ಭಾರತದ ದೇಶಿ ಮಾವು ತಳಿಗಳ ಬೆಳೆದು ಭಾರತಕ್ಕೇ ಚೀನಾ ರಫ್ತು! 2023ರಲ್ಲಿ 514 ಕೋಟಿ ರು. ಮೌಲ್ಯದ ಮಾವು ರಫ್ತು

KannadaprabhaNewsNetwork |  
Published : Aug 19, 2024, 01:48 AM ISTUpdated : Aug 19, 2024, 04:06 AM IST
ಮಾವಿನ ಹಣ್ಣು | Kannada Prabha

ಸಾರಾಂಶ

ವಿಶ್ವದಲ್ಲೇ ಅತಿಹೆಚ್ಚು ಮಾವಿನ ಹಣ್ಣು ಬೆಳೆಯುವ ಮತ್ತು ಮಾವಿನ ಹಣ್ಣಿನ ರಫ್ತಿನ ಮುಂಚೂಣಿ ದೇಶಗಳ ಪೈಕಿ ಒಂದಾದ ಭಾರತಕ್ಕೆ ಇದೀಗ ಚೀನಾ ಭಾರೀ ಸಡ್ಡು ಹೊಡೆದಿದೆ.

ನವದೆಹಲಿ: ವಿಶ್ವದಲ್ಲೇ ಅತಿಹೆಚ್ಚು ಮಾವಿನ ಹಣ್ಣು ಬೆಳೆಯುವ ಮತ್ತು ಮಾವಿನ ಹಣ್ಣಿನ ರಫ್ತಿನ ಮುಂಚೂಣಿ ದೇಶಗಳ ಪೈಕಿ ಒಂದಾದ ಭಾರತಕ್ಕೆ ಇದೀಗ ಚೀನಾ ಭಾರೀ ಸಡ್ಡು ಹೊಡೆದಿದೆ. ಕೆಲವೇ ದಶಕಗಳ ಹಿಂದೆ ಮಾವಿನ ಹಣ್ಣಿನ ಕೃಷಿಯೇ ಗೊತ್ತಿರದಿದ್ದ ಚೀನಾ, ಇದೀಗ ಮಾವು ರಫ್ತಿನಲ್ಲಿ ಭಾರತವನ್ನು ಮೀರಿಸಿದೆ. ಅಷ್ಟೇ ಏಕೆ ಭಾರತಕ್ಕೂ ಭಾರತದ್ದೇ ದೇಶೀಯ ಮಾವಿನ ಹಣ್ಣು ರಫ್ತು ಮಾಡುವ ಹಂತಕ್ಕೆ ಬಂದು ನಿಂತಿದೆ.

ಜೊತೆಗೆ, ಭಾರತ ಹೆಚ್ಚು ರಫ್ತು ಮಾಡುವ ಮಾವಿನ ತಳಿಯನ್ನೇ ಹೆಚ್ಚಾಗಿ ಬೆಳೆದು ಭಾರತದ ರಫ್ತಿಗೆ ದೊಡ್ಡ ಪೆಟ್ಟು ನೀಡಿದೆ. ಅಚ್ಚರಿಯ ವಿಷಯವೆಂದರೆ ದಶಕಗಳ ಹಿಂದೆ ಮಾವಿನ ಹಣ್ಣಿನ ರಾಜತಾಂತ್ರಿಕತೆ ಕೈಗೊಂಡಿದ್ದ ಭಾರತಕ್ಕೇ ಚೀನಾ ಮಾವಿನ ಹಣ್ಣಿನ ರಫ್ತು ಮೂಲಕ ಶಾಕ್‌ ಕೊಟ್ಟಿದೆ.

ಉತ್ಪಾದನೆಯಲ್ಲಿ ನಂ.1:

ಭಾರತವು ವಿಶ್ವದ ಮಾವು ಬೆಳೆಯಲ್ಲಿ ಶೇ.40ರಷ್ಟು ಪಾಲು ಹೊಂದಿದ್ದು, ಬೆಳೆಯಲ್ಲಿ ವಿಶ್ವದ ಅಗ್ರಗಣ್ಯ ದೇಶವಾಗಿದೆ. ಭಾರತದಲ್ಲಿ ಪ್ರತಿ ವರ್ಷ 2.5 ಕೋಟಿ ಟನ್‌ಗೂ ಹೆಚ್ಚಿನ ಮಾವು ಬೆಳೆಯಲಾಗುತ್ತದೆ. ಆದರೆ ಕಳೆದ ಕೆಲ ವರ್ಷಗಳಿಂದ ರಫ್ತಿನಲ್ಲಿ ಚೀನಾಗಿಂತ ಹಿಂದೆ ಬಿದ್ದಿದೆ. ಚೀನಾ 2023ರಲ್ಲಿ 514 ಕೋಟಿ ರು. ಮೌಲ್ಯದ ಮಾವು ರಫ್ತು ಮಾಡಿದೆ. ಭಾರತ ಇದೇ ವೇಳೆ 498 ಕೋಟಿ ರು.ಮೌಲ್ಯದ ಮಾವು ರಫ್ತು ಮಾಡಿದೆ. ಇದು ಚೀನಾಗಿಂತ ಶೇ.6.24ರಷ್ಟು ಕಡಿಮೆ.ಇನ್ನು 2022ರಲ್ಲೂ ಹೀಗೇ ಆಗಿತ್ತು. ಆಗ ಚೀನಾ 465 ಕೋಟಿ ರು. ಮೌಲ್ಯದ ಮಾವು ರಫ್ತು ಮಾಡಿದ್ದರೆ ಭಾರತ 380 ಕೋಟಿ ರು. ಮೌಲ್ಯದ ಮಾವನ್ನು ಮಾತ್ರ ವಿದೇಶಗಳಿಗೆ ರವಾನಿಸಿತ್ತು. 2022ಕ್ಕೆ ಹೋಲಿಸಿದರೆ ಭಾರತದ ರಫ್ತು 2023ರಲ್ಲಿ ಕೊಂಚ ಸುಧಾರಿಸಿದೆ.

ರಫ್ತಿನಲ್ಲಿ ಭಾರತವನ್ನೇ ಮೀರಿಸಿದ ಚೀನಾ:

1960ರವರೆಗೆ ಚೀನಾದಲ್ಲಿ ಮಾವು ಬೆಳೆ ಜನಪ್ರಿಯ ಆಗಿರಲಿಲ್ಲ. ಆದರೆ ಹೈನಾ ಹಾಗೂ ಗುವಾಂಗ್‌ಡಾಂಗ್‌ನಂಥ ಚೀನಾದ ಕೆಲವು ಪ್ರಾಂತ್ಯಗಳಲ್ಲಿ ನಂತರ ಮಾವು ಬೆಳೆ ಜನಪ್ರಿಯತೆ ಕಂಡು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಇಂದು ದಶೇರಿ, ಚೌಸಾ, ಅಲ್ಫೋನ್ಸೋ (ಆಪೂಸ್), ತೋತಾಪುರಿ, ಲಾಂಗ್ರಾದಂಥ ಭಾರತ ರಫ್ತು ಮಾಡುವ ತಳಿಗಳನ್ನು ಚೀನಾ ಹೇರಳವಾಗಿ ಉತ್ಪಾದಿಸಲಾಗುತ್ತಿದೆ. ವಿಶೇಷವೆಂದರೆ ಇವು ಭಾರತದ ಮೂಲದ ತಳಿಗಳಾಗಿದ್ದರೂ, ಈ ಕೆಲವು ತಳಿಗಳ ಮಾವುಗಳನ್ನು ಭಾರತಕ್ಕೇ ಚೀನಾ ರಫ್ತು ಮಾಡುತ್ತಿದೆ.

ರಫ್ತಿನಲ್ಲಿ ಭಾರತ ಹಿನ್ನಡೆ ಏಕೆ?:

ಭಾರತದಲ್ಲಿ ಮಾವು ಬೆಳೆಗೆ ವಿಪರೀತ ಬೇಡಿಕೆ ಇದೆ. ಇದು ರಫ್ತಿಗೆ ಮೊದಲ ಅಡ್ಡಿ. 2ನೇ ಪ್ರಮುಖ ಅಡ್ಡಿಯೆಂದರೆ ಅತಿಯಾಗಿ ರಾಸಾಯನಿಕ ಹಾಗೂ ನಿಷೇಧಿತ ಕೀಟನಾಶಕ ಬಳಕೆ. ಇಂಥ ವಸ್ತುಗಳ ಬಳಕೆಯಿಂದ, ಮಾವು ಆಮದು ಮಾಡಲು ಇಚ್ಛಿಸುವ ದೇಶಗಳು ಭಾರತದ ಮಾವನ್ನು ತಿರಸ್ಕರಿಸಿ ಚೀನಾ ಹಾಗೂ ಇತರ ದೇಶಗಳ ಮಾವನ್ನು ಆಯ್ಕೆ ಮಾಡಿಕೊಳ್ಳುತ್ತಿವೆ ಎನ್ನುತ್ತಾರೆ ಉತ್ತರ ಪ್ರದೇಶ ಶಹಜಹಾನ್‌ಪುರದ ಮಾವು ವ್ಯಾಪಾರಿ ಶಾಹಿದ್ ಖಾನ್‌.

ನೆಹರು ಆರಂಭಿಸಿದ್ದ ಮಾವು ರಾಜತಾಂತ್ರಿಕತೆ

1950ರ ದಶಕದಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಭಾರತದ ಮಾವಿನ ರಾಜತಾಂತ್ರಿಕತೆ ಆರಂಭಿಸಿದ್ದರು. ಈ ಪ್ರಕಾರ ದೆಹಲಿಯಿಂದ ಚೀನಾಕ್ಕೆ 8 ಮಾವಿನ ಸಸಿಗಳನ್ನು ಉಡುಗೊರೆಯಾಗಿ ಆಗಿನ ಚೀನಾದ ಪ್ರಧಾನಿ ಝೌ ಎನ್ಲೈ ಅವರಿಗೆ ಕಳುಹಿಸಲಾತಿತ್ತು. ಉಡುಗೊರೆಯಲ್ಲಿ ದಶೇರಿ ತಳಿಯ 3 ಸಸಿಗಳು, ಚೌಸಾ ಮತ್ತು ಅಲ್ಫೋನ್ಸೋದ ತಲಾ 2 ಮತ್ತು 1 ಲಾಂಗ್ರಾ ಸಸಿಗಳು ಸೇರಿದ್ದವು.

PREV

Recommended Stories

ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!
ಶ್ವೇತಭವನ ವಕ್ತಾರೆಯ ತುಟಿ, ಸೌಂದರ್ಯ ಹೊಗಳಿದ ಟ್ರಂಪ್!