;Resize=(412,232))
ಪ್ಯಾರಿಸ್: ಹೆಚ್ಚುತ್ತಿರುವ ಹಣದುಬ್ಬರ, ಮೂಲಸೌಕರ್ಯಗಳ ಕೊರತೆ ಮತ್ತು ಶೈಕ್ಷಣಿಕ ಸಮಸ್ಯೆಯ ವಿರುದ್ಧ ಫ್ರಾನ್ಸ್‌ನಲ್ಲಿ 2 ವಾರದ ಹಿಂದೆ ಆರಂಭವಾಗಿದ್ದ ‘ಜೆನ್ ಝೀ ಪ್ರತಿಭಟನೆ’ ತೀವ್ರ ಹಿಂಸಾಚಾರಕ್ಕೆ ತಿರುಗಿದೆ. ಫ್ರಾನ್ಸ್ ದೇಶದ ಸ್ಥಳೀಯರು ಆರಂಭಿಸಿದ ಪ್ರತಿಭಟನೆಯನ್ನು ಇದೀಗ ನೆರೆಯ ದೇಶಗಳಿಂದ ಅಕ್ರಮವಾಗಿ ನುಸುಳಿ ಆಶ್ರಯ ಪಡೆದಿರುವ ಅಕ್ರಮ ವಲಸಿಗರು ಹೈಜಾಕ್ ಮಾಡಿದ್ದಾರೆ. ಅವರು ದೇಶಾದ್ಯಂತ ಲೂಟಿ, ಹಿಂಸಾಚಾರದಂಥ ದುಷ್ಕೃತ್ಯದಲ್ಲಿ ತೊಡಗಿದ್ದು, ಫ್ರಾನ್ಸ್ ಅಕ್ಷರಶಃ ತಲ್ಲಣಿಸುವಂತೆ ಮಾಡಿದ್ದಾರೆ. ಅಕ್ರಮ ವಲಸಿಗರಿಗೆ ಮುಕ್ತವಾಗಿ ತೆರೆದುಕೊಂಡಿದ್ದ ದೇಶ ಇದೀಗ ತನ್ನ ತಪ್ಪಿಗೆ ತಾನೇ ಪರಿತಪಿಸುವಂತಾಗಿದೆ.
ಶನಿವಾರ ದೇಶವ್ಯಾಪಿ ನಡೆದ ಭಾರೀ ಪ್ರತಿಭಟನೆ ಮತ್ತು ಹಿಂಸಾಚಾರದ ವೇಳೆ ಲಿಮೋಜೆಸ್ ನಗರದಲ್ಲಿನ 140 ವರ್ಷಗಳಷ್ಟು ಹಳೆಯದಾದ ಟೌನ್ ಹಾಲ್‌ಗೆ ಬೆಂಕಿ ಹಚ್ಚಲಾಗಿದೆ. 2 ಮಹಾಯುದ್ಧದಲ್ಲೂ ಹಾನಿಯಾಗದೆ ಉಳಿದಿದ್ದ ಈ ಕಟ್ಟಡ, ಪ್ರತಿಭಟನೆಯ ಕಾವಿಗೆ ಮಣಿದಿದೆ. ಮಾರ್ಸೆಲ್ ಮತ್ತು ಲಿಲ್ಲಿ ನಗರಗಳಲ್ಲಿಯೂ 2 ಕಚೇರಿಗಳನ್ನು ಒಡೆದು ಧ್ವಂಸಗೊಳಿಸಲಾಗಿದೆ. ಹಿಂಸಾಕೋರ 1800 ಜನರನ್ನು ಬಂಧಿಸಲಾಗಿದೆ.
ವ್ಯಾಪಕ ಹಿಂಸಾಚಾರ:
ದೇಶದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಬೆಲೆ ಏರಿಕೆ ಮತ್ತು ಸರ್ಕಾರದ ಆರ್ಥಿಕ ನೀತಿಗಳನ್ನು ವಿರೋಧಿಸಿ ಲಕ್ಷಾಂತರ ನಾಗರಿಕರು ಹಾಗೂ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸುಮಾರು 8 ಲಕ್ಷಕ್ಕೂ ಅಧಿಕ ಮಂದಿ ಪ್ರತಿಭಟನೆಗೆ ಧುಮುಕಿದ್ದಾರೆ ಎಂದು ಅಂದಾಜಿಸಲಾಗಿದೆ. ರಾಜಧಾನಿ ಪ್ಯಾರಿಸ್‌ನಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿ, ರಸ್ತೆಗಳನ್ನು ಬಂದ್ ಮಾಡಿದ್ದರಿಂದ ಇಡೀ ನಗರದ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿಗಳನ್ನು ಬಳಸಿದ್ದಾರೆ. ಸೇಂಟ್-ಎಟಿಯೆನ್ ನಗರದಲ್ಲಿ 17 ವರ್ಷದ ಬಾಲಕನೊಬ್ಬ ಗ್ರೆನೇಡ್ ಸ್ಪೋಟದಿಂದ ಬಲಗೈಯನ್ನು ಕಳೆದುಕೊಂಡಿದ್ದಾನೆ.
ಲಿಮೋಜೆಸ್ ನಗರದ 140 ವರ್ಷಗಳಷ್ಟು ಹಳೆಯದಾದ ಕಟ್ಟಡವೊಂದಕ್ಕೆ ಉದ್ರಿಕ್ತರು ಬೆಂಕಿ ಹಚ್ಚಿದ್ದು, ಅದು ಬಹುತೇಕ ನಾಶವಾಗಿದೆ. 2ನೇ ಮಹಾಯುದ್ಧದಲ್ಲೂ ಈ ಟೌನ್‌ಹಾಲ್ ಹಾನಿಯಾಗದೆ ಉಳಿದಿದ್ದು ವಿಶೇಷ. ಇನ್ನು ಬೋರ್ಡೆಕ್ಸ್‌ನಲ್ಲಿರುವ ಪೊಲೀಸ್ ಠಾಣೆ ಹಾಗೂ ಲಿಯಾನ್‌ನಲ್ಲಿ ಪ್ರವಾಸಿ ಕಚೇರಿಯೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಮಾರ್ಸೆಲ್ ಮತ್ತು ಲಿಲ್ಲಿ ನಗರಗಳಲ್ಲಿಯೂ 2 ಕಚೇರಿಗಳನ್ನು ಒಡೆದು ಧ್ವಂಸಗೊಳಿಸಲಾಗಿದೆ.
ಪ್ರತಿಭಟನೆ ವೇಳೆ ಕೆಲ ಕೆಲ ಕಿಡಿಗೇಡಿಗಳು ಅಂಗಡಿ ಮುಂಗಟ್ಟುಗಳನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತವಾಗಿ ಲೂಟಿ ಮಾಡಿದ್ದಾರೆ. ಪ್ಯಾರಿಸ್, ಮಾರ್ಸೆಲ್, ನಿಸ್, ನಾಟ್ಸ್, ಬೋರ್ಡೆಕ್ಸ್, ಲಿಮೋಜೆಸ್, ಲಿಲ್ಲಿ, ಟೌಲಾಸ್ ಮತ್ತು ಸ್ಟ್ರಾಸ್‌ಬರ್ಗ್ ನಗರಗಳಲ್ಲಿ ಸೂಪರ್‌ಮಾರ್ಕೆಟ್‌ಗಳು, ಔಷಧ ಅಂಗಡಿಗಳು, ಐಷಾರಾಮಿ ಮಳಿಗೆಗಳು ಮತ್ತು ಎಲೆಕ್ಟ್ರಾನಿಕ್ಸ್ ಮಳಿಗೆಗಳನ್ನು ದರೋಡೆ ಮಾಡಲಾಗಿದೆ.
ಅಧ್ಯಕ್ಷ ಮ್ಯಾಕ್ರನ್ ಎಚ್ಚರಿಕೆ:
‘ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡಿರುವ ಮತ್ತು ದರೋಡೆ ಮಾಡಿರುವ ದುಷ್ಕರ್ಮಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ’ ಎಂದು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಎಚ್ಚರಿಕೆ ನೀಡಿದ್ದಾರೆ. ‘ಹಿಂಸಾಚಾರದಲ್ಲಿ ತೊಡಗಿದ್ದ 1,800 ಜನರನ್ನು ಈಗಾಗಲೇ ಬಂಧಿಸಲಾಗಿದೆ. 150ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ’ ಎಂದು ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ತಿಳಿಸಿದ್ದಾರೆ. ಮುಂಬರುವ ಅಧ್ಯಕ್ಷೀಯ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಘಟನೆಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ಮುಂದುವರಿದಿವೆ.
ಏನಾಗ್ತಿದೆ ಅಲ್ಲಿ?
- ಶಿಕ್ಷಣ ಕ್ಷೇತ್ರದಲ್ಲಿ ಮೂಲಸೌಕರ್ಯ ಕೊರತೆ ಎಂದು ವಾರದ ಹಿಂದೆ ಹೋರಾಟ ಆರಂಭ
- ಫ್ರಾನ್ಸ್ ಸರ್ಕಾರದ ವಿರುದ್ಧ ಜೆನ್ ಝೀ, ಜೆನ್ ಆಲ್ಫಾಗಳಿಂದ ದೇಶವ್ಯಾಪಿ ಪ್ರತಿಭಟನೆ
- ಆದರೆ ಬಳಿಕ ಪ್ರತಿಭಟನೆಯನ್ನೇ ಹೈಜಾಕ್ ಮಾಡಿದ ನೆರೆ ದೇಶಗಳ ಅಕ್ರಮ ವಲಸಿಗರು
- ಪ್ರತಿಭಟನೆ ವೇಳೆಯೂ ದೇಶದ ಹಲವು ಕಡೆ ವಲಸಿಗರ ಹಿಂಸಾಚಾರ, ಲೂಟಿ, ದೌರ್ಜನ್ಯ
- ಈ ನಡುವೆ ನಿರುದ್ಯೋಗ, ಬೆಲೆ ಏರಿಕೆ ಖಂಡಿಸಿ ಹೋರಾಟಕ್ಕೆ ಸಾರ್ವಜನಿಕರ ಬೆಂಬಲ
- ಶನಿವಾರ ದೇಶವ್ಯಾಪಿ ಭಾರೀ ಪ್ರತಿಭಟನೆ. ಈ ವೇಳೆ ಮತ್ತೆ ವಲಸಿಗರಿಂದ ಹಿಂಸಾಚಾರ
- ಈ ಹೋರಾಟದಲ್ಲಿ ದೇಶವ್ಯಾಪಿ 8 ಲಕ್ಷ ಜನರು ಭಾಗಿ. ಹಿಂಸೆ ನಡೆಸಿದ 1800 ಜನರ ವಶ
- ಕಟ್ಟಡ, ವಾಹನಗಳಿಗೆ ಬೆಂಕಿ ಹಚ್ಚಿ ದುಷ್ಕೃತ್ಯ. ಮಾಲ್, ಅಂಗಡಿಗಳಿಗೆ ನುಗ್ಗಿ ಸಿಕ್ಕಿದ್ದು ಲೂಟಿ
- ದಂಗೆಕೋರರ ನಿರ್ವಹಿಸಲಾಗದೇ ಕೈಚೆಲ್ಲಿದ ಪೊಲೀಸರು. ಪರಿಸ್ಥಿತಿ ಕೈತಪ್ಪಿದ ಬಗ್ಗೆ ಒಪ್ಪಿಗೆ