ಬಾಂಗ್ಲಾದಲ್ಲಿ ಅಸ್ಥಿರತೆಗೆ ಸೌದಿಯಲ್ಲಿ ಚೀನಾ, ಪಾಕ್‌ ಸಂಚು

KannadaprabhaNewsNetwork |  
Published : Aug 07, 2024, 01:07 AM IST
ಬಾಂಗ್ಲಾ | Kannada Prabha

ಸಾರಾಂಶ

: ಬಾಂಗ್ಲಾದೇಶದ ಹಠಾತ್ ಆಡಳಿತ ಬದಲಾವಣೆಯ ಹಿಂದೆ ಚೀನಾ ಮತ್ತು ಐಎಸ್‌ಐ ಕೈವಾಡ ಇದೆ ಎಂಬುದನ್ನು ಗುಪ್ತಚರ ಮೂಲಗಳು ದೃಢಪಡಿಸಿವೆ. ಬಾಂಗ್ಲಾದಲ್ಲಿ ಹೇಗಾದರೂ ಸರ್ಕಾರ ಬದಲಿಸಬೇಕು ಎಂದು ಪಣ ತೊಟ್ಟಿದ್ದ ಪಾಕಿಸ್ತಾನ, ಈ ಎಲ್ಲ ಸಂಚನ್ನು ಲಂಡನ್‌ನಲ್ಲಿ ಹಾಗೂ ಸೌದಿ ಅರೇಬಿಯಾದಲ್ಲಿ ಹೆಣೆದಿತ್ತು ಎಂದು ಅವು ಹೇಳಿವೆ.

ಢಾಕಾ: ಬಾಂಗ್ಲಾದೇಶದ ಹಠಾತ್ ಆಡಳಿತ ಬದಲಾವಣೆಯ ಹಿಂದೆ ಚೀನಾ ಮತ್ತು ಐಎಸ್‌ಐ ಕೈವಾಡ ಇದೆ ಎಂಬುದನ್ನು ಗುಪ್ತಚರ ಮೂಲಗಳು ದೃಢಪಡಿಸಿವೆ. ಬಾಂಗ್ಲಾದಲ್ಲಿ ಹೇಗಾದರೂ ಸರ್ಕಾರ ಬದಲಿಸಬೇಕು ಎಂದು ಪಣ ತೊಟ್ಟಿದ್ದ ಪಾಕಿಸ್ತಾನ, ಈ ಎಲ್ಲ ಸಂಚನ್ನು ಲಂಡನ್‌ನಲ್ಲಿ ಹಾಗೂ ಸೌದಿ ಅರೇಬಿಯಾದಲ್ಲಿ ಹೆಣೆದಿತ್ತು ಎಂದು ಅವು ಹೇಳಿವೆ.

ಬಾಂಗ್ಲಾದೇಶದ ವಿಪಕ್ಷವಾದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್ ಮತ್ತು ಐಎಸ್‌ಐ ಅಧಿಕಾರಿಗಳ ನಡುವೆ ಸೌದಿ ಅರೇಬಿಯಾದಲ್ಲಿ ಸಭೆ ನಡೆದಿತ್ತು. ಶೇಖ್‌ ಹಸೀನಾ ಸರ್ಕಾರ ಅಸ್ಥಿರಗೊಳಿಸಿ, ಬಿಎನ್‌ಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಬಗ್ಗೆ ಚರ್ಚೆ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಪಾಕಿಸ್ತಾನ ಕುಮ್ಮಕ್ಕಿನೊಂದಿಗೆ ಜಮಾತೆ ಇಸ್ಲಾಮಿ ಸಂಘಟನೆ ಕೂಡ ಹೋರಾಟದ ಅಖಾಡಕ್ಕೆ ಇಳಿಯಿತು. ಬಾಂಗ್ಲಾದೇಶದ ವಿದ್ಯಾರ್ಥಿ ವಿಭಾಗ ಇಸ್ಲಾಮಿ ಛತ್ರ ಶಿಬಿರ್ (ಐಸಿಎಸ್) ಹೋರಾಟಕ್ಕೆ ಜಮಾತೆ ಪ್ರೇರಣೆ ನೀಡಿತು. ಇದು ಇಂದು ನಿನ್ನೆಯದಲ್ಲ. 2 ವರ್ಷದಲ್ಲಿ ಅನೇಕ ಐಸಿಎಸ್‌ ಕಾರ್ಯಕರ್ತರು ಬಾಂಗ್ಲಾ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನೆಪದಲ್ಲಿ ಸೇರಿಕೊಂಡು ವಿದ್ಯಾರ್ಥಿಗಳನ್ನು ಪ್ರಚೋದಿಸಿದ್ದರು. ಢಾಕಾ ವಿಶ್ವವಿದ್ಯಾಲಯ, ಚಿತ್ತಗಾಂಗ್ ವಿವಿ, ರಾಜಶಾಹಿ ವಿವಿ, ಜಹಾಂಗೀರ್ ವಿವಿ, ಮತ್ತು ಸಿಲ್ಹೆಟ್ ವಿವಿ ಈ ಚಟುವಟಿಕೆ ನಡೆದವು.

ಇದರ ಬಳಿಕ ಬಿಎನ್‌ಪಿ ಪ್ರಚೋದಿತ ಸೋಷಿಯಲ್‌ ಮೀಡಿಯಾ ಖಾತೆಗಳು ಹಸೀನಾ ವಿರುದ್ಧ ವ್ಯಾಪಕ ಅಪಪ್ರಚಾರ ಮಾಡಿದವು. ಈ ಖಾತೆಗಳು ಅಮೆರಿಕದಿಂದ ಕೆಲಸ ಮಾಡುತ್ತಿದ್ದವು ಎಂದೂ ಗೊತ್ತಾಗಿದೆ.ಇದಕ್ಕೆ ಇಂಬು ಕೊಡುವಂತೆ, ಶೇಖ್‌ ಹಸೀನಾ ವಿದೇಶಕ್ಕೆ ಪರಾರಿ ಆದ ಬೆನ್ನಲ್ಲೇ ಬಂಧಿತ ಬಿಎನ್‌ಪಿ ಸ್ಥಾಪಕಿ ಖಲೀದಾ ಜಿಯಾರನ್ನು ಜೈಲಿಂದ ಬಿಡುಗಡೆ ಮಾಡಲಾಗಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಮಿನಿ ವಿಶ್ವಸಂಸ್ಥೆ ಕಟ್ಟಲು ಟ್ರಂಪ್‌ ಪ್ರಯತ್ನ?
ಟ್ರಂಪ್‌ ವಿರುದ್ಧ ತಿರುಗಿಬಿದ್ದ ಯುರೋಪಿಯನ್‌ ಒಕ್ಕೂಟ