2024ನೇ ಸಾಲಿನ ಮಿಸ್‌ ಯೂನಿವರ್ಸ್ ಸ್ಪರ್ಧೆಯಲ್ಲಿ ಡೆನ್ಮಾರ್ಕ್‌ನ ವಿಕ್ಟೋರಿಯಾ ಕ್ಜೇರ್‌ ಥೀಲ್ವಿಗ್ ಪ್ರಶಸ್ತಿ

KannadaprabhaNewsNetwork | Updated : Nov 18 2024, 04:22 AM IST

ಸಾರಾಂಶ

2024ನೇ ಸಾಲಿನ ಮಿಸ್‌ ಯೂನಿವರ್ಸ್ ಸ್ಪರ್ಧೆಯಲ್ಲಿ ಡೆನ್ಮಾರ್ಕ್‌ನ ವಿಕ್ಟೋರಿಯಾ ಕ್ಜೇರ್‌ ಥೀಲ್ವಿಗ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ನವದೆಹಲಿ: 2024ನೇ ಸಾಲಿನ ಮಿಸ್‌ ಯೂನಿವರ್ಸ್ ಸ್ಪರ್ಧೆಯಲ್ಲಿ ಡೆನ್ಮಾರ್ಕ್‌ನ ವಿಕ್ಟೋರಿಯಾ ಕ್ಜೇರ್‌ ಥೀಲ್ವಿಗ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.ಇದು ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಡೆನ್ಮಾರ್ಕ್‌ಗೆ ದೊರೆತ ಮೊದಲ ಗೆಲುವಾಗಿದೆ. ವಿಕ್ಟೋರಿಯಾ ಪ್ರಾಣಿ ಸಂರಕ್ಷಣಾ ವಕೀಲೆಯಾಗಿದ್ದಾರೆ. ಮೆಕ್ಸಿಕೋದ ಸಿಟಿ ಅರೇನಾದಲ್ಲಿ ನಡೆದ 73ನೇ ಮಿಸ್‌ ಯೂನಿವರ್ಸ್ ಸ್ಪರ್ಧೆಯಲ್ಲಿ 120ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಡೆನ್ಮಾರ್ಕ್‌ ನಂತರ ಸ್ಥಾನದಲ್ಲಿ ನೈಜಿರಿಯಾ ಮತ್ತು ಮೆಕ್ಸಿಕೋ ಪಡೆದಿದೆ. ಭಾರತದಿಂದ ಸ್ಪರ್ಧಿಸಿದ್ದ ರಿಯಾ ಸಿಂಘಾ ಟಾಪ್‌ 30ರ ಪಟ್ಟಿಯಲ್ಲಿ ಸ್ಥಾನ ಪಡೆದರು. ಆದರೆ ಅಂತಿಮ ಸುತ್ತು ಪ್ರವೇಶಿಸುವಲ್ಲಿ ವಿಫಲರಾದರು.

ಮಹಾರಾಷ್ಟ್ರದಲ್ಲಿ ಶೇ.4 ಪ್ರತ್ಯೇಕ ಮುಸ್ಲಿಂ ಮೀಸಲು: ರೇವಂತ್‌ ಸುಳಿವು

ಸೊಲ್ಲಾಪುರ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಕೂಟ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಶೇ.4ರಷ್ಟು ಪ್ರತ್ಯೇಕ ಮೀಸಲು ನೀಡುವ ಬ್ಗೆ ಚರ್ಚಿಸಲಿದೆ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ.ಸೊಲ್ಲಾಪುರದಲ್ಲಿ ಭಾನುವಾರ ಮಾತನಾಡಿದ ಅವರು, ‘ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ನಂತರ ನಾವು ಮುಸ್ಲಿಂ ಮೀಸಲಾತಿ ಬಗ್ಗೆ ಚರ್ಚಿಸುತ್ತೇವೆ. ತೆಲಂಗಾಣದಲ್ಲಿ ಈಗಾಗಲೇ 4% ಮೀಸಲು ಜಾರಿಗೊಳಿಸಲಾಗಿದೆ. ನಾವು 5% ಮೀಸಲು ನೀಡಿದ್ದೆವು. ಆದರೆ ಮೀಸಲಿಗೆ ಇರುವ ಶೇ.50ರ ಮಿತಿ ಅದಕ್ಕೆ ಅಡ್ಡಿಯಾಗಿ ಶೇ.4ಕ್ಕೆ ಇಳಿಸಿದೆವು’ ಎಂದರು.

‘ತೆಲಂಗಾಣದಲ್ಲಿ, ನಾವು 11,000 ಶಿಕ್ಷಕರ ನೇಮಕಾತಿ ಹೊಂದಿದ್ದೇವೆ ಅದರಲ್ಲಿ 720 ಬಡ ಮುಸ್ಲಿಮರಿದ್ದಾರೆ. ಕಷ್ಟದಲ್ಲಿರುವವರಿಗೆ ನ್ಯಾಯ ಕೊಡಿಸುವ ಜವಾಬ್ದಾರಿ ಕಾಂಗ್ರೆಸ್ ಮೇಲಿದೆ’ ಎಂದರು.

ತೆಲುಗರ ಅವಹೇಳನ: ನಟಿ ಕಸ್ತೂರಿ ಶಂಕರ್‌ ಜೈಲಿಗೆ

ಚೆನ್ನೈ: ತಮಿಳುನಾಡಿನ ತೆಲುಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ, ಅವರ ಆಕ್ರೋಶಕ್ಕೆ ಗುರಿಯಾಗಿದ್ದ ತಮಿಳು ನಟಿ ಕಸ್ತೂರಿ ಶಂಕರ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಲಾಗಿದ್ದು, ಚೆನ್ನೈ ಜೈಲಿಗೆ ಹಾಕಲಾಗಿದೆ.ಕಸ್ತೂರಿ ಅವರನ್ನು ಶನಿವಾರ ಚೆನ್ನೈ ಪೊಲೀಸರು ಹೈದರಾಬಾದ್‌ನಲ್ಲಿ ಬಂಧಿಸಿ ಚೆನ್ನೈಗೆ ಕರೆತಂದು ಭಾನುವಾರ ಇಲ್ಲಿನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ವೇಳೆ ಕೋರ್ಟ್‌ ಅವರನ್ನು ನ.29ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇತ್ತೀಚೆಗೆ ತೆಲುಗರು 300 ವರ್ಷಗಳ ಹಿಂದೆ ತಮಿಳುನಾಡಿಗೆ ಬಂದಿದ್ದು, ಇಲ್ಲಿಯ ರಾಣಿಯರ ಸೇವೆ ಮಾಡಲು ಎಂದು ಹೇಳಿಕೆ ನೀಡಿ ತೆಲುಗರ ಆಕ್ರೋಶಕ್ಕೆ ತುತ್ತಾಗಿದ್ದರು. ಜತೆಗೆ ಅವರ ವಿರುದ್ಧ ದ್ವೇಷ ಭಾಷಣದ ಪ್ರಕರಣಗಳು ದಾಖಲಾಗಿದ್ದವು. ಆ ಬಳಿಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಆಕ್ರೋಶ ತೀವ್ರಗೊಂಡ ಬಳಿಕ ಕ್ಷಮೆಯಾಚಿಸಿದ್ದರು.

ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾ ಮುಖ್ಯ ವಕ್ತಾರ ಬಲಿ

ಟೆಲ್‌ ಅವೀವ್‌: ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್‌ ದಾಳಿ ಮುಂದುವರೆಸಿದ್ದು, ಭಾನುವಾರ ಇಸ್ರೇಲ್‌ ಮಧ್ಯ ಬೈರೂತ್‌ ಮೇಲೆ ನಡೆಸಿದ ವಾಯುದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯ ವಕ್ತಾರ ಮೊಹಮ್ಮದ್‌ ಅಫೀಫ್‌ ಮೃತಪಟ್ಟಿದ್ದಾನೆ.ಈ ಬಗ್ಗೆ ಅಧಿಕಾರಿಯೊಬ್ಬರು ಮಾತನಾಡಿ, ಆತನ ಸಾವನ್ನು ಖಚಿತಪಡಿಸಿದ್ದಾರೆ.

ಹಿಜ್ಬುಲ್ಲಾ ನಾಯಕ ಹಸನ್‌ ನಸ್ರಲ್ಲಾ ಅವರ ಹತ್ಯೆಯ ನಂತರ ಉಗ್ರ ಗುಂಪಿನಲ್ಲಿ ಅಫೀಫ್‌ ಮುಂಚೂಣಿಯಲ್ಲಿದ್ದ ಎಂದು ಹೇಳಲಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಹಸನ್‌ ನಸ್ರಲ್ಲಾನನ್ನು ಇಸ್ರೇಲ್‌ ಹತ್ಯೆ ಮಾಡಿತ್ತು.

Share this article