ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ನಡೆದ ಭೀಕರ ದಾಳಿಗೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಇಂಥ ಅನೇಕ ಹತ್ಯೆ ಹಾಗೂ ಹತ್ಯೆ ಯತ್ನಗಳು ಈ ಹಿಂದೆ ಅಮೆರಿಕದಲ್ಲಿ ನಡೆದಿವೆ. ಇವುಗಳ ಕಿರುಮಾಹಿತಿ ಇಲ್ಲಿದೆ.
ಹತ್ಯೆಯಾದ ನಾಯಕರು
ಅಬ್ರಹಾಂ ಲಿಂಕನ್:
ಅಮೆರಿಕದ 16 ನೇ ಅಧ್ಯಕ್ಷ ಅಬ್ರಹಾಂ ಲಿಂಕನ್ ಏಪ್ರಿಲ್ 14, 1865ರಂದು ಹತ್ಯೆಯಾಗಿದ್ದರು. ಜಾನ್ ವಿಲ್ಕ್ಸ್ ಎಂಬಾತ ಲಿಂಕನ್ ಹತ್ಯೆ ಮಾಡಿದ್ದ. ಲಿಂಕನ್, ತಮ್ಮ ಪತ್ನಿ ಮೇರಿ ಟಾಡ್ ಜೊತೆ ವಾಷಿಂಗ್ಟನ್‌ನಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಈ ವೇಳೆ ದಾಳಿ ನಡೆದಿತ್ತು.
ಜೇಮ್ಸ್ ಗ್ಯಾರ್‌ಫೀಲ್ಡ್
ಅಮೆರಿಕದ 20ನೇ ಅಧ್ಯಕ್ಷರಾಗಿದ್ದ ಜೇಮ್ಸ್ ಗ್ಯಾರ್‌ಫೀಲ್ಡ್ , ಹತ್ಯೆಗೀಡಾದ ಅಮೆರಿಕದ 2ನೇ ಅಧ್ಯಕ್ಷ. ಅಧಿಕಾರ ವಹಿಸಿಕೊಂಡ 6 ತಿಂಗಳಿನಲ್ಲಿಯೇ ಹತ್ಯೆಯಾಗಿದ್ದರು. ಜುಲೈ 2, 1881ರಂದು ವಾಷಿಂಗ್ಟನ್‌ನಲ್ಲಿ ರೈಲ್ವೆ ನಿಲ್ದಾಣಕ್ಕೆ ನಡೆದು ಹೋಗುತ್ತಿದ್ದ ಗುಂಡು ಹಾರಿಸಿ ಚಾರ್ಲ್ಸ್ ಗೈಟೋ ಎಂಬಾತ ಹತ್ಯೆ ಮಾಡಿದ್ದ.
ವಿಲಿಯಂ ಮೆಕಿನ್ಲಿ
ಅಮೆರಿಕದ 25ನೇ ಅಧ್ಯಕ್ಷರಾಗಿದ್ದ ವಿಲಿಯಂ ಮೆಕಿನ್ಲಿ ಮೇಲೆ ಸೆಪ್ಟೆಂಬರ್ 6, 1901ರಲ್ಲಿ ದಾಳಿ ನಡೆದಿತ್ತು. ಎರಡನೇ ಬಾರಿ ಅಧಿಕಾರ ವಹಿಸಿಕೊಂಡ 6 ತಿಂಗಳಲ್ಲೇ ನ್ಯೂಯಾರ್ಕ್‌ನ ಬಫಲೋದಲ್ಲಿ ಹತ್ಯೆ ನಡೆದಿತ್ತು. ಲಿಯೋನ್ ಎಫ್ ಝೋಲ್ಗೋಸ್ಜ್ ಎಂಬಾತ ಹತ್ಯೆ ಮಾಡಿದ್ದ.
ಜಾನ್ ಎಫ್ ಕೆನಡಿ
ಅಮೆರಿಕದ 35ನೇ ಅಧ್ಯಕ್ಷರಾಗಿದ್ದ ಜಾನ್ ಕೆನಡಿ 1963ರಲ್ಲಿ ಹತ್ಯೆಯಾಗಿದ್ದರು. ಪತ್ನಿ ಜಾಕ್ವೆಲಿನ್ ಕನೆಡಿ ಜೊತೆಗೆ ಡಲ್ಲಾಸ್‌ಗೆ ಭೇಡಿ ನೀಡಿದ್ದ ವೇಳೆ ಕೊಲೆ ಮಾಡಲಾಗಿತ್ತು. ಲೀ ಹಾರ್ವೆ ಒಸ್ವಾಲ್ಡ್ ಎಂಬಾತ ಕೊಲೆ ಮಾಡಿದ್ದ.
---
ಈ ನಾಯಕರ ಮೇಲೆ ನಡೆದಿತ್ತು ಹತ್ಯೆ ಯತ್ನ
ಅಮೆರಿಕದ 32ನೇ ಅಧ್ಯಕ್ಷರಾಗಿದ್ದ ಫ್ರಾಂಕ್ಲಿನ್ ಡಿ. ರೂಸ್‌ವೆಲ್ಟ್ ಮೇಲೆ 1993ರಲ್ಲಿ, ಅಮೆರಿಕದ 33 ನೇ ಅಧ್ಯಕ್ಷರಾಗಿದ್ದ ಹ್ಯಾರಿ ಎಸ್ ಟ್ರೂಮನ್ ಮೇಲೆ 1950ರಲ್ಲಿ, ಅಮೆರಿಕದ 38ನೇ ಅಧ್ಯಕ್ಷರಾಗಿದ್ದ ಜೆರಾಲ್ಡ್ ಫೋರ್ಡ್ ಮೇಲೆ 1975ರಲ್ಲಿ, ಅಮೆರಿಕದ 40ನೇ ಅಧ್ಯಕ್ಷರಾಗಿದ್ದ ರೋನಾಲ್ಡ್ ರೇಗನ್ 1981ರ ಮಾರ್ಚ್‌ನಲ್ಲಿ ಹತ್ಯೆ ಯತ್ನಗಳು ನಡೆದಿದ್ದವು.
ಅಮೆರಿಕದ 43ನೇ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲು ಬುಷ್ ಮೇಲೆ 2005ರಲ್ಲಿ, ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಜಾನ್ ಎಫ್ ಕೆನಡಿ ಸಹೋದರ ರಾಬರ್ಟ್ ಎಫ್ ಕೆನಡಿ ಮೇಲೆ 1968ರಲ್ಲಿ, ಅಧ್ಯಕ್ಷೀಯ ಅಭ್ಯರ್ಥಿ ಆಗಿದ್ದ ಥಿಯೋಡರ್ ರೂಸ್‌ವೆಲ್ಟ್ ಮೇಲೆ 1912ರಲ್ಲಿ ಹಾಗೂ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಜಾರ್ಜ್ ಸಿ ವಾಲೇಸ್ ಮೇಲೆ 1972ರಲ್ಲಿ ದಾಳಿ ನಡೆಸಿ ಹತ್ಯೆಗೆ ಯತ್ನಿಸಲಾಗಿತ್ತು.
ಹತ್ಯೆಗೀಡಾದ ವಿಶ್ವ ನಾಯಕರು
ಅಮೆರಿಕದ ರೀತಿಯಲ್ಲಿ ವಿಶ್ವದ ಕೆಲ ದೇಶಗಳಲ್ಲಿ ಅಧ್ಯಕ್ಷರು, ಪ್ರಧಾನಿಗಳು ಹಾಗೂ ಗಣ್ಯರ ಹತ್ಯೆ ನಡೆದಿತ್ತು. ಅವುಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ.
ಇಂದಿರಾ ಗಾಂಧಿ(ಭಾರತ)
ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ತನ್ನ ಭದ್ರತಾ ಸಿಬ್ಬಂದಿಗಳಿಂದಲೇ ಹತ್ಯೆಯಾಗಿದ್ದರು. ದೆಹಲಿಯ ಸಪ್ಜರ್‌ಜಂಗ್ ಸಿಂಗ್ ರಸ್ತೆಯಲ್ಲಿರುವ ಇಂದಿರಾ ಗಾಂಧಿಯವರ ನಿವಾಸದಲ್ಲಿ ಅ.31, 1984ರಂದು ಅಂಗರಕ್ಷಕರಾದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಹತ್ಯೆ ಮಾಡಿದ್ದರು.
ರಾಜೀವ್ ಗಾಂಧಿ (ಭಾರತ)
ಭಾರತದ 6 ನೇ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರನ್ನು ತಮಿಳುನಾಡಿನ ಪೆರಂಬದೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ 1991ರ ಮೇ 21ರಂದು ಎಲ್‌ಟಿಟಿಇ ಉಗ್ರರು ಹತ್ಯೆ ಮಾಡಿದ್ದರು. ಮಹಿಳಾ ಆತ್ಮಾಹುತಿ ಬಾಂಬರ್ ಕಲೈವಾಣಿ ನಡೆಸಿದ್ದ ಈ ದಾಳಿಯಲ್ಲಿ ರಾಜೀವ್ ಜತೆ 15 ಜನರು ಘಟನೆಯಲ್ಲಿ ಸಾವನ್ನಪ್ಪಿದ್ದರು.
ರಣಸಿಂಘೆ ಪ್ರೇಮದಾಸ್(ಶ್ರೀಲಂಕಾ)
ಶ್ರೀಲಂಕಾದ ಅಧ್ಯಕ್ಷರಾಗಿದ್ದ ಪ್ರೇಮದಾಸ ಅವರನ್ನು 1993ರ ಮೇ 1ರಂದು ಕೊಲಂಬೋದಲ್ಲಿ ಎಲ್‌ಟಿಟಿಇ ಆತ್ಮಾಹುತಿ ಬಾಂಬರ್ ಹತ್ಯೆ ಮಾಡಿದ್ದರು. ಕುಲವೀರಸಿಂಗಂ ವೀರಕುಮಾರ್ ಅಲಿಯಾಸ್ ಬಾಬು ಎಂಬಾತ ರಣಸಿಂಗ್ ಹತ್ಯೆಯ ರೂವಾರಿಯಾಗಿದ್ದನು.
ಬೆನಜಿರ್ ಭುಟ್ಟೋ( ಪಾಕಿಸ್ತಾನ)
ಪಾಕಿಸ್ತಾನದಲ್ಲಿ ಎರಡು ಸಲ ಪ್ರಧಾನಿಯಾಗಿದ್ದ ಬೆನಜಿರ್ ಭುಟ್ಟೋರವರು ಡಿಸೆಂಬರ್ 27, 2007ರಲ್ಲಿ ರಾವಲ್ಪಿಂಡಿಯಲ್ಲಿ ಹತ್ಯೆಗೊಳಗಾಗಿದ್ದರು. ಈ ಘಟನೆಯಲ್ಲಿ 22 ಮಂದಿ ಸಾವನ್ನಪ್ಪಿದ್ದರು.
ಶಿಂಜೋ ಅಬೆ(ಜಪಾನ್)
2 ಬಾರಿ ಜಪಾನ್ ಪ್ರಧಾನಿಯಾಗಿದ್ದ ಶಿಂಜೋ ಅಬೆ ಜುಲೈ 8, 2022ರಲ್ಲಿ ಹತ್ಯೆಯಾಗಿದ್ದರು. ನಾರಾದಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ಗುಂಡು ಹಾರಿಸಲಾಗಿತ್ತು.ಟೆಟ್ಸುಯಾ ಯಮಗಾಮಿ ಎಂಬಾತ ಶಿಂಜೋ ಅಬೆಯನ್ನು ಕೊಂದಿದ್ದನು.