ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರ ಕಾರ್ಮಿಕ ಸಂಘಗಳ ಒಕ್ಕೂಟವು ಕರೆ ನೀಡಿದ್ದ ಬಂದ್ ಅನ್ನು ಬೆಂಬಲಿಸಿ ರಾಜ್ಯದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಹಲವು ಸಂಘಟನೆಗಳು, ಪಕ್ಷಗಳು ಹೋರಾಟಕ್ಕೆ ಕರೆ ನೀಡಿದ್ದರೂ ಜನಜೀವನ ಎಂದಿನಂತೆ ಇತ್ತು. ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಸಾವಿರಾರು ಶ್ರಮಿಕರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. ಎಲ್ಲೆಲ್ಲೂ ಕೆಂಪು ಬಾವುಟಗಳು ರಾರಾಜಿಸಿದವು.
ಶಾಲಾ-ಕಾಲೇಜು, ಸರ್ಕಾರಿ ಮತ್ತು ಖಾಸಗಿ ಕಚೇರಿಗಳು, ಕಾರ್ಖಾನೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಎಂದಿನಂತೆ ಇದ್ದು ಸಂಚಾರಕ್ಕೆ ಯಾವುದೇ ಅಡ್ಡಿ ಉಂಟಾಗಲಿಲ್ಲ. ಅಂಗಡಿ, ಮಾಲ್, ಚಲನಚಿತ್ರ ಮಂದಿರ, ಎಪಿಎಂಸಿಗಳ ವಹಿವಾಟಿಗೆ ಧಕ್ಕೆ ಉಂಟಾಗಲಿಲ್ಲ. ಬಂದ್ ಜನಜೀವನದ ಮೇಲೆ ಯಾವುದೇ ಪರಿಣಾಮ ಉಂಟು ಮಾಡಲಿಲ್ಲ.ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ
ಪುರಭವನದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೂ ರ್‍ಯಾಲಿ ನಡೆಸಲು ಮುಖಂಡರು ಉದ್ದೇಶಿಸಿದ್ದರಾದರೂ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ಆದ್ದರಿಂದ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ರಸ್ತೆಗಿಳಿದರೆ ವಶಕ್ಕೆ ಪಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಅಧ್ಯಕ್ಷೆ ಎಸ್.ವರಲಕ್ಷ್ಮೀ ಮಾತನಾಡಿ, ಕೆಲಸದ ಅವಧಿಯನ್ನು 8 ರಿಂದ 12 ಗಂಟೆಗೆ ವಿಸ್ತರಿಸಬಾರದು. ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ದುಡಿಮೆಗೆ ಅವಕಾಶ ನೀಡಿರುವ ಕಾರ್ಖಾನೆ ಕಾಯ್ದೆಗೆ ಮಾಡಿರುವ ತಿದ್ದುಪಡಿಯನ್ನು ರಾಜ್ಯ ಸರ್ಕಾರ ತಕ್ಷಣ ವಾಪಸ್ ಪಡೆಯಬೇಕು. ಕಾರ್ಮಿಕರ ಮೇಲೆ ದೌರ್ಜನ್ಯ ಉಂಟಾಗುವ ಲೇಬರ್ ಕೋಡ್ ಅನ್ನು ಕೇಂದ್ರ ಸರ್ಕಾರ ಶೀಘ್ರವೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಸ್ವಾತಂತ್ರ್ಯ ಉದ್ಯಾನವನಕ್ಕೆ ಆಗಮಿಸಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮನವಿ ಸ್ವೀಕರಿಸಬೇಕು ಎಂದು ಕಾರ್ಮಿಕರು ಪಟ್ಟು ಹಿಡಿದಿದ್ದರು. ಆದರೆ ಸಚಿವರು ಆಗಮಿಸದೇ ಇದ್ದುದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಯಿತು.