ಬಾಂಗ್ಲಾದೇಶದಲ್ಲಿ ಭಾರತದ ಬಸ್ಸೊಂದರ ಮೇಲೆ ಉದ್ದೇಶಪೂರ್ವಕ ಲಾರಿ ಡಿಕ್ಕಿ : ಭಾರತೀಯರಿಗೆ ಜೀವ ಬೆದರಿಕೆ

KannadaprabhaNewsNetwork |  
Published : Dec 02, 2024, 01:17 AM ISTUpdated : Dec 02, 2024, 04:16 AM IST
ಬಸ್‌ | Kannada Prabha

ಸಾರಾಂಶ

ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿದ ಇಸ್ಕಾನ್‌ನ ಸನ್ಯಾಸಿಗಳನ್ನು ದೇಶದ್ರೋಹ ಹೊರಿಸಿ ಬಂಧಿಸಿದ್ದ ಬಾಂಗ್ಲಾದೇಶದಲ್ಲಿ ಇದೀಗ ಭಾರತದ ಬಸ್ಸೊಂದರ ಮೇಲೆ ಉದ್ದೇಶಪೂರ್ವಕ ಲಾರಿ ಡಿಕ್ಕಿ ಹೊಡೆಸಲಾಗಿದೆ.

ಢಾಕಾ: ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿದ ಇಸ್ಕಾನ್‌ನ ಸನ್ಯಾಸಿಗಳನ್ನು ದೇಶದ್ರೋಹ ಹೊರಿಸಿ ಬಂಧಿಸಿದ್ದ ಬಾಂಗ್ಲಾದೇಶದಲ್ಲಿ ಇದೀಗ ಭಾರತದ ಬಸ್ಸೊಂದರ ಮೇಲೆ ಉದ್ದೇಶಪೂರ್ವಕ ಲಾರಿ ಡಿಕ್ಕಿ ಹೊಡೆಸಲಾಗಿದೆ. ಈ ಪೂರ್ವಯೋಜಿತ ದಾಳಿಯ ಬೆನ್ನಲ್ಲೇ ಬಸ್‌ನಲ್ಲಿದ್ದ ಭಾರತೀಯರಿಗೆ ಜೀವ ಬೆದರಿಕೆಯನ್ನೂ ಹಾಕಲಾಗಿದೆ. ಮತ್ತೊಂದೆಡೆ ಭಾರತದ ಪರವಾಗಿದ್ದಾಳೆ ಎಂದು ಆರೋಪಿಸಿ ಬಾಂಗ್ಲಾದೇಶದ ಪತ್ರಕರ್ತೆಗೆ ಬೆದರಿಕೆ ಹಾಕಿದ ಘಟನೆಯೂ ನಡೆದಿದೆ.

ಅಗರ್ತಲಾದಿಂದ ಬಾಂಗ್ಲಾದೇಶ ರಾಜಧಾನಿ ಢಾಕಾ ಮೂಲಕ ಕೋಲ್ಕತಾಗೆ ಪ್ರಯಾಣಿಸುತ್ತಿದ್ದ ಬಸ್‌ ಮೇಲೆ ಬಾಂಗ್ಲನ್ನರು ದಾಳಿ ನಡೆಸಿದ್ದಾರೆ ಎಂದು ತ್ರಿಪುರದ ಸಾರಿಗೆ ಸಚಿವ ಸುಸ್ತಾನ್ ಚೌಧರಿ ಆರೋಪಿಸಿದ್ದಾರೆ. ‘ಬಾಂಗ್ಲಾದೇಶದ ಬ್ರಹ್ಮನ್‌ಬಾರಿಯಾ ಜಿಲ್ಲೆಯ ಬಿಶ್ವಾ ರಸ್ತೆಯಲ್ಲಿ ಲೇನ್‌ನಲ್ಲಿ ಹೋಗುತ್ತಿದ್ದ ನಮ್ಮ ಬಸ್‌ಗೆ ಟ್ರಕ್‌ ಅನ್ನು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಲಾಗಿದೆ. ಈ ವೇಳೆ ಎದುರಿಗೆ ಸಾಗುತ್ತಿದ್ದ ಆಟೋ ರಿಕ್ಷಾವೊಂದಕ್ಕೆ ಬಸ್‌ ಡಿಕ್ಕಿ ಹೊಡೆದಿದೆ. ಈ ವೇಳೆ ಸ್ಥಳೀಯರು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಜೊತೆಗೆ ಬಸ್‌ನಲ್ಲಿದ್ದ ಭಾರತೀಯರಿಗೆ ಸ್ಥಳೀಯರು ಕೀಳು ಭಾಷೆಯಲ್ಲಿ ಬೈದು ಜೀವ ಬೆದರಿಕೆಯನ್ನೂ ಹಾಕಿದ್ದಾರೆ. ಈ ಘಟನೆ ಬಸ್‌ನಲ್ಲಿದ್ದ ಭಾರತೀಯರನ್ನು ಭಯಗೊಳಿಸಿದೆ’ ಎಂದು ಫೋಟೋ ಸಮೇತ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಪತ್ರಕರ್ತೆಗೆ ಬೆದರಿಕೆ:ಮತ್ತೊಂದು ಘಟನೆಯಲ್ಲಿ ಭಾರತವನ್ನು ಬೆಂಬಲಿಸಿದ ಬಾಂಗ್ಲಾ ಪತ್ರಕರ್ತೆ ಮುನ್ನಿ ಸಹಾರನ್ನು ಶನಿವಾರ ರಾತ್ರಿ ಕವ್ರಾನ್ ಪ್ರದೇಶದಲ್ಲಿ ಕೆಲವರು ಗುಂಪುಗೂಡಿ ಬೆದರಿಕೆ ಹಾಕಿದ್ದಾರೆ. ‘ತಪ್ಪು ಮಾಹಿತಿಯನ್ನು ಹರಡುತ್ತಿದ್ದೀರಿ. ಬಾಂಗ್ಲಾದೇಶವನ್ನು ಭಾರತದ ಭಾಗವಾಗಿಸಲು ಬೇಕಾಗಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೀರಿ. ನೀವು ದೇಶಕ್ಕೆ ಹಾನಿ ಮಾಡುತ್ತಿದ್ದೀರಿ, ವಿದ್ಯಾರ್ಥಿಗಳ ರಕ್ತ ನಿಮ್ಮ ಕೈಯಲ್ಲಿದೆ’ ಎಂದು ಉದ್ರಿಕ್ತರು ಪತ್ರಕರ್ತೆ ಮೇಲೆ ಆಕ್ರೋಶ ವ್ಯಕ್ತ ಪಡಿಸಿದರು. ಈ ವೇಳೆ ಮುನ್ನಿ ಸಹಾ ‘ಇದು ಕೂಡ ನನ್ನ ದೇಶ’ ಎಂದು ಕೂಗಿದರು. ಬಳಿಕ ಪತ್ರಕರ್ತೆಯನ್ನು ವಶಪಡಿಸಿಕೊಂಡು ಬಳಿಕ ಬಿಡುಗಡೆ ಮಾಡಿದರು.

ಇಸ್ಕಾನ್‌ ಪ್ರತಿಭಟನೆ:

ಬಾಂಗ್ಲಾ ರಾಷ್ಟ್ರಧ್ವಜಕ್ಕೆ ಅಗೌರವ ತೋರಿರುವ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಇಸ್ಕಾನ್ ಸನ್ಯಾಸಿ ಚಿನ್ಮಯಿ ಕೃಷ್ಣದಾಸ್‌ ಜಾಮೀನು ಅರ್ಜಿ ವಿಚಾರಣೆಯನ್ನು ಮಂಗಳವಾರ ಬಾಂಗ್ಲಾ ಕೋರ್ಟ್‌ ನಡೆಸಲಿದೆ. ಚಿನ್ಮಯಿ ಸೇರಿ ತನ್ನ 6 ಬಂಧನ ಖಂಡಿಸಿ ಭಾನುವಾರ ಇಸ್ಕಾನ್‌ ಪ್ರತಿಭಟನೆ ನಡೆಸಿದೆ.

ಭಾರತ ದಾಟಲೆತ್ನ:

ದೌರ್ಜನ್ಯಕ್ಕೆ ಬೇಸತ್ತು ಭಾರತಕ್ಕೆ ದಾಟಲು ಬಯಸಿದ ಇಸ್ಕಾನ್‌ 54 ಸದಸ್ಯರನ್ನು ಬಾಂಗ್ಲಾದೇಶದ ವಲಸೆ ಪೊಲೀಸರು ಭಾನುವಾರ ಹಿಂತಿರುಗಿಸಿದ್ದಾರೆ.

PREV

Recommended Stories

ಅಲ್ಬೇನಿಯಾದಲ್ಲಿ ವಿಶ್ವದ ಮೊದಲ ಎಐ ಸಚಿವೆ ನೇಮಕ!
ನೇಪಾಳದ ಹೋಟೆಲ್‌ಗಳು ಜೆನ್‌ಝೀ ಸಿಟ್ಟಿಗೆ ಭಸ್ಮ: ₹2500 ಕೋಟಿ ನಷ್ಟ!