;Resize=(412,232))
ವಾಷಿಂಗ್ಟನ್: ಇರಾನಿ ಸರ್ವಾಧಿಕಾರಿ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಆಡಳಿತದ ವಿರುದ್ಧ ದಂಗೆ ಎದ್ದಿರುವ ಜನತೆಯನ್ನು ಬೆಂಬಲಿಸಿ, ಇರಾನ್ ಮೇಲೆ ದಾಳಿಯ ಸುಳಿವು ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ‘ಪ್ರತಿಭಟನಾಕಾರರ ದಮನ ನಿಲ್ಲುವವರೆಗೂ ಇರಾನ್ ಆಡಳಿತದ ಜತೆ ನಾನು ಮಾತುಕತೆ ಮಾಡಲ್ಲ. ದಮನಕಾರಿ ನೀತಿ ಅನುಸರಿಸುವವರು ದೊಡ್ಡ ಬೆಲೆ ತೆರಬೇಕಾಗುತ್ತದೆ. ನಿಮಗೆ ಸಹಾಯ ತಲುಪುತ್ತಿದೆ’ ಎಂದಿದ್ದಾರೆ.
ಅದೇನು ಸಹಾಯ ಎಂಬುದನ್ನು ಅವರು ನೇರವಾಗಿ ಹೇಳಿಲ್ಲ. ಆದರೆ ಅವರ ಮಾತಿನ ಅರ್ಥ ನೋಡಿದರೆ ಇರಾನ್ ಮೇಲೆ ಅಮೆರಿಕ ದಾಳಿ ಮಾಡಬಹುದೆ ಎಂಬ ಅನುಮಾನ ಎದುರಾಗಿದೆ.
ತಮ್ಮದೇ ಆದ ಸಾಮಾಜಿಕ ಮಾಧ್ಯಮ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ‘ಇರಾನಿನ ದೇಶಭಕ್ತರೇ, ಪ್ರತಿಭಟನೆ ಮುಂದುವರಿಸಿ. ನಿಮ್ಮ ದೇಶದ ಸಂಸ್ಥೆಗಳನ್ನು ನಿಮ್ಮದಾಗಿಸಿಕೊಳ್ಳಿ!!! (ವಶಪಡಿಸಿಕೊಳ್ಳಿ). ಕೊಲೆಗಾರರು ಮತ್ತು ದುರುಪಯೋಗ ಮಾಡುವವರ ಹೆಸರುಗಳನ್ನು ಬರೆದಿಟ್ಟುಕೊಳ್ಳಿ. ಅವರು ದೊಡ್ಡ ಬೆಲೆ ತೆರಬೇಕಾಗುತ್ತದೆ. ಪ್ರತಿಭಟನಾಕಾರರ ಅರ್ಥಹೀನ ಹತ್ಯೆ ನಿಲ್ಲುವವರೆಗೂ ನಾನು ಇರಾನಿನ ಅಧಿಕಾರಿಗಳೊಂದಿಗಿನ ಎಲ್ಲಾ ಸಭೆಗಳನ್ನು ರದ್ದುಗೊಳಿಸಿದ್ದೇನೆ. ಸಹಾಯವು ತನ್ನ ಹಾದಿಯಲ್ಲಿದೆ’ ಎಂದಿದ್ದಾರೆ.
ಸೋಮವಾರದವರೆಗೆ ದಾಳಿಯ ಮಾತನಾಡುತ್ತಿದ್ದ ಟ್ರಂಪ್ ಅವರ ಜತೆ ಮಾತುಕತೆ ನಡೆಸುವ ಆಫರ್ ಅನ್ನು ಇರಾನ್ ನೀಡಿತ್ತು. ಇದರ ಬೆನ್ನಲ್ಲೇ ಸೋಮವಾರ ರಾತ್ರಿ ಶ್ವೇತಭವನ ವಕ್ತಾರೆ ಕ್ಯಾರೋಲಿನ್ ಲೀವಿಟ್ ಅವರು, ‘ಇರಾನ್ ಸರ್ಕಾರ ನೀಡುತ್ತಿರುವ ಬಹಿರಂಗ ಹೇಳಿಕೆಗಳು ಬೇರೆ. ನಮ್ಮ ಸರ್ಕಾರವು ಖಾಸಗಿಯಾಗಿ ಸ್ವೀಕರಿಸುತ್ತಿರುವ ಸಂದೇಶಗಳೇ ಬೇರೆ. ಎರಡೂ ಭಿನ್ನವಾಗಿವೆ. ನಮ್ಮ ಅಧ್ಯಕ್ಷರು (ಟ್ರಂಪ್) ಆ ಸಂದೇಶಗಳನ್ನು ಅನ್ವೇಷಿಸುವಲ್ಲಿ ಆಸಕ್ತಿ ಹೊಂದಿದ್ದಾರೆ’ ಎಂದಿದ್ದರು. ಈ ಮೂಲಕ ಮಾತುಕತೆಯ ಇರಾದೆಯನ್ನು ಅಧ್ಯಕ್ಷ ಹೊಂದಿದ್ದಾರೆ ಎನ್ನುವ ಮೂಲಕ ದಾಳಿ ಸದ್ಯಕ್ಕಿಲ್ಲ ಎಂಬ ಸುಳಿವು ನೀಡಿದ್ದರು.
ಇದಾದ ಕೆಲವೇ ಗಂಟೆಗಳಲ್ಲಿ ಟ್ರಂಪ್ ತಮ್ಮ ನಿಲುವು ಬದಲಿಸಿದ್ದು. ‘ದಂಗೆಕೋರರ ದಮನ ನಿಲ್ಲುವವರೆಗೂ ಇರಾನ್ ಆಡಳಿತದ ಜತೆ ನಾನು ಮಾತುಕತೆ ಮಾಡಲ್ಲ. ಎಲ್ಲ ಸಭೆ ರದ್ದು ಮಾಡಿದ್ದೇನೆ. ನಿಮಗೆ ಸಹಾಯ ಮಾಡುವೆ’ ಎಂದಿದ್ದಾರೆ. ಇದು ಯುದ್ಧಭೀತಿ ಸೃಷ್ಟಿಸುವಂತೆ ಮಾಡಿದೆ.
ಟೆಹ್ರಾನ್: ಇರಾನ್ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ವಿರುದ್ಧ ನಡೆಯುತ್ತಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಗಳಲ್ಲಿ ಸುಮಾರು 2,000 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನಿನ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಇದರೊಂದಿಗೆ ಮಾಧ್ಯಮಗಳ ವರದಿಯನ್ನು ಮೊದಲ ಬಾರಿ ಇರಾನ್ ಖಚಿತಪಡಿಸಿದಂತಾಗಿದೆ.