ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಮಕ್ಕಳಿಗೆ ಅಮೆರಿಕ ಪೌರತ್ವಕ್ಕಾಗಿ ಮುಗಿಬಿದ್ದ ಭಾರತೀಯ ಪೋಷಕರು : ಫೆ.20ರೊಳಗೆ ಹೆರಿಗೆಗೆ ದೌಡು!

Nirupama ks | Published : Jan 24, 2025 8:49 AM

ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಅಧ್ಯಕ್ಷ ಗಾದಿಗೇರುತ್ತಿದ್ದಂತೆ ಅಮೆರಿಕದಲ್ಲಿರುವ ಭಾರತೀಯರು ಆದಷ್ಟು ಬೇಗ ಮಕ್ಕಳನ್ನು ಹೆರಲು ಹವಣಿಸುತ್ತಿದ್ದಾರೆ. ಇದಕ್ಕೆ ಕಾರಣ, ಟ್ರಂಪ್‌ರ ‘ಜನ್ಮಸಿದ್ಧ ಪೌರತ್ವ ಹಕ್ಕು’ ರದ್ದತಿ ನಿರ್ಧಾರ!

 ವಾಷಿಂಗ್ಟನ್‌: ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಅಧ್ಯಕ್ಷ ಗಾದಿಗೇರುತ್ತಿದ್ದಂತೆ ಅಮೆರಿಕದಲ್ಲಿರುವ ಭಾರತೀಯರು ಆದಷ್ಟು ಬೇಗ ಮಕ್ಕಳನ್ನು ಹೆರಲು ಹವಣಿಸುತ್ತಿದ್ದಾರೆ. ಇದಕ್ಕೆ ಕಾರಣ, ಟ್ರಂಪ್‌ರ ‘ಜನ್ಮಸಿದ್ಧ ಪೌರತ್ವ ಹಕ್ಕು’ ರದ್ದತಿ ನಿರ್ಧಾರ!

- ಹೌದು.. ಅಮೆರಿಕದಲ್ಲಿ ಜನಿಸುವ ವಿದೇಶಿ ಪ್ರಜೆಗಳ ಮಕ್ಕಳಿಗೆ ಸ್ವಾಭಾವಿಕವಾಗಿ ದೊರೆಯುತ್ತಿದ್ದ ಅಮೆರಿಕದ ಪೌರತ್ವವನ್ನು ರದ್ದುಪಡಿಸುವ ಆದೇಶಕ್ಕೆ ಟ್ರಂಪ್‌ ಸಹಿ ಮಾಡಿದ್ದು, ಇದು ಫೆ.20ರಿಂದ ಜಾರಿಗೆ ಬರಲಿದೆ. ಆದ್ದರಿಂದ ಫೆ.19ಕ್ಕೂ (ಅಮೆರಿಕ ಕಾಲಮಾನ ಫೆ.19ರ ಮಧ್ಯರಾತ್ರಿ 12ರೊಳಗೆ) ಮೊದಲೇ ಮಕ್ಕಳನ್ನು ಹೆತ್ತರೆ ಅವರು ಅಮೆರಿಕದ ಪ್ರಜೆಯಾಗುತ್ತಾರೆ ಎಂಬ ಆಸೆಯೊಂದಿಗೆ ದಂಪತಿಗಳು ಸಿಸೇರಿಯನ್‌ ಮೂಲಕ ಅವಧಿಗೂ ಮೊದಲೇ ಮಗುವಿಗೆ ಜನ್ಮ ನೀಡಲು ಮುಂದಾಗಿದ್ದಾರೆ.

ವೈದ್ಯರು ಹೇಳಿದ್ದೇನು?:

ಈ ಕುರಿತು ಮಾತನಾಡಿದ ನ್ಯೂ ಜೆರ್ಸಿಯಲ್ಲಿರುವ ಭಾರತ ಮೂದಲ ವೈದ್ಯೆ ರಮಾ, ‘ಅನೇಕ ಗರ್ಭಿಣಿಯರು 9 ತಿಂಗಳು ತುಂಬುವ ಮೊದಲೇ ಸಿಸೇರಿಯನ್‌ ಮಾಡಿಸಲು ಬಯಸಿದ್ದಾರೆ. ತಾಯಿ- ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಅರಿವಿದ್ದರೂ ಈ ಕ್ರಮಕ್ಕೆ ಮುಂದಾಗಿದ್ದಾರೆ’ ಎಂದರು.

ಗರ್ಭಿಣಿಯರೇನು ಏನಂತಾರೆ?:

ಅತ್ತ ಭಾರತ ಮೂಲದ ಗರ್ಭಿಣಿಯೊಬ್ಬರು ಮಾತನಾಡಿ, ‘ನಾವು ಕಳೆದ 6 ವರ್ಷಗಳಿಂದ ಅಮೆರಿಕದ ಶಾಶ್ವತ ಪೌರತ್ವ ನೀಡುವ ಗ್ರೀನ್‌ ಕಾರ್ಡ್‌ ಪಡೆಯಲು ಕಾಯುತ್ತಿದ್ದೇವೆ. ಈಗ ಮಗುವಿಗೆ ಅಮೆರಿಕದಲ್ಲಿ ಜನ್ಮ ನೀಡುವ ಮೂಲಕ ಅದನ್ನು ಸಾಧಿಸಲು ಯೋಚಿಸುತ್ತಿದ್ದೇವೆ. ಆದರೆ ಈಗ ಆಗುತ್ತಿರುವ ಬೆಳವಣಿಗೆಯಿಂದ ಭಯವಾಗುತ್ತಿದೆ’ ಎಂದರು.

 ಮಕ್ಕಳ ಹೆರಲು ಆತುರವೇಕೆ?

ಅಮೆರಿಕದ ಹೊಸ ನೀತಿ ಅನ್ವಯ ಫೆ.19ರೊಳಗೆ ಅಮೆರಿಕದಲ್ಲಿ ಜನಿಸಿದ ವಿದೇಶಿಯರ ಮಕ್ಕಳಿಗೆ ಜನ್ಮಸಿದ್ಧ ಪೌರತ್ವ

ಆ ಬಳಿಕ ಜನಿಸಿದ ಮಕ್ಕಳು ಅಮೆರಿಕದ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಬೇಕು, ಅದಕ್ಕಾಗಿ ಅನೇಕ ವರ್ಷ ಕಾಯಬೇಕು

ಹೀಗಾಗಿ ಫೆ.19ರ ಬಳಿಕ ಹೆರಿಗೆ ದಿನಾಂಕ ಇರುವ ಭಾರತೀಯ ಮೂಲದ ಪೋಷಕರಿಂದ ಅವಧಿಗೆ ಮೊದಲೇ ಹೆರಿಗೆ ಯತ್ನ

ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮದ ಆತಂಕ ಇದ್ದರೂ, ವೈದ್ಯರ ಎಚ್ಚರಿಕೆಗೂ ಕಿವಿಗೊಡದ ಪೋಷಕರು

ಟ್ರಂಪ್ ಆದೇಶವೇನು?

ಫೆ.19ರ ಬಳಿಕ ಜನಿಸುವ ಮಕ್ಕಳ ಪೋಷಕರಲ್ಲಿ ಒಬ್ಬರಾದರೂ ಅಮೆರಿಕ ನಾಗರಿಕ ಆಗಿರಬೇಕು. ಆಗ ಅವರಿಗೆ ಅಮೆರಿಕ ಪೌರತ್ವ ಸಿಗುತ್ತದೆ. ಇಬ್ಬರೂ ಪೋಷಕರು ಅಮೆರಿಕ ನಾಗರಿಕ ಆಗದೇ ಇದ್ದರೆ, ಜನ್ಮಸಿದ್ಧ ಪೌರತ್ವ ಸಿಗದು ಎಂಬ ನಿಯಮಕ್ಕೆ ಅಧ್ಯಕ್ಷ ಟ್ರಂಪ್‌ ಅಧಿಕಾರಕ್ಕೇರುತ್ತಿದ್ದಂತೆ ಸಹಿ ಮಾಡಿದ್ದರು.

ಸಿಸೇರಿಯನ್‌ ಏಕೆ?

ಫೆ.20ರಂದು ಜನ್ಮಸಿದ್ಧ ಪೌರತ್ವ ಕಾಯ್ದೆ ರದ್ದಾಗುತ್ತದೆ. ಹೀಗಾಗಿ ಅಮೆರಿಕ ನಾಗರಿಕರಲ್ಲದ ದಂಪತಿಗಳು ಅಷ್ಟರೊಳಗೆ ಮಗು ಹೆತ್ತರೆ ಮಾತ್ರ ಆ ಮಗುವಿಗೆ ಅಮೆರಿಕ ಪೌರತ್ವ ಸಿಗುತ್ತದೆ. ಹೀಗಾಗಿ ಮಗುವಿಗೆ ಅಮೆರಿಕ ಪೌರತ್ವ ದೊರಕಲೇಬೇಕು ಎಂಬ ಹಟದಿಂದ ಫೆ.19ರ ಮಧ್ಯರಾತ್ರಿಯೊಳಗೆ ಹೆರಿಗೆ ಮಾಡಿ ಮುಗಿಬೀಳುತ್ತಿದ್ದಾರೆ.

ಭಾರತೀಯರಿಗೇಕೆ ಆತಂಕ?

ಈಗಾಗಲೇ ಅಮೆರಿಕದಲ್ಲಿ ಭಾರತ ಮೂಲದ 54 ಲಕ್ಷ ಜನರಿದ್ದಾರೆ. ಆದರೆ ಇವರಲ್ಲಿ ಶೇ.34 ಜನ ಮಾತ್ರ ಅಮೆರಿಕ ನಾಗರಿಕರಾಗಿದ್ದಾರೆ. ಉಳಿದ ಶೇ.66 ಜನರು ಭಾರತೀಯ ನಾಗರಿಕರಾಗಿದ್ದು, ಅಮೆರಿಕ ಪೌರರಲ್ಲ. ಕೆಲಸದ ಮೇಲೆ ಅಮೆರಿಕದಲ್ಲಿದ್ದಾರೆ. ಇವರಿಗೆ ಮಕ್ಕಳಾದರೆ, ಆ ಮಕ್ಕಳು ಅಮೆರಿಕ ಪೌರತ್ವದಿಂದ ವಂಚಿತರಾಗುವ ಭೀತಿ ಇದೆ.