3 ಇರಾನ್‌ ಅಣು ಘಟಕಕ್ಕೆ ಅಮೆರಿಕ ಬಾಂಬ್‌

KannadaprabhaNewsNetwork |  
Published : Jun 22, 2025, 11:47 PM ISTUpdated : Jun 23, 2025, 04:59 AM IST
ದಾಳಿ | Kannada Prabha

ಸಾರಾಂಶ

  ಭಾನುವಾರ ಮುಂಜಾನೆ ಇರಾನ್‌ನ 3 ಪ್ರಮುಖ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ಅಮೆರಿಕ ಭೀಕರ ದಾಳಿ ನಡೆಸಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಆತಂಕ ಮನೆಮಾಡಿದೆ.

 ಟೆಹ್ರಾನ್‌/ವಾಷಿಂಗ್ಟನ್‌/ಟೆಲ್‌ ಅವಿವ್‌: ಒಂಬತ್ತು ದಿನಗಳಿಂದ ನಡೆಯುತ್ತಿದ್ದ ಇಸ್ರೇಲ್‌-ಇರಾನ್‌ ಸಂಘರ್ಷಕ್ಕೆ ಇದೀಗ ಅಮೆರಿಕ ನೇರಪ್ರವೇಶ ಮಾಡಿದೆ. ಸಂಧಾನಕ್ಕಾಗಿ ಒಂದು ವಾರಗಳ ಗಡುವು ನೀಡಿದ ಬೆನ್ನಲ್ಲೇ, ಭಾನುವಾರ ಮುಂಜಾನೆ ಇರಾನ್‌ನ 3 ಪ್ರಮುಖ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ಅಮೆರಿಕ ಭೀಕರ ದಾಳಿ ನಡೆಸಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಆತಂಕ ಮನೆಮಾಡಿದೆ.

‘ಆಪರೇಷನ್‌ ಮಿಡ್‌ನೈಟ್‌ ಹಮ್ಮರ್‌’ ಹೆಸರಿನ ಈ ತಡರಾತ್ರಿ ಕಾರ್ಯಾಚರಣೆಗೆ 125 ಯುದ್ಧ ವಿಮಾನ, 14 ಬಾಂಬರ್‌, 40 ಕ್ಷಿಪಣಿ ಬಳಸಿದ ಅಮೆರಿಕ ಇರಾನ್‌ನ ಬೆಟ್ಟಗುಡ್ಡಗಳ ತಳದಲ್ಲಿ ನಿರ್ಮಿಸಿರುವ ಫೋರ್ಡೋ, ಇಸ್ಫಹಾನ್‌ ಮತ್ತು ನಟಾಂಝ್‌ ಅಣು ಕೇಂದ್ರಗಳ ಮೇಲೆ ದಾಳಿ ನಡೆಸಿದೆ. ದಾಳಿಗೆ ತಲಾ 13,600 ಕೆ.ಜಿ.ತೂಕದ ಬಂಕರ್ ಬಸ್ಟರ್‌ ಬಾಂಬ್‌, ಅತ್ಯಾಧುನಿಕ ಬಿ-2 ವಿಮಾನ ಮತ್ತು 24 ಟಾಮ್‌ಹಾಕ್‌ ಕ್ಷಿಪಣಿ ಸೇರಿ 40 ಕ್ಷಿಪಣಿ ಬಳಸಲಾಗಿದೆ. ಈ ಮೂಲಕ 40 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕವು ಇರಾನ್‌ ಮೇಲೆ ನೇರ ದಾಳಿ ನಡೆಸಿದಂತಾಗಿದೆ.

ದಾಳಿ ವಿಚಾರವನ್ನು ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೇ ಘೋಷಿಸಿದ್ದು, ಇರಾನ್‌ನ ಮೂರು ಪರಮಾಣು ಕೇಂದ್ರಗಳನ್ನು ಯಶಸ್ವಿಯಾಗಿ ನಾಶಮಾಡಿದ್ದೇವೆ. ಅಮೆರಿಕ, ಇಸ್ರೇಲ್‌ ಮತ್ತು ಇಡೀ ವಿಶ್ವಕ್ಕೆ ಇದೊಂದು ಐತಿಹಾಸಿಕ ಸಮಯ. ಇರಾನ್‌ ಯುದ್ಧ ನಿಲ್ಲಿಸಲು ಮುಂದಾಗಬೇಕು ಎಂದು ಹೇಳಿದ್ದಾರೆ.

ಅಮೆರಿಕ ದಾಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಇರಾನ್‌ ಮಾತ್ರ, ಟ್ರಂಪ್‌ ಅವರು ರಾಯಭಾರತ್ವಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಇನ್ನು ರಾಯಭಾರತ್ವದ ಸಮಯ ಮುಗಿದಿದೆ. ಇರಾನ್‌ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಅಧಿಕಾರವಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಆದರೆ ನಮ್ಮ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದರೆ ಭಾರೀ ಪರಿಣಾಮ ಎದುರಿಸಬೇಕಾದೀತು. ಶಾಂತಿ ಅಥವಾ ದುರಂತದ ಆಯ್ಕೆಯಷ್ಟೇ ಇರಾನ್‌ ಮುಂದಿದೆ. ಇರಾನ್‌ ಏನಾದರೂ ತಿರುಗಿ ಬಿದ್ದರೆ ನಮ್ಮ ಬಳಿ ದಾಳಿ ನಡೆಸಬೇಕಿರುವ ಸ್ಥಳಗಳ ಪಟ್ಟಿ ಇನ್ನೂ ಇದೆ ಎಂದು ಟ್ರಂಪ್‌ ಎಚ್ಚರಿಸಿದ್ದಾರೆ.

ದಾಳಿ-ಪ್ರತಿದಾಳಿ:

ಅಮೆರಿಕ ದಾಳಿ ಬೆನ್ನಲ್ಲೇ ಇರಾನ್‌ ಮತ್ತು ಇಸ್ರೇಲ್‌ ಪರಸ್ಪರ ಭಾರೀ ದಾಳಿ-ಪ್ರತಿದಾಳಿ ನಡೆಸಿವೆ. ಇಸ್ರೇಲ್ ರಾಜಧಾನಿ ಸೇರಿ ಹಲವೆಡೆ ಇರಾನ್‌ ಹಲವು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ 40 ಕ್ಷಿಪಣಿಗಳನ್ನು ಹಾರಿಸಿದ್ದು, ಇದರಿಂದ ಟೆಲ್‌ಅವೀವ್‌ನಲ್ಲಿ 80 ಮಂದಿ ಗಾಯಗೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ಕೂಡ ಇರಾನ್‌ನ ಕ್ಷಿಪಣಿ ಉಡಾವಣಾ ಕೇಂದ್ರಗಳ ಮೇಲೆ ಪ್ರತಿ ದಾಳಿ ನಡೆಸಿ, ಹಾನಿ ಮಾಡಿದೆ.

ಅಣು ಯೋಜನೆ ನಿಲ್ಲಲ್ಲ:

ಮೂರು ಪರಮಾಣು ಕೇಂದ್ರಗಳ ಮೇಲಿನ ಅಮೆರಿಕದ ದಾಳಿಯನ್ನು ಇರಾನ್‌ನ ಅಟೋಮಿಕ್‌ ಎನರ್ಜಿ ಕಾರ್ಪೊರೇಷನ್‌ ಕೂಡ ಖಚಿತಪಡಿಸಿದ್ದು, ಎಷ್ಟೇ ದಾಳಿ ನಡೆಸಿದರೂ ಅಣುಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಚೀನಾ, ರಷ್ಯಾ ಬೆಂಬಲ:

ಈ ನಡುವೆ ಅಮೆರಿಕ ದಾಳಿಯನ್ನು ಚೀನಾ ಮತ್ತು ರಷ್ಯಾ ಕಟುವಾಗಿ ಟೀಕಿಸಿವೆ. ಜೊತೆಗೆ ಮುಂದಿನ ದಿನಗಳಲ್ಲಿ ಅವು ಇರಾನ್‌ ಅನ್ನು ಬೆಂಬಲಿಸುವ ಸಾಧ್ಯತೆ ಇದೆ. ಒಂದು ವೇಳೆ ಈ ಬೆಳವಣಿಗೆ ನಡೆದರೆ ಇಸ್ರೇಲ್‌- ಇರಾನ್‌ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಆತಂಕ ಎದುರಾಗಿದ.

‘ಆಪರೇಷನ್‌ ಮಿಡ್‌ನೈಟ್‌ ಹ್ಯಾಮರ್‌’ ಹೆಸರಲ್ಲಿ ಟ್ರಂಪ್‌ ಅಬ್ಬರ

ಇಸ್ರೇಲ್‌-ಇರಾನ್ ಯುದ್ಧಕ್ಕೆ ಅಮೆರಿಕ ಮಧ್ಯಪ್ರವೇಶ । 4 ದಶಕದಲ್ಲೇ ಮೊದಲ ಸಲ ಇರಾನ್‌ ಬಿಕ್ಕಟ್ಟಿಗೆ ದೊಡ್ಡಣ್ಣನ ಎಂಟ್ರಿ

ಫೋರ್ಡೋ, ಇಸ್ಫಹಾನ್‌, ನಟಾಂಝ್‌ ಅಣು ನೆಲೆಗೆ ಬಂಕರ್‌ ಬಸ್ಟರ್‌ ಬಾಂಬ್‌ನಿಂದ ದಾಳಿ । ತೀವ್ರತೆಗೆ ಘಟಕ ಧ್ವಂಸ

ಇರಾನ್‌ನಿಂದ ಪ್ರತೀಕಾರ ಎಚ್ಚರಿಕೆ । ಇರಾನ್‌ಗೆ ರಷ್ಯಾ, ಚೀನಾ ಬೆಂಬಲ ಸಾಧ್ಯತೆ । ಹೀಗಾಗಿ ಕದನ ತೀವ್ರಗೊಳ್ಳುವ ಭೀತಿ

ದಾಳಿಗೆ ಅಮೆರಿಕ ಬಳಸಿದ್ದೇನು?

- 125 ಯುದ್ಧ ವಿಮಾನ

-14 ಬಾಂಬರ್‌ಗಳು

- 40 ಕ್ಷಿಪಣಿಗಳು

- 13600 ಕೆಜಿ ಬಂಕರ್ ಬಸ್ಟರ್‌ ಬಾಂಬ್‌

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಇರಾನ್‌ ಮೇಲೆ ದಾಳಿಗೆ ಅಮೆರಿಕ ಸೇನೆ ಸಿದ್ಧತೆ?
ಭಾರತದ ಮೇಲೆ ದಾಳಿಗಾಗಿ 1000 ಉಗ್ರರು ರೆಡಿ: ಅಜರ್‌