;Resize=(412,232))
ನವದೆಹಲಿ: 27 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ 3 ಬಾರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿ ಹಲವು ದಾಖಲೆ ಸೃಷ್ಟಿಸಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ (60) ಅಮೆರಿಕದ ಬಾಹ್ಯಾಕಾಶ ಸಂಸ್ಥೆ, ನಾಸಾದಿಂದ ನಿವೃತ್ತಿಯಾಗಿದ್ದಾರೆ.
1987ರಲ್ಲಿ ಅಮೆರಿಕದ ನೌಕಾಪಡೆಗೆ ಸೇರ್ಪಡೆಯಾಗಿ ಅಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ ಸುನಿತಾ 1998ರಲ್ಲಿ ನಾಸಾಗೆ ಸೇರ್ಪಡೆಯಾಗಿದ್ದರು. ಬಳಿಕ 27 ವರ್ಷಗಳ ಅವಧಿಯಲ್ಲಿ 3 ಬಾರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣ ಕೈಗೊಂಡಿದ್ದ ಸುನಿತಾ ಈ ವೇಳೆ ಬಾಹ್ಯಾಕಾಶದಲ್ಲಿ ಒಟ್ಟು 687 ದಿನಗ ಕಳೆದಿದ್ದರು. ಜೊತೆಗೆ 9 62 ಗಂಟೆ 6 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ ಮಾಡಿದ್ದಾರೆ. ಬಾಹ್ಯಾಕಾಶದಲ್ಲಿ ಮ್ಯಾರಾಥಾನ್ ಓಡಿದ ಮೊದಲ ಮಹಿಳೆ ಎಂಬ ದಾಖಲೆಯೂ ಇವರಿಗಿದೆ.
ಸುನಿತಾ ಮೊದಲ ಬಾರಿ 2006ರ ಡಿಸೆಂಬರ್‌ನಲ್ಲಿ ಡಿಸ್ಕವರಿ ಬಾಹ್ಯಾಕಾಶ ನೌಕೆ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ್ದರು. ಬಳಿಕ 2024ರ ಜೂನ್‌ನಲ್ಲಿ ಸಹಗಗನಯಾತ್ರಿ ಬಚ್ ವಿಲ್ಮೋರ್ ಜತೆಗೆ ಸುನಿತಾ ವಿಲಿಯಮ್ಸ್ ಮತ್ತೆ ಬಾಹ್ಯಾಕಾಶಕ್ಕೆ ತೆರಳಿದ್ದರು. ಸುನಿತಾರ ಕೊನೆಯ ಬಾಹ್ಯಾಕಾಶ ಪ್ರಯಾಣ ಸಾಕಷ್ಟು ಆತಂಕ ಸೃಷ್ಟಿಸಿತ್ತು. 2024ರ ಜೂನ್‌ನಲ್ಲಿ ಎಂಟು ದಿನಗಳ ಮಿಷನ್‌ಗೆಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದ ಸುನಿತಾ ಮತ್ತು ಸಹಗಗನಯಾತ್ರಿ ಬಚ್ ವಿಲ್ಮೋರ್ ಅವರು ಸ್ಟಾರ್‌ಲೈನರ್ ಗಗನೌಕೆಯಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದಾಗಿ 286 ದಿನಗಳ ಬಾಹ್ಯಾಕಾಶ ಕೇಂದ್ರದಲ್ಲೇ ಉಳಿಯಬೇಕಾಗಿ ಬಂದಿತ್ತು.
ಗುಜರಾತ್ ಮೂಲದ ದೀಪಕ್ ಪಾಂಡ್ಯಾ-ಸ್ಲೊವೇನಿಯಾ ಮೂಲದ ಉರ್ಸುಲಿನ್ ಬೊನ್ನಿ ದಂಪತಿಗೆ ಸೆ.19, 1965ರಲ್ಲಿ ಜನಿಸಿದ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದ ಬಗ್ಗೆ ಬಾಲ್ಯದಿಂದಲೂ ಒಲವು ಹೊಂದಿದ್ದವರು. ಅಮೆರಿಕ ನೌಕಾಪಡೆಯಲ್ಲಿ ಕ್ಯಾಪ್ಟನ್ ಆಗಿದ್ದ ಸುನಿತಾ ಈ ಅವಧಿಯಲ್ಲಿ 4000ಕ್ಕೂ ಹೆಚ್ಚು ಗಂಟೆಗಳ ಕಾಲ 40 ವಿವಿಧ ವಿಮಾನ, ಕಾಪ್ಟರ್ ಚಲಾಯಿಸಿದ ಸುದೀರ್ಘ ಅನುಭವ ಹೊಂದಿದ್ದಾರೆ.
ನನ್ನನ್ನು ಬಲ್ಲವರಿಗೆ ಬಾಹ್ಯಾಕಾಶ ಎನ್ನುವುದು ನನಗೆಷ್ಟು ಅಚ್ಚುಮೆಚ್ಚಿನ ತಾಣ ಎಂಬುದು ಗೊತ್ತು. ನಾಸಾದಲ್ಲಿ ಸೇವೆ ಸಲ್ಲಿಸಿರುವುದು ನನಗೆ ಸಿಕ್ಕ ಅತಿದೊಡ್ಡ ಗೌರವ. ನಾಸಾದಲ್ಲಿ 27 ವರ್ಷಗಳ ವೃತ್ತಿ ಜೀವನ ಅದ್ಭುತವಾಗಿತ್ತು. ಇದೆಲ್ಲ ಸಾಧ್ಯವಾಗಿದ್ದು ನನ್ನ ಸಹೋದ್ಯೋಗಿಗಳಿಂದ ಸಿಕ್ಕ ಅತ್ಯುತ್ತಮ ಪ್ರೀತಿ ಮತ್ತು ಬೆಂಬಲದಿಂದಲೇ.
ಸುನಿತಾ ವಿಲಿಯಮ್ಸ್, ನಾಸಾ ವಿಜ್ಞಾನಿ