ರೈತರಿಗೆ ಸ್ಥಿರ ಆದಾಯ ಖಾತ್ರಿ ಸರ್ಕಾರದ ಗುರಿ

Follow Us

ಸಾರಾಂಶ

- 2 ವರ್ಷಗಳ ಅವಧಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ । ಇಂದಿರಾ ರೈತ ಕಲ್ಯಾಣದ ಕನಸು ಸಾಕಾರಕ್ಕೆ ಸರ್ಕಾರ ಬದ್ಧ

- ಎನ್. ಚಲುವರಾಯಸ್ವಾಮಿ

ಕೃಷಿ ಸಚಿವರು, ಕರ್ನಾಟಕ ಸರ್ಕಾರ

(ಕಾಂಗ್ರೆಸ್ ಸರ್ಕಾರವು 2 ವರ್ಷಗಳಲ್ಲಿ ಪಂಚ ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿಯ ಗ್ಯಾರಂಟಿಯನ್ನೂ ಜನರಿಗೆ ನೀಡಿದೆ. ರಾಜ್ಯದ ಕೃಷಿ ಕ್ಷೇತ್ರವು ಆಧುನಿಕತೆಯ ಹಾದಿಯಲ್ಲಿ ಸಾಗಿದ್ದು, ರೈತರಿಗೆ ಸ್ವಾವಲಂಬನೆ ಜೀವನವನ್ನು ಒದಗಿಸಿದೆ. ಇದು ರಾಜ್ಯದ ರೈತರಿಗೆ ಸಮೃದ್ಧ ಭವಿಷ್ಯದ ಭರವಸೆಯನ್ನು ಮೂಡಿಸಿದೆ.)

ಕರ್ನಾಟಕದ ಕಾಂಗ್ರೆಸ್ ಸರ್ಕಾರವು ರೈತರ ಏಳಿಗೆ ಮತ್ತು ಕೃಷಿಯ ಸಮಗ್ರ ಅಭಿವೃದ್ಧಿಗಾಗಿ ದೀರ್ಘಕಾಲೀನ ಗುರಿಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಕೃಷಿಯನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸುವ ಮೂಲಕ ರೈತರಿಗೆ ಸ್ಥಿರ ಆದಾಯವನ್ನು ಖಾತ್ರಿಪಡಿಸುವ ಗುರಿಯನ್ನು ಸರ್ಕಾರವು ಹೊಂದಿದೆ. ಡಿಜಿಟಲ್ ಕೃಷಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಡ್ರೋನ್ ಆಧಾರಿತ ಕೃಷಿ ವಿಧಾನಗಳನ್ನು ರೈತರಿಗೆ ಒದಗಿಸುವ ಮೂಲಕ ಉತ್ಪಾದಕತೆಯನ್ನು ಗರಿಷ್ಠಗೊಳಿಸಲು ಯೋಜನೆಗಳನ್ನು ರೂಪಿಸಲಾಗಿದೆ.

ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಕಳೆದ ಎರಡು ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಗಳನ್ನು ಮಾಡಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೂರದೃಷ್ಟಿಯ ನಾಯಕತ್ವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅವಿರತ ಬೆಂಬಲ ಮತ್ತು ನಿರಂತರ ಪ್ರೋತ್ಸಾಹವೇ ಕಾರಣ. ಕೃಷಿ ಇಲಾಖೆಯನ್ನು ಮುನ್ನಡೆಸಲು ನನಗೆ ಸಿಕ್ಕಿರುವ ಅವಕಾಶದಲ್ಲಿ ಅವರಿಬ್ಬರ ಮಾರ್ಗದರ್ಶನಕ್ಕಾಗಿ ಮೊದಲನೆಯದಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ರೈತರ ಆರ್ಥಿಕ ಸ್ಥಿರತೆ, ಸಮೃದ್ಧ ಜೀವನ ಮತ್ತು ಕೃಷಿಯ ಆಧುನೀಕರಣವನ್ನು ಕೇಂದ್ರಬಿಂದುವಾಗಿಟ್ಟು ಕೊಂಡ ನಮ್ಮ ಸರ್ಕಾರವು, ಇಂದಿರಾ ಗಾಂಧಿಯವರ ರೈತ ಕಲ್ಯಾಣದ ಕನಸನ್ನು ನನಸಾಗಿಸಲು ಬದ್ಧವಾಗಿದೆ.

 ರೈತರ ಭವಿಷ್ಯ ಸುರಕ್ಷತೆಗೆ ಆದ್ಯತೆ  

ರೈತರಿಗೆ ಸ್ವಾವಲಂಬನೆಯ ಜೀವನವನ್ನು ಒದಗಿಸುವುದರ ಜೊತೆಗೆ ಕೃಷಿಯನ್ನು ರಾಜ್ಯದ ಆರ್ಥಿಕ ಬೆಳವಣಿಗೆಯ ಚಾಲಕ ಶಕ್ತಿಯನ್ನಾಗಿಸುವ ಗುರಿಯನ್ನು ನಮ್ಮ ಸರ್ಕಾರ ಹೊಂದಿದೆ. ಈ ದೃಷ್ಟಿಯು ರೈತರಿಗೆ ಕೇವಲ ಆರ್ಥಿಕ ಬೆಂಬಲವನ್ನು ಮಾತ್ರವಲ್ಲ, ಆಧುನಿಕ ತಂತ್ರಜ್ಞಾನ, ಶಿಕ್ಷಣ ಮತ್ತು ಮಾರುಕಟ್ಟೆ ಅವಕಾಶಗಳ ಮೂಲಕ ಅವರ ಜೀವನಮಟ್ಟವನ್ನು ಉನ್ನತೀಕರಿಸುವ ದೀರ್ಘಕಾಲೀನ ಯೋಜನೆಯನ್ನು ಒಳಗೊಂಡಿದೆ. ಸರ್ಕಾರವು ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳು, ಬೆಳೆ ವಿಮೆ, ರಸಗೊಬ್ಬರ ಪೂರೈಕೆ ಮತ್ತು ಅತ್ಯಾಧುನಿಕ ಕೃಷಿ ಉತ್ಪನ್ನಗಳನ್ನು ಒದಗಿಸುವ ಮೂಲಕ ಕೃಷಿಯಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿದೆ.

ರಾಜ್ಯ ಬಜೆಟ್‌ನಲ್ಲಿ ಕೃಷಿಗೆ ದೊಡ್ಡ ಮೊತ್ತದ ಅನುದಾನವನ್ನು ಮೀಸಲಿಡುವ ಮೂಲಕ, ರೈತರಿಗೆ ತಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸುವ ಭರವಸೆ ನೀಡಿದೆ. ಇದು ಕೃಷಿ ಯಾಂತ್ರೀಕರಣ, ಸಂಶೋಧನೆ ಮತ್ತು ರೈತರಿಗೆ ತರಬೇತಿಯಂತಹ ಕಾರ್ಯಕ್ರಮ ಸುಗಮಗೊಳಿಸಿದೆ. ಇದು ಉತ್ಪಾದಕತೆ ಹೆಚ್ಚಳದ ಜೊತೆಗೆ ಆದಾಯ ಸ್ಥಿರಗೊಳಿಸಿದೆ.

 ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ 

 ಕೃಷಿ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿರುವ ಬಗ್ಗೆ ತೃಪ್ತಿ ಇದೆಯಾದರೂ ಸಾಗಬೇಕಾದ ದೂರ ಬಹಳಷ್ಟಿದೆ. ಬಿತ್ತನೆ ಬೀಜ ಪೂರೈಕೆಯಲ್ಲಿ ಶೇ. 91.5 ಪ್ರಗತಿ ಸಾಧಿಸಿರುವುದು ದಾಖಲೆಯಾಗಿದೆ, ರಾಜ್ಯದ ಯಾವುದೇ ಭಾಗದಲ್ಲಿ ಬೀಜ ಕೊರತೆ ಉಂಟಾಗದಂತೆ ನೋಡಿಕೊಂಡಿರುವುದು ರೈತರಿಗೆ ದೊಡ್ಡ ಆಸರೆ. ಈ ಸಾಧನೆಯು ಸಮಯಕ್ಕೆ ಸರಿಯಾಗಿ ಗುಣಮಟ್ಟದ ಬೀಜಗಳನ್ನು ಒದಗಿಸುವ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ.

2023-24ರ ತೀವ್ರ ಬರಗಾಲದ ಸಂದರ್ಭದಲ್ಲಿ, ಕಾಂಗ್ರೆಸ್ ಸರ್ಕಾರವು 18.65 ಲಕ್ಷ ರೈತರಿಗೆ ₹2,107.50 ಕೋಟಿಗಳ ಬೆಳೆ ವಿಮೆ ಪರಿಹಾರವನ್ನು ಇತ್ಯರ್ಥಪಡಿಸಿತು, ಇದು ರಾಜ್ಯದ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಿದೆ. ಕಲಬುರಗಿ, ಯಾದಗಿರಿ, ಬೀದರ್, ಮತ್ತು ವಿಜಯಪುರ ಜಿಲ್ಲೆಗಳಲ್ಲಿ ನೆಟೆ ರೋಗದಿಂದ ಸಂಕಷ್ಟಕ್ಕೊಳಗಾದ 2,80,154 ರೈತರ ಬ್ಯಾಂಕ್ ಖಾತೆಗೆ ₹223 ಕೋಟಿ ಫಸಲ್ ವಿಮಾ ಪರಿಹಾರವನ್ನು ತ್ವರಿತವಾಗಿ ಜಮಾ ಮಾಡಲಾಯಿತು.

 ಇ-ಸ್ಯಾಪ್‌ನಿಂದ ರೈತರಿಗೆ ಜ್ಞಾನ 

ಇ-ಸ್ಯಾಪ್ ಎನ್ನುವ ತಂತ್ರಜ್ಞಾನದ ಮೂಲಕ ಬೆಳೆಗಳ ಕೀಟ/ರೋಗ ಬಾಧೆಯನ್ನು ನಿಖರವಾಗಿ ಗುರುತಿಸಿ, ಸೂಕ್ತ ಪರಿಹಾರ ಕಂಡುಹಿಡಿಯಲಾಗಿದೆ. ಇದು ಕೃಷಿಯಲ್ಲಿ ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಳ್ಳುವ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ.

ಕೃಷಿ ಯಾಂತ್ರೀಕರಣವು ಕಾಂಗ್ರೆಸ್ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. 2023-24ರಲ್ಲಿ 3,53,349 ರೈತರಿಗೆ ₹469.22 ಕೋಟಿಗಳ ಸಹಾಯಧನವನ್ನು ಒದಗಿಸಲಾಗಿದ್ದು, ಹೈಟೆಕ್ ಹಾರ್ವೆಸ್ಟರ್ ಹಬ್‌ಗಳ ಸ್ಥಾಪನೆಗೆ ₹41.38 ಕೋಟಿ (2023-24) ಮತ್ತು ₹86.48 ಕೋಟಿ (2024-25) ಖರ್ಚು ಮಾಡಲಾಗಿದೆ. ಇವು ರೈತರ ಕೃಷಿ ಕಾರ್ಯ ಸುಗಮಗೊಳಿಸಿ ಉತ್ಪಾದಕತೆಯನ್ನು ಗಣನೀಯವಾಗಿ ಹೆಚ್ಚಿಸಿವೆ.

ಕೃಷಿ ಭಾಗ್ಯ ಯೋಜನೆಯಡಿ ₹300 ಕೋಟಿಗಳನ್ನು (2023-24ರಲ್ಲಿ ₹100 ಕೋಟಿ, 2024-25ರಲ್ಲಿ ₹200 ಕೋಟಿ) ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ, ನೀರಾವರಿ, ಯಾಂತ್ರೀಕರಣ ಮತ್ತು ಇತರ ಸಂಪನ್ಮೂ ಲಗಳನ್ನು ಒದಗಿಸಿದೆ. ಕೃಷಿ ನವೋದ್ಯಮ ಯೋಜನೆಯಡಿ 40ಕ್ಕೂ ಹೆಚ್ಚು ನವೋದ್ಯಮಗಳನ್ನು ಸ್ಥಾಪಿಸಲಾಗಿದ್ದು, ಯುವ ರೈತರಿಗೆ ಕೃಷಿ ಆಧಾರಿತ ಉದ್ಯಮಶೀಲತೆಯ ಅವಕಾಶಗಳನ್ನು ಸೃಷ್ಟಿಸಲಾಗಿದೆ. ಸಿರಿಧಾನ್ಯ ಉತ್ಪಾದನೆ ಮತ್ತು ಬಳಕೆ ಉತ್ತೇಜಿಸಲು ಅಂತಾರಾಷ್ಟ್ರೀಯ ಮಟ್ಟದ ಮೇಳಗಳನ್ನು ಆಯೋಜಿಸಲಾಗಿದೆ. ಇದು ಕರ್ನಾಟಕದ ಕೃಷಿ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಗುರುತಿಸುವಂತೆ ಮಾಡಿದೆ. ಈ ಮೇಳಗಳು ರೈತರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಪಡೆಯಲು ಮತ್ತು ಹೊಸ ಮಾರುಕಟ್ಟೆ ಅವಕಾಶಗಳನ್ನು ತೆರೆಯಲು ಸಹಾಯ ಮಾಡಿವೆ.

ರೈತರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡಲು ರೈತ ಕರೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕರ್ನಾಟಕ ರಾಜ್ಯ ಬೀಜ ನಿಗಮವು 2023-24ರಲ್ಲಿ 2.03 ಲಕ್ಷ ಕ್ವಿಂಟಾಲ್ ಮತ್ತು 2024-25ರಲ್ಲಿ 2.45 ಲಕ್ಷ ಕ್ವಿಂಟಾಲ್ ವಿವಿಧ ಬೆಳೆಗಳ ಬೀಜೋತ್ಪಾದನೆ ಮಾಡಿದ್ದು, ಇಕ್ರಿಸ್ಯಾಟ್ ಸಂಸ್ಥೆಯೊಂದಿಗಿನ ಒಡಂಬಡಿಕೆಯ ಮೂಲಕ ತೊಗರಿ, ಕಡಲೆ, ಜೋಳ, ನೆಲಗಡಲೆ, ಸಜ್ಜೆ, ಮತ್ತು ಸಿರಿಧಾನ್ಯ ಬೆಳೆಗಳಲ್ಲಿ ಹೊಸ ತಳಿಗಳನ್ನು ಪರಿಚಯಿಸಲಾಗಿದೆ. ಈ ಹೊಸ ತಳಿಗಳು ರೈತರಿಗೆ ಉತ್ತಮ ಇಳುವರಿಯನ್ನು ಒದಗಿಸಿದ್ದು, ಅವರ ಆದಾಯವನ್ನು ಸ್ಥಿರಗೊಳಿಸಿವೆ. ರಾಜ್ಯದ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಕೃಷಿಕ ಸಮಾಜಗಳ ಕಾರ್ಯಕಾರಿ ಸಮಿತಿ ಮತ್ತು ಪದಾಧಿಕಾರಿಗಳ ಚುನಾವಣೆಯನ್ನು 14 ವರ್ಷಗಳ ಬಳಿಕ ಯಶಸ್ವಿಯಾಗಿ ನಡೆಸಲಾಗಿದೆ, ಇದು ರೈತರ ಪ್ರಾತಿನಿಧ್ಯವನ್ನು ಬಲಪಡಿಸಿದೆ.

 ರೈತರ ಸಮಸ್ಯೆ ಪರಿಹಾರಕ್ಕೆ ಸಿದ್ಧ 

ಮಂಡ್ಯದಲ್ಲಿ ಸ್ಥಾಪನೆಯಾಗಲಿರುವ ಕೃಷಿ ವಿಶ್ವವಿದ್ಯಾನಿಲಯಕ್ಕೆ ಬಜೆಟ್ ಘೋಷಣೆಯ ಒಂದು ವರ್ಷದೊಳಗೆ ಚಾಲನೆ ದೊರೆತಿದ್ದು, ವಿಧಾನಸಭೆ ಮತ್ತು ವಿಧಾನಪರಿಷತ್‌ನಿಂದ ಅನುಮೋದನೆ ಪಡೆಯಲಾಗಿದೆ. ಈ ವಿಶ್ವವಿದ್ಯಾಲಯವು ಕೃಷಿ ಸಂಶೋಧನೆ, ಶಿಕ್ಷಣ, ಮತ್ತು ತರಬೇತಿಯ ಮೂಲಕ ರೈತರಿಗೆ ಆಧುನಿಕ ಜ್ಞಾನವನ್ನು ಒದಗಿಸಲಿದೆ, ಕರ್ನಾಟಕದ ಕೃಷಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಬೆಂಬಲಿಸುತ್ತದೆ.

ಜಿಲ್ಲಾ ಪ್ರವಾಸದ ಮೂಲಕ ರೈತರೊಂದಿಗೆ ನೇರ ಸಂವಾದವನ್ನು ನಡೆಸಿ, ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸಲಾಗಿದೆ. ಮಂಡ್ಯದ ಐತಿಹಾಸಿಕ ಮೈಶುಗರ್ ಕಾರ್ಖಾನೆಯ ಪುನಶ್ಚೇತನಕ್ಕೆ ₹50 ಕೋಟಿಗಳ ಅನುದಾನವನ್ನು ಒದಗಿಸಲಾಗಿದ್ದು, 30 ಮೆಗಾವ್ಯಾಟ್ ಟರ್ಬೊ ಜನರೇಟರ್‌ ಪ್ರಾಯೋಗಿಕ ಚಾಲನೆಯನ್ನು ಮಾಡಲಾಗಿದೆ. ಈ ಕ್ರಮವು ಮಂಡ್ಯ ಜನತೆಗೆ ಆರ್ಥಿಕ ಸ್ಥಿರತೆಯನ್ನು ಒದಗಿಸಿದ್ದು, ಕಬ್ಬು ಬೆಳೆಗಾರರ ಆರ್ಥಿಕ ಪ್ರಗತಿಗೆ ಬೆಂಬಲವಾಗಿ ನಿಲ್ಲುವ ಸರ್ಕಾರದ ಗುರಿಗೆ ಸಾಕ್ಷಿಯಾಗಿದೆ.

ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ

ಬಜೆಟ್‌ನಲ್ಲಿ ಕೃಷಿಗೆ ಸಿಂಹಪಾಲು ಒದಗಿಸಲಾಗಿದೆ. 2023-24ರ ಬಜೆಟ್‌ನಲ್ಲಿ ಕೃಷಿ ಭಾಗ್ಯ ಯೋಜನೆಗೆ ₹100 ಕೋಟಿ, ಕೃಷಿ ನವೋದ್ಯಮಕ್ಕೆ ₹10 ಕೋಟಿ, ಅತ್ಯಾಧುನಿಕ ಕಟಾವು ಯಂತ್ರ ಕೇಂದ್ರಗಳಿಗೆ ₹50 ಕೋಟಿ, ಮತ್ತು ಕೇಂದ್ರ ಪ್ರಕೃತಿ ವಿಕೋಪ ನಿಧಿಯಿಂದ ಮಣ್ಣು ಮತ್ತು ನೀರು ಸಂರಕ್ಷಣಾ ಕೇಂದ್ರಗಳಿಗೆ ₹100 ಕೋಟಿಗಳನ್ನು ಮೀಸಲಿಡಲಾಗಿತ್ತು. 2024-25ರ ಬಜೆಟ್‌ನಲ್ಲಿ ಕೃಷಿ ಭಾಗ್ಯಕ್ಕೆ ₹200 ಕೋಟಿ, ಸಮುದಾಯ ಬೀಜ ಬ್ಯಾಂಕ್‌ಗಳ ಸ್ಥಾಪನೆ, ಆಹಾರ ಬ್ಯಾಂಕ್ಗಳ ಸ್ಥಾಪನೆ, 5,000 ಸಣ್ಣ ಸರೋವರಗಳ ನಿರ್ಮಾಣ, ಸ್ಟಾರ್ಟ್ಅಪ್‌ಗಳಿಗೆ ಉತ್ತೇಜನ, ಮತ್ತು ಕೃಷಿ ಹಾಗೂ ಆರೋಗ್ಯ ವಿಜ್ಞಾನದ ಸುಧಾರಣೆಗೆ ಆಧುನಿಕ ಜೀನ್ ಎಡಿಟಿಂಗ್ ಮತ್ತು ಜೀನ್ ಥೆರಪಿ ಸಂಶೋಧನಾ ಸಂಸ್ಥೆಯ ಸ್ಥಾಪನೆಗೆ ಅನುದಾನವನ್ನು ಒದಗಿಸಲಾಗಿದೆ.

ಕಾಂಗ್ರೆಸ್ ಕೇವಲ ಎರಡು ವರ್ಷಗಳಲ್ಲಿ ಪಂಚ ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿಯ ಗ್ಯಾರಂಟಿಯನ್ನೂ ನೀಡಿದೆ. ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ, ಕೃಷಿ ಕ್ಷೇತ್ರವು ಆಧುನಿಕತೆಯ ಹಾದಿಯಲ್ಲಿ ಸಾಗಿದ್ದು, ರೈತರಿಗೆ ಸ್ವಾವಲಂಬನೆಯ ಜೀವನವನ್ನು ಒದಗಿಸಿದೆ. ರೈತರಿಗೆ ಸಮೃದ್ಧ ಭವಿಷ್ಯದ ಭರವಸೆಯನ್ನು ಮೂಡಿಸಿದೆ.

ಸರ್ಕಾರವು ರೈತರ ಏಳಿಗೆ ಮತ್ತು ಕೃಷಿಯ ಸಮಗ್ರ ಅಭಿವೃದ್ಧಿಗಾಗಿ ದೀರ್ಘಕಾಲೀನ ಗುರಿಗಳನ್ನು ಹೊಂದಿದೆ. ಕೃಷಿಯನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸುವ ಮೂಲಕ ರೈತರಿಗೆ ಸ್ಥಿರ ಆದಾಯವನ್ನು ಖಾತ್ರಿಪಡಿಸುವ ಗುರಿ ಹೊಂದಿದೆ. ಡಿಜಿಟಲ್ ಕೃಷಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಮತ್ತು ಡ್ರೋನ್ ಆಧಾರಿತ ಕೃಷಿ ವಿಧಾನಗಳನ್ನು ರೈತರಿಗೆ ಒದಗಿಸುವ ಮೂಲಕ ಉತ್ಪಾದಕತೆಯನ್ನು ಗರಿಷ್ಠಗೊಳಿಸಲು ಯೋಜನೆಗಳನ್ನು ರೂಪಿಸಲಾಗಿದೆ.

ಈ ಮೂಲಕ ಕೃಷಿ ಆಧಾರಿತ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಿಶೇಷ ಆರ್ಥಿಕ ಸಹಾಯ, ತರಬೇತಿ, ಮತ್ತು ಸಾಲ ಸೌಲಭ್ಯಗಳನ್ನು ಒದಗಿಸಲಾಗುವುದು. ಕೃಷಿ ಶಿಕ್ಷಣವನ್ನು ಗ್ರಾಮೀಣ ಯುವಕರಿಗೆ ತಲುಪಿಸುವ ಮೂಲಕ ಮುಂದಿನ ಪೀಳಿಗೆಯ ರೈತರನ್ನು ಸಿದ್ಧಪಡಿಸುವುದು ನಮ್ಮ ಗುರಿಯಾಗಿದೆ. ಈ ಎಲ್ಲಾ ಯೋಜನೆಗಳ ಮೂಲಕ, ಕರ್ನಾಟಕವನ್ನು ಕೃಷಿಯಲ್ಲಿ ರಾಷ್ಟ್ರದ ಪ್ರಮುಖ ರಾಜ್ಯವನ್ನಾಗಿಸುವ ಜೊತೆಗೆ, ರೈತರಿಗೆ ಸಮೃದ್ಧ, ಸ್ವಾಭಿಮಾನಿ ಜೀವನವನ್ನು ಒದಗಿಸುವುದು ಸರ್ಕಾರದ ದೃಢಸಂಕಲ್ಪವಾಗಿದೆ.

Read more Articles on