ಕಾಠ್ಮಂಡು : ನೇಪಾಳ ಸರ್ಕಾರ ಫೇಸ್‌ಬುಕ್, ವಾಟ್ಸಾಪ್, ಟ್ವೀಟರ್, ಇನ್‌ಸ್ಟಾಗ್ರಾಂ ಸೇರಿ 26 ಸಾಮಾಜಿಕ ಜಾಲತಾಣಗಳ ಮೇಲೆ ಸರ್ಕಾರ ನಿಷೇಧ ಹೇರಿದ್ದಕ್ಕೆ ಸೋಮವಾರ ಯುವಕರು ಸಿಡಿದೆದ್ದಿದ್ದು, ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಘಟನೆಯಲ್ಲಿ ಪೊಲೀಸರ ಗುಂಡಿಗೆ 20 ಮಂದಿ ಸಾವನ್ನಪ್ಪಿದ್ದಾರೆ. 250ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ನೇಪಾಳದ ರಾಜಧಾನಿ ಕಾಠ್ಮಂಡುವಿನಲ್ಲಿ ಆರಂಭವಾದ ಪ್ರತಿಭಟನೆ ಇದೀಗ ದೇಶಾದ್ಯಂತ ವ್ಯಾಪಿಸಿದೆ. ಸಂಸತ್ ಭವನಕ್ಕೂ ನುಗ್ಗಲು ಯುವಕರು ಯತ್ನಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರ ಸೇನೆ ನಿಯೋಜನೆ ಮಾಡಿದೆ.
ಈ ನಡುವೆ, ಹಿಂಸಾಚಾರದ ಹೊಣೆ ಹೊತ್ತು ನೇಪಾಳದ ಗೃಹ ಸಚಿವ ರಮೇಶ್ ಲೇಖಕ್ ರಾಜೀನಾಮೆ ಘೋಷಿಸಿದ್ದಾರೆ. ಅವರ ವಜಾಗೆ ಕೂಗು ಕೇಳಿ ಬಂದಲ್ಲೇ ಪದತ್ಯಾಗ ಪ್ರಕಟಿಸಿದ್ದಾರೆ.
ನಿಷೇಧ ಏಕೆ?:
ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳ ಮೂಲಕ ಸುಳ್ಳುಸುದ್ದಿ, ಸೈಬರ್ ಅಪರಾಧಗಳನ್ನು ಮಾಡಲಾಗುತ್ತಿದೆ ಎಂದು ಆರೋಪ ಕೇಳಿಬಂದ ಕಾರಣ, ಇಂತಹ ಎಲ್ಲ ಸೋಷಿಯಲ್ ಮಿಡಿಯಾ ಆ್ಯಪ್‌ಗಳ ಕಾರ್ಯಾಚರಣೆಗೆ ನೇಪಾಳ ಸರ್ಕಾರ ನೋಂದಣಿ ಕಡ್ಡಾಯ ಮಾಡಿತ್ತು ಹಾಗೂ ಎಲ್ಲ ಆ್ಯಪ್ ಕಂಪನಿಗಳಲ್ಲಿ ದೂರು ಪರಿಹಾರ ವಿಭಾಗ ಸ್ಥಾಪನೆ ಆಗಬೇಕು ಎಮದು ಸೂಚಿಸಿತ್ತು.
ಆದರೆ ಸರ್ಕಾರದ ಆದೇಶ ಪಾಲನೆ ಆಗದ ಕಾರಣ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್, ಯೂಟ್ಯೂಬ್ ಸೇರಿದಂತೆ 26 ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಕಳೆದ ಶುಕ್ರವಾರದಿಂದ ನಿಷೇಧಿಸಿದೆ ಇದು ವಿವಾದದ ಮೂಲ.
ಯುವಕರ ಆಕ್ರೋಶ ಏಕೆ?:
ಸರ್ಕಾರವು ಸೋಷಿಯಲ್ ಮೀಡಿಯಾ ನಿಷೇಧ ಮಾಡಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದೆ. ನಿಷೇಧದಿಂದ ನೇಪಾಳ ಪುರಾತನ ಕಾಲಕ್ಕೆ ಜಾರಲಿದೆ. ಸಂವಹನಕ್ಕೆ ಇದರಿಂದ ಅಡ್ಡಿ ಆಗಲಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ ಎಂದು ಆಪಾದಿಸಿ ‘ಜನರೇಷನ್ ಝಡ್’ ಹೆಸರಿನಲ್ಲಿ ಸಾವಿರಾರು ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳೂ ಭಾಗವಹಿಸಿದ್ದಾರೆ.
ಈ ಮುಂಚೆ ಆನ್ಲೈನ್ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ನಡೆಯುತ್ತಿದೆ ಎಂದ ಆಪಾದಿಸಿ ಜುಲೈನಲ್ಲಿ ಟೆಲಿಗ್ರಾಂ ಆ್ಯಪ್ ಕೂಡ ನಿಷೇಧಿಸಲಾಗಿತ್ತು.
ಸಂಸತ್ ಭವನಕ್ಕೆ ನುಗ್ಗಲು ಯತ್ನ:
ನೇಪಾಳದ ರಾಜಧಾನಿ ಕಾಠ್ಮಂಡುವಿನಲ್ಲಿ ಆರಂಭವಾದ ಪ್ರತಿಭಟನೆ ಇದೀಗ ದೇಶಾದ್ಯಂತ ವ್ಯಾಪಿಸಿದೆ. ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿರುವ ಯುವಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಮರದ ಕೊಂಬೆಗಳು, ನೀರಿನ ಬಾಟಲಿಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೋಮವಾರ ಪ್ರತಿಭಟನಾನಿರತರು ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ. ಪೋಖರಾದ ಮುಖ್ಯಮಂತ್ರಿಗಳ ನಿವಾಸದ ಮೇಲೂ ದಾಳಿಯಾಗಿರುವುದು ವರದಿಯಾಗಿದೆ.
ಇದರ ಬೆನ್ನಲ್ಲೇ ಪ್ರಧಾನಿ ಕೆ.ಪಿ. ಓಲಿ ತುರ್ತು ಸಂಪುಟ ಸಭೆ ನಡೆಸಿದ್ದಾರೆ. ಪ್ರತಿಭಟನೆ ವೇಳೆ ಅನೇಕರು ಸಾವನ್ನಪ್ಪಿದರೆ, 250ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಿಷೇಧಾಜ್ಞೆ, ಕರ್ಫ್ಯೂ ಜಾರಿ:
ಪರಿಸ್ಥಿತಿ ನಿಯಂತ್ರಿಸಲು ಸರ್ಕಾರ ರಾಜಧಾನಿಯ ಬಾಣೇಶ್ವರ ಪ್ರದೇಶದಲ್ಲಿ ಮೊದಲು ನಿಷೇಧಾಜ್ಞೆ ಹೇರಿತ್ತು. ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಪ್ರಧಾನಮಂತ್ರಿ, ಅಧ್ಯಕ್ಷ, ಉಪಾಧ್ಯಕ್ಷರ ನಿವಾಸಗಳಿರುವ ಬಳುವತಾರ್, ಲೈಂಚೌರ್, ಮಹಾರಾಜಗುಂಜ್ ಹಾಗೂ ಇತರೆಡೆ ನಿಷೇಧಾಜ್ಞೆಯನ್ನು ವಿಸ್ತರಿಸಿದೆ. ನಿಷೇಧಾಜ್ಞೆಗೂ ಪ್ರತಿಭಟನಕಾರರು ಬಗ್ಗದಾಗ ಪೊಲೀಸರು ಅಶ್ರುವಾಯು ಮತ್ತು ರಬ್ಬರ್ ಗುಂಡುಗಳು ಹಾರಿಸಿದ್ದಾರೆ. ಕೆಲವೆಡೆ ಕರ್ಫ್ಯೂ ಹೇರಲಾಗಿದೆ. ಕಾಂತಿಪುರ ಟಿವಿಯ ಪತ್ರಕರ್ತ ಶ್ಯಾಮ್ ಶ್ರೇಷ್ಠ ಸೇರಿದಂತೆ ಇಬ್ಬರು ರಬ್ಬರ್ ಗುಂಡು ತಗುಲಿ ಗಾಯಗೊಂಡಿರುವುದು ವರದಿಯಾಗಿದೆ.
ಪ್ರಧಾನಿ ಆಕ್ರೋಶ:
ಘಟನೆ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ಕೆ.ಪಿ. ಶರ್ಮಾ ಓಲಿ, ‘ಸರ್ಕಾರವು ಯಾವಾಗಲೂ ವೈಪರೀತ್ಯಗಳು ಮತ್ತು ದುರಹಂಕಾರವನ್ನು ವಿರೋಧಿಸುತ್ತದೆ ಮತ್ತು ರಾಷ್ಟ್ರವನ್ನು ದುರ್ಬಲಗೊಳಿಸುವ ಯಾವುದೇ ಕೃತ್ಯವನ್ನು ಎಂದಿಗೂ ಸ್ವೀಕರಿಸುವುದಿಲ್ಲ. ನಾವು ಸಾಮಾಜಿಕ ಮಾಧ್ಯಮವನ್ನು ವಿರೋಧಿಸುವುದಿಲ್ಲ, ಆದರೆ ನೇಪಾಳದಲ್ಲಿ ವ್ಯಾಪಾರ ಮಾಡುವವರು, ಹಣ ಸಂಪಾದಿಸುವವರು ಕಾನೂನನ್ನು ಪಾಲಿಸದೇ ಇದ್ದರೆ ಒಪ್ಪಲಾಗುವುದಿಲ್ಲ’ ಎಂದಿದ್ದಾರೆ. ಜೊತೆಗೆ, ಪ್ರತಿಭಟನಕಾರರನ್ನು ‘ವಿರೋಧಿಸುವುದಕ್ಕಾಗಿಯೇ ವಿರೋಧಿಸುವ ಕೈಗೊಂಬೆಗಳು’ ಎಂದು ಟೀಕಿಸಿದ್ದಾರೆ.