ಬಾಂಗ್ಲಾದೇಶದಲ್ಲಿ ಕ್ಷಿಪ್ರಕ್ರಾಂತಿ! ಮೀಸಲಾತಿ ವಿರೋಧಿ ಹಿಂಸಾತ್ಮಕ ಹೋರಾಟ ಕಂಡು ಕೇಳರಿಯದ ತಿರುವು

KannadaprabhaNewsNetwork |  
Published : Aug 06, 2024, 01:31 AM ISTUpdated : Aug 06, 2024, 04:53 AM IST
ಹಿಂಸಾಚಾರ | Kannada Prabha

ಸಾರಾಂಶ

ಭಾರತದ ನೆರೆಯ ಬಾಂಗ್ಲಾದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಹಾಗೂ 300ಕ್ಕೂ ಹೆಚ್ಚು ಜನರ ಬಲಿಪಡೆದಿರುವ ‘ಮೀಸಲಾತಿ ವಿರೋಧಿ ಹಿಂಸಾತ್ಮಕ ಹೋರಾಟ’ ಸೋಮವಾರ ಕಂಡು ಕೇಳರಿಯದ ತಿರುವು ಪಡೆದಿದೆ.

ಢಾಕಾ: ಭಾರತದ ನೆರೆಯ ಬಾಂಗ್ಲಾದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಹಾಗೂ 300ಕ್ಕೂ ಹೆಚ್ಚು ಜನರ ಬಲಿಪಡೆದಿರುವ ‘ಮೀಸಲಾತಿ ವಿರೋಧಿ ಹಿಂಸಾತ್ಮಕ ಹೋರಾಟ’ ಸೋಮವಾರ ಕಂಡು ಕೇಳರಿಯದ ತಿರುವು ಪಡೆದಿದೆ. ದಂಗೆಕೋರರು ಹಾಗೂ ಸೇನೆಯ ‘45 ನಿಮಿಷದ ಗಡುವಿಗೆ’ ಬೆಚ್ಚಿ ಪ್ರಧಾನಿ ಶೇಖ್‌ ಹಸೀನಾ ರಾಜೀನಾಮೆ ನೀಡಿದ್ದಾರೆ ಹಾಗೂ ದೇಶ ಬಿಟ್ಟು ವಿಮಾನದಲ್ಲಿ ಪಲಾಯನಗೈದಿದ್ದಾರೆ. ಸೋಮವಾರ ಸಂಜೆ ಅವರು ದಿಲ್ಲಿಯ ಹಿಂಡನ್ ಏರ್‌ಬೇಸ್‌ಗೆ ಆಗಮಿಸಿದ್ದು, ಅಲ್ಲಿಂದ ಲಂಡನ್‌ಗೆ ತೆರಳುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.

ಸೋಮವಾರ ಮಧ್ಯಾಹ್ನ ಪ್ರತಿಭಟನಾಕಾರರು ಪ್ರಧಾನಿ ಹಸೀನಾರ ಢಾಕಾ ನಿವಾಸಕ್ಕೆ ನುಗ್ಗತೊಡಗಿದರು. ಇದೇ ವೇಳೆ ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಬಾಂಗ್ಲಾದೇಶಿ ಸೇನೆ, ಅಧಿಕಾರದಿಂದ ಕೆಳಗಿಳಿಯಲು ಅವರಿಗೆ 45 ನಿಮಿಷಗಳ ಕಾಲಾವಕಾಶ ನೀಡಿತು. ಹೀಗಾಗಿ ಇನ್ನು ತಮ್ಮ ಅಧಿಕಾರ ನಡೆಯದು ಎಂದು ಅರಿತ ಹಸೀನಾ, ರಾಜೀನಾಮೆ ಸಲ್ಲಿಸಿ ಸೇನಾ ವಿಮಾನದಲ್ಲಿ ದೇಶ ತೊರೆದಿದ್ದಾರೆ.ಇದರ ಬೆನ್ನಲ್ಲೇ ಸೇನಾ ಮುಖ್ಯಸ್ಥ ಜ। ವಖಾರ್‌-ಉಜ್‌-ಜಮಾನ್‌, ‘ಮಧ್ಯಂತರ ಸರ್ಕಾರ’ ರಚನೆ ಘೋಷಣೆ ಮಾಡಿದ್ದು, ದೇಶವನ್ನು ಮತ್ತೆ ಸರಿಸ್ಥಿತಿಗೆ ತರುವ ವಾಗ್ದಾನ ಮಾಡಿದ್ದಾರೆ. ಅಲ್ಲದೆ, ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸದಂತೆ ಪೊಲೀಸರು ಹಾಗೂ ಸೇನೆಗೆ ಸೂಚಿಸಿದ್ದಾರೆ.

ನಿನ್ನೆ ಆಗಿದ್ದೇನು?:

ದೇಶದಲ್ಲಿ ಭಾನುವಾರ ಮೀಸಲು ವಿವಾದ ಕುರಿತಂತೆ ಹಸೀನಾ ರಾಜೀನಾಮೆಗೆ ಆಗ್ರಹಿಸಿ ಹಿಂಸಾತ್ಮಕ ಪ್ರತಿಭಟನೆ ನಡೆದಿದ್ದವು ಹಾಗೂ ಒಂದೇ ದಿನ 100ಕ್ಕೂ ಹೆಚ್ಚು ಜನ ಬಲಿಯಾಗಿದ್ದರು. ಹೀಗಾಗಿ ಹಸೀನಾ ಅವರು ಸೋಮವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲು ಬಯಸಿದ್ದರು. ಆದರೆ ಅಷ್ಟರಲ್ಲಿ ಪ್ರತಿಭಟನಾಕಾರರು ಪ್ರಧಾನಿ ನಿವಾಸಕ್ಕೆ ನುಗ್ಗಲು ಯತ್ನಿಸಿದ ಕಾರಣ ಸೇನಾಪಡೆಗಳು ಹಸೀನಾಗೆ ಭಾಷಣ ಮಾಡದಂತೆ ಸೂಚಿಸಿದವು. ಹೀಗಾಗಿ ಭಾಷಣ ಮೊಟಕುಗೊಳಿಸಿದ ಹಸೀನಾ ಅಪಾಯದ ಮುನ್ನೆಚ್ಚರಿಕೆ ಅರಿತು ರಾಜೀನಾಮೆ ನೀಡಿದರು. ನಂತರ ಸೇನಾ ಹೆಲಿಕಾಪ್ಟರ್‌ ಹತ್ತಿ ಸೋದರಿ ರೆಹಾನಾ ಜತೆ ಏರ್‌ಪೋರ್ಟಿಗೆ ಹೋದರು. ಅಲ್ಲಿಂದ ಸೋದರಿ ಜತೆಗೇ ಸಿ-130 ಸರಕು ವಿಮಾನದಲ್ಲಿ ದೇಶ ತೊರೆದರು.

ಇದಾದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇನಾ ಮುಖ್ಯಸ್ಥ ಜ। ವಖಾರ್-ಉಜ್‌-ಜಮಾನ್‌, ‘ಹೋರಾಟಗಾರರು ಪ್ರತಿಭಟನೆ ನಿಲ್ಲಿಸಬೇಕು. ನಾನು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದೇನೆ. ದೇಶವನ್ನು ನಡೆಸಲು ನಾವು ಮಧ್ಯಂತರ ಸರ್ಕಾರ ರಚಿಸಲು ನಿರ್ಧರಿಸಿದ್ದೇವೆ. ನಾನು ಎಲ್ಲಾ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ನಿಮ್ಮ ಪ್ರಾಣ ಮತ್ತು ಆಸ್ತಿಯನ್ನು ರಕ್ಷಿಸುವ ಭರವಸೆ ನೀಡುತ್ತೇನೆ. ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುತ್ತದೆ. ದಯವಿಟ್ಟು ಹಿಂಸಾಚಾರವನ್ನು ನಿಲ್ಲಿಸಿ’ ಎಂದು ಕೋರಿದರು.

ಬ್ರಿಟನ್‌ನಲ್ಲಿ ರಾಜಾಶ್ರಯ?:

ಹಸೀನಾ ಸೋದರಿ ರೆಹಾನಾ ಬ್ರಿಟನ್ ಪ್ರಜೆ ಆಗಿದ್ದು, ಅವರ ಜತೆಗೇ ಹಸೀನಾ ಲಂಡನ್‌ಗೆ ತೆರಳುವ ಸಾಧ್ಯತೆ ಇದೆ. ರಾಜಾಶ್ರಯ ಬಯಸಿ ಹಸೀನಾ ಬ್ರಿಟನ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಭಾರತದ ಸುತ್ತ ಎಲ್ಲಾ ದೇಶಗಳಲ್ಲಿ ಅನಿಶ್ಚಯತೆ

ಶ್ರೀಲಂಕಾ2 ವರ್ಷದ ಹಿಂದೆ ಅಧ್ಯಕ್ಷ ಗೋಟಬಾಯ ರಾಜಪಕ್ಸೆ ವಿರುದ್ಧ ದಂಗೆ ನಡೆಸಿ, ಅವರನ್ನು ವಿದೇಶಕ್ಕೆ ಓಡಿಸಿದ್ದ ಹೋರಾಟಗಾರರು. ಬೇರೆ ಸರ್ಕಾರ ಅಸ್ತಿತ್ವಕ್ಕೆ.

ಪಾಕಿಸ್ತಾನ

ಎರಡು ವರ್ಷದ ಹಿಂದೆ ಪ್ರಧಾನಿ ಆಗಿದ್ದ ಇಮ್ರಾನ್ ಖಾನ್‌ ಪದಚ್ಯುತಿ; ಬಳಿಕ ಖಾನ್‌ ವಿರೋಧಿ ಶಹಬಾಜ್‌ ಷರೀಫ್ ಪ್ರಧಾನಿಯಾಗಿ ಅಧಿಕಾರಕ್ಕೆ.ನೇಪಾಳ

ಜುಲೈನಲ್ಲಿ ನೇಪಾಳದಲ್ಲಿ ಮಿತ್ರಪಕ್ಷಗಳಿಂದ ಪ್ರಚಂಡ ಸರ್ಕಾರದ ವಿರುದ್ಧ ಬಂಡಾಯ. ಹೊಸ ಸರ್ಕಾರ ರಚನೆ.ಮಾಲ್ಡೀವ್ಸ್‌

ಭಾರತದ ಪರ ಇದ್ದ ನಶೀದ್‌ ಸರ್ಕಾರ ಪತನಗೊಂಡು ಕಳೆದ ವರ್ಷ ಭಾರತ ವಿರೋಧಿ ಮೊಹಮ್ಮದ್‌ ಮುಯಿಜು ಸರ್ಕಾರ ರಚನೆ.ಮ್ಯಾನ್ಮಾರ್4 ವರ್ಷಗಳಿಂದ ಸತತ ಅನಿಶ್ಚಯತೆ. ಸರ್ಕಾರ ಕಿತ್ತೊಗೆದು ತಾನೇ ಅಧಿಕಾರ ನಡೆಸುತ್ತಿರುವ ಸೇನೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಆಸ್ಟ್ರೇಲಿಯಾದಲ್ಲಿ ಯಹೂದಿಗಳ ನರಮೇಧ!
ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌