ಸ್ಫೋಟದ ವರದಿಗೆ ತೆರಳಿದ್ದ ಪತ್ರಕರ್ತರಿಗೆ ಪೊಲೀಸರ ಅಡ್ಡಿ ಉಂಟಾಗಿದ್ದು, ಸರ್ಕಾರ ಮತ್ತು ಮಾಧ್ಯಮಗಳ ನಡುವೆ ಭಾರೀ ಜಟಾಪಟಿ ಏರ್ಪಟ್ಟಿದೆ.
ಪಿಟಿಐ ಬೀಜಿಂಗ್
ಅಪರೂಪದ ಬೆಳವಣಿಗೆಯೊಂದರಲ್ಲಿ ಚೀನಾದಲ್ಲಿ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳೇ ಸರ್ಕಾರ ತಮ್ಮ ಸುದ್ದಿ ಪ್ರಸಾರ ಕಾರ್ಯಕ್ಕೆ ಅಡ್ಡಿಪಡಿಸುತ್ತಿದೆ ಎಂದು ಪ್ರತಿಭಟನೆ ನಡೆಸಿದ್ದಾರೆ.ಬೀಜಿಂಗ್ ಬಳಿಯ ಟೌನ್‌ಶಿಪ್ ಒಂದರ ಫ್ರೈಡ್ ಚಿಕನ್ ಅಂಗಡಿಯಲ್ಲಿ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿತ್ತು. ಅದರಲ್ಲಿ ಏಳು ಮಂದಿ ಮೃತಪಟ್ಟು, 27 ಮಂದಿ ಗಾಯಗೊಂಡಿದ್ದರು. ಅದನ್ನು ವರದಿ ಮಾಡಲು ಸರ್ಕಾರಿ ಸ್ವಾಮ್ಯದ ಸಿಸಿಟಿವಿ ಚಾನಲ್ ಹಾಗೂ ಕೆಲ ವಿದೇಶಿ ಪತ್ರಕರ್ತರು ಹೋಗಿದ್ದರು. ಅವರಿಗೆ ಪೊಲೀಸರು ಅಡ್ಡಿಪಡಿಸಿದ್ದಾರೆ. ಆಗ ಅವರು ಪೊಲೀಸ್ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆ ರಾಷ್ಟ್ರ ಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿದೆ.ಬಳಿಕ ಘಟನೆಯನ್ನು ಖಂಡಿಸಿರುವ ಸರ್ಕಾರಿ ಸ್ವಾಮ್ಯದ ಅಖಿಲ ಚೀನಾ ಪತ್ರಕರ್ತರ ಸಂಘ, ‘ಸರ್ಕಾರವು ಜನರ ಅಭಿಪ್ರಾಯ ಹತ್ತಿಕ್ಕಲು ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸುವುದನ್ನು ನಾವು ಒಪ್ಪುವುದಿಲ್ಲ’ ಎಂದು ಹೇಳಿಕೆ ಬಿಡುಗಡೆ ಮಾಡಿದೆ. ನಂತರ ಪೊಲೀಸರು ಕ್ಷಮೆ ಯಾಚಿಸಿದ್ದಾರೆ.ಚೀನಾದಲ್ಲಿ ಇತ್ತೀಚೆಗೆ ಅನಿಲ ಸೋರಿಕೆ ಹಾಗೂ ಅಗ್ನಿ ಅವಘಡಗಳು ಹೆಚ್ಚುತ್ತಿದ್ದು, ಅವುಗಳನ್ನು ನಿಯಂತ್ರಿಸುವಂತೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಧಿಕಾರಿಗಳಿಗೆ ಸೂಚಿಸಿದ್ದರು. ಹೀಗಾಗಿ ಅಂತಹ ಘಟನೆಗಳ ಸುದ್ದಿ ಹೊರಗೆ ಹೋಗದಂತೆ ಪೊಲೀಸರು ತಡೆಯುತ್ತಿದ್ದಾರೆ ಎನ್ನಲಾಗಿದೆ.
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.