ಕರ್ನಾಟಕದಲ್ಲಿ ತಲೆದೋರಿದ ಶೈಕ್ಷಣಿಕ ಬಿಕ್ಕಟ್ಟು

ಸಾರಾಂಶ

ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ತಲೆದೋರಿರುವ ಸಮಸ್ಯೆಗಳನ್ನು ಮೂರು ರೀತಿಯಲ್ಲಿ ವಿಂಗಡಿಸಬಹುದು. ಶಿಕ್ಷಣ ಸಚಿವಾಲಯದ ವೈಫಲ್ಯ, ಆಡಳಿತಾತ್ಮಕ ಮತ್ತು ಅಧಿಕಾರಿ ವರ್ಗದ ವೈಫಲ್ಯ ಹಾಗೂ ರಾಜ್ಯದಲ್ಲಿ ಜಾರಿಗೆ ಬಂದಿರುವ ಶಿಕ್ಷಣಕ್ಕೆ ಸಂಬಂಧಿಸಿದ ದೋಷಪೂರಿತ ನೀತಿಗಳು

ಸುರಭಿ ಹೊದಿಗೆರೆ

ಬಿಜೆಪಿ ವಕ್ತಾರೆ

-----

ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ತಲೆದೋರಿರುವ ಸಮಸ್ಯೆಗಳನ್ನು ಮೂರು ರೀತಿಯಲ್ಲಿ ವಿಂಗಡಿಸಬಹುದು. ಶಿಕ್ಷಣ ಸಚಿವಾಲಯದ ವೈಫಲ್ಯ, ಆಡಳಿತಾತ್ಮಕ ಮತ್ತು ಅಧಿಕಾರಿ ವರ್ಗದ ವೈಫಲ್ಯ ಹಾಗೂ ರಾಜ್ಯದಲ್ಲಿ ಜಾರಿಗೆ ಬಂದಿರುವ ಶಿಕ್ಷಣಕ್ಕೆ ಸಂಬಂಧಿಸಿದ ದೋಷಪೂರಿತ ನೀತಿಗಳು.

ಕರ್ನಾಟಕದ ಶಿಕ್ಷಣ ಕ್ಷೇತ್ರ ಬಿಕ್ಕಟ್ಟಿನಲ್ಲಿದೆ. ಇತ್ತೀಚಿನ ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ತೇರ್ಗಡೆಯ ಪ್ರಮಾಣ ತೀವ್ರ ಕುಸಿತ ಕಂಡಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನದಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್ಇಎಬಿ) ಅರ್ಹತೆಯ ಅಂಕಗಳನ್ನು 35% ರಿಂದ 25%ಕ್ಕೆ ಇಳಿಸಲು ಮತ್ತು ಮೂರು ಪರೀಕ್ಷೆಗಳಲ್ಲಿ ಎಲ್ಲಾ ವಿಷಯಗಳಿಗೂ ಗ್ರೇಸ್ ಮಾರ್ಕ್‌ಗಳನ್ನು 10%ರಿಂದ 20%ಕ್ಕೆ ಹೆಚ್ಚಿಸಲು ನಿರ್ಧರಿಸಿತ್ತು. ವಿದ್ಯಾರ್ಥಿಗಳ ಸಾಮರ್ಥ್ಯದಲ್ಲಿ ಉಂಟಾದ ತೀವ್ರ ಕುಸಿತವನ್ನು ಸರಿದೂಗಿಸಲು ಜಾರಿಗೆ ತರಲಾದ ಕ್ರಮ ಇದಾಗಿತ್ತು. ಹೀಗಾಗಿ ವಾಸ್ತವಾಂಶವನ್ನು ಮರೆಮಾಚುವ ಕಾರ್ಯ ಯಶಸ್ವಿಯಾಗಿ ನಡೆದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ತೇರ್ಗಡೆಯ ಪ್ರಮಾಣವು 30% ಕುಸಿದಿದೆ. 2023ರಲ್ಲಿ ಶೇ.83.89ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿ ಶೇ.73.40ರಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಇದು ಆಘಾತಕಾರಿ ಬೆಳವಣಿಗೆ.

ಗ್ರೇಸ್ ಮಾರ್ಕ್‌ಗಳ ಮೂಲಕ ತೇರ್ಗಡೆ ಪ್ರಮಾಣವನ್ನು ಹೆಚ್ಚಿಸುವ ಹತಾಶ ಕ್ರಮಗಳ ಹೊರತಾಗಿಯೂ ಫಲಿತಾಂಶಗಳು ನಿರಾಶಾದಾಯಕವಾಗಿಯೇ ಇವೆ. ಇದು ರಾಜ್ಯದ ಈಗಿನ ಶೈಕ್ಷಣಿಕ ಕ್ಷೇತ್ರಕ್ಕೆ ಹಿಡಿದ ಕನ್ನಡಿ. ವಿದ್ಯಾರ್ಥಿಗಳ ಮೇಲೆ ಇದು ತೀವ್ರ ಪರಿಣಾಮ ಬೀರಲಿದೆ. ನಿಜವಾದ ತೇರ್ಗಡೆ ಪ್ರಮಾಣವು ಕೇವಲ 54% ರಷ್ಟಿದ್ದು, ಈ ಕುಸಿತವು ನಾಲ್ಕು ವರ್ಷಗಳಲ್ಲಿನ ಅತ್ಯಂತ ಕಡಿಮೆ ತೇರ್ಗಡೆ ಪ್ರಮಾಣವನ್ನು ಸೂಚಿಸುತ್ತದೆ. ಮೊದಲು ಅನುತ್ತೀರ್ಣರಾಗಿದ್ದ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್‌ಗಳನ್ನು ನೀಡಿ ತೇರ್ಗಡೆ ಪ್ರಮಾಣವನ್ನು ಕೃತಕವಾಗಿ 73%ಕ್ಕೆ ಹೆಚ್ಚಿಸಲಾಗಿದೆ. ಆತಂಕದ ವಿಷಯವೆಂದರೆ, ಕರ್ನಾಟಕದಾದ್ಯಂತ 78 ಶಾಲೆಗಳು ಶೂನ್ಯ ತೇರ್ಗಡೆ ಪ್ರಮಾಣವನ್ನು ದಾಖಲಿಸಿವೆ. ಅಂತಹ ಮೂರು ಶಾಲೆಗಳು ಬೆಂಗಳೂರಿನಲ್ಲಿವೆ.

ಇದಲ್ಲದೆ, ಸಾಕಷ್ಟು ಸಿದ್ಧತೆಯಿಲ್ಲದೆ 10ನೇ ತರಗತಿ ಮತ್ತು ಪಿಯುಸಿಗೆ (ಪ್ರಿ-ಯೂನಿವರ್ಸಿಟಿ ಕೋರ್ಸ್) ಮೂರು ಪರೀಕ್ಷೆಗಳನ್ನು ಪರಿಚಯಿಸಿರುವುದು ವಿದ್ಯಾರ್ಥಿಗಳನ್ನು ಒತ್ತಡಕ್ಕೆ ಸಿಲುಕಿಸಿದೆ.

ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ತಲೆದೋರಿರುವ ಸಮಸ್ಯೆಗಳನ್ನು ಮೂರು ರೀತಿಯಲ್ಲಿ ವಿಂಗಡಿಸಬಹುದು. ಶಿಕ್ಷಣ ಸಚಿವಾಲಯದ ವೈಫಲ್ಯ, ಆಡಳಿತಾತ್ಮಕ ಮತ್ತು ಅಧಿಕಾರಿ ವರ್ಗದ ವೈಫಲ್ಯ ಹಾಗೂ ರಾಜ್ಯದಲ್ಲಿ ಜಾರಿಗೆ ಬಂದಿರುವ ಶಿಕ್ಷಣಕ್ಕೆ ಸಂಬಂಧಿಸಿದ ದೋಷಪೂರಿತ ನೀತಿಗಳು. ಈ ವೈಫಲ್ಯಗಳ ಪರಿಣಾಮಗಳು ಅನೇಕ ರೀತಿಯಲ್ಲಿರುತ್ತವೆ. ಮುಂಬರುವ ಬ್ಯಾಚ್‌ಗಳಿಗೆ ಪರಿಸ್ಥಿತಿ ಸುಧಾರಿಸಬೇಕು ಅಂದರೆ ಸರ್ಕಾರ ಕಠಿಣ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲೇಬೇಕು.

ಪಠ್ಯಕ್ರಮದ ರಚನೆಯಲ್ಲಿ ಸಮಸ್ಯೆ

ರಾಜ್ಯದಲ್ಲಿ ರಾಜ್ಯ ಪಠ್ಯಕ್ರಮದಡಿಯಲ್ಲಿ 1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರಲ್ಲಿ 9 ಲಕ್ಷ ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದರು. ಪಠ್ಯಕ್ರಮ ಮತ್ತು ಇತರ ಅಂಶಗಳ ರಚನೆಯಲ್ಲಿ ಶ್ರದ್ಧೆಯ ಕೊರತೆ, ಅದರ ಪರಿಣಾಮವಾಗಿ ತೆಗೆದುಕೊಳ್ಳಲಾದ ನಿರ್ಲಕ್ಷ್ಯದ ನಿರ್ಧಾರಗಳು, ವಿದ್ಯಾರ್ಥಿಗಳಿಗೆ ಸಿದ್ಧರಾಗಲು ಅವಕಾಶ ನೀಡದೇ ಅವರನ್ನು ಆತಂಕಕ್ಕೆ ದೂಡುವ ಕ್ರಮಗಳಿಂದಾಗಿ ಈ ಸಲ ಪರೀಕ್ಷೆಯಲ್ಲಿ ತೀವ್ರ ಹಿನ್ನಡೆಯಾಯಿತು. ಈ ಹಿಂದೆ, ಶಿಕ್ಷಣ ಮತ್ತು ಪಠ್ಯಕ್ರಮದ ಬಗೆಗಿನ ನಿರ್ಧಾರಗಳನ್ನು ಇಲಾಖಾ ಮಟ್ಟದಲ್ಲಿ ತಜ್ಞರು ತೆಗೆದುಕೊಳ್ಳುತ್ತಿದ್ದರು. ಆದರೆ, ಕನ್ನಡದಿಂದ 10 ಮತ್ತು ಸಮಾಜ ವಿಜ್ಞಾನದಿಂದ 10 ಪಾಠಗಳನ್ನು ತೆಗೆದುಹಾಕುವುದೂ ಒಳಗೊಂಡ ಮಹತ್ವದ ಬದಲಾವಣೆಗಳೂ ಸೇರಿದಂತೆ ಈ ಕೆಲವು ನಿರ್ಧಾರಗಳನ್ನು ಈಗ ಸಚಿವ ಸಂಪುಟದಲ್ಲಿ ತೆಗೆದುಕೊಳ್ಳಲಾಗುತ್ತಿದೆ.

ಅಧಿಕಾರಿ ವರ್ಗದ ವೈಫಲ್ಯಗಳು

ಆಡಳಿತಾತ್ಮಕ ಮತ್ತು ಅಧಿಕಾರಿ ವರ್ಗದ ವೈಫಲ್ಯಗಳು ಶೈಕ್ಷಣಿಕ ಬಿಕ್ಕಟ್ಟನ್ನು ಉಲ್ಬಣಗೊಳಿಸಿವೆ. ಇವು ವಿದ್ಯಾರ್ಥಿಗಳ ಮೇಲೆ ನೇರವಾಗಿ ಪರಿಣಾಮ ಬೀರಿವೆ. ಶಾಲೆಗಳಲ್ಲಿ ಪಾಠಗಳು ವಿದ್ಯಾರ್ಥಿಗಳನ್ನು ತಲುಪದೇ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ) ಜಾರಿಗೊಳಿಸುವಿಕೆಯ ಬಗ್ಗೆ ವ್ಯಾಪಕವಾದ ಗೊಂದಲವೇರ್ಪಟ್ಟಿದೆ. ಅಧಿಕಾರಿಗಳು ತಮಗೆ ತೋಚಿದಂತೆ ಪರೀಕ್ಷೆಗಳನ್ನು ನಿಗದಿಪಡಿಸಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತಲೆನೋವುಂಟುಮಾಡಿದೆ. ಇದು ಅನೇಕ ಹಂತಗಳಲ್ಲಿ ಹೈಕೋರ್ಟ್, ಸುಪ್ರೀಂಕೋರ್ಟ್‌ ಸೇರಿದಂತೆ ಬೇರೆ ಬೇರೆ ನ್ಯಾಯಾಲಯಗಳ ಮಧ್ಯಪ್ರವೇಶಕ್ಕೆ ಕಾರಣವಾಗಿದೆ. ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟತೆ ಮತ್ತು ದೃಢ ನಿರ್ಧಾರದ ಕೊರತೆಯು ಯಾವ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಮತ್ತು ಅವುಗಳನ್ನು ಯಾರು ಮೌಲ್ಯಮಾಪನ ಮಾಡುತ್ತಾರೆನ್ನುವ ಬಗ್ಗೆ ಗೊಂದಲ ಸೃಷ್ಟಿಸಿದೆ. 10ನೇ ತರಗತಿ ಮತ್ತು ಪಿಯುಸಿಗೆ ಮೂರು ಪರೀಕ್ಷೆಗಳನ್ನು ನಡೆಸುವ ವ್ಯವಸ್ಥೆಯನ್ನು ಆ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಉಂಟಾಗುವ ಒತ್ತಡ ಮತ್ತು ಗೊಂದಲವನ್ನು ಪರಿಗಣಿಸದೆ ಜಾರಿಗೆ ತರಲಾಗಿದೆ. ಈ ಪರೀಕ್ಷೆಗಳಿಗೆ ಮಾಡಿಕೊಳ್ಳಬೇಕಾಗಿರುವ ತಯಾರಿಗಳು ಹಾಗೂ ಅಗತ್ಯವಿರುವ ಖರ್ಚುಗಳ ಬಗ್ಗೆ ಇಲಾಖೆಗೆ ಯಾವುದೇ ಸ್ಪಷ್ಟತೆಯಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗಿದೆ. ವಿದ್ಯಾರ್ಥಿಗಳು ಒಂದು, ಎರಡು ಮತ್ತು ಮೂರು ಪರೀಕ್ಷೆಗಳಿಗೆ ಅನುಕ್ರಮವಾಗಿ ₹410, ₹510 ಮತ್ತು ₹710 ಪಾವತಿಸಬೇಕಾಗಿದೆ.

ಶಿಕ್ಷಣ ನೀತಿಯ ವೈಫಲ್ಯ

ರಾಜ್ಯದಲ್ಲಿ ಶಿಕ್ಷಣ ನೀತಿಗಳು ವಿದ್ಯಾರ್ಥಿಗಳ ಸಂಕಷ್ಟಗಳನ್ನು ಮತ್ತಷ್ಟು ಹೆಚ್ಚಿಸಿವೆ. ವೆಬ್‌ಕಾಸ್ಟಿಂಗ್ ಅನ್ನು ಕೊನೆಯ ಕ್ಷಣದಲ್ಲಿ ಪರಿಚಯಿಸಿದ್ದು 10ನೇ ತರಗತಿ ಪರೀಕ್ಷೆಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿತು. ವೆಬ್‌ಕಾಸ್ಟಿಂಗ್ ಬಗ್ಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿ ಇರಲಿಲ್ಲ. ಅದೇ ರೀತಿ, ಮೌಲ್ಯಮಾಪನ ಮತ್ತು ತರಬೇತಿಯ ಕೊರತೆಯಿಂದಾಗಿ ವ್ಯಾಪಕ ಗೊಂದಲ ಮತ್ತು ಆತಂಕದ ವಾತಾವರಣ ಸೃಷ್ಟಿಯಾಯಿತು. ಈ ಹೊಸ ಉಪಕ್ರಮಗಳ ಬಗ್ಗೆ ಶಿಕ್ಷಕರು, ಶಿಕ್ಷಣ ತಜ್ಞರು ಮತ್ತು ರಾಜ್ಯ ಶಿಕ್ಷಣ ಇಲಾಖೆಗೆ ಯಾವುದೇ ಮಾಹಿತಿ ಸಿಗದಿದ್ದರಿಂದ ಪರೀಕ್ಷೆಗಳನ್ನು ನಡೆಸುವವರು ಅಸಮಾಧಾನಗೊಳ್ಳುವ ಪರಿಸ್ಥಿತಿ ಎದುರಾಯಿತು. ಪಾಸ್ ಆಗಲು ಬೇಕಾದ ಅಂಕಗಳನ್ನು ಕೆಎಸ್ಇಇ ಮೂಲಕ ಶೇ.35ರಿಂದ 25ಕ್ಕೆ ಇಳಿಸುವ ನಿರ್ಧಾರವು ಇಲಾಖೆಯ ವೈಫಲ್ಯಗಳನ್ನು ಮರೆಮಾಚುವ ಕೊನೆಯ ಕ್ಷಣದ ಪ್ರಯತ್ನವಾಗಿತ್ತು. ತೇರ್ಗಡೆಯಾಗುವ ವಿದ್ಯಾರ್ಥಿಗಳ ಕುಸಿಯುತ್ತಿರುವ ಸಂಖ್ಯೆಯ ಸಮಸ್ಯೆಯನ್ನು ಪರಿಹರಿಸುವ ಬದಲು ಈ ಕ್ರಮವನ್ನು ತೆಗೆದುಕೊಂಡಿರುವುದು ಶಿಕ್ಷಣ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಶಿಕ್ಷಣ ಇಲಾಖೆಯ ಸಾಮರ್ಥ್ಯದ ಕೊರತೆಯನ್ನು ತೋರಿಸುತ್ತಿದೆ.

ವಿದ್ಯಾರ್ಥಿಗಳ ಮೇಲೆ ಪರಿಣಾಮ

ಈ ಶೈಕ್ಷಣಿಕ ವೈಫಲ್ಯಗಳ ಪರಿಣಾಮಗಳು ಅನೇಕ ರೀತಿಯಲ್ಲಿರುತ್ತವೆ. ವಿದ್ಯಾರ್ಥಿಗಳು ಮತ್ತು ಪೋಷಕರು ಗೊಂದಲ ಮತ್ತು ಆತಂಕದಲ್ಲಿದ್ದಾರೆ. ಸಾಕಷ್ಟು ಸಿದ್ಧತೆಯಿಲ್ಲದೆ 10ನೇ ತರಗತಿ ಮತ್ತು ಪಿಯುಸಿಗೆ ಮೂರು ಪರೀಕ್ಷೆಗಳನ್ನು ಪರಿಚಯಿಸಿರುವುದು ವಿದ್ಯಾರ್ಥಿಗಳನ್ನು ಒತ್ತಡಕ್ಕೆ ಸಿಲುಕಿಸಿದೆ. ಸೂಕ್ತವಾಗಿ ತಯಾರಾಗದ ಮತ್ತು ತರಬೇತಿ ಪಡೆಯದ ಶಿಕ್ಷಕರು, ಯೋಜಿಸಿರದ ಹೆಚ್ಚುವರಿ ವೆಚ್ಚಗಳು ಮತ್ತು ಲಭ್ಯವಿರುವ ಸಂಪನ್ಮೂಲಗಳು ಮತ್ತು ಕಾರ್ಯವಿಧಾನಗಳನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿನ ವೈಫಲ್ಯವು ಸಮಸ್ಯೆಯನ್ನು ಉಲ್ಬಣಗೊಳಿಸಿದೆ. 10ನೇ ತರಗತಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣವಿದೆ. ಸರಿಯಾದ ಮೌಲ್ಯಮಾಪನ ಮಾಡಿದಲ್ಲಿ ಅದು ಕಾರ್ಯಕ್ಷಮತೆಯ ಕುಸಿತದ ನಿಜವಾದ ಆಳವನ್ನು ಬಹಿರಂಗಪಡಿಸುತ್ತದೆ ಎನ್ನುವ ಚಿಂತೆ ಅವರ ಆತಂಕವನ್ನು ಹೆಚ್ಚಿಸಿದೆ. ವೆಬ್‍ಕಾಸ್ಟಿಂಗ್‍ಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪೂರ್ವ ತರಬೇತಿ ಮತ್ತು ಮಾಹಿತಿಯ ಕೊರತೆಯು ಬಹಳಷ್ಟು ಗೊಂದಲಗಳಿಗೆ ಕಾರಣವಾಗಿದೆ. ಶಿಕ್ಷಕರಲ್ಲೂ ಅಸಮಾಧಾನ ಉಂಟಾಗಿದ್ದು, ಅವರು ಪರೀಕ್ಷೆ ನಡೆಯುವಾಗ ತಮ್ಮ ಉದ್ಯೋಗದ ಭದ್ರತೆಯ ಬಗ್ಗೆ ಚಿಂತೆ ಮಾಡುವಂತಾಗಿದೆ.

ಎಸ್ಎಸ್ಎಲ್‌ಸಿ ತೇರ್ಗಡೆಯ ಪ್ರಮಾಣದಲ್ಲಿನ ಗಮನಾರ್ಹ ಕುಸಿತ, ಗ್ರೇಸ್ ಮಾರ್ಕ್ಸ್ ಮೂಲಕ ಉತ್ತೀರ್ಣ ಸಂಖ್ಯೆಯನ್ನು ಕೃತಕವಾಗಿ ಹೆಚ್ಚಿಸುವುದು ಮತ್ತು ಅಧಿಕಾರಿಗಳ ವೈಫಲ್ಯಗಳು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿವೆ. ದೂರದೃಷ್ಟಿಯಿರದ ನೀತಿಗಳು ಮತ್ತು ಸರಿಯಾದ ಯೋಜನೆಯ ಕೊರತೆಯು ಶೈಕ್ಷಣಿಕ ಬಿಕ್ಕಟ್ಟಿಗೆ ಕಾರಣವಾಗಿದ್ದು, ಇದಕ್ಕೆ ತಕ್ಷಣದ ಮತ್ತು ಪರಿಣಾಮಕಾರಿಯಾದ ಪರಿಹಾರದ ಅಗತ್ಯವಿದೆ. ಶಿಕ್ಷಣ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗುವಂತಾಗಲು ಕೇಂದ್ರೀಕೃತವಾದ ಹಾಗೂ ತಜ್ಞರಿಂದ ಜಾರಿಗೊಳ್ಳುವ ವಿಧಾನವು ತಕ್ಷಣದ ಅಗತ್ಯವಾಗಿದೆ.

Share this article