ಮೈತ್ರಿ ಎಸ್
-ಅನುದಿನ 16 ಸೂರ್ಯೋದಯ ಹಾಗೂ ಅಸ್ತಗಳಿಗೆ ಸಾಕ್ಷಿಯಾಗುತ್ತಿದ್ದ ಸುನಿತಾ
-ಮರಳುವ ಸಮಯ ಸನ್ನಿಹಿತ: ಐಎಸ್‌ಎಸ್ ನೆನಪಾಗುತ್ತದೆ ಎಂದಿದ್ದ ಸುನಿತಾ
ಕೇವಲ 8 ದಿನಗಳ ಮಿಷನ್ ಒಂದರ ಭಾಗವಾಗಿ ಬಾಹ್ಯಾಕಾಶಕ್ಕೆ ಹಾರಿದ್ದ 59ರ ಹರೆಯದ ಸುನಿತಾ ವಿಲಿಯಮ್ಸ್‌ಗೆ 9 ತಿಂಗಳ ಬಳಿಕ ಭುವಿಗೆ ಮರಳುವ ಸುಯೋಗ ಲಭಿಸಿದೆ. ಹಲವು ತೊಡಕುಗಳ ಬಳಿಕ ಗಗನಯಾತ್ರಿ ಸುನಿತಾ ಹಾಗೂ ಬುಚ್ ವಿಲ್ಮೋರ್ ಅವರನ್ನು ಹೊತ್ತ ಸ್ಟಾರ್‌ಲಿಂಕ್ ಬಾಹ್ಯಾಕಾಶ ನೌಕೆ ನಭಕ್ಕೆ ಹಾರಿ ಐಎಸ್‌ಎಸ್ ತಲುಪಿದರೂ, ತಾಂತ್ರಿಕ ಕಾರಣಗಳಿಂದ ಅವರನ್ನು ಅಲ್ಲೇ ಬಿಟ್ಟು ಮರಳಬೇಕಾಗಿ ಬಂದಿತ್ತು. ಅದಾದ ನಂತರ ಅವರಿಬ್ಬರನ್ನು ಕರೆತರುವ ಯತ್ನಗಳು ನಾನಾಕಾರಗಳಿಂದ ವಿಫಲವಾದರೂ, ಇದೀಗ ನಾಸಾ ಹಾಗೂ ಎಲಾನ್ ಮಸ್ಕ್‌ರ ಜಂಟಿ ಪರಿಶ್ರಮ ಫಲ ಕೊಡುವ ನಿರೀಕ್ಷೆಯಿದೆ. ಇವರು ಮಾ.19ರ ಬುಧವಾರ ಭೂಮಿಗೆ ಮರಳುವ ಸಾಧ್ಯತೆ ಇದೆ. ಈ ಕುರಿತು ವಿವರವಾದ ಮಾಹಿತಿ ಇಲ್ಲಿದೆ.
ಅಂತರಿಕ್ಷಕ್ಕೆ ಹೋಗಿದ್ದೇಕೆ ? ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹಾಗೂ ಖಾಸಗಿ ಸಂಸ್ಥೆಯಾದ ಬೋಯಿಂಗ್ ಜಂಟಿಯಾಗಿ, ಸಿಬ್ಬಂದಿ ಸಮೇತ ಉಡ್ಡಯನ ಪರೀಕ್ಷೆಗೆ ಮುಂದಾಗಿದ್ದು, ಸುನಿತಾ ವಿಲಿಯಮ್ಸ್ ಹಾಗೂ ಇನ್ನೋರ್ವ ಗಗನಯಾತ್ರಿ ಬುಚ್ ವಿಲ್ಮೋರ್ ಅವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ(ಐಎಸ್‌ಎಸ್)ಕ್ಕೆ ಕಳಿಸಲು ನಿರ್ಧರಿಸಲಾಯಿತು. ಇದರ ಭಾಗವಾಗಿ, ಬೋಯಿಂಗ್ ನಿರ್ಮಿಸಿದ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯು ಇವರಿಬ್ಬರನ್ನು ಹೊತ್ತು 2024ರ ಜೂ.5ರಂದು ಫ್ಲೋರಿಡಾದಲ್ಲಿರುವ ಕೇಪ್ ಕನವರಲ್ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನಗೊಂಡು, ಜೂ.6ರಂದು ಐಎಸ್‌ಎಸ್ ತಲುಪಿತು. ಹೀಗೆ ಹೋದ ಸುನಿತಾ ಹಾಗೂ ಬುಚ್ 8 ದಿನ ಅಲ್ಲಿದ್ದು, ಬಳಿಕ ಭೂಮಿಗೆ ಮರಳುವುದೆಂದು ನಿಗದಿಯಾಗಿತ್ತು.
8 ದಿನದ ಬಳಿಕ ಏಕೆ ಮರಳಲಿಲ್ಲ ? ಸುನಿತಾರನ್ನು ಅಂತರಿಕ್ಷಕ್ಕೆ ಕರೆದೊಯ್ದಿದ್ದ ಸ್ಟಾರ್‌ಲೈನರ್ ನೌಕೆಯಲ್ಲೇ ಅವರು ಭೂಮಿಗೆ ಮರಳಬೇಕಿತ್ತು. ಆದರೆ ಅನಿರೀಕ್ಷಿತವಾಗಿ ಅದರ ಥ್ರಸ್ಟರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಇಂಧನವು ರಾಕೆಟ್‌ನ ಎಂಜಿನ್‌ಗೆ ಸರಾಗವಾಗಿ ಹರಿದುಹೋಗಲು ಬೇಕಾದ ಒತ್ತಡ ಸೃಷ್ಟಿಸಲು ಬಳಸುವ ಹೀಲಿಯಂ ಸೋರಿಕೆಯಾಗತೊಡಗಿದ್ದು, ಇದು ಮಾರ್ಗಮಧ್ಯದಲ್ಲೇ ಸ್ಫೋಟಗೊಳ್ಳುವ ಸಂಭವವಿತ್ತು. ಒಂದೊಮ್ಮೆ ಹೀಗಾಗಿದ್ದರೆ, ಕಲ್ಪನಾ ಚಾವ್ಲಾರನ್ನು ಕಳೆದುಕೊಂಡ ಕಹಿಘಟನೆ ಮತ್ತೊಮ್ಮೆ ಮರುಕಳಿಸುವ ಹಾಗೂ ಬೋಯಿಂಗ್‌ನ ಚೊಚ್ಚಲ ಸಿಬ್ಬಂದಿಸಹಿತ ಮಿಷನ್ ಮಣ್ಣುಪಾಲಾಗುವ ಆತಂಕವಿತ್ತು. ಈ ಅನಾಹುತವನ್ನು ತಪ್ಪಿಸಲು ಸುನಿತಾರನ್ನು ಐಎಸ್‌ಎಸ್‌ನಲ್ಲೇ ಇರಿಸಿ, ಸಿಬ್ಬಂದಿರಹಿತ ಕ್ಯಾಪ್ಸೂಲನ್ನು ಕರೆಸಿಕೊಳ್ಳಲಾಯಿತು.
ಸುನಿತಾ ಭಾರತ ಮೂಲದಾಕೆ : ಸುನಿತಾ ವಿಲಿಯಮ್ಸ್‌ರ ತಂದೆ ದೀಪಕ್ ಪಾಂಡ್ಯಾ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯವರು. ಇವರು ಸ್ಲೋವೆನಿಯಾ ಮೂಲದ ಅಮೇರಿಕನ್ ಪ್ರಜೆ ಉರ್ಸುಲಿನ್ ಬೋನಿ ಪಾಂಡ್ಯ ಅವರನ್ನು ವಿವಾಹವಾಗಿದ್ದರು. ಹೀಗಾಗಿ ಸುನಿತಾ ಜನ್ಮತಃ ಅಮೆರಿಕದವರಾದರೂ, ಭಾರತದ ಮೂಲವನ್ನು ಹೊಂದಿದ್ದಾರೆ. ಈಗಾಗಲೇ 2006ರ ಡಿ.9 ಹಾಗೂ 2012ರ ಜೂ.15ರಂದು ಬಾಹ್ಯಾಕಾಶ ದರ್ಶನ ಮಾಡಿರುವ ಇವರು, ಇದೀಗ 3ನೇ ಬಾರಿ ಅಲ್ಲಿಗೆ ಹೋಗಿದ್ದಾರೆ. ಈ ಮೂಲಕ ಕಲ್ಪನಾ ಚಾವ್ಲಾರ ಬಳಿಕ ಬಾಹ್ಯಾಕಾಶಕ್ಕೆ ತೆರಳಿದ 2ನೇ ಭಾರತ ಮೂಲದಾಕೆ ಎಂಬ ಗರಿಮೆಗೆ ಪಾತ್ರರಾಗಿದ್ದಾರೆ.
ಸುನಿತಾ ತಿನ್ನೋದೇನು ? : ಐಎಸ್‌ಎಸ್‌ನಲ್ಲಿರುವ ಸುನಿತಾರಿಗೆ 3 ತಿಂಗಳಿಗೊಮ್ಮೆ ಆಹಾರ ಸರಬರಾಜಾಗುತ್ತದೆ. ನಾಸಾದ ಪ್ರಕಾರ, ಒಬ್ಬ ಗಗನಯಾತ್ರಿಗೆ 1.7 ಕೆ.ಜಿ.ಯಷ್ಟು ಆಹಾರ ಅಗತ್ಯ. ಇದು ಏಕದಳ ಧಾನ್ಯ, ಹಾಲಿನ ಪುಡಿ, ಪಿಜ್ಜಾ, ಶ್ರಿಂಪ್ ಕಾಕ್ಟೇಲ್, ಹುರಿದ ಕೋಳಿ ಮಾಂಸ, ಟುನಾ ಮೀನು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಅವೆಲ್ಲವನ್ನು ಭೂಮಿಯಲ್ಲೇ ಸಿದ್ಧಪಡಿಸಿ ಕಳಿಸಲಾಗುವ ಕಾರಣ, ಐಎಸ್‌ಎಸ್‌ನಲ್ಲಿರುವ ಗಗನಯಾತ್ರಿಗಳು ಅದನ್ನು ಬಿಸಿ ಮಾಡಿಕೊಂಡು ಅಯಸ್ಕಾಂತೀಯ(ಮ್ಯಾಗ್ನೆಟೈಸ್ಡ್) ಟ್ರೇಗಳಲ್ಲಿ ತಿನ್ನುತ್ತಾರೆ. ಅವರು ಕೇವಲ 8 ದಿನಗಳಿಗಾಗಿ ಐಎಸ್‌ಎಸ್‌ಗೆ ಹೋಗಿದ್ದರಿಂದ, ಆಗ ಕೊಂಡೊಯ್ಯಲಾಗಿದ್ದ ತಾಜಾ ತರಕಾರಿ ಮತ್ತು ಹಣ್ಣುಗಳು ಈಗ ಲಭ್ಯವಿಲ್ಲ. ಕುಡಿಯಲು ಬೇಕಾಗುವ ನೀರನ್ನು ಗಗನಯಾತ್ರಿಗಳ ಮೂತ್ರ ಹಾಗೂ ಬೆವರನ್ನು ಶುದ್ಧೀಕರಿಸಿ ಒದಗಿಸಲಾಗುತ್ತದೆ.
ಸುನಿತಾ ಸೊರಗಿರುವರೇ?: ಐಎಸ್ಎಸ್‌ನಲ್ಲಿರುವ ಸುನಿತಾರ ಸೊರಗಿದಂತಿದ್ದ ಫೋಟೋ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಬಗ್ಗೆ ಅಲ್ಲಿಂದಲೇ ಪ್ರತಿಕ್ರಿಯಿಸಿದ್ದ ಸುನಿತಾ, ‘ಅದು ಸುಳ್ಳು. ನಾನು ಆರೋಗ್ಯವಾಗಿದ್ದೇನೆ’ ಎಂದು ಸ್ಪಷ್ಟನೆ ನೀಡಿದ್ದರು.
ದೈಹಿಕ ಬದಲಾವಣೆಗೇನು ಕಾರಣ?: ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣ ಬಲವಿಲ್ಲದ ಕಾರಣ ಗಗನಯಾತ್ರಿಗಳ ದೇಹದಲ್ಲಿ ಸ್ನಾಯು ಕ್ಷೀಣಿಸುವಿಕೆ ಮತ್ತು ಮೂಳೆ ಸಾಂದ್ರತೆ ನಷ್ಟದಂತಹ ಬದಲಾವಣೆಗಳಾಗುತ್ತವೆ. ಅಲ್ಲಿ ಯಾವುದೇ ಶ್ರಮದ ಕೆಲಸಗಳನ್ನು ಮಾಡುವ ಅವಶ್ಯಕತೆ ಇರದ ಕಾರಣ ಅವರು ಪ್ರತಿ ತಿಂಗಳು ಶೇ.1ರಷ್ಟು ಮೂಳೆಯನ್ನು ಕಳೆದುಕೊಳ್ಳುತ್ತಾರೆ. ಜೊತೆಗೆ, ದೇಹದಲ್ಲಿರುವ ದ್ರವ ಮುಖದ ಭಾಗದಲ್ಲಿ ಶೇಖರಣೆಯಾಗಿ, ಅವರ ಮುಖ ಉಬ್ಬಿದಂತಾಗುತ್ತದೆ.
ಭೂಮಿಗೆ ಬಂದಮೇಲೆ ಭಾರೀ ಕಷ್ಟ: ಸುದೀರ್ಘ ಕಾಲ ಬಾಹ್ಯಾಕಾಶದಲ್ಲೇ ಇದ್ದ ಕಾರಣ ಭೂಮಿಗೆ ಬರುತ್ತಿದ್ದಂತೆ ಆಗುವ ಬದಲಾವಣೆಗೆ ಬಾಹ್ಯಾಕಾಶ ಯಾನಿಗಳ ದೇಹ ಒಗ್ಗಿಕೊಳ್ಳಲು ಸಮಯ ಹಿಡಿಸುತ್ತದೆ. ಭೂಮಿಯ ಗುರುತ್ವಾಕರ್ಷಣೆಯು ದೇಹದೊಳಗಿನ ದ್ರವ ಸೇರಿದಂತೆ ಎಲ್ಲವನ್ನೂ ಕೆಳಗೆ ಎಳೆಯುತ್ತದೆ. ಅವರು ಸ್ನಾಯುಗಳನ್ನು ವೇಗವಾಗಿ ಚಲಿಸಲು ಪರಿಶ್ರಮ ಪಡಬೇಕಾಗುವುದು ಇದರಿಂದಾಗಿ ಯಾನಿಗಳಿಗೆ ಪೆನ್ಸಿಲ್ ಎತ್ತುವುದೂ ಕಷ್ಟ ಅನ್ನಿಸಬಹುದು. ಹೀಗಾಗಿ ಯಾನಿಗಳು ಭೂಮಿಯ ವಾರಾವರಣಕ್ಕೆ ಹೊಂದಿಕೊಳ್ಳಲು ಸುನಿತಾ ಹಾಗೂ ಬುಚ್ ಅವರಿಗಾಗಿ ಪುನಶ್ಚೇತನ ಕಾರ್ಯಕ್ರಮ ಏರ್ಪಡಿಸಲಾಗುವುದು.
ವಿಳಂಬಕ್ಕೆ ರಾಜಕೀಯ ಬಣ್ಣ:
ಐಎಸ್‌ಎಸ್‌ನಲ್ಲಿ ಸಿಲುಕಿದ್ದ ಸುನಿತಾ ಹಾಗೂ ವಿಲ್ಮೋರ್ ಅವರನ್ನು ಆದಷ್ಟು ಬೇಗ ಭೂಮಿಗೆ ಕರೆತರುವ ವಿಚಾರ ರಾಜಕೀಯ ತಿರುವು ಪಡೆದಿತ್ತು. ‘ಹಿಂದಿನ ಬೈಡೆನ್ ಸರ್ಕಾರವು ಸ್ಪೇಸ್ಎಕ್ಸ್ ಒಡೆಯ ಎಲಾನ್ ಮಸ್ಕ್ ನನ್ನ ಆಪ್ತ ಎಂಬ ನೆಪದಿಂದ, ಅವರ ಅಂತರಿಕ್ಷ ನೌಕೆಯಲ್ಲಿ ಸುನಿತಾರನ್ನು ವಾಪಸು ಕರೆತರಲು ಅನುಮತಿಸಿರಲಿಲ್ಲ’ ಎಂದಿದ್ದರು. ಆದರೆ ಈ ಆರೋಪ ತಳ್ಳಿಹಾಕಿದ್ದ ನಾಸಾ, ವಿಳಂಬಕ್ಕೆ ತಾಂತ್ರಿಕ ದೋಷ ಕಾರಣ ಹೊರತು ರಾಜಕೀಯವಲ್ಲ ಎಂದು ಸ್ಪಷ್ಟಪಡಿಸಿತ್ತು.
ಸುನಿತಾ ಜಾಗಕ್ಕೆ ಯಾರು?: ಪ್ರಸ್ತುತ ಐಎಸ್‌ಎಸ್‌ನಲ್ಲಿ 7 ಗಗನಯಾತ್ರಿಗಳಿದ್ದಾರೆ. ಅವರಲ್ಲಿ ಸುನಿತಾ, ಬುಚ್ ಹಾಗೂ ಇನ್ನಿಬ್ಬರನ್ನು ಭೂಮಿಗೆ ಕರೆತರಲು ಸಿದ್ಧತೆ ನಡೆದಿದ್ದು, ಅವರ ಜಾಗಕ್ಕೆ ನಾಸಾದ ಇಬ್ಬರು, ಜಪಾನ್‌ನ ಜಾಕ್ಸಾದ ಒಬ್ಬರು, ರಷ್ಯಾದ ರೋಸ್‌ಕೋಸ್‌ಮೋಸ್‌ನ ಒಬ್ಬರು ಹೋಗಿ 6 ತಿಂಗಳು ನೆಲೆಸಲಿದ್ದಾರೆ. ಇವರೆಲ್ಲಾ ಮಾ.14ರ ಸಂಜೆ ಉಡಾವಣೆಗೊಂಡ ಸ್ಪೇಸ್‌ಎಕ್ಸ್‌ನ ಕ್ರೂ-10 ಮಿಷನ್ ಮೂಲಕ ಐಎಸ್‌ಎಸ್ ತಲುಪಲಿದ್ದಾರೆ. 1 ವಾರದ ಬಳಿಕ ಸುನಿತಾ ಹಾಗೂ ಇತರರು ಸ್ಪೇಸ್‌ಎಕ್ಸ್‌ನ ಡ್ರಾಗನ್ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಮರಳಲಿದ್ದಾರೆ.
ಎಷ್ಟು ಬಾರಿ ಮುಂದೂಡಿಕೆ?:
-ಐಎಸ್‌ಎಸ್ ತಲುಪಿದ 8 ದಿನಗಳ ಬಳಿಕ ತಾಂತ್ರಿಕ ಕಾರಣದಿಂದ ಖಾಲಿ ಮರಳಿದ್ದ ಸ್ಟಾರ್‌ಲೈನರ್-2015ರ ಫೆಬ್ರವರಿಯಲ್ಲಿ ಸ್ಟಾರ್‌ಲೈನರ್ ಕೆಲ ಪರೀಕ್ಷೆಗಳಲ್ಲಿ ವಿಫಲವಾಗಿದ್ದರಿಂದ ಮುಂದೂಡಿಕೆ