ಸಾವರ್ಕರ್‌ ಜೀವನ ಚರಿತ್ರೆಯ ಪುಟಗಳು: ದಿ ಗ್ರೇಟ್ ಎಸ್ಕೇಪ್!

KannadaprabhaNewsNetwork | Updated : Feb 18 2024, 03:03 PM IST

ಸಾರಾಂಶ

ಪ್ರಸಿದ್ಧ ಇತಿಹಾಸಕಾರ ವಿಕ್ರಮ್ ಸಂಪತ್ ಬರೆದಿರುವ ವಿನಾಯಕ ದಾಮೋದರ ಸಾವರ್ಕರ್ ಅವರ ಜೀವನ ಚರಿತ್ರೆ ‘ಸಾವರ್ಕರ್’ ಇಂದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ಕಲ್ಚರ್‌ನಲ್ಲಿ ಬಿಡುಗಡೆಯಾಗಲಿದೆ. ಸಾಹಿತ್ಯ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕ ಒಂದು ಅಧ್ಯಾಯ ಇಲ್ಲಿದೆ.

ಡಾ. ವಿಕ್ರಮ್ ಸಂಪತ್

ವಿನಾಯಕರ ಬೆಳಗಿನ ಕಾರ್ಯಕ್ರಮಗಳ ಪೈಕಿ ನಿಯಮಿತವಾಗಿ ಮಾಡುತ್ತಿದ್ದುದು ಸ್ನಾನ. ಆ ಸಮಯದಲ್ಲಿ ಅವರ ಉಸ್ತುವಾರಿ ಕಾನ್ಸ್‌ಟೇಬಲ್‌ಗಳದ್ದು. ಅನೇಕ ಸಲವಂತೂ, ವಿನಾಯಕರು ಸ್ನಾನ ಮಾಡುವಾಗ, ಮುಹಮ್ಮದ್ ಸಿದ್ದಿಕ್ ಅಲ್ಲೇ ನಿಂತಿರುತ್ತಿದ್ದ. 

ಒಂದು ದಿನ ಎದೆ ನೋಯುತ್ತಿದೆ ಎಂದು ವಿನಾಯಕರು ತಿಳಿಸಿದಾಗ, ಸ್ನಾನ ಮಾಡದಂತೆ ಪವಾರ್ ಸಲಹೆ ನೀಡಿದ. ಹಡಗಿನಲ್ಲಿದ್ದ ವೈದ್ಯರು ತಪಾಸಣೆ ನಡೆಸಿ, ಬಲ ಶ್ವಾಸಕೋಶಕ್ಕೆ ಸ್ವಲ್ಪ ಸೋಂಕು ತಗುಲಿದೆ ಎಂದು ತಿಳಿಸಿ, ಎದೆಯ ಮೇಲೆ ಹಚ್ಚಿಕೊಳ್ಳಲು ಮುಲಾಮನ್ನು ನೀಡಿದರು.ರಾತ್ರಿ ಮಲಗುವ ಮೊದಲು ಮುಹಮ್ಮದ್ ಸಿದ್ದಿಕ್, ವಿನಾಯಕರ ಎದೆಗೆ ಮುಲಾಮು ಸವರಿದ.

ಜುಲೈ 7ರಂದು ಮಾರ್ಸೆಲ್ಸ್‌ನಲ್ಲಿ ಹಡಗು ಲಂಗರು ಹಾಕಿದಾಗ, ವಿನಾಯಕರನ್ನು ಕೋಣೆಯಲ್ಲಿ ಬಂಧಿಸಿಟ್ಟ ಪವಾರ್, ತಾನೇ ಸ್ವತಃ ಅವರ ಕೋಣೆಯ ಹೊರಗೆ ಕಾವಲು ನಿಂತ. 

ಪಾರ್ಕರ್ ನಡುಸೇತುವೆಯ ಮೇಲೆ ನಿಂತಿದ್ದು, ತೀರ ಪ್ರದೇಶವನ್ನು ಗಮನಿಸುತ್ತಿದ್ದ - ಯಾರಾದರೂ ಕ್ರಾಂತಿಕಾರಿಗಳು ತಮ್ಮ ಸಂಗಡಿಗನನ್ನು ಬಿಡಿಸಿಕೊಳ್ಳಲು ಅಲ್ಲಿ ಸೇರಿರಬಹುದೆಂಬ ಗುಮಾನಿಯ ಮೇಲೆ. 

ಹಡಗು ನಿಂತಿದ್ದಾಗ ಮೈಯ್ಯೆಲ್ಲ ಕಣ್ಣಾಗಿರುವಂತೆ ಪವಾರ್ ತಮ್ಮ ತಂಡಕ್ಕೆ ವಿಶೇಷ ಎಚ್ಚರಿಕೆ ನೀಡಿದ್ದರು. ತಾನು ಅಥವಾ ಪಾರ್ಕರ್ ಎಲ್ಲಾ ಸಮಯದಲ್ಲಿಯೂ ವಿನಾಯಕರೊಡನೆ ಇರಲೇಬೇಕೆಂದು ನಿಯಮವನ್ನೂ ಮಾಡಿಕೊಂಡಿದ್ದರು. 

ಮಧ್ಯಾಹ್ನ 1:00 ಗಂಟೆಗೆ ಭೋಜನ ಮುಗಿಸಿ, ಸಂಜೆ 4:00ರವರೆಗೆ ಕೋಣೆಯಲ್ಲೇ ಇದ್ದರು. ಹೊರಗೆ ಹಡಗಿನಲ್ಲಿ ಕಲ್ಲಿದ್ದಲು ಉರಿಯುತ್ತಿದ್ದುದರಿಂದ ಬಿಸಿ ಹವೆ. ಕೋಣೆಯ ಎಲ್ಲ ಗವಾಕ್ಷಗಳೂ ಮುಚ್ಚಿದ್ದವು. 

ಪರಿಣಾಮ, ತಡೆಯಲಾರದಷ್ಟು ಸೆಖೆ. ಹೀಗಾಗಿ ಮೂವರೂ ಸ್ವಲ್ಪ ಸಮಯ ಮೇಲ್ಛಾವಣಿಗೆ ಹೋಗಿ ಬಂದರು. ಸಂಜೆ ಸುಮಾರು 5:00 ಗಂಟೆ ಹೊತ್ತಿಗೆ ಕೈಕಾಲು ತೊಳೆದುಕೊಳ್ಳಲು ವಿನಾಯಕರನ್ನು ಕೆಳಗೆ ಕರೆದೊಯ್ದರು. 

ರಾತ್ರಿ 7:00 ಗಂಟೆಗೆ ಊಟದ ಸಮಯದವರೆಗೂ ಅಲ್ಲೇ ಇರಿಸಿಕೊಂಡಿದ್ದರು. ರಾತ್ರಿ ಊಟದ ನಂತರ, ಅವರಿಗೆ ಅಲ್ಲೇ ಅಡ್ಡಾಡಲು ಅವಕಾಶ ನೀಡಲಾಯಿತು. ನಾಲ್ವರು ಪೊಲೀಸರೂ ಸುತ್ತಲೂ ಕಾಯುತ್ತಾ ನಿಂತಿದ್ದರು. 

ರಾತ್ರಿ ಸುಮಾರು 9:00 ಗಂಟೆಯ ಸುಮಾರಿಗೆ ಸ್ನಾನ ಮಾಡಬೇಕೆಂದು ವಿನಾಯಕರು ವಿನಂತಿಸಿದರು. ಹಿಂದೆ ಯಾವತ್ತೂ ಆ ಸಮಯದಲ್ಲಿ ಸ್ನಾನ ಮಾಡಿರಲಿಲ್ಲ. 

ಪವಾರ್ ಅವರನ್ನು ಕಾನ್ಸ್‌ಟೇಬಲ್‌ಗಳ ಸುಪರ್ದಿಗೆ ಒಪ್ಪಿಸಿ, ಗವಾಕ್ಷವಿಲ್ಲದ ಒಳಗಿನ ಸ್ನಾನಗೃಹಕ್ಕೆ ಕರೆದೊಯ್ಯಲು ಮುಹಮ್ಮದ್ ಸಿದ್ದಿಕ್‌ಗೆ ಸೂಚಿಸಿದ. ಸ್ನಾನದ ನಂತರ 11:00 ಗಂಟೆಯ ಹೊತ್ತಿಗೆ ವಿನಾಯಕರು ಮಲಗಿದರು, ಇತರರೂ ವಿಶ್ರಮಿಸಿದರು.

ಮರುದಿನ ಜುಲೈ 8ರ ಮುಂಜಾನೆ 6:15ಕ್ಕೇ ಶೌಚಕ್ಕೆ ಹೋಗಲು ವಿನಾಯಕರು ಎದ್ದರು. ಆದರೆ, ಅವರೇ ಸ್ವತಃ ಹೋಗುವಂತಿರಲಿಲ್ಲ, ಪೊಲೀಸ್ ಅಧಿಕಾರಿಗಳ ಜೊತೆಯೇ ಹೋಗಬೇಕೆನ್ನುವುದು ಕಟ್ಟುನಿಟ್ಟಾದ ನಿಯಮ. 

ಪೊಲೀಸ್ ಅಧಿಕಾರಿಗಳು ಹಿಂದಿನ ರಾತ್ರಿ ಬಹಳ ತಡವಾಗಿ ಮಲಗಿದ್ದರು. ಪವಾರ್ ಗಾಢ ನಿದ್ರೆಯಲ್ಲಿದ್ದ. ವಿನಾಯಕರ ವಿನಂತಿ ಕೇಳಿಸಿದರೂ, ಉತ್ತರಿಸದೇ ಮಗ್ಗಲು ಬದಲಿಸಿ ನಿದ್ರೆ ಮುಂದುವರೆಸಿದ. 

ಪಾರ್ಕರ್‌ಗೆ ಅರ್ಧಂಬರ್ಧ ಎಚ್ಚರ. ಆತನೇ ವಿನಾಯಕರನ್ನು ಶೌಚಾಲಯಕ್ಕೆ ಕರೆದೊಯ್ದ. ಕಿರಿದಾಗಿದ್ದ ಓಣಿಯಲ್ಲಿ ವಿನಾಯಕರು ಮುಂದೆ, ಪಾರ್ಕರ್ ಅವರ ಹಿಂದೆ. 

ಇಬ್ಬರು ಕಾನ್‌ಸ್ಟೇಬಲ್‌ಗಳೂ ಶೌಚಾಲಯದ ಬಾಗಿಲ ಎರಡೂ ಬದಿಯಲ್ಲಿ ಕಾವಲು ನಿಂತರು. ಅಲ್ಲೇ ಇನ್ನೊಂದು ಪಕ್ಕದಲ್ಲಿ ಅವರ ಸಾಮಾನಿನ ಚೀಲಗಳಿದ್ದವು. 

ಅವರಿನ್ನೂ ಬೆಳಗಿನ ಕಾರ್ಯಕ್ಕೆ ಸಿದ್ಧರಾಗುತ್ತಿದ್ದರು. ನಿದ್ರೆಯ ಮಂಪರಿನಲ್ಲಿದ್ದ ಪಾರ್ಕರ್, ವಿನಾಯಕರನ್ನು ಒಳಕ್ಕೆ ಕಳುಹಿಸುವ ಮುಂಚೆ ಶೌಚಾಲಯಕ್ಕೆ ಗವಾಕ್ಷವಿದೆಯೇ ಎನ್ನುವುದನ್ನು ಗಮನಿಸಲಿಲ್ಲ. 

ಕಾನ್ಸ್‌ಟೇಬಲ್‌ಗಳು ತಾವು ಬರುವುದನ್ನು ಗಮನಿಸಿದರೇ, ಅವರು ವಿನಾಯಕರ ಮೇಲೆ ಕಣ್ಣಿಡುತ್ತಾರೆಯೇ, ಇತ್ಯಾದಿಗಳನ್ನೂ ಪಾರ್ಕರ್ ಗಮನಿಸಲಿಲ್ಲ.

ಕಾರ್ಯಕ್ಕೆ ಸಿದ್ಧನಾದ ಅಮರಸಿಂಗ್, ಬಂಧಿಯನ್ನಿರಿಸಿದ್ದ ಕೋಣೆಗೆ ಹೋದ. ಎಂದಿನಂತೆ ಬಂಧಿಯ ಪ್ರಾತರ್ವಿಧಿಗಳಿಗೆ ಅನುವು ಮಾಡಿಕೊಡುವುದು ಆತನ ಉದ್ದೇಶವಾಗಿತ್ತು. 

ಆತ ದಾರಿಯಲ್ಲಿದ್ದಾಗಲೇ ಪಾರ್ಕರ್ ಶಿಳ್ಳೆಯನ್ನು ಹಾಕಿ, ಬಂಧಿಯು ಶೌಚಾಲಯದಲ್ಲಿ ಇರುವನೆಂದು ಕೈಸನ್ನೆಯ ಮೂಲಕ ತಿಳಿಸಿದ. ನಂತರ ಪಾರ್ಕರ್ ಸಾವಕಾಶವಾಗಿ ಕೋಣೆಯತ್ತ ಕಾಲು ಹಾಕಿದ. 

ಅಮರಸಿಂಗ್ ತಕ್ಷಣವೇ ಶೌಚಾಲಯದತ್ತ ಧಾವಿಸಿದ, ಸ್ವಲ್ಪ ಸಮಯದಲ್ಲೇ ಮುಹಮ್ಮದ್ ಸಿದ್ದಿಕ್ ಕೂಡಾ ಅವನನ್ನು ಸೇರಿಕೊಂಡ. ಇಷ್ಟೆಲ್ಲಾ ಆಗುವ ಹೊತ್ತಿಗೆ ವಿನಾಯಕರು ಒಳಗೆ ಹೋಗಿ ಒಂದು ನಿಮಿಷವಾಗಿತ್ತಷ್ಟೇ. 

ಅವರು ಒಳಗಿನಿಂದ ಚಿಲಕ ಹಾಕಿಕೊಂಡು, ಹೊರಗೆ ನಡೆಯುತ್ತಿದ್ದ ಗೊಂದಲದ ಲಾಭ ಪಡೆಯುವತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಅವರ ಅದೃಷ್ಟಕ್ಕೆ ಶೌಚಾಲಯದ ಗವಾಕ್ಷ ತೆರೆದಿತ್ತು, ಪಾರ್ಕರ್ ಅದನ್ನು ಮುಚ್ಚುವ ಪ್ರಯತ್ನ ಮಾಡಿರಲಿಲ್ಲ. 

ಈ ಸುವರ್ಣ ಘಳಿಗೆಗೇ ವಿನಾಯಕರು ಕಾಯುತ್ತಿದ್ದದ್ದು. ತನ್ನೆಲ್ಲ ಶಕ್ತಿಯನ್ನೂ ಒಗ್ಗೂಡಿಸಿ, ಹನ್ನೆರಡು ಇಂಚು ವ್ಯಾಸದ ಗವಾಕ್ಷದತ್ತ ವಿನಾಯಕರು ನೆಗೆದರು. ತನ್ನ ನೀಳಕಾಯವನ್ನು ಅದರೊಳಗೆ ಹೇಗೋ ನುಗ್ಗಿಸಿ, ಸಮುದ್ರದೊಳಗೆ ಜಿಗಿದರು. 

ತಾನಿನ್ನು ತಪ್ಪಿಸಿಕೊಂಡೆ, ತನಗಿನ್ನು ಸ್ವಾತಂತ್ರ್ಯ ಸಿಗುತ್ತದೆ, ನ್ಯಾಯ ಲಭಿಸುತ್ತದೆ, ಎಂಬ ಉತ್ಸಾಹದಿಂದ ಸಮುದ್ರದಲ್ಲಿ ಈಜಿದರು. ಹತ್ತು-ಹನ್ನೆರಡು ಅಡಿಗಳು ಈಜುವಷ್ಟರಲ್ಲಿ ಬಂದರುಕಟ್ಟೆ ತಲುಪಿಯಾಗಿತ್ತು.

ಶೌಚಾಲಯದ ಬಾಗಿಲಿನ ಮೇಲ್ಭಾಗದಲ್ಲಿ ಮತ್ತು ತಳಭಾಗದಲ್ಲಿ ಸುಮಾರು ಮೂರು ಇಂಚುಗಳ ತೆರವು ಇದ್ದಿತು, ಒಳಗಿನದು ಕಾಣಲೆಂದೇ ಮಾಡಿದ್ದಿರಬೇಕು. 

ಬಾಗಿಲ ಕೆಳಗಿನಿಂದ ಇಣುಕುಹಾಕಿ ನೋಡಿದ ಅಮರಸಿಂಗ್‌ಗೆ ಚಪ್ಪಲಿಯ ಜೋಡಿ ಕಾಣಿಸಿತು, ವಿನಾಯಕರು ಶೌಚಕ್ಕೆ ಕುಳಿತಿರಬೇಕೆಂದು ಆತ ಭಾವಿಸಿದ. ಆದರೂ, ಮತ್ತೊಮ್ಮೆ ಖಚಿತಪಡಿಸಿಕೊಳ್ಳಲು ಆತ ಮೂತ್ರಾಲಯದ ಕಟ್ಟೆಯ ಮೇಲೆ ನಿಂತು ಮೇಲಿನಿಂದ ಇಣುಕು ಹಾಕಿದ. 

ಅಲ್ಲಿನ ದೃಶ್ಯವನ್ನು ಕಂಡು ಆತ ನಡುಗಿ ಹೋಗಿ, ಗಟ್ಟಿಯಾಗಿ ಚೀರಿದ. ವಿನಾಯಕರ ಅರ್ಧ ದೇಹ ಗವಾಕ್ಷದಿಂದ ಹೊರಹೋಗಿತ್ತು. ‘ಬಂಧಿಯು ತಪ್ಪಿಸಿಕೊಳ್ಳುತ್ತಿದ್ದಾನೆ, ಆತನನ್ನು ತಡೆಯಿರಿ’, ಎಂದು ಕೂಗಿದ ಅಮರಸಿಂಗ್, ಶೌಚಾಲಯದ ಬಾಗಿಲನ್ನು ಮುರಿದು ತೆಗೆಯಲು ಪ್ರಯತ್ನಿಸಿದ.

ಬಾಗಿಲು ಬಡಪೆಟ್ಟಿಗೆ ಜಗ್ಗಲಿಲ್ಲ, ಅದರ ಗಾಜಿನ ಭಾಗ ಮಾತ್ರ ಮುರಿದು ಬಿತ್ತು. ಆ ಹೊತ್ತಿಗಾಗಲೇ ವಿನಾಯಕರು ಸಮುದ್ರಕ್ಕೆ ಜಿಗಿದಾಗಿತ್ತು. ಇಬ್ಬರು ಕಾನ್‌ಸ್ಟೇಬಲ್‌ಗಳೂ ಎಚ್ಚರಿಕೆಯ ಕೂಗನ್ನು ಹಾಕುತ್ತಾ, ಹಡಗಿನ ಮೇಲ್ಭಾಗಕ್ಕೆ ಓಡಿದರು. ಆ ಹೊತ್ತಿಗೆ ಬಂದರುಕಟ್ಟೆ ತಲುಪಿದ್ದ ವಿನಾಯಕರು, ಅದನ್ನು ಹತ್ತಿ ಓಡಲು ಪ್ರಾರಂಭಿಸಿದ್ದರು. 

ಕಾನ್‌ಸ್ಟೇಬಲ್‌ಗಳು ಆತನ ಹಿಂದೆ ಓಡಿದರು, ‘ಕಳ್ಳ! ಕಳ್ಳ! ಹಿಡಿಯಿರಿ! ಹಿಡಿಯಿರಿ!’ ಎಂದು ಕೂಗುತ್ತಿದ್ದರು. ಅವರ ಜೊತೆಗೆ ಹಡಗಿನ ಇತರ ಸಿಬ್ಬಂದಿಗಳೂ ಕೂಡಿಕೊಂಡರು. 

ವಿನಾಯಕರು ಸುಮಾರು 200 ಯಾರ್ಡ್‌ಗಳಷ್ಟು ದೂರ ಕ್ರಮಿಸಿದ್ದರು. ಸಮುದ್ರಕ್ಕೆ ನೆಗೆದದ್ದು, ನೀರಿನಲ್ಲಿ ಈಜಿದ್ದು, ದಡದಿಂದ ಓಡಿದ್ದು, ಇವೆಲ್ಲವೂ ಅವರನ್ನು ದಣಿಸಿತ್ತು. 

ಮುಂದೆ ಟ್ಯಾಕ್ಸಿಯನ್ನು ಕರೆಯೋಣವೆಂದು ಯೋಚಿಸಿದರು, ಆದರೆ ಟ್ಯಾಕ್ಸಿಗೆ ನೀಡಲು ತನ್ನ ಬಳಿ ಹಣವೇ ಇಲ್ಲ ಎನ್ನುವುದು ಅವರಿಗೆ ಅರಿವಾಯಿತು.

ಪೂರ್ವಯೋಜನೆಯಂತೆ ಅಯ್ಯರ್, ಮೇಡಂ ಕಾಮಾ ಮತ್ತು ವೀರೇಂದ್ರನಾಥ ಚಟ್ಟೋಪಾಧ್ಯಾಯ ಅವರುಗಳು ಆ ಹೊತ್ತಿಗೆ ಅಲ್ಲಿಗೆ ತಲುಪಿರಬೇಕಿತ್ತು. 

ಅವರು ಅಲ್ಲೇ ಸನಿಹದಲ್ಲಿದ್ದರೂ, ವಿನಾಯಕರ ದುರಾದೃಷ್ಟಕ್ಕೆ ಆ ಸ್ಥಳಕ್ಕೆ ತಲುಪುವ ಹೊತ್ತಿಗೆ ತಡವಾಗಿತ್ತು. ಆ ಹೊತ್ತಿಗೆ ವಿನಾಯಕರನ್ನು ಬ್ರಿಟಿಷ್ ಪೊಲೀಸರು ಮತ್ತೆ ಬಂಧಿಸಿಬಿಟ್ಟಿದ್ದರು. 

ರೈಲ್ವೆ ಲೆವೆಲ್ ಕ್ರಾಸಿಂಗ್ ಮುಚ್ಚಿದ್ದರಿಂದಲೋ ಅಥವಾ ಚಹಾ ಸ್ವೀಕರಿಸಿದ್ದರಿಂದಲೋ, ಅವರು ಬಂದದ್ದು ಸ್ವಲ್ಪ ತಡವಾಗಿತ್ತು. ಆ ಸ್ಥಳಕ್ಕೆ ಭಾರತೀಯ ಕ್ರಾಂತಿಕಾರಿಗಳು ಬಂದಿದ್ದರು ಎನ್ನುವುದನ್ನು ಪುಷ್ಟೀಕರಿಸುವ ಯಾವುದೇ ಪುರಾವೆ ಇಲ್ಲ. ಹೀಗಾಗಿ, ಈ ಪ್ರಸಂಗದ ಕುರಿತಾಗಿ ಅನೇಕ ರೀತಿಯ ಕಥೆಗಳು ಹುಟ್ಟಿಕೊಂಡಿವೆ.

ಏತನ್ಮಧ್ಯೆ, ಫ್ರೆಂಚ್ ಕಡಲ ದಳದ ಬ್ರಿಗೇಡಿಯರ್ ಪೆಸ್ಕಿ ಅವರು ಅಲ್ಲಿ ನಡೆಯುತ್ತಿದ್ದ ಗೊಂದಲದ ವಾತಾವರಣ ಗಮನಿಸಿ, ತಾವೂ ವಿನಾಯಕರ ಬೆನ್ನು ಹತ್ತಿದರು. ಕೆಲವೇ ನಿಮಿಷಗಳಲ್ಲಿ ಕಾನ್ಸ್‌ಟೇಬಲ್‌ಗಳು ಮತ್ತು ಬ್ರಿಗೇಡಿಯರ್ ಪೆಸ್ಕಿ ಸೇರಿಕೊಂಡು ವಿನಾಯಕರನ್ನು ಹಿಡಿದರು. 

ಈ ಫ್ರೆಂಚ್ ಪೊಲೀಸನನ್ನು ವಿನಾಯಕರು, “ನನ್ನನ್ನು ನಿಮ್ಮ ಸುಪರ್ದಿಗೆ ತೆಗೆದುಕೊಳ್ಳಿ, ನನಗೆ ಸಹಾಯ ಮಾಡಿ; ಮ್ಯಾಜಿಸ್ಟ್ರೇಟರ ಬಳಿಗೆ ನನ್ನನ್ನು ಕರೆದೊಯ್ಯಿರಿ” ಎಂದು ಕೇಳಿಕೊಂಡರು. 

ತಾನು ಫ್ರೆಂಚ್ ನೆಲದ ಮೇಲೆ ಕಾಲಿಟ್ಟಿರುವುದರಿಂದ, ಅಲ್ಲಿ ಫ್ರೆಂಚರ ಕಾನೂನು ಮಾತ್ರ ನಡೆಯುತ್ತದೆ ಮತ್ತು ಬ್ರಿಟಿಷರ ಅಧಿಕಾರ ನಡೆಯುವುದಿಲ್ಲ, ಎನ್ನುವುದು ವಿನಾಯಕರ ಊಹೆಯಾಗಿತ್ತು. 

ರಾಜಕೀಯ ಖೈದಿಯಾಗಿದ್ದರಿಂದ, ಫ್ರ್ರಾನ್ಸ್ ದೇಶದಲ್ಲಿ ಆಶ್ರಯ ಪಡೆಯಲು ಅವರು ಪೂರ್ಣವಾಗಿ ಅರ್ಹರಾಗಿದ್ದರು. ಆದರೆ, ಅವರ ದುರಾದೃಷ್ಟಕ್ಕೆ ಫ್ರೆಂಚ್ ಪೊಲೀಸ್ ಪೆಸ್ಕಿಗೆ ಇಂಗ್ಲಿಷ್ ಅರ್ಥವಾಗುತ್ತಿರಲಿಲ್ಲ. 

ಏದುಸಿರು ಬಿಡುತ್ತಾ ಓಡಿ ಬರುತ್ತಿದ್ದ ಕಾನ್‌ಸ್ಟೇಬಲ್‌ಗಳಿಗೆ ವಿನಾಯಕರನ್ನು ಪೆಸ್ಕಿ ಒಪ್ಪಿಸಿಬಿಟ್ಟ. ಅವರು ವಿನಾಯಕರನ್ನು ಮೋರಿಯಾ ಹಡಗಿಗೆ ಎಳೆದುಕೊಂಡು ಹೋದರು. ಅವರ ಸಾಹಸ ಪ್ರಯತ್ನ ವ್ಯರ್ಥವಾಗಿತ್ತು.

ಸ್ವಾತಂತ್ರ್ಯಪೂರ್ವದಲ್ಲಿದ್ದ ವಿದೇಶೀ ಆಳುಗರ ದಬ್ಬಾಳಿಕೆ ಮತ್ತು ನಂತರ ಬಂದ ಸ್ವದೇಶೀ ಆಳುಗರ ಅಸಹಕಾರಗಳ ಕಾರಣದಿಂದಾಗಿ, ಸ್ವಾತಂತ್ರ್ಯಕ್ಕಾಗಿ ನಡೆದ ಸಶಸ್ತ್ರ ಕ್ರಾಂತಿಯ ಕುರಿತು ಜನರಿಗೆ ಹೆಚ್ಚು ಮಾಹಿತಿಗಳು ದೊರೆತಿಲ್ಲ. 

ಹೀಗಾಗಿ, ತನ್ನ ಆತ್ಮಚರಿತ್ರೆಯನ್ನು ದಾಖಲಿಸುವ ಮೂಲಕ, ಮರೆಮಾಚಿರುವ ವಾಸ್ತವಗಳನ್ನು ಹಾಗೂ ಅಂದು ದೇಶಕ್ಕಾಗಿ ಹೋರಾಡಿದ ಶೂರರ ಕಥೆಗಳನ್ನು ಜನರಿಗೆ ಪರಿಚಯಿಸುವುದು ರಾಷ್ಟ್ರೀಯ ಕರ್ತವ್ಯವೇ ಆಗುತ್ತದೆ. 

ನಿರಂತರ ವಿಚಾರವಾದಿಯಾಗಿದ್ದ ಸಾವರ್ಕರರು, ತಮ್ಮನ್ನು ಮಾತ್ರವಲ್ಲದೆ, ಮುಂಬರುವ ಎಲ್ಲಾ ಜೀವನಚರಿತ್ರೆಕಾರರಿಗೂ ಒಂದು ಎಚ್ಚರಿಕೆಯನ್ನು ನೀಡುತ್ತಾರೆ. 

ಹೆಚ್ಚಿನ ಜನಮನ್ನಣೆ ಗಳಿಸುವ ಆಸೆಯಿಂದ ಅತಿಶಯೋಕ್ತಿ ಹಾಗೂ ಸ್ವಪ್ರಶಂಸೆಯ ಕಡೆಗೆ ಮನಸ್ಸು ಸೆಳೆಯಲ್ಪಡುವುದು ಸ್ವಾಭಾವಿಕ. ಹೀಗಾಗಿ, ತಮ್ಮನ್ನೂ ಒಳಗೊಂಡಂತೆ ಎಲ್ಲಾ ಜೀವನಚರಿತ್ರೆಕಾರರು ಸಂಯಮದಿಂದ ಬರೆಯಬೇಕು ಹಾಗೂ ನಿರ್ಲಿಪ್ತ ಭಾವದಿಂದ ಬರೆಯಬೇಕು ಎಂದು ಆಗ್ರಹಿಸುತ್ತಾರೆ.

Share this article