ಬಾಲ್ಟಿಮೋರ್‌ ಸೇತುವೆ ಅವಗಢದಲ್ಲಿ 6 ಸಾವು: ಇಬ್ಬರ ರಕ್ಷಣೆ

KannadaprabhaNewsNetwork | Updated : Mar 28 2024, 11:57 AM IST

ಸಾರಾಂಶ

ಬಾಲ್ಟಿಮೋರ್‌ನ ಫ್ರಾನ್ಸಿಸ್‌ ಸ್ಕಾಟ್‌ ಸೇತುವೆಗೆ ಡಾಲಿ ಎಂಬ ಸರಕು ಸಾಗಣೆ ಹಡಗು ಡಿಕ್ಕಿ ಹೊಡೆದ ಪರಿಣಾಮ, ಸೇತುವೆ ಮೇಲೆ ರಸ್ತೆ ಕಾಮಗಾರಿ ಕೆಲಸ ಮಾಡುತ್ತಿದ್ದ 6 ಮಂದಿ ಸಾವನ್ನಪ್ಪಿರುವುದಾಗಿ ಸ್ಥಳೀಯ ಸರ್ಕಾರ ಪ್ರಕಟಿಸಿದೆ.

ನ್ಯೂಯಾರ್ಕ್‌: ಬಾಲ್ಟಿಮೋರ್‌ನ ಫ್ರಾನ್ಸಿಸ್‌ ಸ್ಕಾಟ್‌ ಸೇತುವೆಗೆ ಡಾಲಿ ಎಂಬ ಸರಕು ಸಾಗಣೆ ಹಡಗು ಡಿಕ್ಕಿ ಹೊಡೆದ ಪರಿಣಾಮ, ಸೇತುವೆ ಮೇಲೆ ರಸ್ತೆ ಕಾಮಗಾರಿ ಕೆಲಸ ಮಾಡುತ್ತಿದ್ದ 6 ಮಂದಿ ಸಾವನ್ನಪ್ಪಿರುವುದಾಗಿ ಸ್ಥಳೀಯ ಸರ್ಕಾರ ಪ್ರಕಟಿಸಿದೆ.

ಅಲ್ಲದೆ ನದಿಯಿಂದ ಇಬ್ಬರು ಕಾರ್ಮಿಕರನ್ನು ರಕ್ಷಣೆ ಮಾಡಿದೆ. ರಕ್ಷಣಾ ಕಾರ್ಯಾಚರಣೆಯನ್ನು ಸತತ 36 ಗಂಟೆಗಳ ಕಾಲ ನಡೆಸಲಾಗಿದ್ದು, ಗುಯೆಟ್‌ಮಾಲಾ ರಾಷ್ಟ್ರದ ಇಬ್ಬರು ಕಾರ್ಮಿಕರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ.

ಉಳಿದವರು ನದಿಯಲ್ಲಿ ಪತ್ತೆಯಾಗದ ಕಾರಣ ಅವರು ಸಾವನ್ನಪ್ಪಿದ್ದಾರೆ ಎಂದು ಪ್ರಕಟಿಸಿ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೇರಿಲ್ಯಾಂಡ್‌ ಸರ್ಕಾರ ತಿಳಿಸಿದೆ. ಅಲ್ಲದೆ ನಾಪತ್ತೆಯಾಗಿರುವವರು ಮೆಕ್ಸಿಕೋ ಮೂಲದವರು ಎಂಬುದಾಗಿ ಸರ್ಕಾರ ತಿಳಿಸಿದೆ.

ಜೀವ ರಕ್ಷಿಸಿದ ಭಾರತೀಯರಿಗೆ ಸಿಬ್ಬಂದಿಗೆ ಬೈಡೆನ್‌ ಶ್ಲಾಘನೆ

ವಾಷಿಂಗ್ಟನ್‌: ಹಡಗು ನಿಯಂತ್ರಣ ಕಳೆದುಕೊಂಡು ಬಾಲ್ಟಿಮೋರ್ ಸೇತುವೆಗೆ ಡಿಕ್ಕಿ ಹೊಡೆಯಬಹುದು ಎಂದು ಸರ್ಕಾರಕ್ಕೆ ಮೊದಲೇ ಸಂದೇಶ ರವಾನಿಸಿದ್ದ, 22 ಭಾರತೀಯ ಹಡಗು ಸಿಬ್ಬಂದಿಯ ಸಮಯಪ್ರಜ್ಞೆಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

‘ಭಾರತೀಯ ಹಡಗು ಸಿಬ್ಬಂದಿ ತಮ್ಮ ಹಡಗಿನ ಎಂಜಿನ್‌ ನಿಯಂತ್ರಣ ಕಳೆದುಕೊಂಡ ಕ್ಷಣವೇ ಸ್ಥಳೀಯ ಸಾರಿಗೆ ಅಧಿಕಾರಿಗಳಿಗೆ ಸಮಯಪ್ರಜ್ಞೆಯಿಂದ ಮಾಹಿತಿ ರವಾನಿಸಿದರು. 

ಪರಿಣಾಮ ಸೇತುವೆಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಿ ಹಲವರ ಪ್ರಾಣ ರಕ್ಷಿಸಲು ನೆರವಾಗಿದ್ದಾರೆ. ಇವರ ಜಾಗರೂಕ ನಡೆಯಿಂದ ಹಲವು ಅಮೆರಿಕನ್ನರ ಪ್ರಾಣ ಉಳಿದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಘಟನೆಯಲ್ಲಿ ಸಾವುಗಳು ಆಗಿರುವ ಕುರಿತು ಅಮೆರಿಕದಲ್ಲಿರುವ ಭಾರತೀಯ ದೂತಾವಾಸ ಕಚೇರಿ ಕೂಡ ಸಂತಾಪ ವ್ಯಕ್ತಪಡಿಸಿದೆ.

Share this article