಹೇಗಿದೆ?

ಪಾಕಿಸ್ತಾನದ ನಾಗರಿಕ ಸರ್ಕಾರ ಮತ್ತು ಸೇನೆ ನಡುವೆ ಮೊದಲಿನಿಂದಲೂ ಹೊಂದಣಿಕೆ ಇಲ್ಲ. ಒಬ್ಬರ ಮಾತು ಮತ್ತೊಬ್ಬರು ಕೇಳುವುದಿಲ್ಲ. ಅಂಥ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಒಳಭಾಗದಲ್ಲಿರುವ 12 ಪಿಎಎಫ್‌ ಏರ್‌ಬೇಸ್‌ಗಳು, ಶಸ್ತ್ರಾಸ್ತ್ರ ಘಟಕಗಳು, ಪ್ರಧಾನ ಕಚೇರಿಗಳು, ರನ್‌ವೇ ಧ್ವಂಸ ಮಾಡಲಾಗಿದೆ. ರಾಜಧಾನಿ ಇಸ್ಲಾಮಾಬಾದ್‌ನಿಂದ ಕೇವಲ 10 ಕಿ.ಮೀ. ದೂರದಲ್ಲಿರುವ ನೂರ್ ಖಾನ್ ಏರ್ ಬೇಸ್ ಮೇಲೆ ದಾಳಿ ನಡೆದಿದೆ. ಪಾಕಿಸ್ತಾನದಲ್ಲಿ ಆರೇಳು ಒಳ್ಳೆಯ ನಗರಗಳಿದ್ದು, ಈ ಎಲ್ಲಾ ಕಡೆ ದಾಳಿ ನಡೆದಿರುವ ಕಾರಣ ಆ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಸೇನೆಯ ವಿರುದ್ಧ ಸರ್ಕಾರ ಸಿಟ್ಟಾಗಿದೆ. ಸೇನೆ ಮತ್ತು ಸರ್ಕಾರದ ವಿರುದ್ಧ ನಾಗರಿಕರು ಕುಪಿತರಾಗಿದ್ದಾರೆ. ಹೀಗಾಗಿ, ಪಾಕಿಸ್ತಾನದ ಸ್ಥಿತಿ ಚಿಂತಾಜನಕವಾಗಿದೆ.

-ಕರಾಚಿ ಬಂದರು ಕೂಡ ಭಾರತೀಯ ನೌಕಾಸೇನೆಯ ರಡಾರ್‌ನಲ್ಲಿತ್ತು ಎನ್ನುವುದು ನಿಜವೇ?

1971ರಲ್ಲಿ ಪಾಕಿಸ್ತಾನದ ಪ್ರಮುಖ ಆರ್ಥಿಕ ಕೇಂದ್ರವಾದ ಕರಾಚಿ ಬಂದರನ್ನು ಉಡಾಯಿಸಲಾಗಿತ್ತು. ಅದೇ ರೀತಿ ಈಗಲೂ ಕರಾಚಿ ಬಂದರನ್ನು ಭಾರತೀಯ ಯುದ್ಧ ನೌಕೆ ಮತ್ತು ದಾಳಿ ಹಡಗುಗಳು ಬಂದರನ್ನು ತಮ್ಮ ಟಾರ್ಗೇಟ್ ವ್ಯಾಪ್ತಿಯಲ್ಲಿಟ್ಟುಕೊಂಡು ಸನ್ನದ್ಧ ಸ್ಥಿತಿಯಲ್ಲಿದ್ದವು. ಆದರೆ, ಅಧಿಕೃತವಾಗಿ ಯುದ್ಧ ಘೋಷಣೆ ಆಗಿರಲಿಲ್ಲ. ಪಾಕಿಸ್ತಾನದ ದಾಳಿ ಇನ್ನು ಸ್ವಲ್ಪ ಮುಂದುವರೆದಿದ್ದರೆ ಕರಾಚಿ ಬಂದರು ಸ್ಥಿತಿಯೇ ಬದಲಾಗುತ್ತಿತ್ತು.

-ಭಯೋತ್ಪಾದನೆ ನಿಯಂತ್ರಿಸಲು ಪಾಕಿಸ್ತಾನವನ್ನು ಮತ್ತೊಮ್ಮೆ ವಿಭಜಿಸಬೇಕು ಎಂಬ ಮಾತಿದೆ?

ಬಲೂಚಿಸ್ತಾನವನ್ನು ಪ್ರತ್ಯೇಕ ರಾಷ್ಟ್ರ ಮಾಡಬೇಕು ಎಂದು ಬಲೂಚಿಗಳು ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾರೆ. ಮತ್ತೊಂದೆಡೆ ಖೈಬರ್ ಪ್ರಾಂತ್ಯದಲ್ಲಿ ಉಗ್ರರು 80ಕ್ಕೂ ಹೆಚ್ಚು ಸೈನಿಕರನ್ನು ಹೊಡೆದಿದ್ದಾರೆ. ಇನ್ನು ಗಿಲ್ಗಿಟ್ ಬಾಲ್ಟಿಸ್ತಾನದಲ್ಲಿ ಸಮಸ್ಯೆ ಮತ್ತು ಸಿಂಧ್ ಪ್ರಾಂತ್ಯದಲ್ಲಿ ಬಿಗುವಿನ ವಾತಾವರಣ ಇದೆ. ಪಾಕ್ ಆಕ್ರಮಿತ ಕಾಶ್ಮೀರದಿಂದಲೇ ಹೆಚ್ಚಿನ ಉಗ್ರರ ಚಟುವಟಿಕೆ ನಡೆಯುತ್ತವೆ. ಹೀಗಾಗಿ, ವಿಭಜನೆಯಾದರೆ ಭಯೋತ್ಪಾದನೆ ನಿಯಂತ್ರಣಕ್ಕೆ ಬರಬಹುದು.

-ಈ ಕಾರ್ಯಾಚರಣೆ, ಏರ್‌ಸ್ಟ್ರೈಕ್‌ಗಳಿಂದ ಭಾರತದ ಗಡಿಯ ಜನಜೀವನದ ಮೇಲೂ ಪ್ರಭಾವ ಬಿದ್ದಿಲ್ಲವೇ?

ನಮ್ಮ ಗಡಿಯಲ್ಲಿ ಪ್ರಬಲವಾದ ವೈಮಾನಿಕ ರಕ್ಷಣಾ ವ್ಯವಸ್ಥೆ ಇರುವ ಕಾರಣ ಅದರಿಂದ ನಮಗೆ ಹೆಚ್ಚು ನಷ್ಟವಾಗಿಲ್ಲ. ಪಾಕಿಸ್ತಾನಿ ಸೇನೆ ಪರೋಕ್ಷವಾಗಿ ಭಯೋತ್ಪಾದಕರಿಗೆ ತರಬೇತಿ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತದೆ ಎನ್ನುವುದು ಜಗತ್ತಿಗೆ ಗೊತ್ತಿತ್ತು. ಈಗ ಸಾಕ್ಷ್ಯ ಸಹಿತ ಸಾಬೀತಾಗಿದೆ. ಪಾಕಿಸ್ತಾನಿ ಉಗ್ರರ ಮೇಲೆ ಭಾರತ ದಾಳಿ ಮಾಡಿದಾಗ 250 ಕಿ.ಮೀ.ಗೂ ಹೆಚ್ಚು ಉದ್ದದ ಗಡಿಯಲ್ಲಿ ನಮ್ಮ ನಾಗರಿಕ ಪ್ರದೇಶಗಳು, ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೇನೆಯಿಂದ ದಾಳಿ ಮಾಡಲಾಗಿದೆ. ಆದರೂ ನಮ್ಮನ್ನು ನಾವು ಉತ್ತಮವಾಗಿ ರಕ್ಷಿಸಿಕೊಂಡಿದ್ದೇವೆ.

-ಪಾಕಿಸ್ತಾನದಲ್ಲೂ ಆಂತರಿಕವಾಗಿ ಈ ಯುದ್ದಕ್ಕೆ ವಿರೋಧವಿತ್ತಂತೆ?

ಈ ಹಿಂದೆ ನಡೆದ ಯುದ್ಧಗಳಲ್ಲಿ ಭಾಗಿಯಾಗಿದ್ದ ಸೇನಾಧಿಕಾರಿಗಳು ಸೇರಿ ಅನೇಕ ನಿವೃತ್ತ ಸೇನಾಧಿಕಾರಿಗಳು ಭಾರತದ ವಿರುದ್ಧ ಕದನ ತಪ್ಪು ಎಂದು ಹೇಳಿದ್ದಾರೆ. ಬಲಾಬಲ ನೋಡಿದಾಗ ಭಾರತದೊಂದಿಗೆ ಪಾಕಿಸ್ತಾನವನ್ನು ಯಾವುದೇ ಕಾರಣಕ್ಕೂ ಹೋಲಿಕೆ ಮಾಡಲು ಆಗುವುದಿಲ್ಲ. ನಮ್ಮ ಆರ್ಥಿಕ ಸ್ಥಿತಿಯು ಸರಿಯಿಲ್ಲ. ಹೀಗಾಗಿ, ಯುದ್ಧ ಬೇಡ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.

-ಈ ಕಾರ್ಯಾಚರಣೆ ಪಾಕಿಸ್ತಾನದ ಮೇಲೆ ಆರ್ಥಿಕವಾಗಿ ಯಾವ ಪರಿಣಾಮ ಬೀರಿರಬಹುದು?

ಯುದ್ಧ ಎಂದಿಗೂ ದುಬಾರಿ ವ್ಯವಹಾರ. ಇತ್ತೀಚೆಗೆ ಐಎಂಎಫ್‌ನಿಂದ ಸಾಲ ಪಡೆದಿದೆ. ಯಾವುದೇ ರಾಷ್ಟ್ರಗಳೊಂದಿಗೆ ಒಳ್ಳೆಯ ಸಂಬಂಧ ಇಲ್ಲ. ಕತಾರ್‌ನಲ್ಲಿ ಪಿಎಸ್‌ಎಲ್ ಪಂದ್ಯಾವಳಿ ಆಯೋಜಿಸುತ್ತೇವೆ ಎಂದು ಪಾಕಿಸ್ತಾನ ಕೇಳಿದಾಗ ತಿರಸ್ಕಾರದ ಉತ್ತರ ಬಂದಿದೆ. ಆರ್ಥಿಕವಾಗಿ, ನೈತಿಕವಾಗಿ ಮಿಲಿಟರಿ ಶಕ್ತಿ ಸೇರಿ ಎಲ್ಲಾ ರೀತಿಯಿಂದಲೂ ಪಾಕಿಸ್ತಾನ ಅಧೋಗತಿಗೆ ಇಳಿದಿದೆ. ಜಲ ಒಪ್ಪಂದ ರದ್ದು ಮಾಡಿರುವುದರಿಂದ ಆ ದೇಶದ ಕೃಷಿ ಮತ್ತಿತರ ಚಟುವಟಿಕೆಗಳಿಗೆ ಪೆಟ್ಟು ಬೀಳಲಿದೆ. ದೀರ್ಘಾವಧಿಯಲ್ಲಿ ಪಾಕಿಸ್ತಾನ ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತದೆ. ಗಡಿ ಬಂದ್ ಮಾಡಿರುವ ಕಾರಣ ನಮ್ಮ ದೇಶದಿಂದ ರಫ್ತಾಗುವ ಔಷಧೀಯ ಸಾಮಗ್ರಿಗಳು, ಅಗತ್ಯ ವಸ್ತುಗಳಿಗೆ ಕೊರತೆಯಾಗುತ್ತದೆ. ವಾಯುಪ್ರದೇಶ ಬಳಕೆ ಬಂದ್ ಆಗಿ ಆದಾಯ ಸಂಗ್ರಹ ಕುಸಿತವಾಗಿದೆ.

-ಯುದ್ಧ ಸ್ಥಿತಿಯಿಂದ ಗಡಿಯಲ್ಲಿರುವ ಜನರಿಗೆ ಯಾವ ರೀತಿಯ ಸಮಸ್ಯೆಗಳು ಎದುರಾಗುತ್ತವೆ?

ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯಗಳ ಗಡಿ ಭಾಗದ ಜನರಿಗೆ ಯಾವಾಗಲೂ ಭೀತಿಯ ವಾತಾವರಣ ಇರುತ್ತದೆ. ವಿದ್ಯುತ್, ನೀರು, ಆಸ್ಪತ್ರೆ, ಅಗತ್ಯ ವಸ್ತುಗಳ ಸಮಸ್ಯೆಯಾಗುತ್ತದೆ. ಜೀವ ಹಾನಿ ತಪ್ಪಿಸಲು ಬಂಕರ್‌ಗಳನ್ನು ನಿರ್ಮಿಸಲಾಗುತ್ತದೆ. ನಷ್ಟ ಪರಿಹಾರ ಭರಿಸುವ ವ್ಯವಸ್ಥೆಯು ಇದೆ. ಜನವಸತಿ ಪ್ರದೇಶಗಳ ಮೇಲೆ ಶೆಲ್ ದಾಳಿ ಮೂಲಕ ರಕ್ಷಣಾ ಪಡೆಗಳ ಗಮನ ಬೇರೆಡೆ ಸೆಳೆದು ಉಗ್ರರು ನಮ್ಮ ದೇಶಕ್ಕೆ ನುಸುಳಲು ಪಾಕ್ ನೆರವಾಗುತ್ತದೆ.

-ಭವಿಷ್ಯದಲ್ಲಿ ಭಾರತ- ಪಾಕಿಸ್ತಾನದ ಸಂಬಂಧಗಳು ಏನಾಗಬಹುದು?

ಎರಡೂ ರಾಷ್ಟ್ರಗಳ ನಡುವೆ ಸಂಬಂಧ ಹಾಳಾಗಲು ಭಯೋತ್ಪಾದನೆಯೇ ಕಾರಣ. ಯುದ್ಧ ಪರಿಸ್ಥಿತಿ ನಿರ್ಮಾಣವಾಗಿರುವುದು ಅದೇ ಕಾರಣಕ್ಕೆ. ಪಾಕಿಸ್ತಾನ ಭಯೋತ್ಪಾದನೆ ತ್ಯಜಿಸಿದರೆ ಎರಡೂ ರಾಷ್ಟ್ರಗಳ ನಡುವೆ ಸಂಬಂಧ ವೃದ್ಧಿಯಾಗಿ ಪಾಕಿಸ್ತಾನ ಆರ್ಥಿಕವಾಗಿ ಅಭಿವೃದ್ಧಿ ಕಾಣುತ್ತದೆ. ಈ ಭಾಗದಲ್ಲಿ ಶಾಂತಿ ನೆಲೆಸುತ್ತದೆ.

-ಕಾಶ್ಮೀರ ಪ್ರವಾಸಕ್ಕೆ ಹಿನ್ನಡೆಯಾಗಿದೆ. ಭಾರತೀಯರು ಕಾಶ್ಮೀರದೊಂದಿಗೆ ನಿಲ್ಲಲು ಕಾಶ್ಮೀರ ಪ್ರವಾಸ ಮಾಡಬೇಕೇ ಅಥವಾ ಬೇಡವೇ?

ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಸುಂದರ ಪ್ರವಾಸಿ ತಾಣ. 2019ರ ಬಳಿಕ ಪಹಲ್ಗಾಂ ದಾಳಿವರೆಗೆ ಯಾವುದೇ ದಾಳಿ ನಡೆದಿರಲಿಲ್ಲ. ಭಾರತದ ಇತರ ಭಾಗಗಳಂತೆ ಕಾಶ್ಮೀರ ಅಭಿವೃದ್ಧಿಯಾಗಿ ಅಲ್ಲಿನ ಜನ ಎಲ್ಲಾ ಭಾರತೀಯರ ಜೊತೆ ಬೆರೆತರೆ ಭಯೋತ್ಪಾದನೆ ನಿಲ್ಲುತ್ತದೆ. ಅಲ್ಲಿನ ಜನ ಬೇರೆ ಭಾಗಗಳಿಗೆ ಬರಬೇಕು. ದೇಶದ ಇತರ ಭಾಗಗಳ ಜನ ಅಲ್ಲಿಗೆ ಹೋಗಬೇಕು. ಈಗಾಗಲೇ ಅಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಕಲ್ಲು ತೂರಾಟ ಪೂರ್ತಿಯಾಗಿ ನಿಂತು ಹೋಗಿದೆ. ಜನರ ಕೈಗೆ ಕೆಲಸ ಸಿಕ್ಕರೆ ಅವರು ಬೇರೆ ವಿಚಾರಗಳ ಕಡೆ ಕಡಿಮೆ ಗಮನ ಹರಿಸುತ್ತಾರೆ. ಹೀಗಾಗಿ, ಪ್ರವಾಸೋದ್ಯಮ ಬೆಳೆಯಬೇಕು. ದೇಶದ ಜನರು ಕಾಶ್ಮೀರ ಪ್ರವಾಸ ಮಾಡಬಹುದು.