ಬಾಂಗ್ಲಾಕ್ಕೂ ಕರೆಂಟ್‌ ಶಾಕ್‌ : ರಾತ್ರಿ 8ಕ್ಕೆ ಅಂಗಡಿ ಬಂದ್‌!

Published : Aug 14, 2026, 06:34 AM IST
electricity cut

ಸಾರಾಂಶ

ಮಧ್ಯಪ್ರಾಚ್ಯ ಯುದ್ಧದ ವೇಳೆ ಸಂಜೆ 7 ಗಂಟೆಗೆಲ್ಲಾ ಮಾಲ್‌, ಅಂಗಡಿ ಮುಚ್ಚಲು ಆದೇಶಿಸಿದ್ದ ಪಾಕಿಸ್ತಾನದ ರೀತಿಯದ್ದೇ ಪರಿಸ್ಥಿತಿ ಇದೀಗ ಭಾರತದ ಮತ್ತೊಂದು ನೆರೆ ದೇಶ ಬಾಂಗ್ಲಾದೇಶದಲ್ಲೂ ಕಾಣಿಸಿಕೊಂಡಿದೆ.

 ಢಾಕಾ: ಮಧ್ಯಪ್ರಾಚ್ಯ ಯುದ್ಧದ ವೇಳೆ ಸಂಜೆ 7 ಗಂಟೆಗೆಲ್ಲಾ ಮಾಲ್‌, ಅಂಗಡಿ ಮುಚ್ಚಲು ಆದೇಶಿಸಿದ್ದ ಪಾಕಿಸ್ತಾನದ ರೀತಿಯದ್ದೇ ಪರಿಸ್ಥಿತಿ ಇದೀಗ ಭಾರತದ ಮತ್ತೊಂದು ನೆರೆ ದೇಶ ಬಾಂಗ್ಲಾದೇಶದಲ್ಲೂ ಕಾಣಿಸಿಕೊಂಡಿದೆ. ಆರ್ಥಿಕ ಸಂಕಷ್ಟದ ಜೊತೆಗೆ ಬಾಂಗ್ಲಾದೇಶದಲ್ಲಿ ಭಾರೀ ವಿದ್ಯುತ್‌ ಕೊರತೆ ಕಾಣಿಸಿಕೊಂಡಿದ್ದು, ನಿತ್ಯ 9-10 ಗಂಟೆಗಳ ಕಾಲ ಪವರ್‌ ಕಟ್ ಮಾಡಲಾಗುತ್ತಿದೆ. ಇದರಿಂದ ಆಕ್ರೋಶಗೊಂಡಿರುವ ಜನತೆ ದೇಶದ ಹಲವು ಭಾಗಗಳಲ್ಲಿ ಸರ್ಕಾರದ ವಿರುದ್ಧ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಿಂದ ಎಚ್ಚೆತ್ತುಕೊಂಡಿರುವ ಸರ್ಕಾರ, ಜನಸಾಮಾನ್ಯರಿಗೆ ಸಾಧ್ಯವಾದಷ್ಟು ಸುಗಮ ವಿದ್ಯುತ್‌ ಪೂರೈಕೆ ಮಾಡುವ ನಿಟ್ಟಿನಲ್ಲಿ ಇನ್ನು ಮುಂದೆ ಶಾಪಿಂಗ್ ಮಾಲ್‌, ಮಾರುಕಟ್ಟೆ ಮತ್ತು ಅಂಗಡಿಗಳು ಬೆಳಗ್ಗೆ 11 ಗಂಟೆಯಿಂದ ರಾತ್ರಿ 8ರವರೆಗಷ್ಟೇ ತೆರೆದಿರಬಹುದು ಎಂದು ಬುಧವಾರ ಅಧಿಸೂಚನೆ ಹೊರಡಿಸಿದೆ. ಅಲ್ಲದೆ ವಿದ್ಯುತ್‌ ಬಿಲ್‌ಬೋರ್ಡ್‌ಗಳನ್ನು ಸಂಜೆ 7ಕ್ಕೆ ಆರಿಸಬೇಕು. ಅಲಂಕಾರಿಕ ದೀಪಗಳನ್ನು ಉರಿಸುವಂತಿಲ್ಲ. ಜಾತ್ರೆ, ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ರಾತ್ರಿ 8 ಗಂಟೆ ಒಳಗೆ ಮುಗಿಸಬೇಕು ಎಂದು ಆದೇಶಿಸಿದೆ.

ಭಾರೀ ಕೊರತೆ:

ಬಾಂಗ್ಲಾದಲ್ಲಿ ನಿತ್ಯ 18,000 ಮೆಗಾವ್ಯಾಟ್‌ ವಿದ್ಯುತ್ತಿಗೆ ಬೇಡಿಕೆ ಇದ್ದು, ಸದ್ಯ ಪೂರೈಕೆಯಾಗುತ್ತಿರುವುದು 13,000 ಮೆ.ವ್ಯಾ. ಮಾತ್ರ. ಇದರಿಂದ ಮನೆಗಳಿಗೆ ಪೂರೈಕೆಯಾಗುವ ವಿದ್ಯುತ್‌ನಲ್ಲಿ ವ್ಯತ್ಯಯವಾಗುತ್ತಿದೆ. ಪ್ರತಿ ದಿನ 9ರಿಂದ 10 ತಾಸು ಕರೆಂಟ್‌ ಕಟ್‌ ಮಾಡಲಾಗುತ್ತಿದೆ. ಕೃಷಿ ಕೆಲಸಗಳಿಗೆ ರೈತರು ವಿದ್ಯುತ್‌ ಬದಲು ಡೀಸೆಲ್‌ ಜನರೇಟರ್‌ಗಳನ್ನು ಬಳಸುತ್ತಿದ್ದಾರೆ. ಮಧ್ಯಪ್ರಾಚ್ಯ ಯುದ್ಧದಿಂದ ಇಂಧನ ಪೂರೈಕೆಯಲ್ಲೂ ವ್ಯತ್ಯಯವಾಗಿರುವ ಕಾರಣ ಅವರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ. ಅತ್ತ ಸೀಗಡಿ ಸಾಕಾಣಿಕೆ ಮಾಡುವಲ್ಲಿ ಸೀಗಡಿಗೆ ಆಮ್ಲಜನಕ ಸರಬರಾಜಿಗೆ ನಿರಂತರ ವಿದ್ಯುತ್‌ ಪೂರೈಕೆ ಅಗತ್ಯ. ನಡುನಡುವೆ ಕರೆಂಟ್‌ ಕಟ್‌ ಮಾಡುವುದರಿಂದ ಸೀಗಡಿಯ 2ನೇ ದೊಡ್ಡ ರಫ್ತುದಾರನಾಗಿರುವ ಬಾಂಗ್ಲಾದ ಆರ್ಥಿಕತೆಗೆ ಹಾಗೂ ಅದನ್ನು ನೆಚ್ಚಿಕೊಂಡಿರುವ ರೈತರಿಗೆ ಆರ್ಥಿಕ ಪೆಟ್ಟು ಬೀಳುತ್ತಿದೆ. ಇದರಿಂದ ಬೇಸತ್ತ ಕೆಲವರು ಕೆಲ ಕಡೆಗಳಲ್ಲಿ ವಿದ್ಯುತ್ ಕೇಂದ್ರಗಳು ಮತ್ತು ಅಧಿಕಾರಿಗಳ ಮೇಲೆ ದಾಳಿ ಮಾಡಿದ ಘಟನೆಗಳೂ ನಡೆದಿವೆ.

ಯಾಕೆ ಸಂಕಷ್ಟ?:

3 ದಿಕ್ಕುಗಳಲ್ಲಿ ಭೂಗಡಿ ಹೊಂದಿರುವ ಬಾಂಗ್ಲಾದೇಶವು ಶೇ.90ರಷ್ಟು ಕಚ್ಚಾತೈಲ ಮತ್ತು ಶೇ.30ರಷ್ಟು ಅನಿಲವನ್ನು ಆಮದು ಮಾಡಿಕೊಳ್ಳುತ್ತದೆ. ಅಮೆರಿಕದ ಕಂಪನಿಯೊಂದರ ಟರ್ಮಿನಲ್‌ನಲ್ಲಿ ಜು.21ರಂದು ಸಂಭವಿಸಿದ ಅಗ್ನಿ ಅವಘಡ ಕಾರಣ ಎಲ್‌ಎನ್‌ಜಿ ಪೂರೈಕೆ ಅರ್ಧದಷ್ಟು ಕಡಿಮೆಯಾಗಿತ್ತು. ಇತ್ತೀಚೆಗೆ ಅಲ್ಲಿ ಭಾಗಶಃ ಕಾರ್ಯಾಚರಣೆ ಪುನಾರಂಭವಾಗಿದೆ. ಅತ್ತ ಹವಾಮಾನ ವೈಪರೀತ್ಯದಿಂದಾಗಿ 2 ಹಡಗುಗಳಲ್ಲಿರುವ ಎನ್‌ಎನ್‌ಜಿಯನ್ನು ಅನ್‌ಲೋಡ್‌ ಮಾಡಲಾಗುತ್ತಿಲ್ಲ.

ಬಾಂಗ್ಲಾದಲ್ಲಿ ವಿದ್ಯುತ್‌ ಉತ್ಪಾದಿಸಲು ದಿನವೊಂದಕ್ಕೆ 100 ಕೋಟಿ ಕ್ಯೂಬಿಕ್‌ ಫೀಟ್‌ ಅನಿಲ ಬೇಕಾಗುತ್ತದೆ. ಸದ್ಯ ಪೂರೈಕೆಯಾಗುತ್ತಿರುವುದು 70 ಕೋಟಿ ಕ್ಯೂಬಿಕ್‌ ಅಡಿ ಮಾತ್ರ.

ಭಾರತ ನೆರವು?:

ಇತ್ತೀಚೆಗೆ ಬಾಂಗ್ಲಾದಲ್ಲಿನ ಭಾರತದ ರಾಯಭಾರಿ ಪ್ರಣಯ್ ವರ್ಮಾರನ್ನು ಭೇಟಿಯಾಗಿದ್ದ ವೇಳೆ ಡೀಸೆಲ್‌ ಪೂರೈಕೆಯನ್ನು ಹೆಚ್ಚಿಸುವಂತೆ ಅಲ್ಲಿನ ಇಂಧನ ಸಚಿವರು ಮನವಿ ಮಾಡಿದ್ದರು.

ಏನಿದು ಸಮಸ್ಯೆ?

- ಬಾಂಗ್ಲಾದೇಶಕ್ಕೆ ನಿತ್ಯ 18000 ಮೆಗಾವ್ಯಾಟ್‌ ವಿದ್ಯುತ್‌ ಬೇಕು. ಸದ್ಯ 13000 ಮೆಗಾವ್ಯಾಟ್‌ ಪೂರೈಕೆ

- ಅನಿಲ ಆಧರಿತ ವಿದ್ಯುತ್‌ ಉತ್ಪಾದನಾ ಘಟಕಗಳಿಗೆ ವಿವಿಧ ಕಾರಣಗಳಿಂದ ಪೂರ್ಣ ಗ್ಯಾಸ್‌ ಸಿಗುತ್ತಿಲ್ಲ

- ಇದರಿಂದಾಗಿ ನಿತ್ಯ 9ರಿಂದ 10 ತಾಸು ಮಾತ್ರ ವಿದ್ಯುತ್‌ ಪೂರೈಕೆ. ಜನರ ಆಕ್ರೋಶ ಪ್ರತಿಭಟನೆ

- ರಾತ್ರಿ 8ಕ್ಕೆ ಶಾಪಿಂಗ್‌ ಮಾಲ್‌, ಮಾರುಕಟ್ಟೆ, ಅಂಗಡಿಗಳನ್ನು ಮುಚ್ಚಲು ಸರ್ಕಾರದಿಂದ ಅಧಿಸೂಚನೆ

- ವಿದ್ಯುತ್‌ ಬಿಲ್‌ ಬೋರ್ಡ್‌ಗಳನ್ನು ಸಂಜೆ 7ಕ್ಕೆ ಆಫ್‌ ಮಾಡಲು, ಜಾತ್ರೆಗಳನ್ನು ರಾತ್ರಿ ನಡೆಸದಿರಲು ಸೂಚನೆ

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಜೈಲಲ್ಲೇ ಇಮ್ರಾನ್‌ ಸಾವು ಎಂದ ಪತ್ರಕರ್ತ: ಪಾಕ್‌ನಲ್ಲಿ ಸಂಚಲನ
ಪಾಕ್‌ನಲ್ಲಿ ಲಷ್ಕರ್‌ ಕಮಾಂಡರ್‌ ನಿಗೂಢ ಸಾವು