ಬೆಂಗಳೂರಿನ ಗಾಳಿಯ ಗುಣಮಟ್ಟ ಹಾಳಾಗುತ್ತಿದ್ದು, ಗಾಳಿಯ ಗುಣಮಟ್ಟ ಹೆಚ್ಚು ಮಾಡಲು ಇವಿಗಳ ಅಳವಡಿಕೆಯೇ ಉತ್ತಮ ದಾರಿ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಚೇರ್ ಪ್ರೊಫೆಸರ್ ಮತ್ತು ಸಫರ್‌ನ ಸಂಸ್ಥಾಪಕ ಯೋಜನಾ ನಿರ್ದೇಶಕ ಡಾ.ಗುಫ್ರಾನ್ ಬೇಗ್ ಅವರ ಅಧ್ಯಯನ ಬರಹ ತಿಳಿಸುತ್ತದೆ.
- ಡಾ. ಗುಫ್ರಾನ್ ಬೇಗ್
ಸಫರ್‌ನ ಸಂಸ್ಥಾಪಕ ಯೋಜನಾ ನಿರ್ದೇಶಕ
ಬೆಂಗಳೂರಿನಲ್ಲಿ ಸುಮಾರು 12 ಮಿಲಿಯನ್ ಜನಸಂಖ್ಯೆ ಇದೆ ಎಂಬ ಲೆಕ್ಕಾಚಾರ ಇದೆ. ಈ ನಗರದಲ್ಲಿ ಪ್ರಮುಖವಾಗಿ ಐಟಿ, ಜೈವಿಕ ತಂತ್ರಜ್ಞಾನ, ಏರೋಸ್ಪೇಸ್ ಮತ್ತು ಎಲೆಕ್ಟ್ರಾನಿಕ್ಸ್ ವಲಯಗಳು ಸೇರಿದಂತೆ ವೈವಿಧ್ಯಮಯ ವಲಯಗಳ ಪ್ರತಿಷ್ಠಿತ ಕಂಪನಿಗಳು ಕಾರ್ಯನಿರ್ವಹಿಸುತ್ತವೆ. ಇದರಿಂದ ಜನಸಂಖ್ಯೆ ಹೆಚ್ಚಳ, ಕೈಗಾರಿಕೀಕರಣ ಮತ್ತು ಖಾಸಗಿ ವಾಹನಗಳ ಬಳಕೆಯ ಹೆಚ್ಚಳ ಉಂಟಾಗಿದೆ. ಇವೆಲ್ಲಾ ಕಾರಣಗಳಿಂದ ನಗರದ ವಾಯುಮಾಲಿನ್ಯವೂ ಹೆಚ್ಚಾಗಿದೆ.
ಇತ್ತೀಚಿನ ಗ್ರೀನ್‌ಪೀಸ್ ಇಂಡಿಯಾ ವರದಿ ‘ಸ್ಪೇರ್ ದಿ ಏರ್-2’ ಪ್ರಕಾರ ಬೆಂಗಳೂರಿನ ಗಾಳಿಯ ಗುಣಮಟ್ಟ ಬಹಳ ಕಡಿಮೆ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಲೆಕ್ಕಾಚಾರ ಪ್ರಕಾರ ಬೆಂಗಳೂರಿನ ಮಾಲಿನ್ಯ ಜಾಸ್ತಿಯಾಗಿದೆ.ಬೆಂಗಳೂರಿನ ಸಾರಿಗೆ ವಲಯ
ಬೆಂಗಳೂರಿನ ಸಾರಿಗೆ ವಲಯವು ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಗೆ ಪ್ರಮುಖ ಕೊಡುಗೆ ನೀಡುತ್ತಿದ್ದು, ಈ ವಿಭಾಗದ ಕೊಡುಗೆ ಶೇ.39.11 ರಷ್ಟಿದೆ. ಹಾಗಾಗಿ ಇಲ್ಲಿ ಇವಿ ಬಳಕೆಯನ್ನು ಹೆಚ್ಚಿಸುವುದು ಅವಶ್ಯವಾಗಿದೆ. ವಿಶೇಷವಾಗಿ ಸಾರ್ವಜನಿಕ ಸಾರಿಗೆ ವಿಭಾಗದಲ್ಲಿ ಇವಿ ಬಳಕೆ ಹೆಚ್ಚಿಸಬೇಕು ಅಥವಾ ಮಾಲಿನ್ಯ ನಿಯಂತ್ರಣ ವಿಚಾರದಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಈ ಮಾಲಿನ್ಯ ಲೆಕ್ಕಾಚಾರ ತಿಳಿಸುತ್ತದೆ. ಅದರಿಂದ ಮಾತ್ರವೇ ಪರಿಣಾಮಕಾರಿಯಾಗಿ ವಾಯು ಮಾಲಿನ್ಯವನ್ನು ತಗ್ಗಿಸಬಹುದು ಮತ್ತು ಗಾಳಿಯ ಗುಣಮಟ್ಟವನ್ನು ಹೆಚ್ಚಿಸಬಹುದು.
2023ರಲ್ಲಿ ಬೆಂಗಳೂರಿನಲ್ಲಿ 9.7 ಮಿಲಿಯನ್ ವಾಹನಗಳಿದ್ದವು. ಈ ಮೂಲಕ ಬೆಂಗಳೂರು ದೇಶದ ಅತ್ಯಂತ ವಾಹನಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಗಳಿಸಿತ್ತು. ಅದರಲ್ಲಿ 6.7 ಮಿಲಿಯನ್ ದ್ವಿಚಕ್ರ ವಾಹನಗಳಿದ್ದು, 2 ಮಿಲಿಯನ್ ಕಾರುಗಳಿದ್ದುವು. ತ್ರಿ-ಚಕ್ರ ವಾಹನಗಳ ಸಂಖ್ಯೆ ಶೇ.3 ರಷ್ಟಿತ್ತು.
ಇಲ್ಲಿರುವ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಲ್ಲಿ ಶೇ.48ರಷ್ಟು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಾಹನಗಳಾಗಿವೆ. ಶೇ.37ರಷ್ಟು ವಾಹನಗಳು 5-15 ವರ್ಷಗಳ ವ್ಯಾಪ್ತಿಯಲ್ಲಿ ಬರುತ್ತವೆ ಮತ್ತು ಶೇ.15ರಷ್ಟು ವಾಹನಗಳು 15 ವರ್ಷಕ್ಕಿಂತ ಮೇಲ್ಪಟ್ಟವು. ಕಾರುಗಳಲ್ಲಿ ಶೇ.35ರಷ್ಟು 5 ವರ್ಷಕ್ಕಿಂತ ಕಡಿಮೆ ವಯಸ್ಸಿನವು. ಶೇ.34ರಷ್ಟು 5-15 ವರ್ಷಗಳ ವ್ಯಾಪ್ತಿಯಲ್ಲಿ ಬರುತ್ತವೆ ಮತ್ತು ಶೇ.32ರಷ್ಟು 15 ವರ್ಷಕ್ಕಿಂತ ಹಳೆಯದಾಗಿವೆ. ಬಸ್ಸುಗಳು ಮತ್ತು ಲಾರಿಗಳು ಇದೇ ಮಾದರಿಯನ್ನು ಅನುಸರಿಸಿವೆ. ಶೇ.42ರಷ್ಟು ವಾಹನಗಳು 5 ವರ್ಷದೊಳಗಿನವಾಗಿದ್ದು, ಶೇ.38ರಷ್ಟು ವಾಹನಗಳು 5-15 ವರ್ಷಗಳ ವ್ಯಾಪ್ತಿಯಲ್ಲು ಬರುತ್ತದೆ ಮತ್ತು ಶೇ.20ರಷ್ಟು 15 ವರ್ಷಕ್ಕಿಂತ ಹಳೆಯ ವಾಹನಗಳಾಗಿವೆ.
ಈ ಮಾಹಿತಿಯು ಇತರ ವಾಹನ ಪ್ರಕಾರಗಳಿಗೆ ಹೋಲಿಸಿದರೆ ಹಳೆಯ ಕಾರುಗಳ ಪ್ರಮಾಣ ಹೆಚ್ಚಾಗಿರುವುದನ್ನು ಸೂಚಿಸುತ್ತದೆ. ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳ ಪ್ರಮಾಣ ತುಲನಾತ್ಮಕವಾಗಿ ಕಡಿಮೆ ಇವೆ. ಬಸ್ಸುಗಳು ಮತ್ತು ಲಾರಿಗಳ ಸಂಖ್ಯೆ ಸಮತೋಲಿತವಾಗಿದ್ದು, ಕಾಲಾನುಕ್ರಮದಲ್ಲಿ ಬದಲಾವಣೆ ತರಬಹುದಾದ ನಿರೀಕ್ಷೆ ಉಂಟುಮಾಡಿವೆ.ಇವಿಗಳ ಅಳವಡಿಕೆ
ಇವಿಗಳ ಅಳವಡಿಕೆಯಿಂದ ಬೆಂಗಳೂರಿನಲ್ಲಿ ಖರ್ಚು ಮಾಡುವ ಆರೋಗ್ಯ ಸೇವೆ ವೆಚ್ಚದಲ್ಲಿ 5,300 ಕೋಟಿ ರೂಪಾಯಿಗಳನ್ನು ಉಳಿಸಬಹುದು ಎಂದು ಕೆಲವು ಲೆಕ್ಕಾಚಾರಗಳು ತಿಳಿಸಿವೆ. ವಾಯುಮಾಲಿನ್ಯದಿಂದ ಉಂಟಾಗುವ ಆರೋಗ್ಯ ಮತ್ತು ಆರ್ಥಿಕ ಪರಿಣಾಮಗಳನ್ನು ಅಂದಾಜಿಸಲಾಗಿದ್ದು, ಕಳೆದ ಮೂರು ದಶಕಗಳಲ್ಲಿ ಬೆಂಗಳೂರಿನಲ್ಲಿ ಮಾಲಿನ್ಯಗಳ ಕಾರಣದಿಂದ ಉಂಟಾಗಿರಬಹುದಾದ ಅಕಾಲಿಕ ಮರಣದ ಕಾರಣಕ್ಕೆ ₹1922.83 ಕೋಟಿ ನಷ್ಟ, ಅನಾರೋಗ್ಯದಿಂದ ₹516.88 ಕೋಟಿ ನಷ್ಟ ಮತ್ತು ತಲಾವಾರು ಆರೋಗ್ಯ ರಕ್ಷಣೆಯ ವೆಚ್ಚದ ಹೆಚ್ಚಳದಿಂದ ₹3309.6 ನಷ್ಟ ಉಂಟಾಗಿದೆ ಎಂದು ಊಹಿಸಲಾಗಿದೆ.
ಈ ಮೂಲಕ ಬೆಂಗಳೂರಿನಲ್ಲಿ ಇವಿ ಅಳವಡಿಕೆಯಿಂದ ಉಂಟಾಗುವ ಪರಿಸರ ಲಾಭ ಮತ್ತು ಆರ್ಥಿಕ ಪ್ರಯೋಜನಗಳ ಕುರಿತು ತಿಳಿಯಬಹುದಾಗಿದೆ. ವಾಹನ ವಿಭಾಗವನ್ನು ವಿದ್ಯುದೀಕರಣ ಮಾಡುವ ಮೂಲಕ ಆರೋಗ್ಯ ಸೇವಾ ವೆಚ್ಚವನ್ನು ಕಡಿಮೆ ಮಾಡುವ ಮತ್ತು ಗಾಳಿಯ ಗುಣಮಟ್ಟವನ್ನು ಸುಧಾರಿಸಬಹುದಾದ ಸಾಧ್ಯತೆಯನ್ನು ತಿಳಿಯಬಹುದಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಬೆಂಗಳೂರಿನಲ್ಲಿರುವ ಎಲ್ಲಾ ವಾಹನಗಳನ್ನು ಇವಿಗಳಾಗಿ ಬದಲಾಯಿಸುವುದರಿಂದ ಮಾಲಿನ್ಯ ಕಡಿತ ಉಂಟಾಗಲಿದೆ. ಅದರಿಂದ ಆರೋಗ್ಯ ಸಂಬಂಧಿತ ಆರ್ಥಿಕ ವೆಚ್ಚಗಳು ಕಡಿಮೆ ಆಗುತ್ತವೆ. ಜೊತೆಗೆ ಗಾಳಿಯ ಗುಣಮಟ್ಟ ಸುಧಾರಿಸುತ್ತದೆ ಮತ್ತು ಸಾರ್ವಜನಿಕ ಆರೋಗ್ಯ ಕೂಡ ಸುಧಾರಿಸಲಿದೆ.