ಬಾಂಗ್ಲಾದ ಸಂಭಾವ್ಯ ಪ್ರಧಾನಿ ರಹಮಾನ್‌ ತವರಿಗೆ ವಾಪಸ್‌

Published : Dec 26, 2025, 06:09 AM IST
Tarique Rahman Returns to Bangladesh After 17 Years Amid Political Turmoil

ಸಾರಾಂಶ

 ಹೊತ್ತಿ ಉರಿಯುತ್ತಿರುವ ಬಾಂಗ್ಲಾದೇಶಕ್ಕೆ, ಇದೀಗ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರೀಖ್‌ ರಹಮಾನ್‌ ಅವರ ಆಗಮನವಾಗಿದೆ. 17 ವರ್ಷಗಳಿಂದ ಸ್ವಯಂ ಗಡೀಪಾರಿಗೆ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದ ರಹಮಾನ್‌ ಆಗಮನ, ದೇಶದ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗುವ ನಿರೀಕ್ಷೆ ಇದೆ.

 ಢಾಕಾ: ಆಂತರಿಕ ಸಂಘರ್ಷದಿಂದ ಹೊತ್ತಿ ಉರಿಯುತ್ತಿರುವ ಬಾಂಗ್ಲಾದೇಶಕ್ಕೆ, ಇದೀಗ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರೀಖ್‌ ರಹಮಾನ್‌ ಅವರ ಆಗಮನವಾಗಿದೆ. 17 ವರ್ಷಗಳಿಂದ ಸ್ವಯಂ ಗಡೀಪಾರಿಗೆ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದ ರಹಮಾನ್‌ ಆಗಮನ, ದೇಶದ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗುವ ನಿರೀಕ್ಷೆ ಇದೆ.

ಪತ್ನಿ ಜುಬೈದಾ, ಪುತ್ರಿ ಜಮಿಯಾ ಮತ್ತು ಮುದ್ದಿನ ಬೆಕ್ಕಿನೊಂದಿಗೆ ಗುರುವಾರ ತವರಿಗೆ ಆಗಮಿಸಿದ ರಹಮಾನ್‌ಗೆ ಪಕ್ಷದ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.

ಫೆಬ್ರವರಿ ತಿಂಗಳಲ್ಲಿ ಬಾಂಗ್ಲಾದೇಶ ಸಂಸತ್‌ಗೆ ಚುನಾವಣೆ

ಫೆಬ್ರವರಿ ತಿಂಗಳಲ್ಲಿ ಬಾಂಗ್ಲಾದೇಶ ಸಂಸತ್‌ಗೆ ಚುನಾವಣೆ ನಿಗದಿಯಾಗಿದ್ದು ಬಿಎನ್‌ಪಿ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ರಹಮಾನ್‌ ಹೆಸರು ಘೋಷಣೆ ನಿಚ್ಚಳವಾಗಿದೆ. ಮಾಜಿ ಪ್ರಧಾನಿ ಖಲೀದಾ ಆರೋಗ್ಯ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅವರ ಹಿರಿಯ ಪುತ್ರನ ಹೆಸರು ಈ ಸ್ಥಾನಕ್ಕೆ ಘೋಷಣೆಯಾಗುವುದೊಂದೇ ಬಾಕಿ ಇದೆ.

ಸದ್ಯ ಭಾರತಕ್ಕೆ ವಲಸೆ ಬಂದಿರುವ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಪಕ್ಷವನ್ನು ಭ್ರಷ್ಟಾಚಾರ, ಉಗ್ರ ನಿಗ್ರಹ ಕಾಯ್ದೆ ಅನ್ವಯ ನಿಷೇಧಿಸಿರುವ ಕಾರಣ, ಬಿಎನ್‌ಪಿ ಚುನಾವಣೆಯಲ್ಲಿ ಪ್ರಮುಖ ಪಕ್ಷವಾಗಿದೆ. ಮತ್ತೊಂದೆಡೆ ಈ ಹಿಂದೆ 2001-06ರಲ್ಲಿ ಬಿಎನ್‌ಪಿ ಮಿತ್ರ ಪಕ್ಷವಾಗಿದ್ದ ಜಮಾತ್‌ ಮತ್ತು ಇತರೆ ಹಲವು ಮತೀಯ ಸಂಘಟನೆಗಳು ಈ ಬಾರಿ ಪ್ರತ್ಯೇಕವಾಗಿವೆ. ಈ ಸಂಘಟನೆಗಳು ದೇಶವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ಹೊತ್ತಿನಲ್ಲೇ ಮಾಜಿ ಪ್ರಧಾನಿಯ ಪುತ್ರನ ಆಗಮನ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಸ್ವಯಂ ಗಡೀಪಾರು:

ರಹಮಾನ್ ವಿರುದ್ಧ ಹಿಂದಿನ ಶೇಖ್‌ ಹಸೀನಾ ಸರ್ಕಾರ, ಶೇಕ್ ಹಸೀನಾ ಹತ್ಯೆಗೆ ಸಂಚು, ಭ್ರಷ್ಟಾಚಾರ ಸೇರಿದಂತೆ ಹಲವು ಆರೋಪ ಹೊರಿಸಲಾಗಿತ್ತು. ಈ ಪ್ರಕರಣಗಳಲ್ಲಿ ತಾರೀಖ್‌ ದೋಷಿ ಎಂದು ಕೋರ್ಟ್‌ ತೀರ್ಪು ನೀಡಿತ್ತು. ಹೀಗಾಗಿ ಕೋರ್ಟ್‌ ತೀರ್ಪಿಗೂ ಮುನ್ನವೇ ಚಿಕಿತ್ಸೆ ನೆಪೊವೊಡ್ಡಿ ರಹಮಾನ್‌ ದೇಶ ತೊರೆದು ಬ್ರಿಟನ್‌ಗೆ ತೆರಳಿದ್ದರು. ಆದರೆ ಇತ್ತೀಚೆಗೆ ಹಸೀನಾ ಸರ್ಕಾರದ ಪದಚ್ಯುತಿ ಬಳಿಕ, ಬಹುತೇಕ ಪ್ರಕರಣಗಳಲ್ಲಿ ರಹಮಾನ್‌ ಅವರನ್ನು ಕೋರ್ಟ್‌ ದೋಷ ಮುಕ್ತಗೊಳಿಸಿದ್ದವು. ಈ ಹಿನ್ನೆಲೆಯಲ್ಲಿ ಮಧ್ಯಂತರ ಸರ್ಕಾರ ಕೂಡಾ ಮಾಜಿ ಪ್ರಧಾನಿಯ ಪುತ್ರ ತವರಿಗೆ ಆಗಮಿಸಲು ಅವಕಾಶ ಮಾಡಿಕೊಟ್ಟಿತ್ತು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಚೀನಾದಲ್ಲಿ 1 ಮಗು ನೀತಿಯ ಜನನಿ ಪೆಂಗ್‌ ಪೆಯುನ್‌ ನಿಧನ
ಹಾರ್ಟ್‌ಅಟ್ಯಾಕ್‌ ಆದರೂ 8 ಗಂಟೆಚಿಕಿತ್ಸೆ ನೀಡದ ಕೆನಡಾದ ಆಸ್ಪತ್ರೆ!