ಸ್ತ್ರೀಯರ ಹಾಡು, ಬಿಗಿಬಟ್ಟೆಗೆ ಅಫ್ಘಾನಿಸ್ತಾನದ ತಾಲಿಬಾನ್‌ ಉಗ್ರರ ಸರ್ಕಾರ, ಇಸ್ಲಾಮಿಕ್ ಷರಿಯಾ ಅನ್ವಯ ನಿಷೇಧ!

KannadaprabhaNewsNetwork |  
Published : Aug 24, 2024, 02:12 AM ISTUpdated : Aug 24, 2024, 04:46 AM IST
ತಾಲಿಬಾನ್‌ | Kannada Prabha

ಸಾರಾಂಶ

2021ರಲ್ಲಿ ಅಫ್ಘಾನಿಸ್ತಾನದಲ್ಲಿ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದಿರುವ ತಾಲಿಬಾನ್‌ ಉಗ್ರರ ಸರ್ಕಾರ, ದೇಶದಲ್ಲಿ ಇಸ್ಲಾಮಿಕ್ ಷರಿಯಾ ಅನ್ವಯ ಹೊಸ ಕಾನೂನುಗಳನ್ನು ಜಾರಿಗೊಳಿಸಿದೆ.

 

 ಕಾಬೂಲ್: 2021ರಲ್ಲಿ ಅಫ್ಘಾನಿಸ್ತಾನದಲ್ಲಿ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದಿರುವ ತಾಲಿಬಾನ್‌ ಉಗ್ರರ ಸರ್ಕಾರ, ದೇಶದಲ್ಲಿ ಇಸ್ಲಾಮಿಕ್ ಷರಿಯಾ ಅನ್ವಯ ಹೊಸ ಕಾನೂನುಗಳನ್ನು ಜಾರಿಗೊಳಿಸಿದೆ. ಪುರುಷರು ಮತ್ತು ಮಹಿಳೆಯರನ್ನು ಉದ್ದೇಶಿಸಿ ಈ ನಿಯಮ ರೂಪಿಸಲಾಗಿದೆಯಾದರೂ, ಬಹುತೇಕ ಕಾನೂನುಗಳು ಮಹಿಳೆಯರನ್ನು ಇನ್ನಷ್ಟು ಕಠಿಣ ನಿಯಂತ್ರಣಕ್ಕೆ ಒಳಪಡಿಸುವ ಉದ್ದೇಶವನ್ನು ಹೊಂದಿವೆ.

35 ವಿಧಿಗಳನ್ನು ಒಳಗೊಂಡಿರುವ 114 ಪುಟಗಳ ಕಾನೂನನ್ನು ಆಫ್ಘಾನಿಸ್ತಾನದ ನೈತಿಕ ಸಚಿವಾಲಯ ಬಿಡುಗಡೆ ಮಾಡಿ ದೇಶವ್ಯಾಪಿ ಜಾರಿಗೊಳಿಸಿದೆ. ಈ ಹಿಂದೆಯೇ ಮಾಡಲಾಗಿದ್ದ ಕೆಲವು ಕಾನೂನುಗಳನ್ನೂ ಸೇರಿಸಿ ಇದೀಗ ಅಧಿಕೃತವಾಗಿ ಪ್ರಕಟಿಸಲಾಗಿದೆ.

ಏನೇನು ನಿಯಮ:

ಮಹಿಳೆಯರು ಸಾರ್ವಜನಿಕವಾಗಿ ಮುಖ ತೋರಿಸಬಾರದು. ತೆಳು, ಬಿಗಿ, ಚಿಕ್ಕದಾಗಿರುವ ಬಟ್ಟೆ ಧರಿಸಬಾರದು, ಮಹಿಳೆಯರು ಸಾರ್ವಜನಿಕವಾಗಿ ಹಾಡುವುದು, ಪಠಣ ಮಾಡುವುದು, ಗಟ್ಟಿಯಾಗಿ ಓದುವುದನ್ನು ಮಾಡಬಾರದು. ರಕ್ತಸಂಬಂಧಿ, ಪತಿ ಬಿಟ್ಟು ಬೇರೆ ಗಂಡಸರನ್ನು ನೋಡಬಾರದು. ಸಂಗೀತ ನುಡಿಸಬಾರದು, ಸಾರ್ವಜನಿಕವಾಗಿ ಪುರುಷರ ಜೊತೆ ಸೇರಬಾರದು. ಯಾವುದೇ ವಾಹನ ಮಾಲೀಕರು ಸಂಗಾತಿ ಹೊರತಾದ ಮಹಿಳೆಯನ್ನು ಕರೆದೊಯ್ಯಬಾರದು ಎಂದು ಸೂಚಿಸಲಾಗಿದೆ.

ಪುರುಷರು ಗಡ್ಡ ಬಿಡುವುದು ಕಡ್ಡಾಯ, ಗಡ್ಡ ಕತ್ತರಿಸುವಂತಿಲ್ಲ, ಪ್ರಾರ್ಥನೆ ಮತ್ತು ಧಾರ್ಮಿಕ ಉಪವಾಸ ಉಲ್ಲಂಘಿಸುವುದು ಕಾನೂನು ಬಾಹಿರ ಎಂದು ಘೋಷಿಸಲಾಗಿದೆ.

ಇದನ್ನು ಉಲ್ಲಂಘಿಸಿದವರಿಗೆ ಮೊದಲಿಗೆ ಸಲಹೆ, ಬಳಿಕ ಎಚ್ಚರಿಕೆ, ಆಸ್ತಿ ಜಪ್ತಿ, ಒಂದು ಗಂಟೆಯಿಂದ 3 ದಿನದವರೆಗೆ ಬಂಧನ ಮತ್ತು ಇತರೆ ಸೂಕ್ತ ಶಿಕ್ಷೆ ವಿಧಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.

ಏನೇನು ನಿಷಿದ್ಧ?

- ಮಹಿಳೆಯರು ಸಾರ್ವಜನಿಕವಾಗಿ ಮುಖ ತೋರಿಸಬಾರದು

- ತೆಳು, ಬಿಗಿ, ಚಿಕ್ಕದಾಗಿರುವ ಬಟ್ಟೆ ಧರಿಸಬಾರದು

- ವಾಹನ ಮಾಲೀಕರು ಹೆಂಡತಿಯಲ್ಲದ ಮಹಿಳೆಯನ್ನು ಕರೆದೊಯ್ಯಬಾರದು

- ಪುರುಷರು ಗಡ್ಡ ಬಿಡುವುದು ಕಡ್ಡಾಯ, ಗಡ್ಡ ಕತ್ತರಿಸುವಂತಿಲ್ಲ

- ಪ್ರಾರ್ಥನೆ ಮತ್ತು ಧಾರ್ಮಿಕ ಉಪವಾಸ ಕಡ್ಡಾಯ

- ಉಲ್ಲಂಘಿಸಿದವರ ಆಸ್ತಿ ಜಪ್ತಿ, ಬಂಧನ, ಇತರೆ ಸೂಕ್ತ ಶಿಕ್ಷೆ

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಆಸ್ಟ್ರೇಲಿಯಾದಲ್ಲಿ ಯಹೂದಿಗಳ ನರಮೇಧ!
ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌