ಮಾಸ್ಕೋ : ಉಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾಗೆ ಮತ್ತೊಮ್ಮೆ ಶಾಂತಿ ಮಂತ್ರದ ಬೋಧನೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಬಾಂಬ್‌ಗಳ ಭೋರ್ಗರೆತ, ಗುಂಡು ಹಾಗೂ ಬಂದೂಕಿನ ಸದ್ದುಗಳ ಮಧ್ಯೆ ಶಾಂತಿ ಸ್ಥಾಪನೆ ಸಾಧ್ಯವಿಲ್ಲ. ಯುದ್ಧಭೂಮಿಯಲ್ಲಿ ಯಾವುದೇ ವಿಷಯಗಳನ್ನು ಇತ್ಯರ್ಥ ಮಾಡಲು ಆಗವುದಿಲ್ಲ’ ಎಂದು ಹೇಳಿದ್ದಾರೆ.
ಈ ಮೂಲಕ ಯುದ್ಧ ನಿಲ್ಲಿಸುವಂತೆ ರಷ್ಯಾಗೆ ಪರೋಕ್ಷ ಮನವಿ ಮಾಡಿದ್ದಾರೆ.ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ ತಮ್ಮ ಭೇಟಿಯ 2ನೇ ಹಾಗೂ ಕೊನೆಯ ದಿನವಾದ ಮಂಗಳವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ ಮೋದಿ ‘ಮುಂದಿನ ಪೀಳಿಗೆಯ ಸುಭದ್ರ ಭವಿಷ್ಯಕ್ಕೆ ಶಾಂತಿ ಅತ್ಯಗತ್ಯವಾಗಿದೆ. ಹೀಗಾಗಿ ಶಾಂತಿ ಮರುಸ್ಥಾಪನೆ ಆಗಲು ಭಾರತವು ಸಾಧ್ಯವಾದ ಎಲ್ಲ ಸಹಕಾರವನ್ನು ನೀಡಲು ಸಿದ್ಧವಿದೆ’ ಎಂದು ಹೇಳಿದರು.ಇದೇ ವೇಳೆ, ತಾವು ರಷ್ಯಾಗೆ ಆಗಮಿಸಿದ ದಿನವೇ ಉಕ್ರೇನ್‌ನ ಮಕ್ಕಳ ಆಸ್ಪತ್ರೆಯೊಂದರ ಮೇಲೆ ನಡೆದ ಕ್ಷಿಪಣಿ ದಾಳಿಯನ್ನು ಪ್ರಸ್ತಾಪಿಸಿದ ಮೋದಿ, ‘ಮಾನವೀಯತೆಯನ್ನು ನಂಬಿರುವ ಪ್ರತಿಯೊಬ್ಬರಿಗೂ ಪ್ರಾಣಹಾನಿ ಸಂಭವಿಸಿದರೆ ನೋವಾಗುತ್ತದೆ. ಅದರಲ್ಲಿಯೂ ಅಮಾಯಕ ಮಕ್ಕಳು ಹತ್ಯೆಯಾದರೆ, ಅಮಾಯಕ ಮಕ್ಕಳು ಸತ್ತರೆ ಅದು ಹೃದಯ ವಿದ್ರಾವಕವಾಗಿರುತ್ತದೆ ಮತ್ತು ತುಂಬಾ ನೋವಿನಿಂದ ಕೂಡಿರುತ್ತದೆ’ ಎಂದು ಮೋದಿ ಹೇಳಿದರು.
‘ನಿನ್ನೆ ನಿಮ್ಮ ಜತೆ ನಡೆದ ಭೋಜನಕೂಟದ ಸಭೆಯಲ್ಲೇ ಉಕ್ರೇನ್ ಬಗ್ಗೆ ನಮ್ಮ ಅಭಿಪ್ರಾಯ ಹಂಚಿಕೊಂಡೆವು. ಆಗ ‘ಜಾಗತಿಕ ದಕ್ಷಿಣ ದೇಶಗಳು’ (ಅಮೆರಿಕ ಹಾಗೂ ರಷ್ಯಾ ಹೊರತಾದ ಅಭಿವೃದ್ಧಿಶೀಲ ದೇಶಗಳು) ಹೊಂದಿರುವ ಶಾಂತಿ ಹಾಗೂ ಸುಭದ್ರತೆ ಕುರಿತ ಅಭಿಪ್ರಾಯದ ಬಗ್ಗೆ ನಾನು ತಿಳಿಸಿದೆ. ಅದಕ್ಕೆ ಪುಟಿನ್ ನೀಡಿದ ಪ್ರತಿಕ್ರಿಯೆ ಆಶಾದಾಯಕವಾಗಿತ್ತು’ ಎಂದೂ ಮೋದಿ ನುಡಿದರು.
ಇದೇ ವೇಳೆ, ಉಗ್ರವಾದದ ಬಗ್ಗೆಯೂ ಪ್ರಸ್ತಾಪಿಸಿದ ಮೋದಿ, ‘ಭಾರತ ಕಳೆದ 40 ವರ್ಷಗಳಿಂದ ಭಯೋತ್ಪಾದನೆಯ ಸವಾಲನ್ನು ಎದರಿಸುತ್ತಿದೆ. ಎಲ್ಲ ಬಗೆಯ ಉಗ್ರವಾದವನ್ನು ನಾವು ಖಂಡಿಸುತ್ತೇವೆ’ ಎಂದ ಮೋದಿ, ‘ಕಳೆದ 5 ವರ್ಷಗಳಲ್ಲಿ ಜಗತ್ತು ಹೊಸ ಸವಾಲನ್ನು ಎದುರಿಸುತ್ತಿದೆ. ಮೊದಲನೆಯದು ಕೋವಿಡ್-19. ನಂತರದ ಸವಾಲು ವಿವಿಧ ಯುದ್ಧಗಳು’ ಎಂದು ಪುಟಿನ್‌ರನ್ನು ಸೂಚ್ಯವಾಗಿ ತಿವಿದರು.
ರಷ್ಯಾ ಸಹಾಯಕ್ಕೆ ಧನ್ಯವಾದ:
ಇಂಧನ ಕ್ಷೇತ್ರದಲ್ಲಿ ಭಾರತಕ್ಕೆ ರಷ್ಯಾ ನೀಡಿದ ಸಹಾಯವನ್ನು ಸ್ಮರಿಸಿದ ಪ್ರಧಾನಿ, ‘ಜಗತ್ತು ಆಹಾರ, ಇಂಧನ ಮತ್ತು ರಸಗೊಬ್ಬರಗಳ ಕೊರತೆಯನ್ನು ಎದುರಿಸುತ್ತಿರುವಾಗ, ನಮ್ಮ ರೈತರಿಗೆ ಯಾವುದೇ ಸಮಸ್ಯೆಯನ್ನು ಎದುರಿಸಲು ನಾವು ಅವಕಾಶ ನೀಡಲಿಲ್ಲ ಮತ್ತು ರಷ್ಯಾದೊಂದಿಗಿನ ನಮ್ಮ ಸ್ನೇಹವು ಅದರಲ್ಲಿ ಪಾತ್ರ ವಹಿಸಿದೆ’ ಎಂದು ಕೃತಜ್ಞತೆ ಸಲ್ಲಿಸಿದರು.
‘ಮುಂದಿನ ದಿನಗಳಲ್ಲಿ ಭಾರತ-ರಷ್ಯಾ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿದೆ. ಇಂಧನ ಸಹಕಾರ ವಿಷಯದಲ್ಲಿ ನಮ್ಮ ಇಬ್ಬರ ಬಂಧ ಇಡೀ ಜಗತ್ತಿಗೇ ಒಳಿತು ಮಾಡಿದೆ. ಭಾರತದ ರೈತರ ಅನುಕೂಲಕ್ಕಾಗಿ ರಷ್ಯಾ ಜತೆ ಇನ್ನಷ್ಟು ಸಹಕಾರವನ್ನು ಮುಂದಿನ ದಿನದಲ್ಲಿ ಬಯಸುತ್ತೇವೆ’ ಎಂದು ಮೋದಿ ನುಡಿದರು.
ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಗೌರವಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾ ಸರ್ಕಾರ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಮಂಗಳವಾರ ಮಾಸ್ಕೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ‘ಆರ್ಡರ್ ಆಫ್ ಸೇಂಟ್ ಅಂಡ್ರ್ಯೂ ದಿ ಅಪೋಸ್ಟಲ್’ ಗೌರವ ಪ್ರದಾನ ಮಾಡಿದರು. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಮೋದಿ ನೀಡಿದ ಅನನ್ಯ ಸೇವೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.