ಕಾಠ್ಮಂಡು: ವಿಮಾನವೊಂದು ಟೇಕಾಫ್ ಆದ ಬೆನ್ನಲ್ಲೇ ಪತನಗೊಂಡು 18 ಜನರು ಸಾವನ್ನಪ್ಪಿದ ಭೀಕರ ಘಟನೆ ಬುಧವಾರ ನೇಪಾಳದ ರಾಜಧಾನಿ ಕಾಂಠ್ಮಡುವಿನ ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಆದರೆ ಪವಾಡ ಸದೃಶ್ಯ ರೀತಿಯಲ್ಲಿ ವಿಮಾನದ ಪೈಲಟ್ ಬಚಾವ್ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಟೇಕಾಫ್ ವೇಳೆ ವಿಮಾನವು ಟೇಬಲ್‌ಟಾಪ್ ನಿಲ್ದಾಣದ ರನ್‌ವೇನಿಂದ ಜಾರಿ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ಕಾರಣವಿರಬಹುದೆಂದು ಶಂಕಿಸಲಾಗಿದೆ.ಏನಾಯ್ತು?: ಸೂರ್ಯ ಏರ್‌ಲೈನ್ಸ್‌ಗೆ ಸೇರಿದ ಬೊಂಬಾರ್ಡಿಯರ್ ಸಿಆರ್‌ಜೆ-200 ವಿಮಾನವು ಇಬ್ಬರು, ಸಿಬ್ಬಂದಿ 17 ಪ್ರಯಾಣಿಕರನ್ನು ಹೊತ್ತು ಬುಧವಾರ ಕಾಠ್ಮಂಡುವಿನಿಂದ ಪೋಖರಾಗೆ ತೆರಳುತ್ತಿತ್ತು. ಆದರೆ ಗುಡ್ಡದ ಮೇಲಿನ ರನ್‌ವೇನಲ್ಲಿ ಜಾರಿದ ವಿಮಾನವು ಸಾವರಿಸಿಕೊಂಡು ಮೇಲೆ ಹಾರಿದೆ. ಆದರೆ ಮೇಲೆ ಏರುವ ವೇಳೆ ಎಡಕ್ಕೆ ತಿರುಗುವ ಬದಲು ಬಲಕ್ಕೆ ತಿರುಗಿದ್ದು ಸ್ವಲ್ಪ ಮೇಲೆ ಏರುತ್ತಲೇ ದಿಢೀರನೆ ಪತನಗೊಂಡಿದೆ. ಪತನದ ರಭಸಕ್ಕೆ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿದ್ದು, ಅದರೊಳಗಿದ್ದ 15 ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಪೈಲಟ್ ಮಾತ್ರ ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನ ಹೊತ್ತಿ ಉರಿಯುತ್ತಿರುವ ವಿಡಿಯೋವನ್ನು ಕೆಲ ಪ್ರಯಾಣಿಕರು ವಿಡಿಯೋದಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನಾ ಸ್ಥಳಕ್ಕೆ ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಒಲಿ ಮತ್ತು ಗೃಹ ಸಚಿವ ರಮೇಶ್ ಲೇಖ್ ಭೇಟಿ ನೀಡಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಪ್ರಧಾನಿ ಸಂತಾಪ ಸೂಚಿಸಿದ್ದಾರೆ.
ನೇಪಾಳದಲ್ಲಿ ಪದೇ ಪದೇ ವಿಮಾನ ದುರಂತಕ್ಕೆ ಕಾರಣವೇನು?ಕಾಠ್ಮಂಡು: ಕಳೆದೊಂದು ದಶಕದಲ್ಲಿ ನೇಪಾಳ 12 ವಿಮಾನ ದುರಂತಗಳಿಗೆ ಸಾಕ್ಷಿಯಾಗಿದೆ. ಇದಕ್ಕೆ ಮುಖ್ಯ ಕಾರಣ ವಿಮಾನ ನಿರ್ವಹಣೆ, ಸಿಬ್ಬಂದಿ ತರಬೇತಿಯ ಕೊರತೆ. ನೇಪಾಳ ಆರ್ಥಿಕವಾಗಿ ಹಿಂದುಳಿದ ದೇಶವಾಗಿದ್ದು, ವಿಮಾನಯಾನ ಸಂಸ್ಥೆಗಳು ನುರಿತ ಸಿಬ್ಬಂದಿಗಳು, ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿವೆ. ನೇಪಾಳ ಕ್ಲಿಷ್ಟ ಹವಾಮಾನ ವ್ಯವಸ್ಥೆ ಹೊಂದಿದ್ದು, ಹವಾಮಾನ ಮುಂಚೆಯೇ ಊಹಿಸುವುದು ಸವಾಲು. ಜೊತೆಗೆ ನೇಪಾಳದ ಗ್ರಾಮೀಣ ಭಾಗ, ಪರ್ವತಾ ಪ್ರದೇಶಗಳಗಳಲ್ಲಿ ಹವಾಮಾನ ಮುನ್ಸೂಚನೆ ನೀಡಲು ಸರಿಯಾದ ವ್ಯವಸ್ಥೆಗಳಿಲ್ಲ. ಪ್ರಮುಖ ವಿಮಾನ ನಿಲ್ದಾಣಗಳು ಪರ್ವತಗಳಿಂದ ಸುತ್ತುವರೆದಿದ್ದು, ದೊಡ್ಡ ದೊಡ್ಡ ವಿಮಾನಗಳ ಲ್ಯಾಂಡಿಂಗ್ ಕೂಡ ಸವಾಲು. ಈ ಕಾರಣಗಳು ಸರಣಿ ದುರಂತಕ್ಕೆ ಹಾದಿ ಮಾಡಿ ಕೊಡುತ್ತಿವೆ.
ಭಾರತದಲ್ಲಿವೆ ಐದು ಟೇಬಲ್ ಟಾಪ್ ರನ್‌ವೇಗಳುನವದೆಹಲಿ: ನೇಪಾಳದ ಸೂರ್ಯ ಏರ್‌ಲೈನ್ಸ್ ವಿಮಾನ ಪತನಗೊಂಡ ಬೆನ್ನಲ್ಲೇ ಪ್ರಪಂಚದ ಅಪಾಯಕಾರಿ ರನ್ ವೇಗಳು ಮತ್ತೆ ಮುನ್ನೆಲೆಗೆ ಬಂದಿವೆ. ಅಂತಹ 5 ಟೇಬಲ್ ಟಾಪ್ ನಿಲ್ದಾಣಗಳು ಭಾರತದಲ್ಲಿವೆ. ಶಿಮ್ಲಾ, ಕಲ್ಲಿಕೋಟೆ, ಮಂಗಳೂರು , ಲಿಂಪುಯೈ (ಮಿಜೋರಾಂ), ಪಾಕ್ಯೋಂಗ್ (ಸಿಕ್ಕಿಂ) ನಿಲ್ದಾಣಗಳು ಆ ಪಟ್ಟಿಯಲ್ಲಿವೆ. ಈ ಟೇಬಲ್ ಟೆನ್ ರನ್ವೇಗಳು ಸುತ್ತಲಿನ ಭೂ ಪ್ರದೇಶಕ್ಕಿಂತ ಎತ್ತರದ ಸ್ಥಾನದಲ್ಲಿರುತ್ತದೆ. ಅದರ ಸುತ್ತ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಕಡೆಗಳಲ್ಲಿ ಇಳಿಜಾರಿನ ಭಾಗಗಳಿದ್ದು ಅದು ಕೆಲವೊಮ್ಮೆ ಅಪಾಯಕ್ಕೆ ಕಾರಣವಾಗುತ್ತದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ 2010ರ ಮೇ 22 ರಂದು ದುಬೈನಿಂದ ಮಂಗಳೂರಿಗೆ ಬಂದಿದ್ದ ವಿಮಾನ ಪತನಗೊಂಡು 6 ಸಿಬ್ಬಂದಿಗಳು ಸೇರಿದಂತೆ 158 ಮಂದಿ ಸಾವನ್ನಪ್ಪಿದ್ದರು.