ರಕ್ತ ಕೊಡ್ತೇವೆ, ಬಾಂಗ್ಲಾ ಬಿಡಲ್ಲ: ದೌರ್ಜನ್ಯ ವಿರುದ್ಧ ಸಿಡಿದೆದ್ದ ಹಿಂದೂ ಸಮುದಾಯ

KannadaprabhaNewsNetwork |  
Published : Aug 11, 2024, 01:36 AM ISTUpdated : Aug 11, 2024, 03:59 AM IST
ಬಾಂಗ್ಲಾದೇಶ ಹಿಂದೂಗಳ ಪ್ರತಿಭಟನೆ | Kannada Prabha

ಸಾರಾಂಶ

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ನಿರ್ಗಮಿತ ಪ್ರಧಾನಿ ಶೇಖ್‌ ಹಸೀನಾ ವಿರೋಧಿ ಹಿಂಸಾಚಾರದಲ್ಲಿ, ಪ್ರತಿಭಟನಾಕಾರರು ತಮ್ಮನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ಹಿಂಸೆಯ ವಿರುದ್ಧ ಹಿಂದೂ ಸಮುದಾಯ ಸಿಡಿದೆದ್ದಿದೆ.

ಢಾಕಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ನಿರ್ಗಮಿತ ಪ್ರಧಾನಿ ಶೇಖ್‌ ಹಸೀನಾ ವಿರೋಧಿ ಹಿಂಸಾಚಾರದಲ್ಲಿ, ಪ್ರತಿಭಟನಾಕಾರರು ತಮ್ಮನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ಹಿಂಸೆಯ ವಿರುದ್ಧ ಹಿಂದೂ ಸಮುದಾಯ ಸಿಡಿದೆದ್ದಿದೆ. ಈ ಸಂಬಂಧ ಸಾವಿರಾರು ಬಾಗ್ಲಾದೇಶದ ಹಿಂದೂಗಳು ರಾಜಧಾನಿ ಢಾಕಾದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಇದರ ಬೆನ್ನಲ್ಲೇ ದೌರ್ಜನ್ಯವನ್ನು ಖಂಡಿಸಿರುವ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್, ‘ದೇಶದಲ್ಲಿನ ಹಿಂದೂ, ಕ್ರಿಶ್ಚಿಯನ್‌ ಹಾಗೂ ಬೌದ್ಧರು ನಮ್ಮವರೇ. ಅವರ ಪರಿವಾರಗಳನ್ನು ರಕ್ಷಿಸಿ ಎಂದು ಯುವಕರಿಗೆ ಕರೆ ನೀಡಿದ್ದಾರೆ.

ಪ್ರತಿಭಟನೆ:

‘ದೇಶಕ್ಕಾಗಿ ರಕ್ತ ಕೊಟ್ಟಿದ್ದೇವೆ, ಅಗತ್ಯವಿದ್ದರೆ ಮತ್ತೊಮ್ಮೆ ಕೊಡುತ್ತೇವೆ, ಆದರೆ ದೇಶ ಬಿಡಲ್ಲ’ ಎಂದು ಘೋಷಣೆ ಕೂಗಿ ಹಿಂದೂಗಳು ಪ್ರತಿಭಟಿಸಿದರು. ಹಿಂದೂಗಳ ಮೇಲಿನ ಹಿಂಸಾಚಾರವನ್ನು ಮೂಕ ಪ್ರೇಕ್ಷಕರಂತೆ ನೋಡುತ್ತಿರುವ ದೇಶದ ನಾಗರಿಕರ ನಡವಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ತಡೆಯಲು ಕಠಿಣ ಕಾನೂನುಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕೆಂದು ಅಲ್ಪಸಂಖ್ಯಾತ ಸಮುದಾಯದ ಸಚಿವಾಲಯ ಮತ್ತು ಅಲ್ಪಸಂಖ್ಯಾತರ ರಕ್ಷಣಾ ಆಯೋಗವನ್ನು ಒತ್ತಾಯಿಸಿದರು ಹಾಗೂ ಅಲ್ಪಸಂಖ್ಯಾತರಿಗೆ ಸಂಸತ್ತಿನಲ್ಲಿ ಶೇ.10 ರಷ್ಟು ಸ್ಥಾನಗಳನ್ನು ಮೀಸಲಿಡಬೇಕೆಂದು ಆಗ್ರಹಿಸಿದರು.ಅಮೆರಿಕದಲ್ಲೂ ಒತ್ತಾಯ:

ಈ ನಡುವೆ, ಬಾಂಗ್ಲಾದಲ್ಲಿನ ಹಿಂದೂಗಳ ದುಃಸ್ಥಿತಿ ಬಗ್ಗೆ ದನಿ ಎತ್ತಬೇಕು ಎಂದು ಜೋ ಬೈಡೆನ್‌ ಸರ್ಕಾರಕ್ಕೆ ಇಬ್ಬರು ಅಮೆರಿಕ ಸಂಸದರು ಆಗ್ರಹಿಸಿದ್ದಾರೆ.

ಹಿಂದೂಗಳೂ ನಮ್ಮವರೇ- ಯೂನಸ್‌:

ಏತನ್ಮಧ್ಯೆ ಶನಿವಾರ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಯೂನುಸ್, ‘ಅಲ್ಪಸಂಖ್ಯಾತರ ಮೇಲಿನ ದಾಳಿ ಹೇಯ ಕೃತ್ಯ. ಅವರೂ ದೇಶವಾಸಿಗಳೇ ಅಲ್ಲವೇ? ಇಡೀ ದೇಶವನ್ನು ರಕ್ಷಿಸಿದ ನಿಮಗೆ ಕೆಲ ಪರಿವಾರಗಳ ಸುರಕ್ಷತೆಯನ್ನು ಖಾತ್ರಿಪಡಿಸಲು ಸಾಧ್ಯವಿಲ್ಲವೇ?’ ಎಂದು ಪ್ರಶ್ನಿಸಿದರು.

ಮಾಜಿ ಪ್ರಧಾನಿ ಶೇಖ್‌ ಹಸೀನಾರ ಪಲಾಯನದ ನಂತರ ದೇಶದ 52 ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರ ಮೇಲೆ 205ಕ್ಕೂ ಅಧಿಕ ದಾಳಿಗಳು ನಡೆದಿವೆ ಎಂದು ವರದಿಯಾಗಿದೆ. ಪರಿಣಾಮ ಸಾವಿರಾರು ಬಾಂಗ್ಲಾದೇಶಿ ಹಿಂದುಗಳು ಆಶ್ರಯ ಬಯಸಿ ಭಾರತಕ್ಕೆ ಬರಲು ಯತ್ನಿಸುತ್ತಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಆಸ್ಟ್ರೇಲಿಯಾದಲ್ಲಿ ಯಹೂದಿಗಳ ನರಮೇಧ!
ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌