ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 2 ದಿನಗಳ ಭೇಟಿಗೆ ಗುರುವಾರ ದೆಹಲಿಗೆ ಆಗಮಿಸಲಿದ್ದಾರೆ. ಅವರ ಭದ್ರತೆಗೆ ರಷ್ಯಾದಿಂದಲೇ 48 ಭದ್ರತಾ ಸಿಬ್ಬಂದಿ ಈಗಾಗಲೇ ದಿಲ್ಲಿಗೆ ಬಂದಿಳಿದಿದ್ದಾರೆ ಹಾಗೂ ಅವರ ಸಂಚಾರಕ್ಕೆ ರಷ್ಯಾದಿಂದಲೇ ಅತ್ಯಾಧುನಿಕ ‘ಸೆನಾಟ್’ ಕಾರು ಬಂದಿದೆ.
ರಷ್ಯಾದ ಅಧ್ಯಕ್ಷೀಯ ಭದ್ರತಾ ಸೇವೆಯ ಉನ್ನತ ತರಬೇತಿ ಪಡೆದ ಸಿಬ್ಬಂದಿ, ಭಾರತದ ಎನ್‌ಎಸ್‌ಜಿಯ ಉನ್ನತ ಕಮಾಂಡೋಗಳು/ದಿಲ್ಲಿ ಪೊಲೀಸ್, ಸ್ನೈಪರ್‌ಗಳು, ಡ್ರೋನ್‌ಗಳು, ಜಾಮರ್‌ಗಳು ಮತ್ತು ಕೃತಕ ಬುದ್ಧಿಮತ್ತೆ (ಎಐ) ಮೇಲ್ವಿಚಾರಣೆ - ಈ ರೀತಿಯ 5 ಪದರಗಳ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ದೆಹಲಿ ಪೊಲೀಸ್ ಮತ್ತು ಎನ್‌ಎಸ್‌ಜಿ ಅಧಿಕಾರಿಗಳ ಜೊತೆಗೆ ರಷ್ಯಾ ಭದ್ರತಾ ಸಿಬ್ಬಂದಿ, ರಷ್ಯಾದ ಅಧ್ಯಕ್ಷರ ಕ್ಯಾವಲ್‌ಕ್ಯಾಡ್ ಹಾದುಹೋಗುವ ಪ್ರತಿಯೊಂದು ಮಾರ್ಗ ಹಾಗೂ ಅವರು ತಂಗುವ ಹೋಟೆಲ್ ಅನ್ನು ಪರಿಶೀಲಿಸುತ್ತಿದ್ದಾರೆ. ಪುಟಿನ್ ಸಂಚಾರದ ವೇಳೆ ಎಲ್ಲ ಭದ್ರತಾ ಸಿಬ್ಬಂದಿ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ.
ಪುಟಿನ್ ಅವರ ಭದ್ರತಾ ವ್ಯವಸ್ಥೆಯ ದೊಡ್ಡ ಮುಖ್ಯಾಂಶವೆಂದರೆ, ಅವರು ಬಳಸುವ ಭಾರೀ ಶಸ್ತ್ರಸಜ್ಜಿತ ಐಷಾರಾಮಿ ‘ಲಿಮೋಸಿನ್ ಔರಸ್ ಸೆನಾಟ್’ ಕಾರು. ಅಮೆರಿಕ ಅಧ್ಯಕ್ಷರ ಕಾರನ್ನು ಬೀಸ್ಟ್ ಎಂದು ಕರೆಯುವಂತೆಯೇ, ರಷ್ಯಾದ ಅಧ್ಯಕ್ಷರ ಕಾರನ್ನು ಸೆನಾಟ್ ಎಂದು ಕರೆಯಲಾಗುತ್ತದೆ . ಪುಟಿನ್ ಅವರ ಭಾರತ ಪ್ರವಾಸಕ್ಕಾಗಿ ಮಾಸ್ಕೋದಿಂದ ಸೆನಾಟ್ ಅನ್ನು ಭಾರತಕ್ಕೆ ಕರೆತರಲಾಗಿದೆ. ಇದನ್ನು ಪುಟಿನ್ ಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಶೃಂಗದಲ್ಲಿ ಪುಟಿನ್, ಇದೇ ಸೆನಾಟ್‌ನಲ್ಲಿ ಪ್ರಧಾನಿ ಮೋದಿ ಅವರನ್ನು ಕರೆದುಕೊಂಡು ಹೋಗಿದ್ದರು. 2018ರಿಂದ ಪುಟಿನ್ ಇದನ್ನು ಬಳಸುತ್ತಾರೆ.
ಪುಟಿನ್ ಕಾರು ಸಂಪೂರ್ಣವಾಗಿ ಗುಂಡು ನಿರೋಧಕ. ಯಾವುದೇ ಗುಂಡಿನಿಂದ ಅದನ್ನು ಭೇದಿಸಲು ಸಾಧ್ಯವಿಲ್ಲ. ಯಾವುದೇ ಕ್ಷಿಪಣಿ ಅಥವಾ ಡ್ರೋನ್ ದಾಳಿಯಿಂದ ಪುಟಿನ್ ಅವರ ಕಾರು ಪರಿಣಾಮ ಬೀರುವುದಿಲ್ಲ. ಈ ಕಾರು ಕೇವಲ 6 ರಿಂದ 9 ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿ.ಮೀ.ಗೆ ವೇಗವನ್ನು ಹೆಚ್ಚಿಸಿಕೊಳ್ಳಬಲ್ಲದು. ಇದರ ಗರಿಷ್ಠ ವೇಗ ಗಂಟೆಗೆ ಸುಮಾರು 160 ಕಿಮೀ. ಪುಟಿನ್ ಕಾರು ನೀರಿಗೆ ಬಿದ್ದರೆ ಮುಳುಗುವುದಿಲ್ಲ, ಬದಲಾಗಿ ಜಲಾಂತರ್ಗಾಮಿ ನೌಕೆಯಂತೆ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಯಾವುದೇ ಕಾರಣಕ್ಕಾಗಿ ಕಾರಿನ ಟೈರ್‌ಗಳು ಸಿಡಿದರೆ, ಅದು ನಿಲ್ಲುವುದಿಲ್ಲ ಮತ್ತು ಹೆಚ್ಚಿನ ವೇಗದಲ್ಲಿ ಓಡುತ್ತಲೇ ಇರುತ್ತದೆ. ಯಾವುದೇ ರೀತಿಯ ರಾಸಾಯನಿಕ ದಾಳಿ ಎದುರಿಸಲು ಈ ಕಾರು ರಾಸಾಯನಿಕ ನಿರೋಧಕ ತಂತ್ರಜ್ಞಾನ ಹೊಂದಿದೆ.
ಈ ಕಾರಿನ ಬೆಲೆ ಎಷ್ಟು?:
ಔರಸ್ ಸೆನಾಟ್ ಕಾರಿನ ಬೆಲೆ ಸುಮಾರು 18 ಮಿಲಿಯನ್ ರೂಬಲ್ಸ್ (ಸುಮಾರು 2.5 ಕೋಟಿ ರು.) ನಿಂದ ಪ್ರಾರಂಭವಾಗುತ್ತದೆ.
ಮಲ ಸಂಗ್ರಹ ಸೂಟ್‌ಕೇಸ್ ಕೂಡ ದಿಲ್ಲಿಗೆ!
ರಷ್ಯಾ ಅಧ್ಯಕ್ಷರು ಯಾವುದೇ ವಿದೇಶ ಪ್ರವಾಸಕ್ಕೆ ಹೋದರೂ ಅವರ ಮಲತ್ಯಾಜ್ಯವನ್ನು ಸಂಗ್ರಹಿಸಿ, ಸೀಲ್ ಮಾಡಿ ರಷ್ಯಾಕ್ಕೆ ಹಿಂತಿರುಗಿಸಲಾಗುತ್ತದೆ. ಏಕೆಂದರೆ ವಿದೇಶಗಳು ಪುಟಿನ್‌ರ ಮಲ ಸಂಗ್ರಹಿಸಿ, ಅದನ್ನು ಪರೀಕ್ಷೆ ಮಾಡಿ ಅವರ ಆರೋಗ್ಯ ಸ್ಥಿತಿ ವಿವರ ಪಡೆಯಬಹುದು ಎಂಬುದು ರಷ್ಯಾದ ಆತಂಕ. ಹೀಗಾಗಿ ಅವರ ಮಲ ಸಂಗ್ರಹಿಸಲು ಪೂಪ್ ಸೂಟ್‌ಕೇಸ್‌ಗಳನ್ನು ಭಾರತಕ್ಕೆ ತರಲಾಗಿದೆ. ಜತೆಗೆ ಅವರ ಆಹಾರ ತಪಾಸಣೆಯನ್ನೂ ಮಾಡಲಾಗುತ್ತದೆ.