--
- ಗುಜರಾತ್‌ನ ವೆರಾವಲ್‌ನಿಂದ 200 ಕಿ.ಮೀ. ದೂರದಲ್ಲಿದ್ದ ಹಡಗು- ಅಂತಾರಾಷ್ಟ್ರೀಯ ಜಲಸೀಮೆಯಲ್ಲಿದ್ದಾಗ ಅಪರಿಚಿತ ಡ್ರೋನ್‌ನಿಂದ ದಾಳಿ- ತಕ್ಷಣವೇ ಹಡಗಿನಲ್ಲಿ ಬೆಂಕಿ. ಹಡಗಿನ ಒಳಗೆ ನುಗ್ಗಲು ಆರಂಭಿಸಿದ ನೀರು- ಕೂಡಲೇ ಬೆಂಕಿ ನಂದಿಸಿದ ಸಿಬ್ಬಂದಿ. ನೀರು ಒಳ ನುಗ್ಗುವಿಕೆ ನಿಯಂತ್ರಣ- ಹಡಗಿನಲ್ಲಿದ್ದಾರೆ 21 ಭಾರತ ಮೂಲದ ಸಿಬ್ಬಂದಿ. ಅವರೆಲ್ಲರೂ ಸುರಕ್ಷಿತ- ವಿಷಯ ತಿಳಿದು ಹಡಗಿನತ್ತ ಹೊರಟ ಭಾರತೀಯ ನೌಕಾಪಡೆಯ ‘ವಿಕ್ರಮ್’ ನೌಕೆ- ದಾಳಿಗೆ ಒಳಗಾದ ಹಡಗಿನ ಜತೆ ಸಂಪರ್ಕ ಸಾಧಿಸಿದ ‘ವಿಕ್ರಮ್’. ನೆರವಿಗೆ ಯತ್ನ--
ಯಾವುದಿದು ಹಡಗು?ಪಶ್ಚಿಮ ಆಫ್ರಿಕಾದ ಲೈಬೀರಿಯಾ ಮೂಲದ್ದು. ಇಸ್ರೇಲ್ ಕಂಪನಿಗಾಗಿ ಕೆಲಸ ಮಾಡುತ್ತದೆ. ‘ಎಂವಿ ಚೆಮ್ ಪ್ಲುಟೋ’ ಎಂಬ ಹೆಸರನ್ನು ಹೊಂದಿದೆ. ಸೌದಿ ಅರೇಬಿಯಾದಿಂದ ಮಂಗಳೂರಿಗೆ ತೈಲೋತ್ಪನ್ನ ಹೊತ್ತು ತರುತ್ತಿತ್ತು.--
ನವದೆಹಲಿ: ಸೌದಿ ಅರೇಬಿಯಾದಿಂದ ನವ ಮಂಗಳೂರು ಬಂದರಿಗೆ ತೈಲ ಹೊತ್ತು ತರುತ್ತಿದ್ದ ಹಾಗೂ 21 ಭಾರತೀಯ ಸಿಬ್ಬಂದಿಗಳಿದ್ದ ಇಸ್ರೇಲ್‌ನ ಸರಕು ಸಾಗಣೆ ಹಡಗಿನ ಮೇಲೆ ಶನಿವಾರ ಅರಬ್ಬಿ ಸಮುದ್ರದಲ್ಲಿ ನಿಗೂಢ ಡ್ರೋನ್ ದಾಳಿ ನಡೆದಿದ್ದು, ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದ್ದರಿಂದ ಯಾವುದೇ ಪ್ರಾಣಾಪಾಯವಿಲ್ಲದೆ ಭಾರೀ ಅನಾಹುತವೊಂದು ತಪ್ಪಿದೆ.ಗಾಜಾಪಟ್ಟಿ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗೆ ಪ್ರತೀಕಾರವಾಗಿ, ಪ್ಯಾಲೆಸ್ತೀನಿಯನ್ನರ ಹೋರಾಟ ಬೆಂಬಲಿಸಿ ಇತ್ತೀಚೆಗೆ ಕೆಂಪು ಸಮುದ್ರದಲ್ಲಿ ಇರಾನ್ ಬೆಂಬಲಿತ ಹೌತಿ ಉಗ್ರರು ಸರಕು ಸಾಗಣೆ ಹಡಗುಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದ್ದರು. ಪರಿಣಾಮ, ಸರಕು ಸಾಗಣೆ ಹಡಗುಗಳು ತಮ್ಮ ಮಾರ್ಗ ಬದಲಿಸಿದ್ದವು. ಈಗ ಅರಬ್ಬಿ ಸಮುದ್ರದಲ್ಲಿ ಹಡಗಿನ ಮೇಲೆ ದಾಳಿ ನಡೆದಿದ್ದು, ಇದಕ್ಕೂ ಹಮಾಸ್‌ಗೂ ಸಂಬಂಧವಿದೆಯೇ ಎಂಬ ಶಂಕೆ ಮೂಡಿದೆ.ಗುಜರಾತ್‌ನಿಂದ 200 ಕಿಮೀ ದೂರದಲ್ಲಿ ದಾಳಿ:ಲೈಬೀರಿಯಾ ಮೂಲದ, ಇಸ್ರೇಲ್ ಕಂಪನಿಗಾಗಿ ಕೆಲಸ ಮಾಡುವ ‘ಎಂವಿ ಚೆಮ್ ಪ್ಲುಟೋ’ ಹೆಸರಿನ ಸರಕು ಸಾಗಣೆ ಹಡಗು ಸೌದಿ ಅರೇಬಿಯಾದಿಂದ ತೈಲ ಉತ್ಪನ್ನಗಳನ್ನು ಹೊತ್ತು ಮಂಗಳೂರಿನತ್ತ ಬರುತ್ತಿತ್ತು. ಗುಜರಾತ್‌ನ ವೆರಾವಲ್‌ನಿಂದ 200 ಕಿ.ಮೀ. ದೂರದಲ್ಲಿ, ಅಂತಾರಾಷ್ಟ್ರೀಯ ಜಲಸೀಮೆಯಲ್ಲಿ ಅದರ ಮೇಲೆ ಅಪರಿಚಿತ ಡ್ರೋನ್ ದಾಳಿ ನಡೆದಿದೆ. ಅದರಿಂದಾಗಿ ಹಡಗಿಗೆ ಕೊಂಚ ಹಾನಿಯಾಗಿ, ನೀರು ಕೂಡ ಒಳನುಗ್ಗಿತ್ತು. ಹಡಗನ್ನು ಸ್ವಿಚ್‌ಆಫ್ ಮಾಡಿ ಹೆಚ್ಚಿನ ಅನಾಹುತ ತಪ್ಪಿಸಲಾಗಿದೆ.
ನಂತರ ಭಾರತೀಯ ನೌಕಾಪಡೆಯು ಸಂತ್ರಸ್ತ ಹಡಗಿನತ್ತ ‘ಐಸಿಜಿಎಸ್ ವಿಕ್ರಮ್’ ನೌಕೆಯೊದಿಗೆ ನೆರವಿಗೆ ಧಾವಿಸಿದೆ ಹಾಗೂ ಅದರೊಂದಿಗೆ ಸಂಪರ್ಕ ಸಾಧಿಸಿದೆ. ಸಮುದ್ರದಲ್ಲೇ ಸಿಲುಕಿರುವ ಹಡಗು ಮತ್ತೆ ಪ್ರಯಾಣ ಆರಂಭಿಸುವಂತಾಗಲು ಸಹಾಯ ಮಾಡುತ್ತಿದೆ ಎಂದು ವರದಿಯಾಗಿದೆ.ಇದೇ ವೇಳೆ ದಾಳಿಗೆ ಸಂಬಂಧಿಸಿದಂತೆ ಭಾರತೀಯ ನೌಕಾಪಡೆಯು ಕಟ್ಟೆಚ್ಚರ ಸಾರಿದೆ.