ರಷ್ಯಾ- ಉಕ್ರೇನ್‌ ಮಧ್ಯೆ ಟ್ರಂಪ್‌ ಇಂಧನ ಕದನ ವಿರಾಮ ಡೀಲ್‌

Published : Oct 12, 2026, 05:32 AM IST
Donald Trump

ಸಾರಾಂಶ

ರಷ್ಯಾದಿಂದ ತೈಲ ಖರೀದಿ ಮಾಡಿದ್ದಕ್ಕೆ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳ ಮೇಲೆ ಭಾರೀ ಸುಂಕ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ಮುಂಬರುವ ಮಧ್ಯಂತರ ಚುನಾವಣೆ ಗೆಲ್ಲುವ ಸಲುವಾಗಿ ವೈರಿಗಳಾದ ರಷ್ಯಾ ಮತ್ತು ಉಕ್ರೇನ್‌ ನಡುವೆ ‘ತೈಲ ಸಂಧಾನ’ ಏರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಾಷಿಂಗ್ಟನ್‌: ರಷ್ಯಾದಿಂದ ತೈಲ ಖರೀದಿ ಮಾಡಿದ್ದಕ್ಕೆ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳ ಮೇಲೆ ಭಾರೀ ಸುಂಕ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ಮುಂಬರುವ ಮಧ್ಯಂತರ ಚುನಾವಣೆ ಗೆಲ್ಲುವ ಸಲುವಾಗಿ ಬದ್ಧ ವೈರಿಗಳಾದ ರಷ್ಯಾ ಮತ್ತು ಉಕ್ರೇನ್‌ ನಡುವೆ ‘ತೈಲ ಸಂಧಾನ’ ಏರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಷ್ಯಾದಿಂದ ಡೀಸೆಲ್‌ ಖರೀದಿಗೆ ಅಚ್ಚರಿಯ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಅವರು ಈ ಹೊಸ ಡೀಲ್‌ ಕುದುರಿಸುವ ಮೂಲಕ ದೇಶದಲ್ಲಿ ಕಾಣಿಸಿಕೊಂಡಿರುವ ತೈಲ ಬಿಕ್ಕಟ್ಟು ನಿವಾರಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.

ಈ ಕುರಿತು ಭಾನುವಾರ ಟ್ರುತ್‌ ಸೋಷಿಯಲ್‌ನಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್‌, ‘ರಷ್ಯಾ ಮತ್ತು ಉಕ್ರೇನ್‌ ದೇಶಗಳು ತಕ್ಷಣದಿಂದ ಜಾರಿಗೆ ಬರುವಂತೆ ‘ಇಂಧನ ಕದನವಿರಾಮ’ಕ್ಕೆ ಒಪ್ಪಿಕೊಂಡಿವೆ. ಇದನ್ನು ಯಾವುದೇ ಕಾರಣಕ್ಕೂ ಮುರಿಯಬೇಡಿ’ ಎಂದು ಹೇಳಿದ್ದಾರೆ. ಆದರೆ ಡೀಲ್‌ ಕುರಿತು ಹೆಚ್ಚಿನ ಮಾಹಿತಿ ನೀಡಿಲ್ಲ.

ಒಪ್ಪಂದ ಏನು?:

ಕಳೆದ ಕೆಲ ದಿನಗಳಿಂದ ರಷ್ಯಾದ ತೈಲ ಉತ್ಪಾದನಾ ಘಟಕ, ತೈಲ ಸಂಸ್ಕರಣಾ ಘಟಕಗಳನ್ನು ಗುರಿಯಾಗಿಸಿ ಉಕ್ರೇನ್ ದಾಳಿ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಉಕ್ರೇನ್‌ ನಗರಗಳು ಮತ್ತು ತೈಲ ಘಟಕಗಳ ಮೇಲೆ ರಷ್ಯಾ ಕೂಡಾ ದಾಳಿ ನಡೆಸುತ್ತಿದೆ. ಇದರಿಂದ ಜಾಗತಿಕ ಮಾರುಕಟ್ಟೆಗೆ ಕಚ್ಚಾತೈಲ ಪೂರೈಕೆ ಕುಸಿತವಾಗಿದೆ. ಸ್ವತಃ ರಷ್ಯಾ ದೇಶವೇ ಭಾರತದಿಂದ ಸಂಸ್ಕರಿತ ತೈಲ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಮತ್ತೊಂದೆಡೆ ಇದರ ಪರಿಣಾಮ ಅಮೆರಿಕದ ಮೇಲೂ ಆಗಿದೆ. ಹೀಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಪರಸ್ಪರ ದೇಶಗಳ ತೈಲ ಘಟಕ, ತೈಲ ಸಂಸ್ಕರಣಾ ಘಟಕಗಳ ಮೇಲೆ ದಾಳಿ ಮಾಡದಿರುವ ಬಗ್ಗೆ ರಷ್ಯಾ ಮತ್ತು ಉಕ್ರೇನ್‌ ನಡುವೆ ಒಪ್ಪಂದವನ್ನು ಟ್ರಂಪ್‌ ಕುದುರಿಸಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಟ್ರಂಪ್‌ ಪೋಸ್ಟ್‌ ಬೆನ್ನಲ್ಲೇ ಮೊದಲಿಗೆ, ‘ನನಗೂ ಕೂಡಾ ಇದು ಹೊಸ ಸುದ್ದಿ’ ಎಂದಿದ್ದ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್ಸ್ಕಿಬಳಿಕ, ‘ಒಪ್ಪಂದವನ್ನು ನಾವು ಬೆಂಬಲಿಸುತ್ತೇವೆ. ರಷ್ಯಾ ಕೂಡಾ ಇದನ್ನು ಬೆಂಬಲಿಸುವುದು ಅಷ್ಟೇ ಮಹತ್ವದ್ದು. ಈ ಬಗ್ಗೆ ನಾವು ಅಮೆರಿಕದ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇವೆ. ನಮ್ಮ ತೈಲ ಘಟಕದ ಮೇಲೆ ರಷ್ಯಾ ದಾಳಿ ನಿಲ್ಲಿಸಿದರೆ ನಾವು ಕೂಡಾ ದಾಳಿ ನಿಲ್ಲಿಸಲು ಬದ್ಧ’ ಎಂದಿದ್ದಾರೆ.

ಸೋಲಿನ ಭೀತಿ?:

ರಷ್ಯಾ ತೈಲ ಪೂರೈಕೆ ಸ್ಥಗಿತ ಬಳಿಕ ಅಮೆರಿಕಕ್ಕೆ ಕಚ್ಚಾತೈಲ ಪೂರೈಕೆ ಕುಸಿತವಾಗಿ ಸ್ಥಳೀಯವಾಗಿ ದರ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ. ಇದು ಜನಾಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಅಮೆರಿಕದಲ್ಲಿ ನ.3ರಂದು ನಡೆಯಲಿರುವ ಸಂಸತ್ತಿನ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷಕ್ಕೆ ಭಾರೀ ಹಿನ್ನಡೆ ಆಗಬಹುದು. ಸಂಸತ್ತಿನ ಮೇಲೆ ಹಿಡಿತ ಕಳೆದುಕೊಳ್ಳಬಹುದು ಎಂದು ವರದಿಗಳು ತಿಳಿಸಿದ್ದವು. ಅದರ ಬೆನ್ನಲ್ಲೇ ಪರಮ ವೈರಿ ರಷ್ಯಾ ಜೊತೆಗೆ ಡೀಸೆಲ್‌ ಪೂರೈಕೆ ಡೀಲ್‌ ಕುದುರಿಸಿದ್ದರು.

ಖರೀದಿ ಡೀಲ್‌:

ರಷ್ಯಾದಿಂದ ಡೀಸೆಲ್‌ ಖರೀದಿಗೆ ಅನುಕೂಲವಾಗುವಂತೆ ರಷ್ಯಾದ ತೈಲ ಮಾರಾಟಕ್ಕೆ ಹೇರಿದ್ದ ನಿರ್ಬಂಧವನ್ನು ಶನಿವಾರವಷ್ಟೇ ಟ್ರಂಪ್‌ ಹಿಂದಕ್ಕೆ ಪಡೆದಿದ್ದರು. ಜೊತೆಗೆ ತಕ್ಷಣವೇ ಅಮೆರಿಕ ಮತ್ತು ಜಾಗತಿಕ ಮಾರುಕಟ್ಟೆಗೆ 3 ಲಕ್ಷ ಟನ್‌ಗಳಷ್ಟು ಡೀಸೆಲ್‌ ಪೂರೈಕೆಗೆ ಅನುವು ಮಾಡಿಕೊಟ್ಟಿದ್ದರು. ಅದರ ಮುಂದುವರೆದ ಭಾಗವಾಗಿ ಇದೀಗ ರಷ್ಯಾ- ಉಕ್ರೇನ್‌ ನಡುವೆ ಕದನವಿರಾಮದ ಘೋಷಣೆ ಮಾಡಿದ್ದಾರೆ.

ಭಾರತಕ್ಕೆ ಸುಂಕ:

ಈ ಹಿಂದೆ ರಷ್ಯಾದಿಂದ ತೈಲ ಖರೀದಿ ಮೂಲಕ ಭಾರತವು ಉಕ್ರೇನ್‌ ಯುದ್ಧಕ್ಕೆ ನೆರವಾಗುತ್ತಿದೆ ಎಂದು ಆರೋಪಿಸಿ ಭಾರತದ ಮೇಲೆ ಭಾರೀ ಸುಂಕ ಹೇರುವ ಘೋಷಣೆಯನ್ನು ಟ್ರಂಪ್‌ ಮಾಡಿದ್ದರು.

- ನನಗೇನೂ ಗೊತ್ತಿಲ್ಲ ಎಂಬಂತೆ ಮಾತಾಡಿದ ಉಕ್ರೇನ್‌ ಅಧ್ಯಕ್ಷ

- ರಷ್ಯಾದಿಂದ ತೈಲ ಖರೀದಿಸುವ ಭಾರತದಂತಹ ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ್ದ ಟ್ರಂಪ್‌

- ಆದರೆ ಮೊನ್ನೆ ತಾನೆ ರಷ್ಯಾದಿಂದ ತೈಲ ಖರೀದಿಸಲು ನಿರ್ಧರಿಸುವ ಮೂಲಕ ಅಮೆರಿಕ ಅಧ್ಯಕ್ಷ ಉಲ್ಟಾ

- ಈಗ ರಷ್ಯಾ- ಉಕ್ರೇನ್ ನಡುವೆ ಇಂಧನ ಕದನ ವಿರಾಮ ಏರ್ಪಟ್ಟಿರುವ ಕುರಿತು ಡೊನಾಲ್ಡ್‌ ಘೋಷಣೆ

- ಅಮೆರಿಕದಲ್ಲಿ ನ.3ಕ್ಕೆ ಚುನಾವಣೆ. ಬೆಲೆ ಏರಿಕೆ ಬಿಸಿಯಿಂದ ಮತದಾರರ ತಪ್ಪಿಸಲು ಹೊಸ ಸಂಧಾನ

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಸ್ಟಾರ್‌ ವಾರ್‌: ಅಂಬಾನಿ ವಿರುದ್ಧ ಮತ್ತೆ ಮಸ್ಕ್‌ ಕಿಡಿ
ಭಾರತ ಮೂಲದ ನವನೀತಂ ಪಿಳ್ಳೈಗೆ ನೊಬೆಲ್‌ ಶಾಂತಿ ಗರಿ