ಅನುವಾದಕರ ಸಂಗದಲ್ಲಿ ಮೂರು ಹಗಲು ಮೂರು ಇರುಳು

ಸಾರಾಂಶ

ಅನುವಾದಕ ಹರ್ಷ ರಘುರಾಮ್‌ರನ್ನು ಜರ್ಮನ್ ದೇಶದವರು ಆಹ್ವಾನದ ಮೇಲೆ ಕರೆಸಿ, ಉಳಿದ ಹದಿನೈದು ಭಾಷೆಯ ಜನರ ಜೊತೆಗೆ ಮೂರು ದಿನ ಬೆರೆಯುವ ಅವಕಾಶ ಕಲ್ಪಿಸಿಕೊಟ್ಟಿದ್ದರು

ಛಂದ ಪುಸ್ತಕ ’ನನ್ನ ತಂಗಿ ಈಡಾ’ ಎನ್ನುವ ಜರ್ಮನ್ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿತ್ತು. ಅದರ ಅನುವಾದಕ ಹರ್ಷ ರಘುರಾಮ್‌ರನ್ನು ಜರ್ಮನ್ ದೇಶದವರು ಆಹ್ವಾನದ ಮೇಲೆ ಕರೆಸಿ, ಉಳಿದ ಹದಿನೈದು ಭಾಷೆಯ ಜನರ ಜೊತೆಗೆ ಮೂರು ದಿನ ಬೆರೆಯುವ ಅವಕಾಶ ಕಲ್ಪಿಸಿಕೊಟ್ಟಿದ್ದರು. ಈ ಅನುವಾದಕರ ಜತಗೆ ಕಳೆದ ಮೂರು ದಿನಗಳ ನೆನಪನ್ನು ಹರ್ಷ ಇಲ್ಲಿ ಬರೆದಿದ್ದಾರೆ.

ಭಾಷೆಗಳ ನಡುವೆ ಕೊಂಡಿ ಬೆಸೆಯುವ ಅನುವಾದದ ಕ್ರಿಯೆ ಅನಾದಿ ಕಾಲದಿಂದಲೂ ಜಗತ್ತಿನೆಲ್ಲೆಡೆ ಸಂವಹನಕ್ಕೆ ಬುನಾದಿಯಾಗಿದೆ. ಅದರಲ್ಲೂ ಸಾಹಿತ್ಯದ ಅನುವಾದ ‌ಹೊಸ ಪ್ರಪಂಚವೊಂದನ್ನು ಮತ್ತೊಂದು ಭಾಷೆಯ ಓದುಗರಿಗೆ ತೆರೆಡಿದಬಲ್ಲದು. ಕಳೆದ ವರ್ಷ ನಾನು ಅಂತಹ ಒಂದು ಸಾಹಸಕ್ಕೆ ಕೈ ಹಾಕಿ ಸಮಕಾಲೀನ ಜರ್ಮನ್‌ ಕಾದಂಬರಿಯೊಂದನ್ನು ಕನ್ನಡಕ್ಕೆ ಅನುವಾದಿಸಿದೆ. ಇದರಿಂದ ಉತ್ತೇಜಿತನಾಗಿ ಲಿಟೆರರಿ ಕೊಲೋಕ್ವಿಯಮ್‌ ಬರ್ಲಿನ್ (LCB) ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿದ ಜರ್ಮನ್‌ ಅನುವಾದಕರ ವಿಶ್ವ ಸಮಾವೇಶಕ್ಕೆ ಅರ್ಜಿ ಸಲ್ಲಿಸಿ ಆಹ್ವಾನವನ್ನೂ ಪಡೆದೆ. ಜರ್ಮನಿಯಲ್ಲಿ ನಡೆದ ಸಮವಾವೇಶಕ್ಕಾಗಿ ಕಳೆದ ತಿಂಗಳು ರಾಜಧಾನಿ ಬರ್ಲಿನ್‌ಗೆ ಹೋಗಿದ್ದೆ.

ಜರ್ಮನ್‌ ಭಾಷೆಯಿಂದ ಬೇರೆ ಬೇರೆ ಭಾಷೆಗಳಿಗೆ ಅನುವಾದ ಮಾಡುವವರನ್ನು ಒಂದೆಡೆ ಸೇರಿಸುವುದು ಸಮಾವೇಶದ ಮುಖ್ಯ ಉದ್ದೇಶವಾಗಿತ್ತು. ಸಮಾವೇಶ ನಡೆಯುವ ಸುಮಾರು ಆರು ತಿಂಗಳ ಹಿಂದೆ ಅರ್ಜಿ ಆಹ್ವಾನಿಸಲಾಗಿತ್ತು. 120ಕ್ಕೂ ಹೆಚ್ಚು ಅರ್ಜಿಗಳಲ್ಲಿ ಕೇವಲ 24 ಅನುವಾದಕರನ್ನು ಆಯ್ಕೆ ಮಾಡಲಾಗಿತ್ತು ಎಂದು ನಂತರ ತಿಳಿಯಿತು. ಜರ್ಮನಿಯ ಸುತ್ತಮುತ್ತಲು ಇರುವ ಡಚ್‌, ಪೋಲಿಶ್‌, ಫ್ರೆಂಚ್‌, ಡೇನಿಶ್‌, ಸ್ವೀಡಿಶ್‌, ಭಾಷೆಗಳ ಅನುವಾದಕರ ಜೊತೆಗೆ ಇಂಗ್ಲಿಷ್‌, ಇಟಾಲಿಯನ್, ಎಸ್ಟೋನಿಯನ್‌, ಹಂಗೆರಿಯನ್‌, ಲಿಥುವೇನಿಯನ್‌, ಸ್ಲೋವಾಕ್‌, ನಾರ್ವೇಜಿಯನ್‌, ಕ್ರೊಯೇಷಿಯನ್‌, ರುಮೇನಿಯನ್‌‌, ಯುಕ್ರೇನಿಯನ್, ಕತಲಾನ್‌, ಸ್ಪ್ಯಾನಿಷ್ (ಅರ್ಜೆಂಟಿನಾ)‌, ಮತ್ತು ಪೋರ್ಚುಗೀಸ್‌ (ಬ್ರೆಝಿಲ್‌) ಭಾಷೆಗಳ ಅನುವಾದಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. 

ಪೂರ್ವ ಯೂರೋಪಿನ‌ ಸುಮಾರು ಇಪ್ಪತ್ತು ಲಕ್ಷ ಜನರು ಮಾತನಾಡುವ ಪುಟ್ಟ ಭಾಷೆ ಮೆಸಿಡೋನಿಯನ್‌ನ ಅನುವಾದಕಿ (ಇವರು ಪ್ರಕಾಶಕಿಯೂ ಹೌದು) ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇರಾಕ್‌ ದೇಶದ ಅರಬ್ಬಿ ಅನುವಾದಕಿಯೊಬ್ಬರು ಮೊದಲ ಬಾರಿಗೆ ಬಾಗ್ದಾದ್‌ನಿಂದ ಸಮಾವೇಶಕ್ಕೆ ಬಂದಿದ್ದರು. ಜೊತೆಗೆ ತೈವಾನ್‌ನಿಂದ ಒಬ್ಬರು ಹಾಗೂ ವಿಯೆಟ್ನಾಮ್‌ ದೇಶದ ಇಬ್ಬರು ಭಾಗವಹಿಸಿದ್ದರು. ಇನ್ನು ಮಿಕ್ಕ ಒಂದು ಭಾಷೆ – ಕನ್ನಡ. ಕನ್ನಡ ಭಾಷೆಯ ಹೆಸರನ್ನು ಅಲ್ಲಿದ್ದ ಹೆಚ್ಚಿನವರು ಮೊದಲ ಬಾರಿಗೆ ಕೇಳುತ್ತಿದ್ದರು. ನಮ್ಮ ದಿನನಿತ್ಯದ ಭಾಷೆ, ಏಳು ಕೋಟಿ ಜನರು ಆಡುವ ಭಾಷೆ, ಅದರ ಹೆಸರು ಜಗತ್ತಿನಲ್ಲಿ ಅಷ್ಟು ಪ್ರಚಲಿತವಲ್ಲ ಎಂದು ತಿಳಿದು ಸೋಜಿಗವಾಯಿತು. ಭಾರತದ ಭಾಷೆಗಳಲ್ಲಿ ಸಂಸ್ಕೃತ ಹಿಂದಿಗಳ ಹೆಸರು ಎಲ್ಲರಿಗೂ ಪರಿಚಯವಿತ್ತು, ಬೆರಳೆಣಿಕೆಯಷ್ಟು ಅನುವಾದಕರಿಗೆ ತಮಿಳಿನ ಹೆಸರು ತಿಳಿದಿತ್ತು. 

ಕನ್ನಡದ ಬಗ್ಗೆ ಜರ್ಮನ್‌ ಭಾಷೆಯಲ್ಲಿ ವಿವರಿಸುವಾಗ ಇನ್ನೊಂದು ತಮಾಷೆಯಿದೆ. ಕೆನಡಾ ದೇಶದ ಸ್ಪೆಲಿಂಗ್‌ ಜರ್ಮನ್‌ನಲ್ಲಿ ʼKanada’ ಎಂದಾಗುತ್ತದೆ. ಈ ದೇಶ ಭಾಷೆಗಳ ಗೊಂದಲವನ್ನು ಪರಿಹರಿಸಿ ಕನ್ನಡ ಭಾಷೆಯ ಬಗ್ಗೆ, ಅದರ ಸಾಹಿತ್ಯ ಪರಂಪರೆಯನ್ನು ನನಗೆ ತಿಳಿದಷ್ಟು ಮಟ್ಟಿಗೆ ವಿವರಿಸಿದೆ. ಎಲ್ಲರೂ ಅಂದು ರಾತ್ರಿ ವಿಕಿಪೀಡಿಯಾದಲ್ಲಿ ಕನ್ನಡದ ಬಗ್ಗೆ ಓದಿಕೊಂಡು ಬಂದು ಮಾರನೆಯ ದಿನ ಪ್ರಶ್ನೆಗಳನ್ನು ಕೇಳಿದಾಗ ನನಗೆ ನಿಜಕ್ಕೂ ಸಂತೋಷವಾಯಿತು. ಜೊತೆಗೆ ಬಾನು ಮುಷ್ತಾಕ್‌ರವರು ಬರೆದ ಕಥಾ ಸಂಕಲನವೊಂದು (ಅನು. ದೀಪಾ ಭಾಸ್ತಿ) ಬುಕರ್‌ ಪ್ರೈಜ್‌ನ ಕಿರುಪಟ್ಟಿಯಲ್ಲಿ (shortlist) ಇರುವುದು ಕನ್ನಡ ಸಾಹಿತ್ಯದ ಬಗ್ಗೆ ಕುತೂಹಲ ಕೆರಳಿಸಲು ಮತ್ತಷ್ಟು ನೆರವಾಯಿತು.

ಸಮಾವೇಶದಲ್ಲಿ ಭಾಗವಹಿಸಿದ ಕಿರಿಯರಲ್ಲಿ ನಾನೂ ಒಬ್ಬ. ಅಲ್ಲಿದ್ದ ಕೆಲವರು ನನ್ನ ವಯಸ್ಸಿನಷ್ಟು ಅನುಭವವನ್ನು ಅನುವಾದದಲ್ಲಿ ಪಡೆದಿದ್ದರು. ಮೇಲಾಗಿ ಅಲ್ಲಿದ್ದ ಎಲ್ಲರೂ ಜರ್ಮನ್‌ ಭಾಷೆ, ಸಾಹಿತ್ಯ ಅಥವಾ ಅನುವಾದಕ್ಕೆ ಸಂಬಂಧಿಸಿದ ಪದವಿ ಪಡೆದವರು, ನಾನೊಬ್ಬನೇ ತಾಂತ್ರಿಕ ಪದವಿಧರ.‌ ನನ್ನ ಜರ್ಮನ್‌ ಕಲಿಕೆ ಆರಂಭವಾದದ್ದು ಸುಮಾರು ಹನ್ನೊಂದು ವರ್ಷಗಳ ಕೆಳಗೆ, ಬೆಂಗಳೂರಿನ ಗ್ಯೋಥೆ ಇನ್ಸ್ಟಿಟ್ಯೂಟ್‌ನಲ್ಲಿ. ಜರ್ಮನಿಗೆ ಮಾಸ್ಟರ್ ಓದಲು ಹೋದಾಗ ದಿನನಿತ್ಯದ ಜೀವನಕ್ಕೆ ಬೇಕಾದೀತೆಂದು ಜರ್ಮನ್‌‌ ಭಾಷೆ ಕಲಿಯಲು ತೊಡಗಿದೆ. ಬರುಬರುತ್ತಾ ಭಾಷೆಯ ಮೇಲೆ ಹಿಡಿತ ಸಾಧಿಸಿದೆ. ಜರ್ಮನಿಗೆ ಹೋದ ನಂತರ ಹೆಚ್ಚು ಹೆಚ್ಚು ಜರ್ಮನ್‌ನಲ್ಲಿ ಮಾತಾಡಿ, ದಿನಪತ್ರಿಕೆ ಹಾಗೂ ನಂತರ ಸಾಹಿತ್ಯವನ್ನು ಓದುವಷ್ಟರ ಮಟ್ಟಿಗೆ ಪ್ರೌಢಿಮೆ ಬೆಳೆಸಿಕೊಂಡೆ. ಲೇಖಕ ವಸುಧೇಂದ್ರರ ಒತ್ತಾಸೆಯ ಮೇರೆಗೆ ಜರ್ಮನ್ ಯುವ ಲೇಖಕಿ ಕಾರೋಲೀನ ವಾಲ್‌ರ ಕಾದಂಬರಿಯನ್ನು ಆಯ್ದುಕೊಂಡು ʼನನ್ನ ತಂಗಿ ಈಡಾʼ ಎಂದು ಕನ್ನಡಕ್ಕೆ ಅನುವಾದಿಸಿದೆ. ಇಷ್ಟನ್ನು ಅಲ್ಲಿದ್ದ ಎಲ್ಲರಿಗೂ ಹೇಳಿ ಮುಗಿಸಿದಾಗ ಎಲ್ಲರಿಗೂ ಅಚ್ಚರಿ, ಸಂತೋಷ. ಅಲ್ಲಿದ್ದ ಅನುವಾದಕರ ಕೂಟಕ್ಕೆ ನಾನು ವೈಲ್ಡ್‌ಕಾರ್ಡ್‌ ಅಭ್ಯರ್ಥಿಯಂತೆ ಕಂಡಿರಬಹುದು. ಸಮಾವೇಶದ ಮೊದಲ ಸಂಜೆಯೇ ಬರ್ಲಿನ್‌ನಲ್ಲಿ ನೆಲೆಸಿರುವ ಹಲವಾರು ಜರ್ಮನ್‌ ಬರಹಗಾರರು ಮತ್ತು ಅನುವಾದಕರನ್ನು ಸಂಜೆಯ ಔತಣಕೂಟಕ್ಕೆ ಆಹ್ವಾನಿಸಲಾಗಿತ್ತು. ಮುಖ್ಯ ಆಯೋಜಕರು ಸುಮಾರು ನೂರು ಜನ ಹೆಸರಾಂತ ಸಾಹಿತಿಗಳ ಎದುರಿಗೆ ನನ್ನನ್ನು ಸಮಕಾಲೀನ ಜರ್ಮನ್‌ ಸಾಹಿತ್ಯವನ್ನು ಸಪ್ತ ಸಾಗರಗಳಿಂದಾಚೆಗೆ ಕೊಂಡೊಯ್ದ ಕನ್ನಡದ ಅನುವಾದಕ ಎಂದು ವಿಶೇಷವಾಗಿ ಪರಿಚಯ ಮಾಡಿದಾಗ ನಿಜಕ್ಕೂ ಹೆಮ್ಮೆಯಾಯಿತು.

ಮೊದಲ ಮೂರು ದಿನಗಳ ಕಾರ್ಯಕ್ರಮಗಳು ಬರ್ಲಿನ್‌ನ ವಾನ್‌ಸೇ ಎಂಬ ಕೆರೆಯ ದಡದಲ್ಲಿರುವ ಸುಂದರ ಬಂಗಲೆಯಲ್ಲಿ ಜರುಗಿದವು. ದಿನಕ್ಕಿಬ್ಬರಂತೆ ಆರು ಜನ ಸಮಕಾಲೀನ ಲೇಖಕ ಲೇಖಕಿಯರ ಜೊತೆ ಸಂವಾದಗಳನ್ನು ಏರ್ಪಡಿಸಲಾಗಿತ್ತು. ಈ ಎಲ್ಲರೂ ತಮ್ಮ ಹೊಸ ಪುಸ್ತಕಗಳಿಂದ ಆಯ್ದ ಪಠ್ಯವನ್ನು ಓದಿ ನಿರೂಪಕರ ಜೊತೆ ಚರ್ಚಿಸಿ ಅನುವಾದಕರ ಪ್ರಶ್ನೆಗಳಿಗೆ ಉತ್ತರಿಸಿದರು. ಇದರ ನಡುವೆ ಗ್ಯೋಥೆ ಇನ್ಸ್ಟಿಟ್ಯೂಟ್‌ ಹಾಗೂ ಇತರೆ ಪ್ರತಿಷ್ಠಾನಗಳ ಪ್ರತಿನಿಧಿಗಳು ಜರ್ಮನ್‌ ಸಾಹಿತ್ಯವನ್ನು ಅನುವಾದ ಮಾಡುವವರಿಗಾಗಿ ಲಭ್ಯವಿರುವ ಹಣ ಸಹಾಯ ಯೋಜನೆಗಳ ಬಗ್ಗೆ ತಿಳಿಸಿಕೊಟ್ಟರು. ಜೊತೆಗೆ ಒಬ್ಬರು ಸಣ್ಣ ಪ್ರಕಾಶಕರು ಹಾಗೂ ಪ್ರತಿಷ್ಠಿತ ಪತ್ರಿಕೆಯೊಂದರ ಸಾಹಿತ್ಯ ಪುರವಣಿಯ ಸಂಪಾದಕರೊಂದಿಗೆ ಮಾತುಕತೆ ನಡೆಯಿತು – ನನಗೆ ಇವು ಜರ್ಮನ್‌ ಸಮಕಾಲೀನ ಸಾಹಿತ್ಯ ಹಾಗೂ ಪ್ರಕಾಶನದ ಪಕ್ಷಿನೋಟವನ್ನು ನೀಡಿದವು. ಮೂರು ದಿನಗಳ ಕೊನೆಯಲ್ಲಿ ಹತ್ತು ಹೊಚ್ಚ ಹೊಸ ಜರ್ಮನ್‌ ಕಾದಂಬರಿಗಳು ನನ್ನ ಜೋಳಿಗೆಯನ್ನು ಸೇರಿದವು.

ಸಮಾವೇಶದ ಕೊನೆಯ ಎರಡು ದಿನಗಳನ್ನು ಬರ್ಲಿನ್‌ನಿಂದ ಸುಮಾರು ಎರಡು ಗಂಟೆಗಳಷ್ಟು ದೂರವಿರುವು ಲೈಪ್ಸಿಗ್‌ ನಗರದಲ್ಲಿ ಕಳೆದೆವು. ಸಾಹಿತ್ಯ ಚಟುವಟಿಕೆಗಳಿಗೆ ಹೆಸರುವಾಸಿಯಾದ ಲೈಪ್ಸಿಗ್‌ ನಗರದಲ್ಲಿ ಪ್ರತಿ ವರ್ಷ ಪುಸ್ತಕ ಮೇಳ ನಡೆಯುತ್ತದೆ. ಗಾತ್ರದಲ್ಲಿ ಇದು ಫ್ರಾಂಕ್‌ಫುರ್ಟ್‌ ಪುಸ್ತಕ ಮೇಳದ ನಂತರ ಎರಡನೆಯ ಸ್ಥಾನದಲ್ಲಿದ್ದರೂ ʼಲೈಪ್ಸಿಗರ್‌ ಬುಖ್‌ ಮೆಸ್ಸೆʼ, ಲೈಪ್ಸಿಗ್‌ ಪುಸ್ತಕ ಮೇಳ ಜರ್ಮನ್‌ ಸಾಹಿತ್ಯ ಪ್ರಿಯರಿಗೆ, ಲೇಖಕರಿಗೆ ಅಚ್ಚುಮೆಚ್ಚಿನ ಮೇಳ. ನನಗೆ ಪರಿಚಯವಾದ ಲೇಖಕರು ಹೇಳಿದ ಪ್ರಕಾರ ಫ್ರಾಂಕ್‌ಫರ್ಟ್‌ ಪುಸ್ತಕ ಮೇಳ ಹೆಚ್ಚಾಗಿ ಪುಸ್ತಕದ ವಹಿವಾಟಿನ ಕಡೆ ಕೇಂದ್ರೀಕೃತವಾಗಿ, ಸೂಟು ಬೂಟುಗಳಿಂದ ತುಂಬಿ ಹೋಗಿರುತ್ತದೆ. ಆದರೆ ಲೈಪ್ಸಿಗ್‌ನಲ್ಲಿ ಸಾಹಿತ್ಯಕ್ಕೆ, ಬರಹಗಾರರಿಗೆ ಮೊದಲ ಆದ್ಯತೆ ಇರುತ್ತದೆ. ನಾಲ್ಕು ದಿನ ನಡೆಯುವ ಪುಸ್ತಕ ಮೇಳಕ್ಕೆ ಸುಮಾರು ಮೂರು ಲಕ್ಷ ಜನ ಭೇಟಿ ನೀಡುತ್ತಾರೆ. ಪುಸ್ತಕ ಮೇಳಕ್ಕೆ ಪ್ರವೇಶ ಶುಲ್ಕವೇನು ಕಡಿಮೆಯಿಲ್ಲ. 

ನಾಲ್ಕು ದಿನದ ಪಾಸಿಗೆ 60 ಯೂರೋ (5500 ರೂ.), ಒಂದು ದಿನದ ಟಿಕೆಟ್‌ಗೆ 26 ಯೂರೋ. ಇದಲ್ಲದೆ ಕೆಲವು ಲೇಖಕರನ್ನು ಮಾತಾಡಿಸಿ ಅವರ ಸಹಿ ಪಡೆಯಲು ವಿಶೇಷ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದವರಿಗೆ ಮಾತ್ರ ಅವಕಾಶವಿತ್ತು. ಇಲ್ಲಿ ಇನ್ನೊಂದು ವಿಷಯವನ್ನು ಪ್ರಸ್ತಾಪಿಸಲೇಬೇಕು. ಜರ್ಮನ್‌ ಭಾಷೆಯ ಪುಸ್ತಕಗಳಿಗೆ ಯಾವುದೇ ರೀತಿಯ ರಿಯಾಯಿತಿಯನ್ನು ನೀಡುವುದು ಕಾನೂನಿನಲ್ಲೇ ನಿಷೇಧಿಸಲಾಗಿದೆ. ಪುಸ್ತಕದ ಮೇಲೆ ಮುದ್ರಿತವಾದ ಬೆಲೆಗೇ ಎಲ್ಲರೂ ಎಲ್ಲೆಡೆಯೂ ಮಾರಬೇಕು. ಇಷ್ಟಾದರೂ ಶುಕ್ರವಾರ ಬೆಳಿಗ್ಗೆ ಪುಸ್ತಕ ಮೇಳಕ್ಕೆ ಹೋಗಲು ಇದ್ದ ಕ್ಯೂ ತಿರುಪತಿಯನ್ನು ನೆನಪಿಸುವಂತಿತ್ತು. 

ಬರ್ಲಿನ್‌ನಲ್ಲಿ ನಮಗೆ ಪರಿಚಯವಾದ ಕೆಲ ಜನಪ್ರಿಯ ಲೇಖಕರೂ ಸರತಿಸಾಲಿನಲ್ಲಿ ನಿಂತಿದ್ದರು. ಜನಸಂದಣಿಯನ್ನು ತಡೆಯಲಾಗದೆ ದಿನದ ಟಿಕೆಟ್‌ಗಳನ್ನು ಇನ್ನು ಮಾರುವುದಿಲ್ಲವೆಂದು ಪುಸ್ತಕ ಮೇಳದ ಆಯೋಜಕರು ಪ್ರಕಟಣೆ ಹೊರಡಿಸಿದರು. ಮೇಳಕ್ಕೆ ಮತ್ತಷ್ಟು ಬಣ್ಣ ತುಂಬಿದ್ದು ಒಂದೇ ಸೂರಿನಡಿ ಆಯೋಜಿಸಲ್ಪಟ್ಟ ಮಾಂಗಾ ಕಾಮಿಕ್‌ ಕಾನ್.‌ ಜಪಾನಿ ಕಾಮಿಕ್ಸ್ ʼಮಾಂಗಾʼದ ಅಭಿಮಾನಿಗಳು ಬಹಳಷ್ಟು ದುಡ್ಡು, ಸಮಯ ಮತ್ತು ಶ್ರಮ ವಹಿಸಿ ಅದರಲ್ಲಿ ಬರುವ ಪಾತ್ರಗಳಂತೆ ವೇಷ ಧರಿಸಿ ಇಡಿಯ ದಿನ ಮೇಳದಲ್ಲಿ ಅಡ್ಡಾಡುತ್ತಿದ್ದರು. ಪುಸ್ತಕಗಳ ನಡುವೆ ಮಾಂಗಾ ವೇಷಧಾರಿಗಳು ಕಾಣಿಸಿದ್ದು ವಿಶೇಷ ಮೆರಗು ನೀಡಿತು. ಇದರಿಂದಾಗಿ ಬಹಳಷ್ಟು ಯುವಕ ಯುವತಿಯರೂ ಪುಸ್ತಕ ಮೇಳಕ್ಕೆ ಬರುವಂತಾಯಿತು.

ಒಳಗೆ ನಡೆದಾಡಿ ಸಾಕಾಗಿ ಬಿಸಿಲು ಕಾಯಿಸಲು ನಾನು ಮತ್ತು ಸಮಾವೇಶದ ಸಹವರ್ತಿಯೊಬ್ಬರು ಹೊರಗೆ ಬಂದೆವು. ಒಂದೊಂದು ಬಿಯರ್‌ ಹಿಡಿದು ಮೇಜಿನ ಬಳಿ ಯುವ ಜೋಡಿಯ ಮುಂದೆ ಕೂತೆವು. ನನ್ನ ಜೊತಯಲ್ಲಿದ್ದವರು ಆ ಜೋಡಿಯನ್ನು ಮಾತಾಡಿಸಿದರು. ಮಾತು ಬೆಳೆದು ಪರಸ್ಪರ ಪರಿಚಯ ಮಾಡಿಕೊಂಡು, ನಾನು ಜರ್ಮನ್-ಕನ್ನಡ ಅನುವಾದಕ ಎಂದು ಹೇಳಿದೆ. ಆ ಯುವಕ ತನಗೆ ಕನ್ನಡ ಭಾಷೆಯ ಹೆಸರು ಗೊತ್ತೆಂದೂ, ತಾನು ಭಾಷಾಶಾಸ್ತ್ರದ ವಿದ್ಯಾರ್ಥಿಯೆಂದೂ, ತನಗೆ ತಮಿಳು ಹಾಗೂ ಹಿಂದಿ ಬರುವುದಾಗಿಯೂ ತಿಳಿಸಿದ. ಅವನ ಬ್ಯಾಚೆಲರ್‌ ಪದವಿಯ ಪ್ರಬಂಧವನ್ನು ತಮಿಳಿನ ಕುರಿತಾಗಿ ಬರೆದಿರುವುದಾಗಿ ಹೇಳಿದ. ಎತ್ತಣ ಮಾಮರ ಎತ್ತಣ ಕೋಗಿಲೆ?

ಇಷ್ಟು ದಿನ ಜರ್ಮನ್‌ ಸಾಹಿತ್ಯ ಜಗತ್ತನ್ನು ಕೇವಲ ಹೊರಗಿನಿಂದ, ಅಂದರೆ ಇಂಟರ್ನೆಟ್‌ ಅಥವಾ ಪುಸ್ತಕಗಳ ಮೂಲಕ ನೋಡಿ ತಿಳಿದಿದ್ದ ನನಗೆ ಅನುವಾದಕರ ಸಮಾವೇಶವು ಸಾಹಿತ್ಯ ಜಗತ್ತಿನ ಒಳಹೊಕ್ಕಿ ಪರಿಚಯಿಸಿಕೊಳ್ಳಲು ಅನುವು ಮಾಡಿಕೊಟ್ಟಿತು, ಜೊತೆಗೆ ಅನುವಾದ ಸಾಹಿತ್ಯಕ್ಕಿರುವ ಮಹತ್ವವನ್ನು ಎತ್ತಿಹಿಡಿದಿದ್ದಲ್ಲದೆ ಅನುವಾದಕರನ್ನು ಸಾಹಿತ್ಯ ಸಂಘಟನೆಗಳು ಹೇಗೆ ಹುರಿದುಂಬಿಸಬಹುದೆಂದೂ ತೋರಿಸಿಕೊಟ್ಟಿತು. ಮುಂದಿನ ಪುಸ್ತಕದ ಅನುವಾದಕ್ಕೆ ಹೊಸ ಚೈತನ್ಯ ಸಿಕ್ಕಂತಾಗಿದೆ.

ಹರ್ಷ ರಘುರಾಮ್

harsha.baraha@gmail.com

Share this article