ಅಂಬೇಡ್ಕರರ ಸೆಕ್ಯುಲರ್ ನಿರಾಕರಣೆಗೆ ಹೊಸಬಾಳೆ ಧ್ವನಿ

Sujatha NR | Published : Jul 3, 2025 11:24 AM
Dattathreya Hosabale

ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿಗೆ 50 ವರ್ಷ’ ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯಿಂದ ಸಮಾಜವಾದ ಮತ್ತು ಜಾತ್ಯತೀತ ಪದಗಳನ್ನು ತೆಗೆದುಹಾಕಲು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಒತ್ತಾಯಿಸಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

-ಡಾ. ಸುಧಾಕರ ಹೊಸಳ್ಳಿ, ಮೈಸೂರು

ಹೊಸಬಾಳೆ ಹೇಳಿಕೆಗೆ ಹೀಗೊಂದು ಚಿಂತನೆ 

ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿಗೆ 50 ವರ್ಷ’ ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯಿಂದ ಸಮಾಜವಾದ ಮತ್ತು ಜಾತ್ಯತೀತ ಪದಗಳನ್ನು ತೆಗೆದುಹಾಕಲು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಒತ್ತಾಯಿಸಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಹೊಸಬಾಳೆಯವರ ಆಗ್ರಹವನ್ನು ತುಲನಾತ್ಮಕ ದೃಷ್ಟಿಕೋನ ಮತ್ತು ಸಾಂವಿಧಾನಿಕ ನಿಯಮಗಳ ಅಡಿಯಲ್ಲಿ ವಿಮರ್ಶೆ ಮಾಡಿದರೆ, ಅದು ಅಂಬೇಡ್ಕರರ ಅಭಿಮತವೇ ಆಗಿತ್ತು ಎಂಬುದನ್ನು ಪುಷ್ಟೀಕರಿಸುತ್ತದೆ. ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರರು ಸಂವಿಧಾನದ ಒಳಗೆ ಯಾವುದೇ ಒಂದು ವಿಷಯ ಅಥವಾ ತಿದ್ದುಪಡಿಯು ಸಿಂಧುವಾಗಬೇಕಾದರೆ ಜಗತ್ತಿನ ಸಂವಿಧಾನಗಳ ನಿಯಮಗಳ ಪರಾಮರ್ಶೆಯ ಜೊತೆಗೆ ಸಂಶೋಧನಾತ್ಮಕವಾಗಿ ಸಿಗುವ ಫಲಿತಾಂಶವನ್ನಷ್ಟೇ ಸಂವಿಧಾನದ ಭಾಗವನ್ನಾಗಿ ಮಾಡಲು ಅನುಮೋದಿಸುತ್ತಿದ್ದರು ಎಂಬುದು ಅಧಿಕೃತ ದಾಖಲೆಗಳಲ್ಲಿ ಸಿಗುತ್ತವೆ.

 ಇಂತಹ ವಸ್ತುನಿಷ್ಠ ಸಂಶೋಧಕರು ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಬಹುಮತದ ಗುಂಪಿನ ಅದೆಷ್ಟೇ ಒತ್ತಡದ ನಡುವೆಯೂ, ಸೆಕ್ಯುಲರ್ ಎಂಬುದು ಪಾಶ್ಚಾತ್ಯ ಚಿಂತನೆ, ಅದು ಈ ನೆಲದ ಗುಣಧರ್ಮಕ್ಕೆ ಒಗ್ಗುವುದಿಲ್ಲ, ಹಾಗಾಗಿ ಸೆಕ್ಯುಲರಿಸಂ ಮತ್ತು ವಿಪರೀತ ಸಮಾಜವಾದವನ್ನು ಸಂವಿಧಾನದ ಒಳಸೇರಿಸುವುದಿಲ್ಲ ಎಂದು ಘೋಷಿಸಿಬಿಟ್ಟಿದ್ದರು. ಇದೇ ವಿಷಯವಾಗಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದ ಸುಬ್ರಮಣಿಯನ್ ಸ್ವಾಮಿ ಪ್ರಕರಣದಲ್ಲಿ (25-11-2024) ಸೆಕ್ಯುಲರ್ ಮತ್ತು ಸಮಾಜವಾದವನ್ನು ತೆಗೆಯಲು ಅವಕಾಶವಿಲ್ಲ ಎಂದು ತೀರ್ಪು ನೀಡಿ ಸದರಿ ಅರ್ಜಿಯನ್ನು ವಜಾಗೊಳಿಸಿದೆ. 

ಆದಾಗಿಯೂ ಸೆಕ್ಯುಲರಿಸಂ ಪರಿಕಲ್ಪನೆಯನ್ನು ಪಾಶ್ಚಾತ್ಯ ದೃಷ್ಟಿಕೋನದಲ್ಲಿ ನೋಡುವಂತಿಲ್ಲ ಮತ್ತು ಭಾರತದ ನ್ಯಾಯಾಲಯಗಳ ಹಲವಾರು ತೀರ್ಪುಗಳಲ್ಲಿರುವ ಪ್ರಾದೇಶಿಕವಾದ ಪರಿಕಲ್ಪನೆಯನ್ನು ಮಾತ್ರ ಪರಿಗಣಿಸಬೇಕು ಎಂದು ತಿಳಿಸಿದೆ. ಅಂಬೇಡ್ಕರರು ಮತ್ತು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಿಸಿದಂತೆ ಹೊಸಬಾಳೆಯವರೂ ಕೂಡ ನಮ್ಮದಲ್ಲದ ಪಾಶ್ಚಾತ್ಯ ಚಿಂತನೆಯನ್ನು ಅಸಾಂವಿಧಾನಿಕ ಮಾದರಿಯಲ್ಲಿ ಸೇರಲ್ಪಟ್ಟ ಸೆಕ್ಯುಲರಿಸಂ ಅನ್ನು, ಸಂವಿಧಾನದಿಂದ ದೂರೀಕರಿಸುವಂತೆ ಆಗ್ರಹಿಸಿರುವುದು ಸ್ವೀಕೃತವಾದದ್ದೇ.

ಸಂವಿಧಾನ ರಚನಾ ಸಭೆಯ ಸದಸ್ಯ, ಪ್ರೊ.ಕೆ.ಟಿ.ಷಾ, ಅವರು ಮಂಡಿಸಿದ ಸೆಕ್ಯುಲರಿಸಂ ಮತ್ತು ಸಮಾಜವಾದಿ ಎಂಬ ಪದವನ್ನು ಸೇರ್ಪಡೆ ಮಾಡಬೇಕೆಂಬ ತಿದ್ದುಪಡಿಯ ಕುರಿತು ಮಾತನಾಡಿದ ಬಾಬಾ ಸಾಹೇಬ್ ಅಂಬೇಡ್ಕರರು ‘ಸಂವಿಧಾನದಲ್ಲಿ ಸೆಕ್ಯುಲರಿಸಂ ಪದ ಏಕೆ ಅನಗತ್ಯ’ ಎಂಬುದನ್ನು ಗಂಭೀರವಾಗಿ ಸದನದ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಬಹುಮತವಿದ್ದ ಪಕ್ಷದ ಸದಸ್ಯರ ಪ್ರಬಲ ಒತ್ತಡದ ನಡುವೆಯೂ, ಕರಡು ರಚನಾ ಸಮಿತಿ ಅಧ್ಯಕ್ಷರಾಗಿದ್ದ ಅಂಬೇಡ್ಕರರು ಸೆಕ್ಯುಲರ್ ಪದವನ್ನು ಸೇರ್ಪಡೆ ಮಾಡಲು ನಿರಾಕರಿಸಿದ್ದರು. 15 ನವೆಂಬರ್ 1948 ರಂದು ಪ್ರಸ್ತಾವವನ್ನು ಅಂಬೇಡ್ಕರರ ಪ್ರಬಲ ವಿರೋಧದ ಕಾರಣಕ್ಕಾಗಿ, ಭಾರತೀಯವಾದ ತತ್ವಕ್ಕೆ ವಿರುದ್ಧವಾಗುತ್ತದೆ ಎಂಬ ಕಾರಣಕ್ಕಾಗಿ ತಿರಸ್ಕರಿಸಲಾಯಿತು.

ಬುದ್ಧಿಜೀವಿಗಳ, ಎಡಪಂಥೀಯರ ಬಹುದೊಡ್ಡ ಅಸ್ತ್ರ ಅದು ಸೆಕ್ಯುಲರಿಸಂ. 1976ರಲ್ಲಿ ರಾಷ್ಟ್ರದ ಮೇಲೆ ಅಸಂವಿಧಾನಿಕ ಮಾರ್ಗದಲ್ಲಿ ಆಂತರಿಕ ತುರ್ತುಪರಿಸ್ಥಿತಿಯನ್ನು ಹೇರಿದ ಇಂದಿರಾಗಾಂಧಿಯವರು, ಸರ್ವೋಚ್ಚ ನ್ಯಾಯಾಲಯದ 1973ರ ಕೇಶವಾನಂದ ಭಾರತಿ/ ಕೇರಳ ಪ್ರಕರಣದಲ್ಲಿ ಮೂಲರಚನೆಯ ಬದಲಾವಣೆ ಅಸಾಂವಿಧಾನಿಕ ಎಂಬ ಆದೇಶವನ್ನು ತಿರಸ್ಕಾರ ಮಾಡಿ, ಸಂವಿಧಾನದ ಪ್ರಸ್ತಾವನೆಗೆ ಸೆಕ್ಯುಲರಿಸಂ ಮತ್ತು ಸಮಾಜವಾದ ಎಂಬ ಪದಗಳನ್ನು ತುರುಕಿದ್ದನ್ನು ಕಾಂಗ್ರೆಸ್ ಮತ್ತು ವಾಮಪಂಥೀಯರು ಸಮರ್ಥನೆ ಮಾಡಿಕೊಳ್ಳುತ್ತಾ ಬಂದಿದ್ದಾರೆ.

ಸದರಿ ವಿಷಯದ ಕುರಿತು ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್ ಅವರ ಪ್ರತಿಪಾದನೆ ಹೀಗಿತ್ತು;

ಡಾ। ಬಿ.ಆರ್.ಅಂಬೇಡ್ಕರ್:

ಮಾನ್ಯ ಉಪಾಧ್ಯಕ್ಷರೇ, ತಿದ್ದುಪಡಿಯನ್ನು ನಾನು ಒಪ್ಪಲಾರೆ ಎಂದು ಹೇಳಲು ವಿಷಾದಿಸುವೆ. ಮೊದಲನಯದಾಗಿ, ಈ ಪ್ರಸ್ತಾವವನ್ನು ಬೆಂಬಲಿಸಿ ನಾನು ಸಭೆಯಲ್ಲಿ ಮೊದಲು ಮಾತನಾಡಿದಂತೆ, ಈ ಸಂವಿಧಾನ ಕೇವಲ ರಾಷ್ಟ್ರದ ವಿವಿಧ ಅಂಗಗಳ ಕೆಲಸವನ್ನು ನಿಯಂತ್ರಿಸುವ ಒಂದು ವ್ಯವಸ್ಥೆಯಷ್ಟೇ ಆಗಿತ್ತು. ಅದು ನಿರ್ದಿಷ್ಟ ಪಕ್ಷ ಇಲ್ಲವೇ ನಿರ್ದಿಷ್ಟ ಸದಸ್ಯರನ್ನು ಅಧಿಕಾರದಲ್ಲಿ ಪ್ರತಿಷ್ಠಾಪಿಸುವ ವ್ಯವಸ್ಥೆಯಲ್ಲ. ರಾಷ್ಟ್ರದ ನೀತಿ ಏನಾಗಿರಬೇಕು, ತನ್ನ ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನಾಧರಿಸಿ ಈ ಸಮಾಜವನ್ನು ಹೇಗೆ ಕಟ್ಟಬೇಕು, ಈ ಸಂಗತಿಗಳನ್ನು ಸಮಯ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಜನರೇ ನಿರ್ಧರಿಸಬೇಕು. ಇದನ್ನು ಸಂವಿಧಾನ ತಾನೇ ಕೈಗೊಳ್ಳಬಾರದು. ಅದು ತನ್ನೊಂದಿಗೆ ಪ್ರಜಾಪ್ರಭುತ್ವವನ್ನೂ ನಾಶಗೊಳಿಸುತ್ತದೆ. ರಾಷ್ಟ್ರದ ಸಾಮಾಜಿಕ ರಚನೆ ನಿರ್ದಿಷ್ಟ ರೂಪವನ್ನು ಪಡೆಯುತ್ತದೆ ಎಂದು ಸಂವಿಧಾನದಲ್ಲೇ ವಿವರಿಸಿದರೆ, ಇಂತಹ ಸಾಮಾಜಿಕ ರಚನೆಯಲ್ಲಿ ಜೀವಿಸಬೇಕು ಎಂದು ಆಶಿಸುವ ಜನರ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುವಿರಿ. ಬಹುಸಂಖ್ಯಾತರು ನಮ್ಮ ಸಮಾಜಕ್ಕೆ, ಸಮಾಜವಾದಿ ಸಂರಚನೆಯು, ಬಂಡವಾಳಶಾಹಿ ಸಮಾಜ ರಚನೆಗಿಂತ ಉತ್ತಮ ಎಂದು ಇವತ್ತು ಖಂಡಿತವಾಗಿಯೂ ಹೇಳಲು ಸಾಧ್ಯ.

ಆದರೆ ಚಿಂತನಶೀಲ ಮಂದಿ, ಸಮಾಜವಾದಿ ಸಂರಚನೆಗಿಂತ ಇನ್ನೂ ಉತ್ತಮವಾದ ಸಾಮಾಜಿಕ ರಚನೆಯ ಮಾದರಿಯನ್ನು ರೂಪಿಸುವ ಸಾಧ್ಯತೆ ಕೂಡ ಇಂದಲ್ಲ ನಾಳೆ ಇದ್ದೇ ಇರುತ್ತದೆ ಎಂದು ಆಲೋಚಿಸಬಹುದು. ಹೀಗಾಗಿ ಸಂವಿಧಾನ ಜನರನ್ನು ಯಾವುದೋ ಒಂದು ನಿರ್ದಿಷ್ಟ ರಚನೆಗೆ ಕಟ್ಟಿ ಹಾಕಬಾರದು. ಈ ನಿರ್ಧಾರವನ್ನು ಜನರಿಗೇ ಬಿಟ್ಟುಬಿಡಬೇಕು. ಈ ತಿದ್ದುಪಡಿಯನ್ನು ಏಕೆ ವಿರೋಧಿಸಬೇಕು ಎಂಬುದಕ್ಕೆ ಇದು ಮೊದಲನೆಯ ಕಾರಣ.

ಇನ್ನು ಎರಡನೇ ಕಾರಣವೆಂದರೆ;

ಈ ತಿದ್ದುಪಡಿ ಏನೇನೂ ಅವಶ್ಯಕವಲ್ಲ. ಮೂಲಭೂತ ಹಕ್ಕುಗಳಲ್ಲದೆ ನಾವು ಇಲ್ಲಿ ಇತರೆ ಭಾಗಗಳನ್ನು ಸಂವಿಧಾನದಲ್ಲಿ ಮಂಡಿಸಿದ್ದೇವೆ. ಅವು ರಾಜ್ಯನೀತಿ ನಿರ್ದೇಶಕ ತತ್ತ್ವಗಳಾಗಿವೆ. ಈ ಸತ್ಯವನ್ನು ಪ್ರೊ.ಷಾ ಅವರು ಗಮನಕ್ಕೆ ತೆಗೆದುಕೊಂಡಂತೆ ಕಾಣುವುದಿಲ್ಲ. 4ನೇ ಭಾಗದಲ್ಲಿರುವ ಅನುಚ್ಛೇದಗಳನ್ನು ಓದಿದರೆ ಅದರಲ್ಲಿ ಅದು ತಿಳಿಯುತ್ತದೆ.

ಸಂವಿಧಾನದ ಕರಡಿನಲ್ಲಿರುವಂತೆ ನಾಗರಿಕರು-ಪುರುಷವಾಗಿರಲಿ, ಸ್ತ್ರೀಯವಾಗಿರಲಿ, ಸಮಾನವಾಗಿ ಜೀವನ ನಿರ್ವಹಣೆ ಮಾಡುವುದಕ್ಕೆ ಹಕ್ಕನ್ನು ಹೊಂದಿರುವುದು. ಎಲ್ಲರ ಹಿತಸಾಧನೆಗೆ ತೊಂದರೆಯಾಗದ ರೀತಿಯಲ್ಲಿ ಸಂಪತ್ತು ಮತ್ತು ಉತ್ಪಾದನಾ ಸಾಧನೆಗಳು ಕೇಂದ್ರೀಕೃತವಾಗದಂತೆ ಆರ್ಥಿಕ ವ್ಯವಸ್ಥೆಯನ್ನು ನಿರ್ವಹಿಸುವುದು. ಸ್ತ್ರೀಯರಿಗೆ ಮತ್ತು ಪುರುಷರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಕಲ್ಪಿಸುವುದು.

ಇನ್ನೂ ಕೆಲವು ಅಂಶಗಳಿದ್ದು, ಅವು ಹೆಚ್ಚು ಕಡಿಮೆ ಇದೇ ರೀತಿ ಇವೆ. ಪ್ರೊ.ಷಾ.ಅವರನ್ನು ನಾನು ಕೇಳುವುದಕ್ಕೆ ಇಷ್ಟಪಡುವುದು ಇಷ್ಟೇ. ನಾನು ಗಮನ ಸೆಳೆದ ಈ ರಾಜ್ಯನೀತಿಯ ನಿರ್ದೇಶಕ ತತ್ವಗಳು ತಮ್ಮ ಸತ್ವ ಮತ್ತು ದಿಕ್ಕು ದೆಸೆಯಲ್ಲಿ ಸಮಾಜವಾದಿಯಾಗಿಲ್ಲವೇ? ಇದಕ್ಕಿಂತ ಸಮಾಜವಾದ ಹೆಚ್ಚಿದ್ದರೆ ಅದನ್ನು ನಾನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿರುವೆ, ಹೀಗಾಗಿ ನಾನು ಹೇಳುವುದು ಏನಂದರೆ ಈ ಸಮಾಜವಾದಿ ಸೂತ್ರಗಳು ಈಗಾಗಲೇ ನಮ್ಮ ಸಂವಿಧಾನದಲ್ಲಿ ಇರುವುದರಿಂದ ಈ ತಿದ್ದುಪಡಿ ಒಪ್ಪುವುದು ಅನಗತ್ಯ ಎಂದು ತಿದ್ದುಪಡಿಯನ್ನು ತಿರಸ್ಕಾರ ಮಾಡಿದ್ದರು.

ಸಂವಿಧಾನದ 368 ನೇ ವಿಧಿಯ 5 ನೇ ಉಪವಿಧಿಯ ಅನುಸಾರ ಸಂವಿಧಾನ ತಿದ್ದುಪಡಿಯ ವಿಷಯದಲ್ಲಿ ಸಂಸತ್ತಿಗಿರುವ ಅಧಿಕಾರವು ಯಾವುದೇ ಪರಿಮಿತಿಗೆ ಒಳಪಟ್ಟಿಲ್ಲ ಎಂಬ ನಿಯಮವಿರುವುದರಿಂದ ಮತ್ತು ಸರ್ವೋಚ್ಚ ನ್ಯಾಯಾಲಯದ 1973 ರ ಕೇಶವಾನಂದ ಭಾರತಿ ವರ್ಸಸ್ ಕೇರಳ ಪ್ರಕರಣದ ಮೂಲ ರಚನೆಯ ತೀರ್ಪನ್ನು ಉಲ್ಲಂಘಿಸಿ 42 ನೇ ತಿದ್ದುಪಡಿಯಲ್ಲಿ ಸದರಿ ವಿಷಯಗಳನ್ನು ಸೇರ್ಪಡೆ ಮಾಡಿರುವುದರಿಂದ, ಹೊಸಬಾಳೆಯವರ ಆಗ್ರಹದಂತೆ ಸಂಸತ್ತಿಗೆ ಈ ವಿಷಯಗಳನ್ನು ಸಂವಿಧಾನದಿಂದ ಹೊರ ಹಾಕಲು ನಿಯಮಬದ್ಧ ಅವಕಾಶವಿರುವುದು ದಿಟ.

ಆಧಾರ- ಭಾರತ ಸಂವಿಧಾನ ರಚನಾ ಸಭೆಯ ಚರ್ಚೆಗಳು (ನಡಾವಳಿಗಳು)

ದಿನಾಂಕ: 15/11/1948, ಪುಟ ಸಂಖ್ಯೆ, 547,548 ಸಂಪುಟ 3.

Read more Articles on