ಆಗಸದಲ್ಲೊಂದು ಸಂಶೋಧನಾ ಅರಮನೆ - ದಿನಕ್ಕೆ 16 ಸೂರ್ಯೋದಯ, ಸೂರ್ಯಾಸ್ತ!

Published : Jun 27, 2025, 07:41 AM IST
Group Captain Shubhanshu Shukla shares his first in-flight experience aboard Ax-4 (Image Source: Axiom Space)

ಸಾರಾಂಶ

ಭೂಮಿಯ ಮೇಲಿನ 7 ಅದ್ಭುತಗಳ ರೀತಿಯಲ್ಲೇ ಮಾನವ ನಿರ್ಮಿತ ಅದ್ಭುತಗಳ ಪೈಕಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಕೂಡಾ ಒಂದು. ಭೂಮಿಯಿಂದ 400 ಕಿ.ಮೀ ಎತ್ತರದ ಪ್ರದೇಶದ ನಿರ್ವಾತ ಪ್ರದೇಶದಲ್ಲಿ ಪುಟ್ಬಾಲ್‌ ಮೈದಾನದಷ್ಟು ದೊಡ್ಡ ರಚನೆ

ಭೂಮಿಯ ಮೇಲಿನ 7 ಅದ್ಭುತಗಳ ರೀತಿಯಲ್ಲೇ ಮಾನವ ನಿರ್ಮಿತ ಅದ್ಭುತಗಳ ಪೈಕಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಕೂಡಾ ಒಂದು. ಭೂಮಿಯಿಂದ 400 ಕಿ.ಮೀ ಎತ್ತರದ ಪ್ರದೇಶದ ನಿರ್ವಾತ ಪ್ರದೇಶದಲ್ಲಿ ಪುಟ್ಬಾಲ್‌ ಮೈದಾನದಷ್ಟು ದೊಡ್ಡ ರಚನೆ ನಿರ್ಮಿಸುವುದು ಸುಲಭದ ಮಾತಲ್ಲ. ಜಾಗತಿಕ ತಂತ್ರಜ್ಞಾನದ ಸಹಯೋಗಕ್ಕೆ ಉದಾಹರಣೆಯಂತಿರುವ ಈ ನಿಲ್ದಾಣ ಮಾನವನ ಭವಿಷ್ಯದ ಕಲ್ಪನೆಗಳಿಗೆ, ಸಂಶೋಧನೆಗಳಿಗೆ ನೀರೆರೆವ ತಾಣ. ಕಳೆದ 25 ವರ್ಷಗಳಿಂದ ವಿಜ್ಞಾನಿಗಳ ಸತತ ಸಂಶೋಧನೆಯ ತಾಣವಾದ ಈ ನಿಲ್ದಾಣದ ಕುರಿತು ಒಂದಿಷ್ಟು ಮಾಹಿತಿ

400 ಕಿ.ಮೀ ಭೂಮಿಯಿಂದ ಇಷ್ಟು ಎತ್ತರದಲ್ಲಿದೆ

13 ಲಕ್ಷ ಕೋಟಿ ನಿರ್ಮಾಣಕ್ಕೆ ತಗುಲಿದ ಒಟ್ಟು ವೆಚ್ಚ

4 ಲಕ್ಷ ಕೆಜಿ ಬಾಹ್ಯಾಕಾಶ ನಿಲ್ದಾಣದ ಒಟ್ಟು ತೂಕ

ನಿರ್ಮಾಣದ ಉದ್ದೇಶ,

ಆರಂಭಿಕ ಹೆಜ್ಜೆಗಳು

ಐಎಸ್ಎಸ್‌ ಅನ್ನು ಬಾಹ್ಯಾಕಾಶ ಸಂಶೋಧನೆ ಕೈಗೊಳ್ಳುವ ಪ್ರಯೋಗಾಲಯವಾಗಿ ಮತ್ತು ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ಅಗತ್ಯವಾದ ಪರೀಕ್ಷಾ ನೆಲೆಯಾಗಿ ಬಳಸಲು ನಿರ್ಮಿಸಲಾಗಿದೆ. ಜತೆಗೆ, ಇದು ಗಗನಯಾನಿಗಳಿಗೆ ಸುದೀರ್ಘ ಸಮಯ ಅಂತರಿಕ್ಷದಲ್ಲಿ ವಾಸವಿರಲು ಅನುಕೂಲಕರವಾಗಿದ್ದು, ಇದರಿಂದ ಅವರು ಸಾಕಷ್ಟು ಪ್ರಯೋಗಗಳನ್ನು ಆ ವಾತಾವರಣದಲ್ಲಿ ಮಾಡಲು ಸಾಧ್ಯ. ಭೂಮಿಯ ವಾತಾವರಣದಿಂದಾಚೆಗೂ ವಾಸಯೋಗ್ಯ ವಾತಾವರಣ ನಿರ್ಮಾಣ ಮಾಡಲು ಅತಿ ಅವಶ್ಯಕ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ 1984ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ರೊನಾಲ್ಡ್‌ ರೇಗನ್‌ ಅನುಮತಿ ನೀಡಿದ್ದರು. ಬಳಿಕ ಅದಕ್ಕೆ ಜಪಾನ್‌, ಕೆನಡಾ, ರಷ್ಯಾ ಮತ್ತು ಯುರೋಪಿಯನ್‌ ಒಕ್ಕೂಟ ಕೂಡಾ ನೆರವು ನೀಡಿದವು. ಅದರಂತೆ 1984-1993ರ ಅವಧಿಯಲ್ಲಿ ವಿನ್ಯಾಸ ರೂಪಿಸಿ ಎರಡು ಹಂತದಲ್ಲಿ ಯೋಜನೆ ಜಾರಿಯಾಯಿತು.

ಅತಿದೊಡ್ಡ ಮಾನವ ನಿರ್ಮಿತ ಉಪಗ್ರಹ

ಐಎಸ್ಎಸ್‌ ಬಾಹ್ಯಾಕಾಶದಲ್ಲಿರುವ ಅತಿದೊಡ್ಡ ಮಾನವ ನಿರ್ಮಿತ ಉಪಗ್ರಹ. ಇದರ ತೂಕ ಅಂದಾಜು 4 ಲಕ್ಷ ಕೆಜಿ. ಐಎಸ್‌ಎಸ್‌ಗೆ ಅಳವಡಿಸಿರುವ ಸೌರಫಲಕ ಒಟ್ಟು ಉದ್ದ 358 ಅಡಿ. ಇದು ವಾರ್ಷಿಕ 73500 ಕಿಲೋವ್ಯಾಟ್‌ ವಿದ್ಯುತ್‌ ಉತ್ಪಾದಿಸಬಲ್ಲದು. ಐಎಸ್‌ಎಸ್‌ ಭೂಮಿಯಿಂದ 370-460 ಕಿ.ಮೀ ಎತ್ತರದ ಪ್ರದೇಶದಲ್ಲಿ ಭೂಮಿಯನ್ನು ಸುತ್ತುತ್ತಿರುತ್ತದೆ. ಕೆಲವೊಮ್ಮೆ ವಾತಾವರಣದ ಘರ್ಷಣೆಯ ಪರಿಣಾಮ ಕೆಳಗೂ ಜಾರುತ್ತದೆ. ಆಗ ಐಎಸ್‌ಎಸ್‌ನಲ್ಲಿರುವ ರಾಕೆಟ್‌ಗಳನ್ನು ಬಳಸಿಕೊಂಡು ಮರಳಿ ಅದನ್ನು ಸ್ವಸ್ಥಾನಕ್ಕೆ ಸೇರಿಸಲಾಗುತ್ತದೆ.

ಎಷ್ಟ ಜನರು ಒಳಗಿರುತ್ತಾರೆ

3-13 ಜನ ಐಎಸ್‌ಎಸ್‌ ಪ್ರವೇಶ ಮಾಡಬಹುದು. ಆದರೆ ಒಳಗೆ ಹೆಚ್ಚಿನ ಸಮಯ ಇರುವ ಅವಕಾಶ 7 ಜನರಿಗಷ್ಟೇ ಇರುತ್ತದೆ.

ನಿರ್ವಾತ ಪ್ರದೇಶದಲ್ಲಿನ

ನಿರ್ಮಾಣವೇ ಅದ್ಭುತ

ಐಎಸ್‌ಎಸ್‌ ನಿರ್ಮಾಣವೇ ಒಂದು ಅದ್ಭುತ ಪ್ರಕ್ರಿಯೆ. ಭೂಮಿಯ ಮೇಲೆ ತಳದಲ್ಲಿ ನೆಲದ ಮೇಲೆ ಕಟ್ಟುವುದಕ್ಕೆ ಹೋಲಿಸಿದರೆ ಇದು ಅತ್ಯಂತ ಸಂಕೀರ್ಣ. ಏಕೆಂದರೆ ಯಾವುದೇ ವಸ್ತುಗಳನ್ನು ಅಲ್ಲಿ ಸಂಗ್ರಹಿಸಲು ಸಾಧ್ಯವಿಲ್ಲ. ಒಮ್ಮೆಗೆ ಎಲ್ಲಾ ವಸ್ತುಗಳನ್ನು ಕೊಂಡೊಯ್ಯಲು ಸಾಧ್ಯವಿಲ್ಲ. ಭೂಮಿಯಲ್ಲೇ ಜೋಡಿಸಿ ಅಲ್ಲಿಗೆ ಕೊಂಡೊಯ್ಯುವುದೂ ಸಾಧ್ಯವಿಲ್ಲ. ಹೀಗಾಗಿ ನಿರ್ಮಾಣಕ್ಕೆ ಬೇಕಾದ ಉಪಕರಣಗಳನ್ನು ಒಟ್ಟು 36 ಸ್ಪೇಸ್‌ಶಿಪ್‌ ಉಡ್ಡಯನಗಳ ಮೂಲಕ ಕೊಂಡೊಯ್ಯಲಾಗಿತ್ತು.

ರಷ್ಯಾದ ಮೀರ್‌ ನೆರವಿನಿಂದ

ಮೊದಲ ಹಂತದ ನಿರ್ಮಾಣ

ಐಎಸ್‌ಎಸ್‌ ಅನ್ನು 2 ಹಂತಗಳಲ್ಲಿ ನಿರ್ಮಿಸಲಾಗಿದೆ. ಮೊದಲನೆಯ ಹಂತದಲ್ಲಿ (1995-98), ರಷ್ಯಾದ ಬಾಹ್ಯಾಕಾಶ ಕೇಂದ್ರವಾದ ‘ಮೀರ್‌’ನತ್ತ 11 ಬಾಹ್ಯಾಕಾಶ ನೌಕೆಗಳನ್ನು ಕಳಿಸಲಾಗಿದ್ದು, ಅದರಲ್ಲಿ 10 ಅದಕ್ಕೆ ಡಾಕ್‌ (ಜೋಡಣೆ) ಆದವು. ಈ ಮೂಲಕ, ಮೀರ್‌ ಜತೆ ಸಂಪರ್ಕ ಸಾಧಿಸಲಾಯಿತು. ಇದು, ರಷ್ಯಾ ಹಾಗೂ ಅಮೆರಿಕದ ಗಗನಯಾನಿಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡಲು ಅನುಕೂಲವಾಯಿತು. ಬಳಿಕ ಅಮೆರಿಕದ 12ಕ್ಕೂ ಅಧಿಕ ಪೇಲೋಡ್‌ಗಳು ಮತ್ತು 7 ಗಗನಯಾತ್ರಿಗಳಿದ್ದ ಸ್ಪೆಕ್ಟರ್ ಮತ್ತು ಪ್ರಿರೋಡಾ ಎಂಬ 2 ರಷ್ಯಾದ ಮಾಡ್ಯೂಲ್‌ಗಳನ್ನು ಮೀರ್‌ಗೆ ಜೋಡಿಸಲಾಯಿತು. ಇವುಗಳ ಮೂಲಕ ಒಂದೊಂದೇ ಉಪಕರಣಗಳನ್ನು ಜೋಡಿಸಿ ಐಎಸ್‌ಎಸ್‌ಗೆ ರೂಪ ನೀಡಲಾಯಿತು.

ವಿವಿಧ ದೇಶಗಳ ನೆರವಿನಿಂದ

ಎರಡನೇ ಹಂತ ಪೂರ್ಣ

ಎರಡನೇ ಹಂತದಲ್ಲಿ ಕೆನಡಾ, ಯುರೋಪ್‌, ಜಪಾನ್‌, ಅಮೆರಿಕ ಮತ್ತು ರಷ್ಯಾದ ಬಾಹ್ಯಾಕಾಶ ಕೇಂದ್ರಗಳು ತಮ್ಮ ತಮ್ಮ ಹಾರ್ಡ್‌ವೇರ್‌ಗಳ ನಿರ್ವಹಣೆ ಮತ್ತು ನಿಯಂತ್ರಣದ ಜವಾಬ್ದಾರಿಯನ್ನು ಹೊತ್ತವು. ಐಎಸ್‌ಎಸ್‌ ನಿರ್ಮಾಣಕ್ಕೆ ರಷ್ಯಾದ 6 ಪ್ರೋಟಾನ್‌ ಮತ್ತು ಸೋಯುಜ್‌ ಸೇರಿದಂತೆ 36 ಬಾಹ್ಯಾಕಾಶ ನೌಕೆಯ ಜೋಡಣೆ ವಿಮಾನಗಳು ನಭಕ್ಕೆ ಹಾರಿದ್ದವು. ಇವುಗಳ ಮೂಲಕ 2ನೇ ಹಂತವನ್ನು ಪೂರ್ಣಗೊಳಿಸಲಾಯಿತು.

ಐಎಸ್‌ಎಸ್‌ ನಿರ್ಮಾಣಕ್ಕೆ ಆಗಿದ್ದು

ಭರ್ಜರಿ 13 ಲಕ್ಷ ಕೋಟಿ ರು.!

ಐಎಸ್‌ಎಸ್‌ ಅನ್ನು ಇದುವರೆಗೆ ಬಾಹ್ಯಾಕಾಶದಲ್ಲಿ ನಿರ್ಮಿಸಲಾದ ಅತಿ ದುಬಾರಿ ಘಟಕ. 2010ರಲ್ಲಿ, ಅಂದರೆ ನಿರ್ಮಾಣ ಕೊನೆಯ ಹಂತದಲ್ಲಿದ್ದಾಗ ಇದಕ್ಕೆ ತಗುಲಿದ್ದ ವೆಚ್ಚ 12.86 ಲಕ್ಷ ಕೋಟಿ ರು.. ಇದರಲ್ಲಿ ಅಮೆರಿಕ 5.03 ಲಕ್ಷ ಕೋಟಿ ರು., ರಷ್ಯಾ 1.02 ಲಕ್ಷ ಕೋಟಿ ರು., ಯುರೋಪ್‌ ಹಾಗೂ ಜಪಾನ್‌ 42.87 ಸಾವಿರ ಕೋಟಿ ರು., ಕೆನಡಾ 17.15 ಸಾವಿರ ಕೋಟಿ ರು. ಖರ್ಚು ಮಾಡಿವೆ. ಉಳಿದಂತೆ ಭಾಗಗಳ ಜೋಡಣೆಗೆ ನಡೆದ ಪ್ರತಿ ಉಡ್ಡಯನಕ್ಕೆ 11900 ಲಕ್ಷ ಕೋಟಿ ರು.ನಂತೆ, 36 ಉಡಾವಣೆಗಳಿಗೆ 4.32 ಲಕ್ಷ ಕೋಟಿ ರು. ಖರ್ಚಾಗಿದೆ.

ಗಾಳಿಯಲ್ಲಿ ತೇಲುತ್ತಲೇ ಐಎಸ್‌ಎಸ್‌

ಹೊರಗೆ ನಡೆಸುವ ಸ್ಪೇಸ್‌ ವಾಕ್‌

ಐಎಸ್‌ಎಸ್‌ನ ಮತ್ತೊಂದು ಅಚ್ಚರಿ ಎಂದರೆ ಅಲ್ಲಿ ನಡೆಸುವ ಬಾಹ್ಯಾಕಾಶ ನಡಿಗೆ. ಯಾವುದೇ ದುರಸ್ತಿ ಅಥವಾ ಹೊಸ ಉಪಕರಣ ಜೋಡಣೆಗೆ ಐಎಸ್‌ಎಸ್‌ನ ಒಳಗಿರುವ ವಿಜ್ಞಾನಿಗಳು ವಿಶೇಷ ಉಡುಗೆ ತೊಟ್ಟು ಅದರಿಂದ ಹೊರಬಂದು ಗಾಳಿಯಲ್ಲಿ ತೇಲುತ್ತಲೇ ಕಾರ್ಯಾಚರಣೆ ನಡೆಸುತ್ತಾರೆ. ಇದು ಅತ್ಯಂತ ಸೂಕ್ಷ್ಮ ಕೆಲಸ. ಇದನ್ನು ನುರಿತ ಬಾಹ್ಯಾಕಾಶ ಯಾನಿಗಳು ಮಾತ್ರವೇ ನಡೆಸುತ್ತಾರೆ. ಇದುವರೆಗೆ 260 ಬಾಹ್ಯಾಕಾಶ ನಡಿಗೆಗಳನ್ನು ಕೈಗೊಳ್ಳಲಾಗಿದೆ.==

2 ದಶಕಗಳಲ್ಲಿ 24 ದೇಶಗಳ

263 ಯಾತ್ರಿಗಳ ಪ್ರಯಾಣ

ಕಳೆದ 2 ದಶಕದಿಂದ ಐಎಸ್‌ಎಸ್‌, ಗಗನಯಾತ್ರಿಗಳ ಭೇಟಿ ಹಾಗೂ ವಾಸಕ್ಕೆ ಮುಕ್ತವಾಗಿದೆ. ಈವರೆಗೆ ಐಎಸ್‌ಎಸ್‌ಗೆ ಒಟ್ಟು 60 ಯಾನಗಳನ್ನು ಕೈಗೊಳ್ಳಲಾಗಿದ್ದು, 24 ದೇಶಗಳ 263 ಯಾತ್ರಿಗಳು ಭೇಟಿ ನೀಡಿದ್ದಾರೆ. ಮೊದಲ ಬಾರಿ, 2000ರ ನ.2ರಂದು ‘ಎಕ್ಸ್ಪೆಡಿಷನ್‌-1’ ಹೆಸರಿನಲ್ಲಿ 3 ಬಾಹ್ಯಾಕಾಶಯಾನಿಗಳು ಐಎಸ್‌ಎಸ್‌ಗೆ ಹೋಗಿ ವಾಸವಿದ್ದು ಬಂದಿದ್ದರು.

ಬಾಹ್ಯಾಕಾಶ ಕೇಂದ್ರದ ರಸವತ್ತಾದ ಅಂಶಗಳು

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ 15 ದೇಶಗಳ 5 ಬಾಹ್ಯಾಕಾಶ ಸಂಸ್ಥೆಗಳ ಸಹಯೋಗದಲ್ಲಿ ನಿರ್ಮಾಣಗೊಂಡಿದೆ

2000ನೇ ಇಸವಿಯಿಂದಲೂ ಸತತವಾಗಿ ಇದರಲ್ಲಿ ಒಬ್ಬರಲ್ಲಾ ಒಬ್ಬರು ವಿಜ್ಞಾನಿಗಳು ವಾಸವಿದ್ದು ಸಂಶೋಧನೆ ನಡೆಸುತ್ತಿದ್ದಾರೆ

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವು ಒಮ್ಮಗೆ ಗರಿಷ್ಠ 7 ಬಾಹ್ಯಾಕಾಶ ಯಾನಿಗಳನ್ನು ಇರಿಸಿಕೊಳ್ಳುವ ವ್ಯವಸ್ಥೆ ಹೊಂದಿದೆ

ಐಎಸ್ಎಸ್‌ ಪ್ರತಿ ಸೆಕೆಂಡ್‌ಗೆ 5 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದು, ಪ್ರತಿ 90 ನಿಮಿಷಕ್ಕೆ ಒಮ್ಮೆ ಭೂಮಿಯನ್ನು ಸುತ್ತು ಹಾಕುತ್ತದೆ

ಐಎಸ್‌ಎಸ್‌ನಲ್ಲಿ ಇರುವ ವಿಜ್ಞಾನಿಗಳು ಒಂದೇ ದಿನ 16 ಸೂರ್ಯೋದಯ, 16 ಸೂರ್ಯಾಸ್ತ ವೀಕ್ಷಿಸುವ ಅವಕಾಶ ಹೊಂದಿರುತ್ತಾರೆ

ಐಎಸ್‌ಎಸ್‌ನ ವಾಸ ಸ್ಥಳ ಮತ್ತು ಕೆಲಸದ ಸ್ಥಳವು 6 ಬೆಡ್‌ರೂಂ ಮನೆಗಿಂತಲೂ ದೊಡ್ಡದಿದೆ. 2 ಬಾತ್‌ರೂಂ, ಜಿಮ್‌ ಕೂಡಾ ಇದೆ.

ಮಾಂಸ ಮತ್ತು ಮೂಳೆಯ ದ್ರವ್ಯರಾಶಿ ನಷ್ಟ ಸರಿದೂಗಿಸಿಕೊಳ್ಳಲು ಯಾನಿಗಳು ನಿತ್ಯ ಕನಿಷ್ಠ 2 ಗಂಟೆ ವ್ಯಾಯಾಮ ಮಾಡಬೇಕು

ಐಎಸ್ಎಸ್‌ ಒಂದು ಕಡೆಯಿಂದ ಇನ್ನೊಂದು ಕಡೆಗೆ 346 ಅಡಿ ಉದ್ದವಿದೆ. ಅಂದರೆ ಒಂದು ಫುಟ್ಬಾಲ್‌ ಮೈದಾನದಷ್ಟು ದೊಡ್ಡದು

ಒಂದು ಬಾರಿಗೆ ಐಎಸ್‌ಎಸ್‌ಗೆ 8 ಬೇರೆ ಬೇರೆ ಬಾಹ್ಯಾಕಾಶ ನೌಕೆಗಳನ್ನು ಜೋಡಿಸುವ ಅವಕಾಶವನ್ನು ಕಲ್ಪಿಸಲಾಗಿದೆ

ಐಎಸ್‌ಎಸ್‌ ಒಂದು ದಿನ ಪ್ರಯಾಣಿಸುವ ದೂರವು, ಭೂಮಿಯಿಂದ ಚಂದ್ರನಲ್ಲಿ ಹೋಗಿ ಮರಳಿ ಬರುವಷ್ಟು ಇರುತ್ತದೆ

ಐಎಸ್‌ಎಸ್‌ನಲ್ಲಿರುವ ವಿಜ್ಞಾನಿಗಳು ಒಂದು ದಿನಕ್ಕೆ ಕನಿಷ್ಠ 4 ಲೀಟರ್‌ನಿಂದ 12 ಲೀಟರ್‌ವರೆಗೆ ನೀರು ಬಳಸುತ್ತಾರೆ. ಬಹುತೇಕ ನೀರು ಮರುಬಳಕೆ ಆಗುತ್ತದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಆಸ್ಟ್ರೇಲಿಯಾದಲ್ಲಿ 426 ಕೆಜಿಯ ಗಾಂಧಿ ಕಂಚಿನ ಪ್ರತಿಮೆ ಧ್ವಂಸ, ಕಳವು
ಅಣ್ವಸ್ತ್ರ ಕ್ಷಿಪಣೀಲಿ ಇಂಧನ ಬದಲು ನೀರು ತುಂಬಿದ್ದ ಅಧ್ಯಕ್ಷ ಕ್ಸಿ ಆಪ್ತ!